ಇನ್ನು ಮುಂದೆ ಮಂಡ್ಯ ಜಿಲ್ಲೆ ʻಸಕ್ಕರೆʼ ಸಿಹಿಯ ಜೊತೆಗೆ ʻಲಿಥಿಯಂʼ ಬೆಳಕಿಗೂ ಲೋಕ ಪ್ರಸಿದ್ಧ

ಇದುವರೆಗೆ ಸಕ್ಕರೆಗೆ ಹೆಸರಾಗಿದ್ದ ಮಂಡ್ಯ ಇನ್ನು ಮುಂದೆ ಲಿಥಿಯಂ ಎಂಬ ಖನಿಜ ಸಂಪತ್ತಿಗೆ ಹೆಸರಾಗುವ ಎಲ್ಲ ಸಾಧ್ಯತೆಗಳು ದಟ್ಟವಾಗಿ ಕಾಣುತ್ತಿವೆ. ಇಲ್ಲಿ ಬೃಹತ್‌ ಪ್ರಮಾಣದ ಲಿಥಿಯಂ ಪತ್ತೆಯಾಗಿದೆ. ಇದು ಅಂತಿಂಥ ಖನಿಜವಲ್ಲ. ಒಂದು ರೀತಿಯಲ್ಲಿ ಚಿನ್ನದ ಗಣಿ ಎಂದೇ ಹೇಳಬಹುದು. ಈ ಖನಿಜ ಸಂಪತ್ತಿನಿಂದ ಕೇವಲ ಮಂಡ್ಯ ಜಿಲ್ಲೆಯಷ್ಟೇ ಅಲ್ಲ. ಕರ್ನಾಟಕಕ್ಕೆ ಮತ್ತು ದೇಶಕ್ಕೆ ಹಲವು ರೀತಿಯ ಲಾಭವಾಗಲಿದೆ.

Update: 2024-08-01 02:00 GMT

ಕರ್ನಾಟಕ ಮಂಡ್ಯ ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಗೆ ಗುದ್ದು ನೀಡುತ್ತಿರುತ್ತದೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಂಡ್ಯ ಮಾಡಿದಷ್ಟು ಸುದ್ದಿಯನ್ನು ಬೇರಾವುದೇ ಲೋಕಸಭಾ ಕ್ಷೇತ್ರ ಮಾಡಿಲ್ಲ. ಈಗಂತೂ, ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ನಾಯಕ ಸದ್ಯ ಕೇಂದ್ರದ ಉಕ್ಕು ಸಚಿವ ಎಚ್‌ ಡಿ ಕುಮಾರಸ್ವಾಮಿ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಇದುವರೆಗೆ ಸಕ್ಕರೆಗೆ ಹೆಸರಾಗಿದ್ದ ಮಂಡ್ಯ ಇನ್ನು ಮುಂದೆ ಲಿಥಿಯಂ ಎಂಬ ಖನಿಜ ಸಂಪತ್ತಿಗೆ ಹೆಸರಾಗುವ ಎಲ್ಲ ಸಾಧ್ಯತೆಗಳು ಕಾಣುತ್ತಿವೆ. ಇಲ್ಲಿ ಬೃಹತ್‌ ಪ್ರಮಾಣದ ಲಿಥಿಯಂ ಪತ್ತೆಯಾಗಿದೆ. ಇದು ಅಂತಿಂಥ ಖನಿಜವಲ್ಲ. ಒಂದು ರೀತಿಯಲ್ಲಿ ಚಿನ್ನದ ಗಣಿ ಎಂದೇ ಹೇಳಬಹುದು. ಈ ಖನಿಜ ಸಂಪತ್ತಿನಿಂದ ಕೇವಲ ಮಂಡ್ಯ ಜಿಲ್ಲೆಯಷ್ಟೇ ಅಲ್ಲ. ಕರ್ನಾಟಕಕ್ಕೆ ಮತ್ತು ದೇಶಕ್ಕೆ ಹಲವು ರೀತಿಯ ಲಾಭವಾಗಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಮಂಡ್ಯದಿಂದ ದೇಶದ ಎಲೆಕ್ಟ್ರಿಕ್‌ ವಾಹನಗಳಿಗೆ ಬೆಲೆ ಬರಲಿದೆ. ಅಷ್ಟೇ ಅಲ್ಲ, ಪೆಟ್ರೋಲ್-ಡಿಸೆಲ್‌ ಅಮದು ಮಾಡಿಕೊಳ್ಳುವುದೂ, ಅವುಗಳ ಮೇಲಿನ ಅವಲಂಬನೆಯೂ ಕಡಿಮೆಯಾಗಲಿದೆ. ಒಂದರ್ಥದಲ್ಲಿ ಮಂಡ್ಯ ಜಿಲ್ಲೆ ದೇಶದ ಪ್ರಮುಖ ಲಿಥಿಯಂ ಗಣಿಗಾರಿಕಾ ಕೇಂದ್ರವಾಗಲಿದೆ.

