ಹೀರೋಗಳಿಗೆ ಐದು ಕೋಟಿ, ನಾಯಕಿಯರಿಗೆ ಒಂದು ಕೋಟಿ ಯಾಕೆ: ರಮ್ಯಾ ಪ್ರಶ್ನೆ
ಕನ್ನಡದಲ್ಲಿ ಚಿತ್ರರಂಗದಲ್ಲಿ ಸಂಭಾವನೆ ತಾರತಮ್ಯವಿದ್ದು, ಹೀರೋಗಳಿಗೆ ಒಂದು ಸಂಭಾವನೆಯಾದರೆ, ನಾಯಕಿಯರಿಗೆ ಕಡಿಮೆ ಸಂಭಾವನೆ ಸಿಗುತ್ತದೆ ಎಂದು ಇದುವರೆಗೂ ಹಲವು ನಟಿಯರು ತಮ್ಮ ಬೇಸರವನ್ನು ಹೊರಹಾಕಿದ್ದಾರೆ. ಇದೀಗ ನಟಿ ರಮ್ಯಾ ಸಹ ಸಂಭಾವನೆಯಲ್ಲಿ ಈ ತಾರತಮ್ಯ ಏಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ‘ಮಹಿಳೆ ಮತ್ತು ಸಿನಿಮಾ’ ಎಂಬ ವಿಚಾರ ಸಂಕಿರಣದಲ್‍ಲಿ ಭಾಗವಹಿಸಿ ಮಾತನಾಡಿರುವ ರಮ್ಯಾ, ಕನ್ನಡ ಚಿತ್ರರಂಗದಲ್ಲಿ ನಾಯಕ ಮತ್ತು ನಾಯಕಿಯರ ಸಂಭಾವನೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಆದರೆ, ಯಾರೂ ಈ ಬಗ್ಗೆ ಧೈರ್ಯವಾಗಿ ಮಾತನಾಡುತ್ತಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ‘ಒಂದು ಚಿತ್ರ ಯಶಸ್ವಿಯಾದರೆ, ನಾಯಕರು ತಮ್ಮ ಸಂಭಾವನೆಯನ್ನು ಶೇ. 50ರಷ್ಟು ಹೆಚ್ಚಿಸಿಕೊಳ್ಳುತ್ತಾರೆ. ಆದರೆ, ನಟಿಯರ ಸಂಭಾವನೆ ಮಾತ್ರ ಶೇ. 5ರಷ್ಟು ಮಾತ್ರ ಹೆಚ್ಚುತ್ತದೆ. ಆರಂಭದಲ್ಲಿ ನನ್ನ ಜೊತೆಗೆ ನಟಿಸುತ್ತಿದ್ದ ನಟರು ನನಗಿಂತ ಕಡಿಮೆ ಸಂಭಾವನೆ ಪಡೆಯುತ್ತಿದ್ದರು. ಇವತ್ತು ಅವರು ಸೂಪರ್ ಸ್ಟಾರ್‍ಗಳಾಗಿದ್ದಾರೆ. ಒಂದು ಸಿನಿಮಾ ಯಶಸ್ವಿಯಾದರೆ, ನನಗಿಂತ ಐದು ಪಟ್ಟು ಹೆಚ್ಚು ಸಂಭಾವನೆ ಪಡೆಯುತ್ತಿದ್ದರು. ಅದೇ ನಟನ ಜೊತೆಗೆ ಮುಂದಿನ ಸಿನಿಮಾ ಮಾಡಿದಾಗ, ಅವರ ಸಂಭಾವನೆ ಹೆಚ್ಚಾಗುತ್ತಿತ್ತು. ಅವರು ಐದು ಕೋಟಿ ಪಡೆದರೆ, ನನ್ನ ಸಂಭಾವನೆ ಮಾತ್ರ ಒಂದು ಕೋಟಿ ಇರುತ್ತಿತ್ತು. ಒಂದು ಸಿನಿಮಾಗೆ ನಾಯಕಿಯು ಸಹ ಬಹಳ ಮುಖ್ಯ. ಎಷ್ಟೋ ಬಾರಿ ಸಂಭಾವನೆ ಕಡಿಮೆ ಎಂಬ ಕಾರಣಕ್ಕೆ ನಾನು ಹಲವು ಸಿನಿಮಾಗಳನ್ನು ಬಿಟ್ಟಿದ್ದೇನೆ. ಇದು ಬರೀ ಸಿನಿಮಾ ಕ್ಷೇತ್ರವೊಂದರಲ್ಲೇ ಅಲ್ಲ, ಬೇರೆ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಸಂಭಾವನೆ ಕಡಿಮೆ ನೀಡಲಾಗುತ್ತದೆ’ ಎಂದು ಅವರು ಹೇಳಿದ್ದಾರೆ.
