The Federal @ Bailakuppe | ಬೈಲಕುಪ್ಪೆಯಲ್ಲಿ ದಲೈ ಲಾಮಾ ವಾಸ್ತವ್ಯ: ಏನಾಗುತ್ತಿದೆ ಟಿಬೆಟಿಯನ್ ಕ್ಯಾಂಪ್​ನಲ್ಲಿ?

14ನೇ ದಲೈ ಲಾಮಾ ಬೈಲಕುಪ್ಪೆ ಟಿಬೆಟಿಯನ್ ಸೆಟಲ್ಮೆಂಟ್​ನಲ್ಲಿ ವಾಸ್ತವ್ಯ ಮಾಡಿದ್ದಾರೆ. 65 ವರ್ಷಗಳಿಂದ ಭಾರತದಲ್ಲಿ ನಿರಾಶ್ರಿತರಾಗಿರುವ ಟಿಬೆಟಿಯನ್ನರಲ್ಲಿ ಹೊಸ ಭರವಸೆ ಮೂಡಿಸಿದೆ ದಲೈ ಲಾಮಾರ ಈ ಭೇಟಿ.;

By :  Anil Basur
Update: 2025-01-14 10:39 GMT
ಬೈಲಕುಪ್ಪೆಯಲ್ಲಿ ವಾಸ್ತವ್ಯ ಮಾಡಿರುವ ಟಿಬೆಟಿಯನ್ನರ ಧರ್ಮಗುರು ದಲೈ ಲಾಮಾ

ರಾಜ್ಯದಲ್ಲಿರುವ 'ಮಿನಿ ಟಿಬೆಟ್ ಬೈಲಕುಪ್ಪೆ'ಯಲ್ಲಿ ಸಂಭ್ರಮ ಮನೆ ಮಾಡಿದೆ. ಅದಕ್ಕೆ ಕಾರಣ ಟಿಬೆಟಿಯನ್ ಧರ್ಮಗುರು 14ನೇ ದಲೈ ಲಾಮಾ ಭೇಟಿ. ಕಳೆದ ವರ್ಷ ಅಮೆರಿಕದಲ್ಲಿ ಮೊಣಕಾಲು ಶಸ್ತ್ರಚಿಕಿತ್ಸಗೆ ಒಳಗಾಗಿರುವ ಅವರು ಈ ಧರ್ಮಶಾಲಾದಲ್ಲಿ ಚಳಿ ಹೆಚ್ಚಿರುವುದರಿಂದ ವಿಶ್ರಾಂತಿಗಾಗಿ ಬೈಲಕುಪ್ಪೆಗೆ ಬಂದಿದ್ದಾರೆ.

ದಲೈ ಲಾಮಾ ತಮ್ಮೊಂದಿಗಿರುವುದು ಬೈಲಕುಪ್ಪೆ ಟಿಬೆಟಿಯಲ್ ಸೆಟಲ್ಮೆಂಟ್​ನ ನಿವಾಸಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಜೊತೆಗೆ ಟಿಬೆಟಿಯನ್ ಹೊಷ ವರ್ಷದ ಆಚರಣೆ ಸಂದರ್ಭದಲ್ಲಿ ಹೊಸ ಭರವಸೆಯನ್ನೂ ಮೂಡಿಸಿದೆ.

ಒಂದು ವರ್ಷದಲ್ಲಿ ತಮ್ಮೂರಿಗೆ ತೆರಳಿ ಮತ್ತೆ ನೆಮ್ಮದಿಯ ಜೀವನ ಮಾಡುವ ವಿಶ್ವಾಸದಲ್ಲಿ 1959ರಲ್ಲಿ ಧರ್ಮಗುರು ದಲೈ ಲೈಮಾ ಅವರನ್ನು ಹಿಂಬಾಲಿಸಿಕೊಂಡು ಟಿಬೆಟ್ ತೊರೆದು ಬರಿಗೈಯಲ್ಲಿ ಭಾರತಕ್ಕೆ ಬಂದಿರುವ ಟಿಬೆಟಿಯನ್ನರ ಆಶಯ 65 ವರ್ಷಗಳ ಬಳಿಕವೂ ಈಡೇರಿಲ್ಲ. ಆದರೂ ಕೂಡ ತಮ್ಮ ದೇಶಕ್ಕೆ ಮರಳುವ ವಿಶ್ವಾಸವನ್ನು ಬಿಟ್ಟುಕೊಟ್ಟಿಲ್ಲ ಈ ಜನರು.  

