ಕೇಂದ್ರ ಬಜೆಟ್‌ ಮೇಲೆ ಕಣ್ಣಿಟ್ಟಿರುವ ಕರ್ನಾಟಕ; ಸಚಿವ, ಸಂಸದರ ಮೇಲೆ ಭಾರೀ ನಿರೀಕ್ಷೆ

Update: 2024-06-27 01:00 GMT

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ನೂತನ ಎನ್ ಡಿ ಎ ಸರ್ಕಾರ ಜುಲೈ ತಿಂಗಳ ಕೊನೆಯ ವಾರದಲ್ಲಿ ತನ್ನ ಬಜೆಟ್‌ ಮಂಡಿಸಲಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್‌ ಅವರು ಮತ್ತೆ ವಿತ್ತ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಜುಲೈ 22 ರಂದು ಅವರು ತಮ್ಮ ಬಜೆಟ್‌ ಮಂಡಿಸುವ ಸಾಧ್ಯತೆ ಇದೆ. ಅದಕ್ಕಾಗಿ ಅವರು ಅಗತ್ಯವಾದ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಈಗಿನ ಎನ್‌ ಡಿ ಎ ಸರ್ಕಾರ ಹಿಂದಿನ ಸರ್ಕಾರಗಳಂತಲ್ಲದೆ, ಇದು, ಸಮ್ಮಿಶ್ರ ಸರ್ಕಾರವಾಗಿರುವುದರಿಂದ ಮಿತ್ರ ಪಕ್ಷಗಳ ಬೇಡಿಕೆಗಳನ್ನು ಗಮನದಲ್ಲಿರಿಸಿಕೊಂಡು ಅವರು ತಮ್ಮ ಆಯವ್ಯಯವನ್ನು ಮಂಡಿಸಬೇಕಿದೆ. ವಿಶೇಷವಾಗಿ ಕರ್ನಾಟಕದಲ್ಲಿ ಜೆಡಿ ಎಸ್‌ ಪಕ್ಷದ ಅಸ್ತಿತ್ವವನ್ನೂ ಗಮನದಲ್ಲಿಟ್ಟುಕೊಳ್ಳಬೇಕಿದೆ.

ಈ ನಡುವೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವುದರಿಂದ ಕರ್ನಾಟಕಕ್ಕೆ ನಿರ್ಮಲಾ ಸೀತಾರಾಮನ್‌ ಅವರು ಯಾವ ರೀತಿಯಲ್ಲಿ ಆರ್ಥಿಕವಾಗಿ ನೆರವಾಗುತ್ತಾರೆ ಎಂಬುದರ ಬಗ್ಗೆ ತೀವ್ರವಾದ ಕುತೂಹಲವಿದೆ. ಕಳೆದ ಬಾರಿ ಇಪ್ಪತ್ತೈದು ಸಂಸದರಿದ್ದೂ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಕೂಗಿನ ಹಿನ್ನೆಲೆಯಲ್ಲಿ, ಬಿಜೆಪಿ ಮತ್ತು ಜೆಡಿಎಸ್‌ ಸೇರಿದಂತೆ ಹತ್ತೊಂಬತ್ತು ಸಂಸದರಿರುವ ಎನ್ ಡಿ ಎ ಸಮ್ಮಿಶ್ರ ಕೂಟ ಕರ್ನಾಟಕದ ಮರ್ಯಾದೆಯನ್ನು ಎಷ್ಟರ ಮಟ್ಟಿಗೆ ಉಳಿಸುತ್ತಾರೆ ಎಂಬ ಕುತೂಹಲವೂ ಇದೆ.