ಬರೀ ಸಂಭಾವನೆಯಷ್ಟೇ ಅಲ್ಲ, ಕನ್ನಡದಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಬರುತ್ತಿಲ್ಲ ಎಂದಿರುವ ಅವರು, `ಮಲಯಾಳಂನಲ್ಲಿ ಅದ್ಭುತವಾದ ಮಹಿಳಾ ಪ್ರಧಾನ ಸಿನಿಮಾಗಳು ಬರುತ್ತಿವೆ. ಆದರೆ, ಕನ್ನಡದಲ್ಲಿ ಮಹಿಳಾ ಪ್ರಧಾನ ಚಿತ್ರಗಳೆಂದರೆ, ಪೊಲೀಸ್ ಯೂನಿಫಾರ್ಮ್ ಹಾಕಿಕೊಂಡು ರೌಡಿಗಳನ್ನು ಹೊಡೆಯುವುದಕ್ಕೆ ಸೀಮಿತವಾಗಿದೆ. ಮಲಯಯಾಳಂನಲ್ಲಿ ನಟಿಯರಿಗೆ ವೈವಿಧ್ಯಮಯ ಪಾತ್ರಗಳು ಸಿಗುತ್ತವೆ. ಕನ್ನಡದಲ್ಲಿ ಅಂತಹ ಅವಕಾಶಗಳು ಸಿಗುವುದಿಲ್ಲ. ನಾಯಕಿಯರಿಗೆ ಒಳ್ಳೆಯ ಪಾತ್ರಗಳನ್ನು ಬರೆಯುತ್ತಿಲ್ಲ. ನಾನು 20 ವರ್ಷಗಳ ಹಿಂದೆ ಮಾಡಿದ ಪಾತ್ರಗಳನ್ನೇ ಈಗಲೂ ಮಾಡಬೇಕಾದ ಪರಿಸ್ಥಿತಿ ಇದೆ. ಇಲ್ಲಿ ವಾಸ್ತವಕ್ಕೆ ಹತ್ತಿರವಾಗಿರುವ ಚಿತ್ರಗಳು ಬರುತ್ತಿಲ್ಲ. ಮಹಿಳಾ ಕೇಂದ್ರಿತ ಸಿನಿಮಾಗಳು ಕಡಿಮೆಯಾಗಿವೆ. ಹಾಕಿದ ದುಡ್ಡು ಬರುತ್ತದೋ ಇಲ್ಲವೋ ಎಂದು ಈ ತರಹದ ಚಿತ್ರಗಳನ್ನು ಬರುತ್ತಿಲ್ಲ. ಪುರುಷರೇ ಏಕೆ ಚಿತ್ರ ನಿರ್ಮಿಸಬೇಕು ಎಂದು ಕಾಯಬೇಕು. ನಾನು ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರವನ್ನು ನಿರ್ಮಿಸಿದೆ. ಆ ಚಿತ್ರಕ್ಕೆ ಕೆಲವು ಪ್ರಶಸ್ತಿಗಳು ಸಿಕ್ಕವು. ಆದರೆ, ಆ ಚಿತ್ರ ಅಷ್ಟೇನೂ ಯಶಸ್ಸು ಪಡೆಯಲಿಲ್ಲ’ ಎಂದಿದ್ದಾರೆ.
ರಮ್ಯಾ ಮತ್ತೆ ಯಾವಾಗ ನಟನೆಗೆ ಮರಳುತ್ತಾರೆ ಎಂಬ ಪ್ರಶ್ನೆಗೆ, ‘ಅವಕಾಶಗಳೇನೋ ಸಾಕಷ್ಟಿವೆ. ಆದರೆ, ಒಳ್ಳೆಯ ಕಥೆಗಾಗಿ ಕಾಯುತ್ತಿದ್ದೇನೆ’ ಎಂದು ಹೇಳಿದ್ದಾರೆ.