ಲಿಥಿಯಂ ನಿಕ್ಷೇಪ

ಕರ್ನಾಟಕದ ಮಂಡ್ಯ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಲಿಥಿಯಂ ನಿಕ್ಷೇಪಗಳು ಪತ್ತೆಯಾಗಿವೆ ಎಂದು ರಾಜ್ಯಸಭೆಯಲ್ಲಿ ಭೂ ವಿಜ್ಞಾನ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಜಿತೇಂದ್ರ ಸಿಂಗ್‌ ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಮರಳಗಾಲ ಗ್ರಾಮದ ವ್ಯಾಪ್ತಿಯಲ್ಲಿ 1600 ಟನ್‌ ಲಿಥಿಯಂ ನಿಕ್ಷೇಪವಿರುವುದು ಪ್ರಾಥಮಿಕ ಸಮೀಕ್ಷೆಯಲ್ಲಿ ಕಂಡು ಬಂದಿದೆ ಎಂದು ಜಿತೇಂದ್ರ ಸಿಂಗ್‌ ರಾಜ್ಯಸಭೆಯಲ್ಲಿ ಪ್ರಕಟಿಸಿದ್ದಾರೆ. ಕರ್ನಾಟಕದ ಮಂಡ್ಯ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಲಿಥಿಯಂ ಇರುವುದನ್ನು ಪರಮಾಣು ಶಕ್ತಿ ಇಲಾಖೆಯ ಘಟಕ ಘಟಕವಾದ ಅಟಾಮಿಕ್ ಮಿನರಲ್ಸ್ ಡೈರೆಕ್ಟರೇಟ್ ಫಾರ್ ಎಕ್ಸ್‌ಪ್ಲೋರೇಷನ್ ಮತ್ತು ರಿಸರ್ಚ್ (ಎಎಮ್‌ಡಿ) ಪತ್ತೆ ಮಾಡಿದೆ ಎಂದು ಸಚಿವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಭಾರತೀಯ ಭೂ ವೈಜ್ಞಾನಿಕ ಸಮೀಕ್ಷೆ ತಂಡವು ಶ್ರೀರಂಗಪಟ್ಟಣದ ಮರಳಗಾಲ ಗ್ರಾಮದ ವ್ಯಾಪ್ತಿಯಲ್ಲಿ ಲಿಥಿಯಂ ಖನಿಜ ಸಂಪತ್ತು ಇರುವುದನ್ನು ಈ ಹಿಂದೆಯೇ ದೃಢಪಡಿಸಿದೆ. ಈಗ ಸಚಿವರು ಈ ಸಂಗತಿಯನ್ನು ಲೋಕಸಭಾ ಅಧಿವೇಶನದಲ್ಲಿಯೇ ಪ್ರಕಟಿಸಿರುವುದು ಮಹತ್ವದ ಬೆಳವಣಿಗೆ ಎಂದೇ ಹೇಳಬಹುದು. “ಲಿಥಿಯಂ ನಿಕ್ಷೇಪ ಪತ್ತೆಯಾಗಿರುವುದರಿಂದ ಇಂಧನ ಸ್ವಾವಲಂಬನೆಯಲ್ಲಿ ಭಾರತ ಮುನ್ನಡೆ ಸಾಧಿಸಲು ಸಾಧ್ಯವಾಗುತ್ತದೆ” ಎಂದು ಅವರು ಹೇಳಿದ್ದಾರೆ.

ಯಾದಗಿರಿಯಲ್ಲೂ ಲಿಥಿಯಂ?

ಇದರ ಜೊತೆಗೆ ರಾಜ್ಯದ ಯಾದಗಿರಿಯಲ್ಲೂ ಲಿಥಿಯಂ ನಿಕ್ಷೇಪ ಪತ್ತೆ ಮಾಡಲು ಸಮೀಕ್ಷೆ ನಡೆಸಲಾಗುತ್ತಿದೆ.

ಮಂಡ್ಯದಲ್ಲಿ ಲಿಥಿಯಂ ನಿಕ್ಷೇಪ ಪತ್ತೆಯಾಗಿರುವುದರಿಂದ ಭಾರತಕ್ಕೆ ದೊಡ್ಡ ಲಾಭವಾಗುತ್ತದೆ ಎಂದು ಹೇಳಲಾಗುತ್ತಿದೆ. ಅಮೆರಿಕಾದ ನಂತರ ಭಾರತವು ಲಿಥಿಯಂ ಬ್ಯಾಟರಿಗಳ ಎರಡನೇ ಅತಿ ದೊಡ್ಡ ಆಮದು ರಾಷ್ಟ್ರವೆಂದು ಖ್ಯಾತಿಗಳಿಸಿದೆ. 2022ರಲ್ಲಿ ಭಾರತವು ಚೀನಾ ಮತ್ತು ಜಪಾನ್ ಗಳಿಂದ 1.54 ಲಕ್ಷ ಬ್ಯಾಟರಿಗಳನ್ನು ಆಮದು ಮಾಡಿಕೊಂಡಿದೆ. ಮೊಬೈಲ್‌, ಎಲೆಕ್ಟ್ರಿಕ್‌ ಕಾರುಗಳೂ ಸೇರಿದಂತೆ ಅನೇಕ ಎಲೆಕ್ಟ್ರಾನಿಕ್‌ ಉಪಕರಣಗಳ ಜೀವಧಾತು ಎನ್ನಿಸಿಕೊಂಡಿರುವ ಲಿಥಿಯಂ ಖನಿಜವು ಭಾರತದ ಮಟ್ಟಿಗೆ ಬಹುಮುಖ್ಯವಾಗಿದೆ.

ಲಿಥಿಯಂ ಗಣಿಗಾರಿಕೆ ಹೇಗೆ?

