Coconut Powder | ತೆಂಗಿನಕಾಯಿ ಬದಲು ಮಾರುಕಟ್ಟೆಗೆ ಬಂದಿದೆ ತೆಂಗಿನ ಪುಡಿ: ಫಟಾಫಟ್‌ ಅಡುಗೆ ರೆಡಿ

Coconut Powder | ಒತ್ತಡದ ಜೀವನದಲ್ಲಿ ಜನರಿಗೆ ಸುಲಭವಾಗಿ ಯಾವುದು ಲಭ್ಯವಾಗುತ್ತದೆಯೋ ಅದನ್ನು ಹೆಚ್ಚಾಗಿ ಬಳಸುತ್ತಾರೆ. ಅದೇ ರೀತಿ ಇತ್ತೀಚೆಗೆ ತೆಂಗಿನಕಾಯಿ ಬದಲು ಪುಡಿಯನ್ನೇ ಬಳಸಲಾಗುತ್ತಿದೆ;

Update: 2025-01-18 10:39 GMT
ತೆಂಗಿನಕಾಯಿ ಪುಡಿ

ದಕ್ಷಿಣ ಭಾರತದ ಬಹುತೇಕ ಅಡುಗೆಗಳಲ್ಲಿ ತೆಂಗಿನಕಾಯಿ ಬಳಸುವುದು ಸಾಮಾನ್ಯ. ಚಟ್ನಿ, ಸಾಂಬಾರ್ ಮುಂತಾದ ಮಸಾಲೆಯುಕ್ತ ಆಹಾರ ಪದಾರ್ಥಗಳ ತಯಾರಿಕೆಗೆ ತೆಂನಕಾಯಿ ಬೇಕೇ ಬೇಕು. ತೆಂಗಿನಕಾಯಿ ಹಾಕಿ ತಯಾರಿಸಿದ ಖಾದ್ಯಗಳ ರುಚಿ ಹೆಚ್ಚು. ಹೀಗಾಗಿ  ಅಡುಗೆ ತಯಾರಿಸಲು ತೆಂಗಿನಕಾಯಿ ಹೆಚ್ಚು ಬಳಸುತ್ತಾರೆ. 

ಆದರೆ ತೆಂಗಿನಕಾಯಿ ತಂದು, ಸುಲಿದು, ಒಡೆದು, ತುರಿದು ಮಿಕ್ಸಿಗೆ ಹಾಕುವುದೇ ತ್ರಾಸು ಎಂಬುದು ಈಗಿನ ಹೊಸ ತಲೆಮಾರಿನ ಗಡಿಬಿಡಿ ಜೀವನದ ತಲೆನೋವು. ಆದರೆ, ಈಗ ಅಂತಹ ತಲೆನೋವು ದೂರ ಮಾಡುವ ಹೊಸ ಪರ್ಯಾಯವೂ ಅಡುಗೆ ಮನೆಗೆ ಪ್ರವೇಶ ಪಡೆದಿದೆ. ಈವರೆಗೆ ಬಹುತೇಕ ವಿದೇಶಗಳಲ್ಲಿ ಮತ್ತು ಉತ್ತರ ಭಾರತದಲ್ಲಿ ಹೆಚ್ಚು ಬಳಕೆಯಲ್ಲಿದ್ದ ತೆಂಗಿನಕಾಯಿ ಸಿದ್ಧ ಪುಡಿ ಇದೀಗ ರಾಜ್ಯದಲ್ಲೂ ಲಭ್ಯವಿದೆ.