ವಿರೋಧ ಪಕ್ಷಗಳ ಆಡಳಿತವಿರುವ ಕೇರಳ ಮತ್ತು ತಮಿಳುನಾಡು ರಾಜ್ಯಗಳು ಈಗಾಗಲೇ, ಕೇಂದ್ರ ಸರ್ಕಾರ ಸಾಲದ ಮಿತಿಯನ್ನು ನಿಗದಿ ಪಡಿಸಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ತಮ್ಮ ವಾದವನ್ನು ಮುಂದಿಟ್ಟು, ತಮ್ಮ ಹಕ್ಕಿಗಾಗಿ ಹೋರಾಟಕ್ಕಿಳಿದಿವೆ. ಹಾಗಾಗಿ ಈ ಸಮಸ್ಯೆಯಿಂದ ಪಾರಾಗಲು ಕನಿಷ್ಠ 24000 ಕೋಟಿ ರೂಗಳ ವಿಶೇಷ ಅನುದಾನವನ್ನು ಘೋಷಿಸಿ ಕೇರಳ ರಾಜ್ಯವನ್ನು ಸಂಕಷ್ಟ ಸ್ಥಿತಿಯಿಂದ ಪಾರು ಮಾಡುವಂತೆ ಕೇರಳ ರಾಜ್ಯದ ಅರ್ಥ ಸಚಿವ ಕೆ. ಎನ್‌ ಬಾಲಗೋಪಾಲನ್‌ ಅವರು ಕೇಳಿದ್ದಾರೆ. ಸಾಲದ ಮಿತಿಯಿಂದಾಗಿ ತಮ್ಮ ಸರ್ಕಾರ ೮೫೦೦ ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದೆ ಎಂದು ತಮಿಳು ನಾಡಿನ ಹಣಕಾಸು ಸಚಿವ ತಂಗಂ ತೇನರಸು ಹೇಳಿದ್ದಾರೆ.

11,495 ಕೋಟಿ ವಿಶೇಷ ಅನುದಾನಕ್ಕೆ ಕರ್ನಾಟಕದ ಬೇಡಿಕೆ

ಕೇರಳ ಮತ್ತು ತಮೀಳು ನಾಡು ರಾಜ್ಯಗಳಂತೆ, ಕರ್ನಾಟಕದ ಸ್ಥಿತಿ ಕೂಡ ಚಿಂತಾಜನಕವಾಗಿದೆ. ಹಾಗಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣ ಕಾಸು ಆಯೋಗ ಶಿಫಾರಸು ಮಾಡಿರುವಂತೆ 11,495 ಕೋಟಿ ರೂಪಾಯಿಗಳನ್ನು ವಿಶೇಷ ಅನುದಾನವಾಗಿ ಬಿಡುಗಡೆ ಮಾಡುವಂತೆ ಕೇಂದ್ರ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್‌ ಅವರನ್ನು ಆಗ್ರಹಿಸಿದ್ದಾರೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.

ಅಷ್ಟೇ ಅಲ್ಲದೆ ತೆರಿಗೆ ಮತ್ತು ಸರ್ಚಾರ್ಜ್‌ (cess and surcharge) ಅನ್ನು ಹಂಚಿಕೆಯ ಪೂಲ್‌ (divisable pool) ಗೆ ಸೇರಿಸುವಂತೆ ಕಂದಾಯ ಇಲಾಖೆ ಕೇಳಿದೆ. ಈ ಮೂಲಕ ಕೇಂದ್ರ ತೆರಿಗೆಯಲ್ಲಿ ತನ್ನ ಪಾಲನ್ನು ಪಡೆದುಕೊಳ್ಳಲು ರಾಜ್ಯಗಳಿಗೆ ಸಹಾಯವಾಗುತ್ತದೆ ಎಂದು ಕೂಡ ಕರ್ನಾಟಕ ಸರ್ಕಾರ ಮನವಿ ಮಾಡಿದೆ. ತೆರಿಗೆ ಅಧಿಕಾರ (tax devolution)ದ ಆಧಾರದಲ್ಲಿ ಗಮನಿಸಿದರೆ ಬಿಜೆಪಿ ಆಡಳಿತ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕ್ಕೆ ಅನ್ಯಾಯವಾಗಿದೆ ಎಂದು ಈ ಹಿಂದೆ ಕರ್ನಾಟಕ ಕೇಂದ್ರ ಸರ್ಕಾರದೊಂದಿಗೆ ಸಂಘರ್ಷಕ್ಕಿಳಿದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇದಲ್ಲದೆ, ಬೆಂಗಳೂರು ಮಹಾನಗರ ಅಭಿವೃದ್ಧಿಗೆ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಗಾಗಿ ವಿಶೇಷ ಅನುದಾನವನ್ನು ಕೂಡ ಕರ್ನಾಟಕ ಸರ್ಕಾರ ಕೇಳಿದೆ. ಅದು ಪ್ಯಾಕೇಜ್‌ ರೂಪದಲ್ಲಿದ್ದರೂ, ಅಭ್ಯಂತರವಿಲ್ಲ ಎಂಬುದನ್ನು ಮನದಟ್ಟು ಮಾಡಿದೆ.