Full View


ಇಂದಲ್ಲ ನಾಳೆ ನಮ್ಮ ದೇಶಕ್ಕೆ ಹೋಗುತ್ತೇವೆ

ಇಂದಲ್ಲ ನಾಳೆ ನಮ್ಮ ದೇಶಕ್ಕೆ ನಾವು ಹೋಗುತ್ತೇವೆ. ಅಲ್ಲಿ ನಮ್ಮ ಬಂಧು-ಬಾಂಧವರೊಂದಿಗೆ ನೆಮ್ಮದಿಯ ಜೀವನ ಕಳೆಯುತ್ತೇವೆ ಎಂಬ ವಿಶ್ವಾಸದಲ್ಲಿದ್ದಾರೆ ಭಾರತದಲ್ಲಿರುವ ಟಿಬೆಟಿಯನ್ನರು. ಅದಕ್ಕೆ ಬೈಲಕುಪ್ಪೆ ಸೆಟಲ್ಮೆಂಟ್​ನವರು ಹೊರತಾಗಿಲ್ಲ. ಮೈಸೂರಿನಿಂದ 80 ಕಿ.ಮೀ. ದೂರದಲ್ಲಿರುವ ಬೈಲಕುಪ್ಪೆಯಲ್ಲಿರುವ ಟಿಬೆಟಿಯನ್ ಸೆಟಲ್ಮೆಂಟ್ ಭಾರತದ 2ನೇ ಅತಿದೊಡ್ಡ ಟಿಬೆಟಿಯನ್ ಕ್ಯಾಂಪ್ ಆಗಿದೆ. 1961ರಲ್ಲಿ ಆಗಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರು ಬೈಲಕುಪ್ಪೆಯಲ್ಲಿ ಸುಮಾರು 3,500 ಎಕರೆ ಭೂಮಿಯನ್ನು ಕೊಡುವ ಮೂಲಕ ಟಿಬೆಟಿಯನ್ ನಿರಾಶ್ರಿತರಿಗೆ ಸೆಟಲ್ಮೆಂಟ್ ನಿರ್ಮಾಣ ಮಾಡಲು ಸಹಾಯ ಮಾಡಿದ್ದರು. ನಂತರ ಮತ್ತೆ 3000 ಎಕರೆ ಭೂಮಿಯನ್ನು ಕೊಡಲಾಗಿದೆ. ಹೀಗಾಗಿ 6,500 ಎಕರೆ ಭೂಪ್ರದೇಶದಲ್ಲಿ ಭಾರತದಲ್ಲಿಯೇ ಅತ್ಯಂತ ವಿಸ್ತಾರವಾದ 'ಮಿನಿ ಟಿಬೆಟ್' ಅಲ್ಲಿ ನಿರ್ಮಾಣವಾಗಿದೆ.

ಬೈಲಕುಪ್ಪೆ ಸೆಟಲ್ಮೆಂಟ್​ನಲ್ಲಿ ದಲೈ ಲಾಮಾ ದರ್ಶನ

8 ವರ್ಷಗಳ ಹಿಂದೆ ಅಂದರೆ 2017ರಲ್ಲಿ ದಲೈ ಲಾಮಾ ಇಲ್ಲಿಗೆ ಬಂದಿದ್ದರು. ಆಗ ಅವರಿಗೆ ಇನ್ನೂ ಇಷ್ಟು ವಯಸ್ಸಾಗಿರಲಿಲ್ಲ. ಹೀಗಾಗಿ ಇಲ್ಲಿದ್ದ ಒಂದು ತಿಂಗಳು ದಕ್ಷಿಣ ಭಾರತದಲ್ಲಿ ವಾಸ್ತವ್ಯ ಮಾಡಿರುವ ಟಿಬೆಟಿಯನ್ನರಿಗೆ ದರ್ಶನ ಕೊಟ್ಟಿದ್ದರು. ನಂತರ ಮತ್ತೆ ಈಗ ದಲೈ ಲಾಮಾ ಬೈಲಕುಪ್ಪಗೆ ಬಂದಿದ್ದಾರೆ.