ತೆಂಗಿನಕಾಯಿ ಪುಡಿಗೆ ಬೇಡಿಕೆ ಹೆಚ್ಚು

ಈ ಸಿದ್ಧ ತೆಂಗಿನಕಾಯಿ ಪುಡಿಗಳಿಗೆ ಉತ್ತರ ಭಾರತದಲ್ಲಿ ಅತೀ ಹೆಚ್ಚಿನ ಬೇಡಿಕೆ ಇದೆ. ಆದರೆ ದಕ್ಷಿಣ ಭಾರತದಲ್ಲಿ ಸುಲಭವಾಗಿ ತೆಂಗಿನಕಾಯಿ ಲಭ್ಯವಿರುವುದರಿಂದ ತೆಂಗಿನ ಪುಡಿಗಳು ಅಷ್ಟೊಂದು ಜನರಿಗೆ ಪರಿಚಿತವಾಗಿಲ್ಲ. ತೆಂಗಿನಕಾಯಿಗೆ ಪರ್ಯಾಯವಾಗಿ ಬಳಸುವ ತೆಂಗಿನ ಪುಡಿ ತಯಾರಿಸುವ ಕಾರ್ಖಾನೆಗಳು ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ನೆಲೆಯೂರಿವೆ. ರಾಜ್ಯದ ಪ್ರಮುಖ ಕೊಬ್ಬರಿ ಮಾರುಕಟ್ಟೆಯಲ್ಲಿ ಒಂದಾಗಿರುವ ತಿಪಟೂರು ಒಂದರಲ್ಲೇ ಸುಮಾರು 75 ತೆಂಗಿನ ಪುಡಿ ತಯಾರಿಕೆ ಕಾರ್ಖಾನೆಗಳು ಉತ್ತರ ಭಾರತೀಯರ ಬೇಡಿಕೆ ಪೂರೈಸುತ್ತಿವೆ. ತೆಂಗು ಬೆಳೆಯುವ ಚಾಮರಾಜನಗರ, ಕರಾವಳಿ ಪ್ರದೇಶದಲ್ಲಿ ಅಲ್ಲೊಂದು ಇಲ್ಲೊಂದು ತೆಂಗಿನ ಪುಡಿ ಕಾರ್ಖಾನೆಗಳಿವೆ. ಆದರೆ, ಬಹುಪಾಲು ತೆಂಗಿನ ಪುಡಿ ತಯಾರಿಕೆ ಉದ್ಯಮಗಳು ತಿಪಟೂರಿನಲ್ಲಿ ತಲೆ ಎತ್ತಿವೆ. ತೆಂಗು ಬೆಳೆಗಾರರಿಗೆ ಲಾಭ ತಂದುಕೊಡುವ ಜೊತೆಗೆ ಉದ್ಯೋಗವನ್ನು ಸೃಷ್ಟಿಸಿವೆ.

ತೆಂಗಿಕಾಯಿ ದರ ಹೆಚ್ಚಳವಾದ ಬೆನ್ನಲ್ಲೇ ತೆಂಗಿನ ಕಾಯಿ ಪುಡಿಗೂ ಭಾರೀ ಬೇಡಿಕೆ ಬಂದಿದೆ. ತೆಂಗು ಇತಿಹಾಸದಲ್ಲೇ ತೆಂಗಿನ ಪುಡಿಗೆ ಭಾರೀ ಬೇಡಿಕೆ ಜೊತೆಗೆ ಬೆಲೆಯೂ ಹೆಚ್ಚಾಗಿದೆ. ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಬೇಡಿಕೆ ಇರುವ ತೆಂಗಿನ ಪುಡಿಯನ್ನು ಕರ್ನಾಟಕದಿಂದಲೇ ಪೂರೈಕೆಯಾಗುತ್ತಿರುವ ಹೆಮ್ಮೆಯ ವಿಚಾರ. 

ತೆಂಗಿನ ಪುಡಿ ತಯಾರಿಗೆ ಹೇಗೆ?

