ಲೋಕಸಭೆ ಭದ್ರತಾ ಲೋಪ | ಸಂದರ್ಶಕರ ಪಾಸ್‌ ನೀಡುವುದು ಹೇಗೆ? ಲೋಕಸಭಾ ಕೈಪಿಡಿ ಹೇಳುವುದೇನು?

ಮೈಸೂರ ಬಿಜೆಪಿ ಸಂಸದ ಪ್ರತಾಪ ಸಿಂಹ ಅವರ ಅತಿಥಿಗಳಾಗಿ, ಅವರ ಪಾಸ್‌ ಪಡೆದು ಲೋಕಸಭೆಯ ವೀಕ್ಷಕ ಗ್ಯಾಲರಿಗೆ ಪ್ರವೇಶ ಪಡೆದಿದ್ದ ಇಬ್ಬರು, ಬುಧವಾರ ಲೋಕಸಭೆಯಲ್ಲಿ ಸ್ಮೋಕ್‌ ಕ್ಯಾನ್‌ ಸಿಡಿಸಿದ ಘಟನೆ, ಸಂಸತ್ತಿನ ಭದ್ರತಾ ವ್ಯವಸ್ಥೆಯ ಬಗ್ಗೆಯೇ ಗಂಭೀರ ಆತಂಕ ಮೂಡಿಸಿದೆ. ಆ ಘಟನೆಯ ಹಿನ್ನೆಲೆಯಲ್ಲಿ ಸಂಸತ್‌ ಪ್ರವೇಶ ಪಾಸ್‌ ವ್ಯವಸ್ಥೆಯ ಕುರಿತ ಮಾಹಿತಿ ಇಲ್ಲಿದೆ.

Update: 2024-02-05 06:30 GMT

ಬುಧವಾರ (ಡಿಸೆಂಬರ್ 13):  ಇಬ್ಬರು ಕಿಡಿಗೇಡಿಗಳು ಸಂದರ್ಶಕರ ಗ್ಯಾಲರಿಯಿಂದ‌ ಸದನಕ್ಕೆ ಜಿಗಿದು ಸ್ಮೋಕ್‌ ಕ್ಯಾನ್‌ ಸಿಡಿಸಿ (ಹಳದಿ ಹೊಗೆ ಉಗುಳುವ ಕ್ಯಾನ್) ಕೋಲಾಹಲವೆಬ್ಬಿಸಿದ ಸಂಸತ್‌ ಭವನದ ಮೇಲಿನ ದಾಳಿ ಘಟನೆ, ಭಾರಿ ಭದ್ರತಾ ಲೋಪವನ್ನು ಜಗಜ್ಜಾಹೀರು ಮಾಡಿದೆ.


ಇಡೀ ದೇಶದ ಹೃದಯದಂತಿರುವ, ಪ್ರಜಾಪ್ರಭುತ್ವದ ಶಕ್ತಿಕೇಂದ್ರವಾದ ಸಂಸತ್ತಿನ ಭದ್ರತೆಯ ವಿಷಯದಲ್ಲಿ ಆಗಿರುವ ಈ ಗಂಭೀರ ಲೋಪದ ಘಟನೆ ದೇಶವನ್ನೇ ಬೆಚ್ಚಿಬೀಳಿಸಿದೆ. ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ದೆಹಲಿ ಪೊಲೀಸರು ಈಗಾಗಲೇ, ಒಟ್ಟು ಆರು ಮಂದಿಯನ್ನು ಬಂಧಿಸಿದ್ದು, ಅವರ ಮೇಲೆ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಲೋಕಸಭೆಯೊಳಗೆ ನಡೆದ ಘಟನೆಯಲ್ಲಿ ಭಾಗಿಯಾಗಿಯಾದವರನ್ನು ಸಾಗರ್ ಶರ್ಮಾ ಮತ್ತು ಮನೋರಂಜನ್‌ ಎಂದು ಗುರುತಿಸಲಾಗಿದ್ದು, ಮೈಸೂರು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಅವರ ಅತಿಥಿಗಳಾಗಿ, ಅವರ ಪಾಸ್‌ ಮೂಲಕ ಮನೋರಂಜನ್ ಡಿ.ಶರ್ಮಾ ಲೋಕಸಭಾ ಸಂದರ್ಶಕರ ಗ್ಯಾಲರಿಗೆ ಪ್ರವೇಶ ಪಡೆದಿದ್ದರು.

ಮನೋರಂಜನ್ ಮೂರು ತಿಂಗಳಿನಿಂದ ಪಾಸ್‌ಗಾಗಿ ಸಂಸದ ಸಿಂಹ ಮತ್ತು ಅವರ ಕಚೇರಿಗೆ ಭೇಟಿ ನೀಡಿ ಕೋರುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

೨೦೦೧ರಲ್ಲಿ ಸಂಸತ್‌ ಭವನದ ಮೇಲೆ ನಡೆದ ಭಯೋತ್ಪಾದನಾ ದಾಳಿಯ ದಿನವಾದ ಡಿ.೧೩ರಂದೇ ಈ ಆಘಾತಕಾರಿ ಘಟನೆ ನಡೆದಿದೆ. ಘಟನೆಯ ಹಿನ್ನೆಲೆಯಲ್ಲಿ ಸಂಸತ್ತಿನ ಭದ್ರತಾ ವ್ಯವಸ್ಥೆಯ ಲೋಪ ಮತ್ತು ಮೈಸೂರಿನ ಸಂಸದರು ಕಿಡಿಗೇಡಿಗಳಿಗೆ ಸಂದರ್ಶಕರ ಪಾಸ್‌ ನೀಡಿದ ಸಂಗತಿ ವ್ಯಾಪಕ ಚರ್ಚೆಗೆ ಒಳಗಾಗಿದೆ. ಆ ಹಿನ್ನೆಲೆಯಲ್ಲಿ ಸಂಸತ್ತಿನ ಭದ್ರತಾ ನಿಯಮಾವಳಿಗಳೇನು? ಲೋಕಸಭೆಯ ಪ್ರವೇಶದ ನಿಬಂಧನೆಗಳೇನು? ಎಂಬ ಕುರಿತು ಮಾಹಿತಿ ಇಲ್ಲಿದೆ.

ಸಂದರ್ಶಕರ ಪಾಸ್‌ ಕುರಿತು ಲೋಕಸಭಾ ಕೈಪಿಡಿ(ಹ್ಯಾಂಡ್‌ಬುಕ್) ಹೇಳುವುದೇನು?

ಸಂದರ್ಶಕರ ಪಾಸ್‌ಗಳನ್ನು ಕೋರುವ ಎಲ್ಲಾ ಸಂಸದರು ತಾವು ಅತಿಥಿಯನ್ನು ವೈಯಕ್ತಿಕವಾಗಿ ತಿಳಿದಿದ್ದೇವೆ ಮತ್ತು ಅವರ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ ಎಂದು ಪ್ರಮಾಣೀಕರಿಸಬೇಕು ಎಂದು ಲೋಕಸಭೆಯ ಸದಸ್ಯರ ಕೈಪಿಡಿ ಹೇಳುತ್ತದೆ.

ಸಂಸತ್ತಿನ ಕೆಳಮನೆಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿರುವ 'ಲೋಕಸಭಾ ಸದಸ್ಯರ ಕೈಪಿಡಿ' ಪ್ರಕಾರ, ಸಂದರ್ಶಕರ ಪಾಸ್‌ ಗಾಗಿ ಸಂಸದರು ಸಲ್ಲಿಸುವ ಅರ್ಜಿ ನಮೂನೆಯಲ್ಲಿ, ಅವರು ಸಂದರ್ಶಕರ ಹೆಸರು, ವಯಸ್ಸು, ತಂದೆ ಅಥವಾ ಗಂಡನ ಹೆಸರು, ರಾಷ್ಟ್ರೀಯತೆ ಮತ್ತು ಪಾಸ್‌ಪೋರ್ಟ್ ಸಂಖ್ಯೆ(ವಿದೇಶಿಗಳಿಗೆ ಮಾತ್ರ) ಮುಂತಾದ ವಿವರಗಳನ್ನು ಒದಗಿಸಬೇಕಾಗುತ್ತದೆ.

ಅಲ್ಲದೆ, ಸಂದರ್ಶಕರ ಉದ್ಯೋಗದ ವಿವರದ ಜೊತೆಗೆ ಅವರ ತಂದೆ ಅಥವಾ ಗಂಡನ ಉದ್ಯೋಗದ ವಿವರ, ಪೂರ್ಣ ಶಾಶ್ವತ ವಿಳಾಸ ಒದಗಿಸಬೇಕಾಗುತ್ತದೆ.

ಕೈಪಿಡಿಯ ಪ್ರಕಾರ, ಸಂಸತ್ ಸದಸ್ಯರು ಸಂದರ್ಶಕರ ಪಾಸ್‌ ಗಾಗಿ ಸಲ್ಲಿಸುವ ಅರ್ಜಿ ನಮೂನೆಯಲ್ಲಿ ಸಂದರ್ಶಕರ ಕುರಿತು ಪ್ರಮಾಣಪತ್ರವನ್ನು ಒದಗಿಸಬೇಕು. ಆ ಪ್ರಮಾಣಪತ್ರದಲ್ಲಿ "ಮೇಲಿನ ಹೆಸರಿನ ಸಂದರ್ಶಕರು ನನ್ನ ಸಂಬಂಧಿ/ವೈಯಕ್ತಿಕ ಸ್ನೇಹಿತ/ ನನಗೆ ವೈಯಕ್ತಿಕವಾಗಿ ಪರಿಚಿತರು ಮತ್ತು ನಾನು ಅವಳ/ ಅವನ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ" ಎಂದು ಪ್ರಮಾಣೀಕರಿಸಬೇಕಿದೆ.

ಸಾರ್ವಜನಿಕ ಗ್ಯಾಲರಿ ಪ್ರವೇಶಕ್ಕಾಗಿ ಸಂದರ್ಶಕರ ಕಾರ್ಡ್‌(ಪಾಸ್)ಗಳನ್ನು ಲೋಕಸಭಾ ಸದಸ್ಯರ ಅತಿಥಿಗಳಿಗೆ ಅವರ ಭೇಟಿಯ ಹಿಂದಿನ ದಿನ ಕೇಂದ್ರೀಕೃತ ಪಾಸ್ ವಿತರಣೆ ಸೆಲ್‌ನಲ್ಲಿ ನೀಡಲಾಗುತ್ತದೆ.

ಸಂದರ್ಶಕರ ಕಾರ್ಡ್‌ಗಾಗಿ‌ ಸಂಸದರು ಸಲ್ಲಿಸುವ ಅರ್ಜಿಯಲ್ಲಿ ದಿನಕ್ಕೆ ನಾಲ್ವರು ಸಂದರ್ಶಕರನ್ನು ಮಾತ್ರ ಶಿಫಾರಸು ಮಾಡಬಹುದು. ಸಂಸದರ ಶಿಫಾರಸು ಅರ್ಜಿಯು ಕಾರ್ಡ್ ಅಗತ್ಯವಿರುವ ದಿನಾಂಕದ ಹಿಂದಿನ ದಿನ ಸಂಜೆ 4 ಗಂಟೆಯ ಒಳಗೆ ಕೇಂದ್ರೀಕೃತ ಪಾಸ್ ವಿತರಣೆ ಸೆಲ್‌ಗೆ ಸಲ್ಲಿಕೆಯಾಗಬೇಕು.

"ದಿನದ ನಿರ್ದಿಷ್ಟ ಅವಧಿಯಲ್ಲಿ ಸಂಸತ್ ಸದಸ್ಯರಿಗೆ ನಾಲ್ಕಕ್ಕಿಂತ ಹೆಚ್ಚು ಸಂದರ್ಶಕರ ಕಾರ್ಡ್‌ಗಳನ್ನು ನೀಡಲಾಗುವುದಿಲ್ಲ ಮತ್ತು ಸಂದರ್ಶಕರ ಸಂಪೂರ್ಣ ವಿವರಗಳನ್ನು ಅರ್ಜಿ ನಮೂನೆಗಳಲ್ಲಿ ಒದಗಿಸಬೇಕು. ಸಂಪೂರ್ಣ ವಿವರ ಇಲ್ಲದೇ ಹೋದರೆ ಸಂದರ್ಶಕರ ಕಾರ್ಡ್‌ ನೀಡಲಾಗುವುದಿಲ್ಲ," ಎಂದು ಕೈಪಿಡಿ ಹೇಳುತ್ತದೆ.

ಕೇಂದ್ರೀಕೃತ ಪಾಸ್ ವಿತರಣೆ ಸೆಲ್‌ನಲ್ಲಿ ಲಭ್ಯವಿರುವ ಕೆಂಪು ಅರ್ಜಿ ನಮೂನೆಗಳ ಮೂಲಕ ಸಂಸದರಿಗೆ ಕೆಲವು ಷರತ್ತುಗಳಿಗೆ ಒಳಪಟ್ಟು ಅರ್ಜಿ ಸಲ್ಲಿಸಿದ ದಿನವೇ ಸಂದರ್ಶಕರ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಅಂತಹ ಅರ್ಜಿಗಳನ್ನು ಪಾಸ್‌ ಅಗತ್ಯವಿರುವ ದಿನವೇ ಸಾಧ್ಯವಾದಷ್ಟು ಮುಂಚಿತವಾಗಿ ಸಂಸತ್ತಿನ ಪ್ರಧಾನಕಾರ್ಯದರ್ಶಿಗಳಿಗೆ ನೇರವಾಗಿ ಸಲ್ಲಿಸಬೇಕಾಗುತ್ತದೆ. ಪ್ರಧಾನ ಕಾರ್ಯದರ್ಶಿಗಳನ್ನು ಅಂತಹ ಅರ್ಜಿಗಳನ್ನು ಮಾನ್ಯ ಮಾಡಿದ ಬಳಿಕ ಕೇಂದ್ರೀಕೃತ ಪಾಸ್‌ ವಿತರಣೆ ಸೆಲ್‌ ಸಂದರ್ಶಕರ ಕಾರ್ಡ್‌ ವಿತರಿಸುತ್ತದೆ.

"ಅರ್ಜಿ ಸಲ್ಲಿಸಿದ ದಿನವೇ ಪಾಸ್‌ಗಳನ್ನು ನೀಡಲು, ಸಂಸದೀಯ ಪಕ್ಷದ ಉಪನಾಯಕ ಅಥವಾ ಪಕ್ಷದ ವಿಪ್ (ಯಾರು ಪಕ್ಷದಿಂದ ಅಧಿಕಾರ ಪಡೆದಿದ್ದಾರೋ ಅವರು) ಅರ್ಜಿ ನಮೂನೆಯಲ್ಲಿ ದಿನದ ಪಾಸ್‌ಗಾಗಿ ಶಿಫಾರಸು ಮಾಡಬೇಕು" ಎಂದು ಕೈಪಿಡಿ ಹೇಳುತ್ತದೆ. ಅಲ್ಲದೆ, ಹಾಗೇ ತುರ್ತು ಪಾಸ್‌ ಪಡೆಯಲು ಸಂಸದರೇ ತಾವು ಪಾಸ್‌ ಕೋರುವ ಸಂದರ್ಶಕರನ್ನು ಖುದ್ದು ಸಂಸತ್ ಜಂಟಿ ಕಾರ್ಯದರ್ಶಿ ಅಥವಾ ಹೆಚ್ಚುವರಿ ಕಾರ್ಯದರ್ಶಿಯ ಮುಂದೆ ಹಾಜರುಪಡಿಸಬೇಕಾಗುತ್ತದೆ ಎಂದೂ ಆ ನಿಯಮ ಹೇಳುತ್ತದೆ.

ಅದೇ ದಿನದ ಸಂದರ್ಶಕರ ಪಾಸ್‌ನ ಅಗತ್ಯವಿದ್ದಾಗ, ಸಂಸದರು ತಮ್ಮ ಅತಿಥಿಗಳನ್ನು ಸ್ವಾಗತ ಕಚೇರಿಯಲ್ಲಿ ಅಥವಾ ಕೇಂದ್ರೀಕೃತ ಪಾಸ್ ವಿತರಣೆ ಸೆಲ್‌ನ ಸಂಸದರ ನಿರೀಕ್ಷಣಾ ಕೊಠಡಿಯಲ್ಲಿ ಕುಳಿತುಕೊಳ್ಳಲು ಸೂಚಿಸಬೇಕಾಗುತ್ತದೆ.

ಅದೇ ದಿನದ ಸಂದರ್ಶಕರ ಕಾರ್ಡ್‌ಗಳನ್ನು ಪಡೆಯುವ ಮುನ್ನ ಸಂಸದರು ಅಲ್ಲಿನ ರಿಜಿಸ್ಟರ್‌ ಪುಸ್ತಕದಲ್ಲಿ ಸಹಿ ಮಾಡಬೇಕಾಗುತ್ತದೆ.

Tags:    

Similar News