ಜನವರಿ 4ರಂದು ಬೈಲಕುಪ್ಪೆಗೆ ಬಂದಿರುವ ದಲೈ ಲಾಮಾ, ಮುಂದಿನ ತಿಂಗಳು ಫೆಬ್ರವರಿ 5ರಂದು ಧರ್ಮಶಾಲಾಕ್ಕೆ ಹಿಂದಿರುಗಲಿದ್ದಾರೆ ಎಂಬ ಮಾಹಿತಿಯಿದೆ. ಆದರೆ ಅಲ್ಲಿ ಚಳಿ ಹೆಚ್ಚಿರುವುದರಿಂದ ಬೈಲಕುಪ್ಪೆಯಲ್ಲಿ ಅವರ ವಾಸ್ತವ್ಯ ಮತ್ತಷ್ಟು ದಿನಗಳ ಕಾಲ ಹೆಚ್ಚಾಗುವ ಸಾಧ್ಯತೆಯೂ ಇದೆ. ಬೈಲಕುಪ್ಪೆಯಲ್ಲಿ ದಲೈ ಲಾಮಾ ಇರುವವರಗೆಗೆ ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರಗಳಂದು ಬೆಳಗ್ಗೆ 9 ರಿಂದ 10 ಗಂಟೆವರೆಗೆ ಟಿಬೆಟಿಯನ್ನರಿಗೆ ದರ್ಶನ ಕೊಡುತ್ತಿದ್ದಾರೆ.

ಸಾಯುವ ಮೊದಲು ಒಂದು ಸಾರಿ

ನಮ್ಮ ಧರ್ಮಗುರು ದಲೈ ಲಾಮಾ ಬೈಲಕುಪ್ಪಗೆ ಬಂದಿರುವುದು ನಮಗೆಲ್ಲರಿಗೂ ಸಂಸತ ತಂದಿದೆ. ನಾವು (ಟಿಬೆಟಿಯನ್ನರು) ಸಾಯುವುದಕ್ಕೂ ಮೊದಲು ಒಂದು ಸಾರಿ ದಲೈ ಲಾಮಾ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಬೇಕು ಎಂಬುದು ಎಲ್ಲ ಟಿಬೆಟಿಯನ್ನರ ಮಹಾದಾಸೆ. ಇಲ್ಲಿರುವ ಎಲ್ಲ ಟಿಬೆಟಿಯನ್ನರಿಗೆ ಧರ್ಮಶಾಲಾಕ್ಕೆ ಹೋಗಿ ದಲೈ ಲಾಮಾ ದರ್ಶನ ಪಡೆಯುವುದು ಸಾಧ್ಯವಾಗುವುದಿಲ್ಲ. ಹೀಗಾಗಿ ಇಲ್ಲಿಗೆ ಅವರು ಬಂದಿರುವುದು ನಮಗೆಲ್ಲರಿಗೂ ಖುಷಿ ತಂದಿದೆ. ಬೈಲಕುಪ್ಪೆಯ ತಷಿ ಲುಂಪೊ ಮಾನೆಸ್ಟರಿಯಲ್ಲಿ ದಲೈ ಲಾಮಾ ವಾಸ್ತವ್ಯ ಮಾಡಿದ್ದಾರೆ. ಮೊಣಕಾಲು ಸರ್ಜರಿ ಬಳಿಕ ಅವರ ಆರೋಗ್ಯ ಚೇತರಿಸಿದೆ. ನಾನು ಇಲ್ಲಿಯೇ ಹುಟ್ಟಿ ಬೆಳೆದಿದ್ದೇನೆ. ನಮ್ಮ ಟಿಬೆಟ್​ ಅನ್ನು ಚೀನಾ ಆಕ್ರಮಿಸಿಕೊಂಡು 65 ವರ್ಷಗಳಿಗೂ ಹೆಚ್ಚಿನ ಕಾಲವಾಗಿದೆ. ಆದರೂ ನಾವು ನಮ್ಮ ದೇಶಕ್ಕೆ ಒಂದಲ್ಲ ಒಂದು ದಿನ ಹಿಂದಿರುಗುತ್ತೇವೆ ಎಂಬ ಭರವಸೆಯಿದೆ ಎನ್ನುತ್ತಾರೆ ಬೈಲಕುಪ್ಪೆ ಸೆಟಲ್ಮೆಂಟ್​ನ ಪಿಆರ್​ಒ ಆಗಿ ಕೆಲಸ ಮಾಡುತ್ತಿರುವ ದೊಂಡೂಕ್ ದೋರ್ಜಿ.

ಎಲ್ಲಿಗೆ ಹೋಗುತ್ತಿದೆ ಟಿಬೆಟಿಯನ್ ಯುವ ಜನತೆ?

ಬೈಲಕುಪ್ಪೆಯಲ್ಲಿ ಹುಟ್ಟಿ ಬೆಳೆದಿರುವ ಟಿಬೆಟಿಯನ್ ಯುವ ಪೀಳಿಗೆ ಕೆನಡಾ, ಆಸ್ಟ್ರೇಲಿಯಾ, ಅಮೆರಿಕ ಮತ್ತು ಯುರೋಪ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗುತ್ತಿದೆ. ಹೀಗಾಗಿ ಇತ್ತೀಚೆಗೆ ಬೈಲಕುಪ್ಪೆಯಲ್ಲಿ ಟಿಬೆಟಿಯನ್ನರ ಜನಸಂಖ್ಯೆ ಕಡಿಮೆಯಾಗಿದೆ. ಉದ್ಯೋಗ ಅರಸಿಕೊಂಡು ಭಾರತದಲ್ಲಿನ ಸೆಟಲ್ಮೆಂಟ್​ಗಳನ್ನು ತೊರೆಯುತ್ತಿದ್ದಾರೆ. ಆದರೆ ಪ್ರತಿ ವರ್ಷ ಫೆಬ್ರವರಿ 28ಕ್ಕೆ ಬಹುತೇಕ ಟಿಬೆಟಿಯನ್ನರು ತಮ್ಮ ಹೊಸ ವರ್ಷದ ಆಚರಣೆಗೆ ಭಾರತಕ್ಕೆ ಹಿಂದಿರುಗುತ್ತಾರೆ. ಆದರೆ 1959ರಲ್ಲಿ ಟಿಬೆಟ್ ತೊರೆದು ಭಾರತದಲ್ಲಿ ಆಶ್ರಯ ಪಡೆದಿರುವ ವಯಯೋವೃದ್ಧ ಟಿಬೆಟಿಯನ್ನರಿಗೆ ತಮ್ಮ 2ನೇ ಮನೆಯಾಗಿರುವ ಭಾರತವನ್ನು ಬಿಟ್ಟುಹೋಗಲು ಮನಸ್ಸಿಲ್ಲ. ತಮ್ಮ ಉಳಿದ ಜೀವಿತಾವಧಿಯನ್ನು ಇಲ್ಲಿಯೇ ಕಳೆಯುವ ತೀರ್ಮಾನ ಮಾಡಿದ್ದಾರೆ.

 

ಎಸ್​. ನಿಜಲಿಂಗಪ್ಪ ಮೇಲೆ ಅಪಾರ ಗೌರವ ಯಾಕೆ?

ಮೈಸೂರು ರಾಜ್ಯ (ಆಗಿನ್ನೂ ಕರ್ನಾಟಕ ಎಂದು ನಾಮಕರಣ ಆಗಿರಲಿಲ್ಲ)ದ ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಕುರಿತು ರಾಜ್ಯದಲ್ಲಿರುವ ಟಿಬೆಟಿಯನ್ನರಿಗೆ ಅಪಾರ ಗೌರವ. 'ಯಾಕೆಂದರೆ ದೇಶ ತೊರೆದು ಬರಿಗೈಯಲ್ಲಿ ನಿರಾಶ್ರಿತರಾಗಿ ಬಂದವರಿಗೆ ಸೂರು ಕಲ್ಪಿಸಿದ್ದು ಎಸ್​. ನಿಜಲಿಂಗಪ್ಪ' ಎಂದು ಟಿಬೆಟಿಯನ್ನರು ಸ್ಮರಿಸಿಕೊಳ್ಳುತ್ತಾರೆ.

