BBK12: 'ನನ್ನ ಬನಿಯನ್ ಬೆಲೆ 40 ಸಾವಿರ ರೂಪಾಯಿ, ನಮ್ಮಪ್ಪನಿಗೆ 500 ಶಿಪ್ ಇದೆ': ಸಿಂಪಥಿ ಆರೋಪಕ್ಕೆ ಗಿಲ್ಲಿ ಉತ್ತರ
ನಟ ಗಿಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಡದಪುರದ ಹಳ್ಳಿಯ ರೈತ ಕುಟುಂಬದಿಂದ ಬಂದವರು. ತಮ್ಮ ಮಾತನಾಡುವ ಶೈಲಿಯನ್ನೇ ತನ್ನ ಕಾಮಿಡಿಯಲ್ಲಿ ಬಳಸಿ ಜನಪ್ರಿಯರಾಗಿದ್ದಾರೆ.
ಗಿಲ್ಲಿ
ಕನ್ನಡ ಬಿಗ್ ಬಾಸ್ ಸೀಸನ್ 12ರ ಮನೆಯಲ್ಲಿ ಸ್ಪರ್ಧಿಗಳಾದ ಗಿಲ್ಲಿ ನಟ ಮತ್ತು ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿ ರಿಷಾ ಗೌಡ ನಡುವಿನ ಜಗಳ ತಾರಕಕ್ಕೇರಿದೆ. "ನೀನು ಸಿಂಪಥಿ ಗಿಟ್ಟಿಸಿಕೊಳ್ಳಲು ಬನಿಯನ್ ಹಾಕಿಕೊಂಡು ಓಡಾಡುತ್ತೀಯಾ" ಎಂದು ರಿಷಾ ಮಾಡಿದ ಆರೋಪಕ್ಕೆ, ಗಿಲ್ಲಿ ತಮ್ಮದೇ ಶೈಲಿಯಲ್ಲಿ ನೀಡಿರುವ ಖಡಕ್ ಉತ್ತರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಿಗ್ ಬಾಸ್ ಮನೆಯಲ್ಲಿ, ಸ್ನಾನದ ಮನೆಯ ಬಕೆಟ್ ವಿಚಾರವಾಗಿ ಆರಂಭವಾದ ಜಗಳ, ನಂತರ ರಿಷಾ ಅವರ ಬಟ್ಟೆಗಳನ್ನು ಗಿಲ್ಲಿ ಶೌಚಾಲಯದ ಬಳಿ ಹಾಕಿದಾಗ ವಿಕೋಪಕ್ಕೆ ತಿರುಗಿತು. ಈ ವೇಳೆ, "ನೀನು ಸಿಂಪಥಿಗಾಗಿ ಬನಿಯನ್ ಹಾಕಿಕೊಂಡು ತಿರುಗುತ್ತೀಯಾ," ಎಂದು ರಿಷಾ ಆರೋಪಿಸಿದರು. ಇದರಿಂದ ಕೆರಳಿದ ಗಿಲ್ಲಿ, "ನಾನು ಶ್ರೀಮಂತ, ನಮ್ಮಪ್ಪನಿಗೆ ಐಟಿ ಕಂಪನಿ ಇದೆ. 500 ಶಿಪ್ ಮತ್ತು 800 ಗೋವುಗಳಿವೆ. ಬೆಂಗಳೂರಿನ ಸದಾಶಿವನಗರದಲ್ಲಿ ನಾಲ್ಕು ಮನೆ ಇದೆ. ನಾವು ಫುಲ್ ಸೆಟಲ್ಡ್," ಎಂದು ತಿರುಗೇಟು ನೀಡಿದರು.
ಅಷ್ಟಕ್ಕೇ ಸುಮ್ಮನಾಗದ ಅವರು, ತಮ್ಮ ಬಟ್ಟೆಗಳ ಬೆಲೆಯನ್ನು ಹೇಳುವ ಮೂಲಕ ರಿಷಾಗೆ ಟಾಂಗ್ ಕೊಟ್ಟರು. "ಈ ಬನಿಯನ್ ಬೆಲೆ 40 ಸಾವಿರ ರೂಪಾಯಿ. ಇದು ಇಂಗ್ಲೆಂಡ್ ಪ್ಯಾಂಟ್, ಇದನ್ನು ತೊಳೆಯುವ ಅಗತ್ಯವಿಲ್ಲ. ಕುಲುಕಿದರೆ ಕೊಳೆ ಉದುರಿ ಹೋಗುತ್ತದೆ," ಎಂದು ಗಿಲ್ಲಿ ಹೇಳಿದ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳಿಂದ ವ್ಯಾಪಕವಾಗಿ ಹಂಚಿಕೊಳ್ಳಲ್ಪಡುತ್ತಿವೆ.
ಮಂಡ್ಯದ ಹಳ್ಳಿಯಿಂದ ಬಂದ ಪ್ರತಿಭೆ
ಹಾಸ್ಯನಟ ಗಿಲ್ಲಿ, ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಡದಪುರ ಎಂಬ ಹಳ್ಳಿಯ ರೈತ ಕುಟುಂಬದ ಹಿನ್ನೆಲೆಯಿಂದ ಬಂದವರು. 'ಕಾಮಿಡಿ ಕಿಲಾಡಿಗಳು ಸೀಸನ್ 4' ರಿಯಾಲಿಟಿ ಶೋನಲ್ಲಿ ರನ್ನರ್-ಅಪ್ ಆಗುವ ಮೂಲಕ ಬೆಳಕಿಗೆ ಬಂದ ಅವರು, ತಮ್ಮ ವಿಶಿಷ್ಟ ಮಂಡ್ಯ ಶೈಲಿಯ ಮಾತಿನಿಂದಲೇ ಜನಪ್ರಿಯರಾದರು. ನಂತರ, 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಮತ್ತು 'ಭರ್ಜರಿ ಬ್ಯಾಚುಲರ್ಸ್' ನಂತಹ ಶೋಗಳಲ್ಲಿ ಭಾಗವಹಿಸಿ, ಇದೀಗ ಬಿಗ್ ಬಾಸ್ ಮನೆಯಲ್ಲಿ ತಮ್ಮ ಕಾಮಿಡಿ ಪಂಚ್‌ಗಳಿಂದ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಈ ