‘ರಾಮಾಯಣ’ ಚಿತ್ರೀಕರಣದಲ್ಲಿ ಯಶ್‍ ಭಾಗಿ; ಸಿನಿಮಾದ ಮೊದಲ ಆಕ್ಷನ್ ಫೋಟೋ ಬಿಡುಗಡೆ

‘ರಾಮಾಯಣ’ ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶನ‌ ಮಾಡುತ್ತಿದ್ದು ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜೊತೆಯಾಗಿ ನಿರ್ಮಿಸುತ್ತಿವೆ.;

Update: 2025-05-30 07:19 GMT

‘ರಾಮಾಯಣ’ ಚಿತ್ರೀಕರಣದಲ್ಲಿ ಯಶ್‍ ಭಾಗಿಯಾಗಿದ್ದಾರೆ. 

‘ರಾಮಾಯಣ’ ಚಿತ್ರದಲ್ಲಿ ಕನ್ನಡದ ಯಶ್‍, ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ವಿಷಯ ಕೇಳಿ ಬರುತ್ತಲೇ ಇತ್ತು. ಯಶ್ ಸಹ ಚಿತ್ರದಲ್ಲಿ ನಟಿಸುತ್ತಿರುವುದಷ್ಟೇ ಅಲ್ಲ, ನಿರ್ಮಾಣದಲ್ಲೂ ತೊಡಗಿಸಿಕೊಂಡಿರುವುದಾಗಿ ಹೇಳಿದ್ದರು. ಆದರೆ, ಚಿತ್ರದ ಚಿತ್ರೀಕರಣದಲ್ಲಿ ಯಾವಾಗ ಭಾಗವಹಿಸುತ್ತಾರೆ ಎಂಬ ಮಾಹಿತಿ ಇರಲಿಲ್ಲ.

ಕಳೆದ ತಿಂಗಳು ಯಶ್‍, ಉಜ್ಜಯಿನಿಯಲ್ಲಿರುವ ಶ್ರೀ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ‘ರಾಮಾಯಣ’ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುವ ಮುನ್ನ ಶಿವನ ಆಶೀರ್ವಾದ ಪಡೆಯಲು ಬಂದೆ ಎಂದು ಯಶ್‍ ಹೇಳಿಕೊಂಡಿದ್ದರು. ಈ ಮೂಲಕ ಸದ್ಯದಲ್ಲೇ ‘ರಾಮಾಯಣ’ ಚಿತ್ರದ ಚಿತ್ರೀಕರಣದಲ್ಲ ಪಾಲ್ಗೊಳ್ಳುವ ಹಿಂಟ್‍ ನೀಡಿದ್ದರು.

ಅದು ಕೊನೆಗೂ ನಿಜವಾಗಿದೆ. ಮುಂಬೈನಲ್ಲಿ ‘ರಾಮಾಯಣ’ ಚಿತ್ರದ ಇನ್ನೊಂದು ಹಂತದ ಚಿತ್ರೀಕರಣ ಪ್ರಾರಂಭವಾಗಿದ್ದು, ಈ ಭಾಗದ ಚಿತ್ರೀಕರಣದಲ್ಲಿ ನಟ ಯಶ್‍ ಭಾಗವಹಿಸಿದ್ದಾರೆ. ಈ ಚಿತ್ರಕ್ಕೆ ಸುಮಾರು 60-70 ದಿನಗಳ ಕಾಲ‌ ಯಶ್‍ ಚಿತ್ರೀಕರಣ ಮಾಡಲಿದ್ದಾರಂತೆ.

‘ರಾಮಾಯಣ’ ಚಿತ್ರದ ಸಾಹಸ ದೃಶ್ಯಗಳ ನಿರ್ದೇಶನವನ್ನು ಹಾಲಿವುಡ್‌ನ ಖ್ಯಾತ ಮ್ಯಾಡ್ ಮ್ಯಾಕ್ಸ್ ಸ್ಟಂಟ್ ನಿರ್ದೇಶಕ ಗೈ ನೋರಿಸ್ ನಿರ್ದೇಶನ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ಹಾಲಿವುಡ್‍ನ‌ ‘ಮ್ಯಾಡ್ ಮ್ಯಾಕ್ಸ್: ಫ್ಯೂರಿ ರೋಡ್ ಮತ್ತು ದಿ ಸುಸೈಡ್ ಸ್ಕ್ವಾಡ್‌’ ಮುಂತಾದ ಚಿತ್ರಗಳಿಗೆ ನೋರಿಸ್‍ ಸಾಹಸ ನಿರ್ದೇಶನ ಮಾಡಿದ್ದರು. ಈಗ ‘ರಾಮಾಯಣ’ ಚಿತ್ರಕ್ಕೆ ಅವರು ಕೆಲಸ ಮಾಡುತ್ತಿದ್ದಾರೆ. ಎಸ್‍.ಎಸ್‍. ರಾಜಮೌಳಿ ನಿರ್ದೇಶನನದ ‘RRR’ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದ ಬಲ್ಗೇರಿಯಾ ಮೂಲದ ಟೊಡರ್ ಲ್ಯಾಜರೋವ್, ‘ಕಾಂತಾರ’ ಚಿತ್ರಕ್ಕೂ ಸಾಹಸ ನಿರ್ದೇಶನ ಮಾಡಿದ್ದನ್ನು ನೆನಪಿಸಕೊಳ್ಳಬಹುದು.

‘ರಾಮಾಯಣ’ ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶನ‌ ಮಾಡುತ್ತಿದ್ದು ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜೊತೆಯಾಗಿ ನಿರ್ಮಿಸುತ್ತಿವೆ. ಈ ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದ್ದು, ಈ ಪೈಕಿ ಮೊದಲ ಭಾಗವು 2026ರ ದೀಪಾವಳಿಗೆ ಬಿಡುಗಡೆಯಾದರೆ, ಎರಡನೇ ಭಾಗ 2027ರ ದೀಪಾವಳಿಗೆ ಬಿಡುಗಡೆಯಾಗಲಿದೆ.

ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಅಭಿನಯಿಸುತ್ತಿದ್ದಾರೆ. ಸೀತೆಯಾಗಿ ಸಾಯಿಪಲ್ಲವಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು, ಸನ್ನಿ ಡಿಯೋಲ್‍, ಆಂಜನೇಯನಾಗಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಯಶ್‍, ರಾವಣನಾಗಿ ಕಾಣಿಸಿಕೊಂಡರೆ, ಮಂಡೋದರಿಯಾಗಿ ಕಾಜಲ್‍ ಅಗರ್ವಾಲ್‍ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Tags:    

Similar News