ಲಿಥಿಯಂ ಎನ್ನುವುದು ಲಿಥೋಸ್‌ ಎಂಬ ಗ್ರೀಕ್‌ ಪದದಿಂದ ಹುಟ್ಟಿದ್ದು. ಇದು ಕಡಿಮೆ ಸಾಂದ್ರತೆಯ ಲೋಹವಾಗಿದ್ದು, ನೀರಿನೊಂದಿಗೆ ತೀವ್ರವಾಗಿ ಪ್ರತಿಕ್ರಿಯಿಸುತ್ತದೆ. ಲಿಥಿಯಂ ಜಾಗತಿಕವಾಗಿ ಹೆಚ್ಚು ಬೇಡಿಕೆ ಇರುವ ಖನಿಜಗಳಲ್ಲಿ ಒಂದಾಗಿದೆ. ತಜ್ಞರ ಪ್ರಕಾರ ಲಿಥಿಯಂ ಅದಿರು ಬಂಡೆಗಲ್ಲಿಗೆ ಅಂಟಿಕೊಂಡಿರುತ್ತದೆ. ಇಂಥ ಬಂಡೆಗಲ್ಲುಗಳನ್ನು ಪುಡಿಮಾಡಿ ಲಿಥಿಯಂ ಅನ್ನು ಬೇರ್ಪಡಿಸಲು ಅತ್ಯಾಧುನಿಕ ಉಪಕರಣಗಳ ಅಗತ್ಯವಿದೆ. ಇದಕ್ಕೆ ಹೆಚ್ಚಿನ ಕಾರ್ಮಿಕ ಶಕ್ತಿಯ ಅಗತ್ಯವೂ ಇರುವುದರಿಂದ ಇಲ್ಲಿ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ದಟ್ಟವಾಗಿದೆ. ಅಷ್ಟೇ ಅಲ್ಲ. ಲಿಥಿಯಂ ಖನಿಜವನ್ನು ಬಂಡೆಗಲ್ಲಿನಿಂದ ಬೇರ್ಪಡಿಸಲು ಅಪಾರ ಪ್ರಮಾಣದ ಇಂಧನ ಶಕ್ತಿಯ ಅಗತ್ಯವೂ ಇದೆ. ಇದು ಒಂದರ್ಥದಲ್ಲಿ ಹೆಚ್ಚಿನ ಆರ್ಥಿಕವಾಗಿ ದುಬಾರಿ ಕ್ರಿಯೆ. ಅಷ್ಟೇ ಅಲ್ಲ. ಭೂಮಿಯಿಂದ ಹೊರತೆಗೆದ ಅದಿರಿನಿಂದ ಲಿಥಿಯಂ ಅನ್ನು ಬೇರ್ಪಡಿಸಲು ಭಾರಿ ಪ್ರಮಾಣದ ನೀರಿನ ಅಗತ್ಯವಿದೆ. ಇದಕ್ಕೆ ಮಂಡ್ಯದ ಸಮೀಪವಿರುವ ಕೃಷ್ಣರಾಜ ಸಾಗರ ಜಲಾಶನ ನೆರವಾಗಬಹುದು. ನೀರಿನ ಜತೆಯಲ್ಲಿ ಲಿಥಿಯಂನ್ನು ಬೆರೆಸಿ ಅದರಿಂದ ನೀರು ಆವಿಯಾಗುವಂತೆ ಮಾಡುವುದು ದೊಡ್ಡ ಪ್ರಕ್ರಿಯೆ. ಆ ನೀರು ಆವಿಯಾಗಲು ಒಂದೂವರೆ ವರ್ಷದ ಕಾಲಾವಧಿ ಬೇಕು ಎಂಬುದು ತಜ್ಞರ ಅಭಿಪ್ರಾಯ. ಅವರ ಪ್ರಕಾರ ಒಂದು ಟನ್‌ ಲಿಥಿಯಂ ಪಡೆದುಕೊಳ್ಳಲು 22 ಲಕ್ಷ ಲೀಟರ್‌ ನೀರಿನ ಅಗತ್ಯವಿದೆ. ಹಾಗಾಗಿ ನೀರಿನ ಬಳಕೆಯನ್ನು ಕಡಿಮೆ ಮಾಡಲು ನೇರ ಲಿಥಿಯಂ ಸಂಗ್ರಹಣೆಯ ವಿಧಾನವಿದೆ. ಆದರೆ ಅದು ದುಬಾರಿ ಮಾರ್ಗ ಎನ್ನುವುದು ಅವರ ತಿಳುವಳಿಕೆ. ಈ ಪ್ರಕ್ರಿಯೆಯಲ್ಲಿ ನೀರನ್ನು ಪ್ರತ್ಯೇಕಿಸಲು 35 ರಿಂದ 40 ದಿನಗಳು ಸಾಕು ಎಂದು ಅವರು ಹೇಳುತ್ತಾರೆ.

ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ

ದೇಶದಲ್ಲಿಯೇ ಲಿಥಿಯಂ ಗಣಿಗಾರಿಕೆ ನಡೆಸಿದರೆ, ದೇಶಕ್ಕೆ ದೊಡ್ಡ ಆರ್ಥಿಕವಾಗಿ ಲಾಭವಾಗುತ್ತದೆ. ಭವಿಷ್ಯದ ಸಾರಿಗೆ ವ್ಯವಸ್ಥೆಯಲ್ಲಿ ಎಲೆಕ್ಟ್ರಿಕ್‌ ವಾಹನಗಳು ಪ್ರಮುಖ ಪಾತ್ರ ವಹಿಸಲಿವೆ. ಇದರಿಂದ ಪೆಟ್ರೋಲ್‌ ಮತ್ತು ಡಿಸೆಲ್‌ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಇದಕ್ಕಾಗಿ ಭಾರತ ಸರ್ಕಾರ ಈಗಾಗಲೇ ಎಲೆಕ್ಟ್ರಿಕ್‌ ವಾಹನಗಳ ತಯಾರಿಕೆಗೆ ಸಬ್ಸಿಡಿ ರೂಪದಲ್ಲಿ ಸಹಾಯ ಹಸ್ತ ನೀಡುತ್ತಿದೆ. ಲಿಥಿಯಂ-ಐಯಾನ್‌ ಬ್ಯಾಟರಿಗಳೇ ಎಲೆಕ್ಟ್ರಾನಿಕ್‌ ವಾಹನಗಳ ಜೀವಾಳ. ಹೀಗಾಗಿ ಭಾರತವು ತನ್ನದೇ ನೆಲದಲ್ಲಿ ಲಿಥಿಯಂ ಉತ್ಪಾದಿಸಲು ಯಶಸ್ವಿಯಾದರಷ್ಟೇ ದೇಶೀಯ ಮಾರುಕಟ್ಟೆಯಲ್ಲಿ ಬ್ಯಾಟರಿಗಳ ಬೆಲೆ ತಗ್ಗಿಸಲು ಸಾಧ್ಯ. ಇದರಿಂದ ಹಲವು ರೀತಿಯ ಲಾಭವಿದೆ. ಮೊದಲನೇಯದಾಗಿ ಎಲೆಕ್ಟ್ರಾನಿಕ್‌ ವಾಹನಳಿಂದ ವಾಯು ಮಾಲಿನ್ಯ ಕಡಿಮೆಯಾಗುತ್ತದೆ. ಹಾಗೆಯೇ ಎಲೆಕ್ಟಾನಿಕ್‌ ವಾಹನಗಳ ಬೆಲೆಯೂ ಕಡಿಮೆಯಾಗುತ್ತದೆ.

ಗಣಿ-ಖನಿಜ ಕಾಯ್ದೆ ತಿದ್ದುಪಡಿ ಲಾಭ

ಈ ಕಾರಣದಿಂದಲೇ ಜುಲೈ 2023ರಲ್ಲಿ ಕೇಂದ್ರ ಸರ್ಕಾರ The Mines and Mineral (Development and Regulation) Amendment Bill, 2023 ಮಸೂದೆಯನ್ನು ಅಂಗೀಕರಿಸಿತ್ತು. ಹಿಂದೆ ಇದ್ದ ಕಾಯ್ದೆಯಂತೆ ಒಟ್ಟು 12 ಅಣು ಉತ್ಪನ್ನ ಖನಿಜಗಳ ಗಣಿಗಾರಿಕೆ ಸರ್ಕಾರಿ ಸಾಮ್ಯದ ಕಂಪನಿಗಳಿಗೆ ಮಾತ್ರ ಸೀಮಿತವಾಗಿತ್ತು. ಈ ಹೊಸ ಕಾಯ್ದೆಯ ಪ್ರಕಾರ ಈ 12 ಅಣು ಉತ್ಪನ್ನ ಖನಿಜಗಳನ್ನು ಹೊರಗಿಟ್ಟು ಅವುಗಳ ಗಣಿಗಾರಿಕೆ ನಡೆಸಲು ಖಾಸಗಿ ಕಂಪನಿಗಳಿಗೆ ಅನುಮತಿ ನೀಡಲಾಯಿತು. ಆ ಆರು ಖನಿಜಗಳೆಂದರೆ ಲಿಥಿಯಂ, ಬೆರಿಲ್ಲಿಯಂ, ನಿಯೋಬಿಯಂ, ಟಿಟಾನಿಯಂ, ಟ್ಯಾಂಟುಲಮ್‌ ಹಾಗೂ ಜಿರೋಕೋನಿಯಂ.