ಭದ್ರಾ ಮೆಲ್ದಂಡೆ ಯೋಜನೆಗೆ ನೆರವು

ಕರ್ನಾಟಕದ ಬೇಡಿಕೆಗಳಲ್ಲಿ ಅತಿ ಮುಖ್ಯವಾಗಿರುವುದು ಭದ್ರಾ ಮೇಲ್ದಂಡೆ ಯೋಜನೆಗಾಗಿ ೫೩೦೦ ಕೋಟಿ ಬಿಡುಗಡೆ ಮಾಡುವುದೇ ಅಲ್ಲದೆ, ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ನೀರಾವರಿ ಯೋಜನೆ ಎಂದು ಘೋಷಿಸಬೇಕೆಂದು ಒತ್ತಾಯಿಸಿದೆ. ಕಳೆದ ವರ್ಷದ ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂಗಳ ಅನುದಾನವನ್ನು ಘೋಷಿಸಿದ್ದರು. ಆ ಹಣವನ್ನು ಬಿಡುಗಡೆ ಮಾಡುವಂತೆ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರ, ಹಣಕಾಸು ಸಚಿವೆಯನ್ನು ಒತ್ತಾಯಿಸಿದೆ.

ಭದ್ರಾ ಮೇಲ್ದಂಡೆ ಯೋಜನೆ.. ಇದು ತುಂಬಾ ದಿನಗಳಿಂದ ಸುದ್ದಿಯಲ್ಲಿ ಇದೆ. . ಈ ಯೋಜನೆಗೆ ಕೇಂದ್ರ ಸರ್ಕಾರ ಭಾರೀ ಪ್ರಮಾಣದ ಅನುದಾನ ಕೊಡಲಿದೆ ಅನ್ನೋ ನಿರೀಕ್ಷೆ ಕೂಡಾ ಇತ್ತು.. ಜೊತೆಗೆ ಈ ಯೋಜನೆಯನ್ನ ರಾಷ್ಟ್ರೀಯ ಯೋಜನೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡುವ ನಿರೀಕ್ಷೆಯೂ ಇತ್ತು.. ಈ ನಿರೀಕ್ಷೆ ಸುಳ್ಳಾಗಲಿಲ್ಲ. ಕಳೆದ ವರ್ಷ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಬರೋಬ್ಬರಿ 5,300 ಕೋಟಿ ರೂಪಾಯಿ ಅನುದಾನ ಕೊಟ್ಟಿತ್ತು. ಆದರೆ ಹಣ ಬಿಡುಗಡೆಯಾಗಲೇ ಇಲ್ಲ. ಜೊತೆಗೆ ರಾಷ್ಟ್ರೀಯ ಯೋಜನೆಯ ಸ್ಥಾನ ಮಾನ ಕೂಡ ದಕ್ಕಿಲ್ಲ.

ಭದ್ರಾ ಮೇಲ್ದಂಡೆ ಯೋಜನೆಯಿಂದ ನೇರವಾಗಿ ಲಾಭವಾಗವುದು ಮಧ್ಯ ಕರ್ನಾಟಕಕ್ಕೆ.. ಈ ಭಾಗದ ಜಿಲ್ಲೆಗಳಾದ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆ ನೀರು ಒದಗಿಸಲಿದೆ. . ಕರ್ನಾಟಕ ರಾಜ್ಯದ ಅತ್ಯಂತ ಮಹತ್ವದ ಯೋಜನೆಗಳಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕೂಡ ಒಂದು. ಈ ಯೋಜನೆ ಪೂರ್ಣಗೊಂಡಲ್ಲಿ ಮಧ್ಯ ಕರ್ನಾಟಕದ ಐದೂವರೆ ಲಕ್ಷ ಎಕರೆ ಕೃಷಿ ಪ್ರದೇಶಕ್ಕೆ ನೀರು ಕೊಡಲಿದೆ. ಜೊತೆಗೆ ಈ ಭಾಗದ 367 ಕೆರೆಗಳಿಗೆ ನೀರು ತುಂಬಲಿದೆ. . ಈ ಯೋಜನೆಯಿಂದ 787 ಗ್ರಾಮಗಳಿಗೆ ಪ್ರಯೋಜನ ಆಗಲಿದೆ. ಒಟ್ಟಾರೆ 75 ಲಕ್ಷ ಜನರಿಗೆ ಈ ಯೋಜನೆಯಿಂದ ನೇರವಾಗಿ ಲಾಭವಾಗಲಿದೆ ಎನ್ನುವುದು ನೀರಾವರಿ ತಜ್ಞರ ಲೆಕ್ಕಾಚಾರ..

ಹಾಗಾಗಿ ಕೇಂದ್ರ ಸರ್ಕಾರ ಕಳೆದ ಸಾಲಿನಲ್ಲಿ ಘೋಷಿಸಿದ 5,300 ಕೋಟಿ ರೂಪಾಯಿ ಅನುದಾನವನ್ನು ಮತ್ತೆ ಕೇಳುವುದೇ ಅಲ್ಲದೆ, ಅದು ಕರ್ನಾಟಕಕ್ಕೆ ಬಿಡುಗಡೆಯಾಗುವಂತೆ ಮಾಡುವ ಜವಾಬ್ದಾರಿ ಜಲ ಶಕ್ತಿ ರಾಜ್ಯ ಸಚಿವರಾಗಿರುವ ವಿ. ಸೋಮಣ್ಣ ಅವರ ಮೇಲಿದೆ.

ಗುಜರಾತಿನಂತೆ, ಕರ್ನಾಟಕಕ್ಕೂ ಗಿಫ್ಟ್‌ಸಿಟಿ ಸೌಲಭ್ಯ

ಗುಜರಾತ್ ಗೆ ನೀಡಿರುವ ಬಂಡವಾಳ ಪ್ರೋತ್ಸಾಹ ಯೋಜನೆಯನ್ನು ಕರ್ನಾಟಕ್ಕೂ ವಿಸ್ತರಿಸುವಂತೆ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಲ್ಲಿ ಮನವಿ ಮಾಡಿದ್ದಾರೆ. ಗುಜರಾತ್‌ ಗೆ ನೀಡಿರುವ ಗಿಫ್ಟ್‌ ಸಿಟಿ (Gurajart International Finance Tec City ) ಕೊಡುಗೆಯನ್ನು ಬೆಂಗಳೂರಿಗೂ ವಿಸ್ತರಿಸುವಂತೆ ತಾವು ವಿತ್ತ ಸಚಿವರನ್ನು ಕೋರುವುದಾಗಿ ಪ್ರಿಯಾಂಕ್‌ ಹೇಳಿದ್ದಾರೆ. ಈ ಗಿಫ್ಟ್‌ ಸಿಟಿ ದೇಶದ ಮೊದಲ ಅಂತಾರಾಷ್ಟ್ರೀಯ ಆರ್ಥಿಕ ಸೇವೆಗಳನ್ನು ಒದಗಿಸುವ ಕೇಂದ್ರವಾಗಿದ್ದು, ಈ ಸೌಲಭ್ಯ ಬೆಂಗಳೂರಿಗೂ ದೊರಕಿದರೆ, ಸಿಲಿಕಾನ್‌ ಸಿಟಿಯ ಚಹರೆಯೇ ಬದಲಾಗುತ್ತದೆ ಎಂದು ಅವರು ಹೇಳುತ್ತಾರೆ.

ರಾಜ್ಯಕ್ಕೆ ವಿದೇಶಿ ಬಂಡವಾಳ ಹೂಡಿಕೆಗೆ ಮೋದಿ ನೇತೃತ್ವದ ಎನ್‌ ಡಿ ಎ ಸರ್ಕಾರ ಅಡ್ಡಗಾಲು ಹಾಕುತ್ತಿದೆ ಎಂದು ಆರೋಪಿಸಿರುವ ಅವರು, ಕರ್ನಾಟಕ ಆಕರ್ಷಿಸಿದ ಬಂಡವಾಳದಾರರನ್ನು ಸಂಪರ್ಕಿಸಿ, ಗುಜರಾತ್‌ ನಲ್ಲಿ ಬಂಡವಾಳ ಹೂಡುವಂತೆ ಕೇಂದ್ರ ಸರ್ಕಾರ ಒತ್ತಾಯಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ. “ನಾವು ದೇಶ ದೇಶ ಸುತ್ತಿ ಬಂಡವಾಳ ಹೂಡಿಕೆದಾರರನ್ನು ಸಂಪರ್ಕಿಸಿ ಕರ್ನಾಟಕಕ್ಕೆ ಬರುವಂತೆ ಆಹ್ವಾನಿಸಿದರೆ, ಪ್ರಧಾನಿ ಮಂತ್ರಿ ಕಾರ್ಯಾಲಯ ಅಂಥ ಬಂಡವಾಳಗಾರರನ್ನು ಸಂಪರ್ಕಿಸಿ, ಗುಜರಾತ್‌ ಮತ್ತು ಉತ್ತರ ಪ್ರದೇಶದಲ್ಲಿ ಬಂಡವಾಳ ಹೂಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಪ್ರಿಯಾಂಕ್‌ ಖರ್ಗೆ ಆರೋಪಿಸಿದ್ದಾರೆ.

ಕರ್ನಾಟಕದ ಹಿತ ಕಾಪಾಡ ಬೇಕಾದ ಸಂಸದರು ಮತ್ತು ಸಚಿವರು

ಕರ್ನಾಟಕದ ಸಮಗ್ರ ಹಿತಾಸಕ್ತಿಯನ್ನು ಕಾಪಾಡುವ ಜವಾಬ್ದಾರಿ ಕೇವಲ ರಾಜ್ಯದಿಂದ ಕೇಂದ್ರದಲ್ಲಿ ಸಚಿವರಾಗಿರುವವರ ಮೇಲಷ್ಟೇ ಅಲ್ಲ, ಎಲ್ಲ ಬಿಜೆಪಿ ಸಂಸದರ ಮೇಲೂ ಇದೆ ಎಂದು ದ ಫೆಡರಲ್‌ ಕರ್ನಾಟಕದೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಅಭಿಪ್ರಾಯ ಪಟ್ಟಿದ್ದಾರೆ. “ಆಯವ್ಯಯದ ಚೌಕಟ್ಟಿನಲ್ಲಿ ಕರ್ನಾಟಕದ ಹಿತವನ್ನು ಹೇಗೆ ಕಾಪಾಡಬೇಕೆಂದು ಚಿಂತನೆ ನಡೆಸಿ, ಕರ್ನಾಟಕಕ್ಕೆ ಕಳೆದ ಬಾರಿ ಆದ ಅನ್ಯಾಯ ಪುನರಾವರ್ತನೆಯಾಗದಂತೆ ಎಚ್ಚರ ವಹಿಸುವ ಜವಾಬ್ದಾರಿ ರಾಜ್ಯದಿಂದ ಆಯ್ಕೆಯಾಗಿರುವ ಎಲ್ಲ ಸಂಸದರು, ಮತ್ತು ಕೇಂದ್ರ ಸರ್ಕಾರದ ಸಚಿವರ ಮೇಲೆ ಇದೆ” ಎಂದು ಅವರು ಹೇಳಿದರು.

ಇದಕ್ಕೆ ಉತ್ತರಿಸಿರುವ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು, ಬಜೆಟ್‌ ಸಂಬಂಧಿಸಿದ ಸಭೆಯಲ್ಲಿ, ರಾಜ್ಯದ ಪ್ರಮುಖ ಯೋಜನೆಗಳು, ಅವಕ್ಕೆ ಬೇಕಿರುವ ಅನುದಾನ, ಕಲ್ಯಾಣ ಮತ್ತು ಅಭಿವೃದ್ಧಿ ಯೋಜನಗಳಿಗೆ ಅಗತ್ಯವಿರುವ ಅನುದಾನದ ಬಗ್ಗೆ ಚರ್ಚಿಸುತ್ತೇವೆ, ಎಂದು ಸ್ಪಷ್ಟಪಡಿಸಿದ್ದಾರೆ.

Tags:    

Similar News