ತೆಂಗಿನಕಾಯಿ ಚಿಪ್ಪು ತೆಗೆದ ಬಳಿಕ ಕೊಬ್ಬರಿಯನ್ನು ಬೇರ್ಪಡಿಸಲಾಗುತ್ತದೆ. ಬಿಳಿ ಬಣ್ಣದ ಗುಂಡಾಕಾರದ ತೆಂಗಿನ ಕಾಯಿಯನ್ನು ಸೆಮಿ ಆಟೊಮ್ಯಾಟಿಕ್‌ ಗ್ರೇಟರ್‌ಗಳ ಮೂಲಕ ತುರಿಯಲಾಗುತ್ತದೆ. ತುರಿದು ಕಾಯಿಯನ್ನು ಹದವಾಗಿ ಪುಡಿ ಮಾಡಿ ಟಿ-ಡ್ರೈಯರ್‌ ಹೀಟರ್‌ಗಳ ಮೂಲಕ ಒಣಗಿಸಲಾಗುತ್ತದೆ.

ತೆಂಗಿನಕಾಯಿ ತುರಿಯಲ್ಲಿರುವ ತೇವಾಂಶ ಸಂಪೂರ್ಣ ಬಿಡುವವರೆಗೆ ಅದನ್ನು 80 ರಿಂದ 100 ಡಿಗ್ರಿಯವರೆಗೆ ಬಿಸಿ ಮಾಡಿ ಪ್ಯಾಕಿಂಗ್‌ ಮಾಡಲಾಗುತ್ತದೆ. ಹೀಗೆ ತಯಾರಿಸುವ ಪುಡಿಯನ್ನು ಕನಿಷ್ಠ 4 ರಿಂದ ಆರು ತಿಂಗಳವರೆಗೆ ಶೇಖರಿಸಿ ಬಳಸಬಹುದಾಗಿದೆ.

ಕರಾವಳಿ ತೆಂಗಿನಕಾಯಿ ಬಳಕೆ

ತೆಂಗಿನಕಾಯಿ ಪುಡಿಗೆ ದಪ್ಪ ತಿರುಳುಳ್ಳ ತೆಂಗಿನಕಾಯಿಗಳು ಹೆಚ್ಚು ಸೂಕ್ತ. ತುಮಕೂರು, ತಿಪಟೂರಿನ ಭಾಗಗಳಲ್ಲಿ ಬೆಳೆಯುವ ತೆಂಗಿನಕಾಯಿಯ ಒಳ ತಿರುಳು ತೆಳುವಾಗಿರುತ್ತದೆ. ಹೀಗಾಗಿ ಪೌಡರ್‌ ಪ್ರಮಾಣ ಕಡಿಮೆಯಾಗುತ್ತದೆ. ಕರಾವಳಿ ಪ್ರದೇಶಗಳಾದ ಉಡುಪಿ, ಮಂಗಳೂರು, ಪುತ್ತೂರು ಹಾಗೂ ಕೇರಳದಲ್ಲಿ ಬೆಳೆಯುವ ತೆಂಗಿನಕಾಯಿಗಳಲ್ಲಿ ಒಳ ತಿರುಳು ದಪ್ಪ ಇರುವುದರಿಂದ ಪೌಡರ್‌ ಪ್ರಮಾಣವೂ ಹೆಚ್ಚಾಗುವುದರಿಂದ ಈ ಪ್ರದೇಶಗಳ ತೆಂಗಿನ ಕಾಯಿಗಳನ್ನು ಬಳಸಲಾಗುತ್ತದೆ.

ಒಂದು ಕೆ.ಜಿ.ತೆಂಗಿನಕಾಯಿ ಪುಡಿ ತಯಾರಿಸಲು ಸುಮಾರು 12 ರಿಂದ 15 ತೆಂಗಿನಕಾಯಿಗಳು ಬೇಕಾಗುತ್ತವೆ.

ತೆಂಗಿನಕಾಯಿ ಪುಡಿ ಉಪಯೋಗವೇನು?