'ಬೈಲಕುಪ್ಪೆಯಲ್ಲಿರುವ ಎರಡು ಸೆಟಲ್ಮೆಂಟ್​​ಗಳ ಜೊತೆಗೆ ಮುಂಡಗೋಡು, ಹುಣಸೂರು, ಕೊಳ್ಳೆಗಾಲದಲ್ಲಿ ತಲಾ ಒಂದೊಂದು ಹೀಗೆ ಒಟ್ಟು 5 ಟಿಬೆಟಿಯನ್ ಸೆಟಲ್ಮೆಂಟ್​ಗಳಿಗೆ ಭೂಮಿಯನ್ನು ಕೊಟ್ಟು ಮೂಲಸೌಕರ್ಯ ಒಗಿಸಿದ್ದು ಎಸ್. ನಿಜಲಿಂಗಪ್ಪ ಅವರು ಎಂಬ ಗೌರವ ನಮಗಿದೆ' ಎನ್ನುತ್ತಾರೆ ಸೆಂಟ್ರಲ್ ಟಿಬೆಟಿಯನ್ ಅಡ್ಮಿನಿಸ್ಟ್ರೇಷನ್​ನ ಚೀಫ್ ಅಡ್ಮಿನಿಸ್ಟ್ರೇಟರ್ ಜಿಗ್ಮೆ ಸೆಲ್ಟ್ರಿನ್. ಜೊತೆಗೆ ತಮ್ಮ ಯಾವುದೇ ಕಾರ್ಯಕ್ರಮವಿದ್ದರೂ ಎಸ್. ನಿಜಲಿಂಗಪ್ಪ ಅವರಿಗೆ ಗೌರವ ಸೂಚಿಸಿಯೆ ಆರಂಭಿಸುವುದು ಟಿಬೆಟಿಯನ್ನರ ಸಂಪ್ರದಾಯ ಎಂಬಂತಾಗಿದೆ. ರಾಜ್ಯ ಪ್ರವಾಸದಲ್ಲಿರುವಾ ದಲೈ ಲಾಮಾ ಅವರೂ ಕೂಡ ನಿಜಲಿಂಗಪ್ಪ ಅವರನ್ನು ಸ್ಮರಿಸಿಕೊಳ್ಳುತ್ತಿರುತ್ತಾರೆ.

Full View

ಸಿಂಗಾರಗೊಂಡಿದೆ ಬೈಲಕುಪ್ಪೆ ಸೆಟಲ್ಮೆಂಟ್

ದಲೈಲಾಮಾ ಆಗಮನದ ಹಿನ್ನೆಲೆಯಲ್ಲಿ ಬೈಲಕುಪ್ಪೆ ಟಿಬೆಟಿಯನ್ ಸೆಟಲ್ಮೆಂಟ್​ನ ಅಲಂಕರಿಸಲಾಗಿದೆ. ರಸ್ತೆಗಳ ಪಕ್ಕದಲ್ಲಿ ಟಿಬೆಟಿಯನ್ ಧ್ವಜಗಳು ರಾರಾಜಿಸುತ್ತಿವೆ. ಜೊತೆಗೆ ದಲೈ ಲಾಮಾ ಅವರಿಗೆ ಸ್ವಾಗತ ಕೋರುವ ಹೋರ್ಡಿಂಗ್​ಗಳು, ಬ್ಯಾನರ್​ಗಳು ಗಮನ ಸೆಳೆಯುತ್ತಿವೆ. ಕೇವಲ ಟಿಬೆಟಿನ್ನರು ಮಾತ್ರವಲ್ಲಿ ಸ್ಥಳೀಯ ಕನ್ನಡಿಗರೂ ಕೂಡ ಧರ್ಮಗುರು ದಲೈ ಲಾಮಾರನ್ನು ಸ್ವಾಗತಿಸಿದ್ದಾರೆ. ಜೊತೆಗೆ ಸ್ಥಳೀಯರೊಂದಿಗೆ ಟಿಬೆಟಿಯನ್ನರು ಅತ್ಯುತ್ತಮ ಹೊಂದಾಣಿಕೆಯಿಂದಿದ್ದಾರೆ. 

Tags:    

Similar News