ಈ ತಿದ್ದುಪಡಿಯಾದ ಕಾಯ್ದೆಯ ಪ್ರಕಾರ, ರಾಜ್ಯದ ಖಾಸಗಿ ಕಂಪನಿಗಳು ಲಿಥಿಯಂ ಗಣಿಗಾರಿಕೆಯಲ್ಲಿ ತೊಡಗಿಕೊಳ್ಳಬಹುದು. ಈ ಬೆಳವಣಿಗೆಗೆ ಇತ್ತೀಚಿನ ಸರ್ವೋಚ್ಛ ನ್ಯಾಯಾಲಯ ಗಣಿಗಾರಿಕೆ ಹಾಗೂ ಖನಿಜಗಳಿರುವ ಜಮೀನುಗಳ ಮೇಲೆ ತೆರಿಗೆ ವಿಧಿಸಲು ರಾಜ್ಯಗಳಿಗೆ ಶಾಸನಬದ್ಧ ಅಧಿಕಾರವಿದೆ ಎಂದು ಇತ್ತೀಚೆಗೆ ತೀರ್ಪು ನೀಡಿರುವುದು, ಕರ್ನಾಟಕಕ್ಕೆ ಸಾಕಷ್ಟು ಲಾಭ ತರುವ ಸಾಧ್ಯತೆ ಇದೆ. ಈ ತೀರ್ಪಿನಿಂದಾಗಿ ಖನಿಜಗಳಿರುವ ಜಮೀನುಗಳಿಂದ ಸಿಗುವ ಆದಾಯಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಘರ್ಷಕ್ಕೆ ತೆರೆ ಬಿದ್ದಂತಾಗಿದೆ. ಈ ತೀರ್ಪಿನಿಂದ ಹೇರಳ ಖನಿಜ ಸಂಪತ್ತಿರುವ ಕರ್ನಾಟಕ, ಆಂಧ್ರ ಪ್ರದೇಶ, ಒಡಿಷಾ, ಜಾರ್ಖಂಡ್‌, ಪಶ್ಚಿಮ ಬಂಗಾಳ, ಛತ್ತೀಸ್ಗಢ, ಮಧ್ಯ ಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳಿಗೆ ವರದಾನವಾಗಲಿದೆ ಎಂಬುದು ಈಗಾಗಲೇ ಮನವರಿಕೆಯಾಗಿರುವ ಸಂಗತಿ.

ಹಾಗಾಗಿ ಮಂಡ್ಯದ ಲಿಥಿಯಂ ನಿಕ್ಷೇಪವಿರುವ ಮರಗಾಲ ಗ್ರಾಮ ಇನ್ನು ಮುಂದೆ ಮರಳುಗಾಡಿನಲ್ಲಿ ಸಿಕ್ಕ ಒಯಸಿಸ್‌ನಂತೆ ರಾಜ್ಯ ಸರ್ಕಾರಕ್ಕೆ ಲಾಭವಾಗಲಿದೆ ಎನ್ನಬಹುದು. ಮಂಡ್ಯದಲ್ಲಿ ತನ್ನ ಕುರುಹು ತೋರಿಸಿರುವ ಲಿಥಿಯಂ ಅನ್ನು ಮುಂದಿನ ದಿನಗಳಲ್ಲಿ ಗಣಿಗಾರಿಕೆ ಮಾಡಿದರೆ, ಅದರಿಂದ ಆಗುವ ಆರ್ಥಿಕ ಲಾಭದ ಜೊತೆಗೆ ಸ್ಥಳೀಯರ ಬದುಕಿನ ಮೇಲೆ ಎಂಥ ಪರಿಣಾಮ ಬೀರಲಿದೆ ಎಂಬುದನ್ನೂ ಕಾದು ನೋಡಬೇಕಿದೆ.

Tags:    

Similar News