ಒತ್ತಡದ ಜೀವನದಲ್ಲಿ ಜನರಿಗೆ ಸುಲಭವಾಗಿ ಯಾವುದು ಲಭ್ಯವಾಗುತ್ತದೆಯೋ ಅದನ್ನು ಹೆಚ್ಚಾಗಿ ಬಳಸುತ್ತಾರೆ. ಅದೇ ರೀತಿ ತೆಂಗಿನಕಾಯಿ ಬದಲು ಪುಡಿಯನ್ನೇ ಅಡುಗೆಗೆ ಬಳಸಲಾಗುತ್ತದೆ. ತೆಂಗಿನ ಕಾಯಿ ಪುಡಿಯನ್ನು ಹೆಚ್ಚಾಗಿ ಉತ್ತರ ಭಾರತದ ರಾಜ್ಯಗಳಲ್ಲಿ ಬಳಸಲಾಗುತ್ತದೆ. ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ದೆಹಲಿಯಲ್ಲಿ ತೆಂಗಿನ ಬೆಳೆ ಇಲ್ಲ. ತೆಂಗಿನಕಾಯಿ ಬೆಲೆ ಹೆಚ್ಚಾಗಿರುವುದರಿಂದ ತೆಂಗಿನ ಪುಡಿಯನ್ನೇ ಹೆಚ್ಚು ಅವಲಂಬಿಸಿದ್ದಾರೆ.

ಈ ಕುರಿತು `ದ ಫೆಡರಲ್‌ ಕರ್ನಾಟಕ'ದೊಂದಿಗೆ ಮಾತನಾಡಿದ ತಿಪಟೂರಿನ ತೆಂಗಿನ ಪುಡಿ ತಯಾರಿಕಾ ಉದ್ಯಮಿ ಸಂತೋಷ್‌ ʼ100 ಕೆ.ಜಿ ತೆಂಗಿನ ಪುಡಿ ಉತ್ಪಾದನೆಯಲ್ಲಿ ಬರೋಬ್ಬರಿ 80ಕೆ.ಜಿ ಪುಡಿಯು ಉತ್ತರ ಭಾರತದ ರಾಜ್ಯಗಳಲ್ಲೇ ಮಾರಾಟವಾಗುತ್ತದೆ. 20 ಕೆ.ಜಿ.ಯಷ್ಟು ಮಾತ್ರ ಕರ್ನಾಟಕದಲ್ಲಿ ಮಾರಾಟವಾಗುತ್ತಿದೆ. ಸ್ಥಳೀಯವಾಗಿ ಅಡುಗೆ ಮತ್ತು ವಿವಿಧ ಖಾದ್ಯಗಳು, ಬೇಕರಿ ತಿನಿಸುಗಳು, ಡ್ರೈ ಫ್ರೂಟ್‌ ತಿನಿಸುಗಳಿಗೆ ಉಪಯೋಗಿಸಲಾಗುತ್ತದೆ. ಜೊತೆಗೆ ಬ್ರೆಡ್, ಪೇಡಾ ತಯಾರಿಕೆಗೂ ತೆಂಗಿನ ಪುಡಿ ಬಳಸುತ್ತಾರೆʼ ಎಂದು ಹೇಳಿದರು.

ಗರಿಷ್ಠ ದರ ಏರಿಕೆ ಕಂಡ ಪುಡಿ

ತೆಂಗಿನಕಾಯಿ ಪುಡಿಯ ಬೆಲೆಗಳು ವಾರದಿಂದ ವಾರಕ್ಕೆ ಬದಲಾಗುತ್ತಿರುತ್ತವೆ. ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಬೆಲೆ ಎಷ್ಟಿರುತ್ತದೆಯೇ ಅದರ ಮೇಲೆ ಪುಡಿಯ ಬೆಲೆ ನಿರ್ಧಾರವಾಗುತ್ತದೆ. ಈ ಹಿಂದೆ ಒಂದು ಕೆ.ಜೆ ತೆಂಗಿನ ಪೌಡರ್‌ಗೆ 150 ರಿಂದ 160 ರೂ. ಇತ್ತು. ಈಗ ತೆಂಗಿನಕಾಯಿ ಬೆಲೆ ಏರಿಕೆಯಿಂದಾಗಿ ಒಂದು ಕೆ. ಜಿ ತೆಂಗಿನಕಾಯಿ ಪುಡಿಯ ಬೆಲೆ 280 ರಿಂದ 300 ರೂ. ಗಡಿ ಮುಟ್ಟಿದೆ ಎಂದು ತಿಪಟೂರಿನ ಬೆಲೆ ಕಾವಲು ಸಮಿತಿಯ ಸದಸ್ಯ ಶ್ರೀಕಾಂತ್ ಅವರು ʻದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ತೆಂಗಿನಕಾಯಿ ಪುಡಿ ಮಾರುಕಟ್ಟೆ ಹೇಗಿದೆ?

ತೆಂಗಿನಕಾಯಿ ಪುಡಿಗೆ ಉತ್ತರ ಭಾರತದಲ್ಲಿ ಹೆಚ್ಚು ಬೇಡಿಕೆ ಇದೆ. ದಕ್ಷಿಣ ಭಾರತದಲ್ಲಿ ಪುಡಿಯ ಬಳಕೆ ಬಗ್ಗೆ ಅಷ್ಟಾಗಿ ಅರಿವಿಲ್ಲ. ಆದರೆ, ಇತ್ತೀಚೆಗೆ ಮಾರುಕಟ್ಟೆ ವಿಸ್ತರಿಸುತ್ತಿದೆ. ಹಬ್ಬ, ಮದುವೆಗಳ ಸಂದರ್ಭದಲ್ಲಿ ತೆಂಗಿನ ಪುಡಿ ಹೆಚ್ಚು ಮಾರಾಟವಾಗುತ್ತದೆ.

ತಿಪಟೂರಿನಲ್ಲಿರುವ 75 ಕಾರ್ಖಾನೆಗಳಿಂದ ದಿನಕ್ಕೆ 100 ಟನ್ ತೆಂಗಿನಕಾಯಿ ಪುಡಿ ಉತ್ಪಾದನೆ ಆಗುತ್ತದೆ. ಶುಭ ಸಮಾರಂಭಗಳು ಇಲ್ಲದಿರುವ ವೇಳೆ ಪುಡಿಯನ್ನು ಶೇಖರಿಸಿಡುತ್ತೇವೆ. ತೆಂಗಿನ ಪುಡಿ ಉತ್ಪಾದನೆಯು ಶೇ 80 ರಷ್ಟು ಮಾನವಾಧಾರಿತ ಕೆಲಸವನ್ನು ಬಯಸುತ್ತದೆ. ಕಾರ್ಖಾನೆಗಳಿಗೆ ಕಾರ್ಮಿಕರ ಲಭ್ಯತೆ ದೊಡ್ಡ ಸಮಸ್ಯೆಯಾಗಿದೆ ಎಂದು ಉದ್ಯಮಿ ಸಂತೋಷ್‌ ʻದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು. 

ಇತ್ತೀಚೆಗೆ ಸೆಮಿ ಆಟೋಮೆಟಿಕ್‌, ಡ್ರೈಯಿಂಗ್‌, ಮೆಟಿರಿಯಲ್‌ ಹ್ಯಾಂಡ್ಲಿಂಗ್‌, ಆಟೋಮ್ಯಾಟಿಕ್‌ ಪ್ಯಾಕಿಂಗ್‌ ಯಂತ್ರದ ಹೊಸ ತಂತ್ರಜ್ಞಾನ ಬಂದಿದೆ. ಇವುಗಳನ್ನು ನಿರ್ವಹಿಸಲು ಕೌಶಲಾಧರಿಯ ಮಾನವ ಸಂಪನ್ಮೂಲ ಬೇಕು. ಆದರೂ ನಲವತ್ತು ವರ್ಷಗಳಿಂದ ತೆಂಗಿನ ಪುಡಿ ಉದ್ಯಮವನ್ನು ಮುನ್ನಡೆಸುತ್ತಿದ್ದೇವೆ. ತೆಂಗಿನ ಕಾಯಿ ಪುಡಿಯ ಮಹತ್ವದ ಬಗ್ಗೆ ಹೆಚ್ಚು ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ಪ್ರತಿಯೊಂದು ಕಾರ್ಖಾನೆಯೂ ಸಾಮರ್ಥ್ಯಕ್ಕೆ ಅನುಗುಣವಾಗಿ 12 ಸಾವಿರದಿಂದ 50ಸಾವಿರದವರೆಗೆ ತೆಂಗಿನಕಾಯಿ ಪುಡಿ ಮಾಡುತ್ತವೆ ಎಂದು ಹೇಳಿದರು.

ವಿದೇಶಿ ಕಂಪನಿಗಳ ಲಾಬಿ

ದಕ್ಷಿಣ ಏಷ್ಯಾ ದೇಶಗಳಾದ ವಿಯೆಟ್ನಾಮ್, ಇಂಡೋನೇಷ್ಯಾ, ಫಿಲಿಫೈನ್ಸ್‌ ಮುಂತಾದ ದೇಶಗಳಲ್ಲಿ ತೆಂಗಿನಕಾಯಿ ಉತ್ಪಾದನೆ ಹೆಚ್ಚಿರುತ್ತದೆ. ಈ ದೇಶಗಳಲ್ಲಿ ತೆಂಗಿನಕಾಯಿಯಿಂದ ಹಾಲನ್ನು ತೆಗೆದು ಪುಡಿಯನ್ನು ಮಾರಾಟ ಮಾಡಲಾಗುತ್ತದೆ. ಇಂಥ ವಿದೇಶಗಳಿಂದ ಆಮದು ಆಗುವ ಈ ಪದಾರ್ಥಗಳಿಗೆ ಕಂಪನಿಗಳು ಜಾಹೀರಾತು ನೀಡುತ್ತವೆ. ಈ ಉತ್ಪನ್ನಗಳಿಗೆ ಜನರು ಮಾರುಹೋಗುವುದರಿಂದ ಗುಣಮಟ್ಟದ ಉತ್ಪನ್ನಗಳಿಗೆ ಸಮಸ್ಯೆಯುಂಟಾಗಿದೆ ಎಂದು ಅವರು ತಿಳಿಸಿದರು. 

4000 ಉದ್ಯೋಗ ಸೃಷ್ಟಿ

ಇನ್ನು ತೆಂಗಿನ ಪುಡಿ ತಯಾರಿಕೆ ಕಾರ್ಖಾನೆಗಳಿಂದ ಉದ್ಯೋಗಾವಕಾಶವೂ ವಿಫುಲವಾಗಿದೆ. ಆದರೆ, ಸ್ಥಳೀಯ ಕಾರ್ಮಿಕರು ಆಸಕ್ತಿ ತೋರುತ್ತಿಲ್ಲ. ಬಿಹಾರ, ಅಸ್ಸಾಂಗಳಿಂದ ಹೆಚ್ಚಿನ ಕಾರ್ಮಿಕರು ಬರುತ್ತಿದ್ದಾರೆ. ತಿಪಟೂರು ಒಂದರಲ್ಲೇ ಸುಮಾರು 4000ಕ್ಕೂ ಹೆಚ್ಚು ಕಾರ್ಮಿಕರಿಗೆ ಉದ್ಯೋಗ ದೊರೆತಿದೆ. ಇವರ ಪೈಕಿ ಕೇವಲ 200ರಿಂದ 300 ಮಂದಿ ಕಾರ್ಮಿಕರು ಮಾತ್ರ ಸ್ಥಳೀಯರಾಗಿದ್ದಾರೆ ಎಂದು ತೆಂಗಿನ ಪುಡಿ ತಯಾರಿಕಾ ಘಟಕವನ್ನು ಹೊಂದಿರುವ ಉದ್ಯಮಿ ಸಂತೋಷ್‌ ತಿಳಿಸಿದರು. 

Tags:    

Similar News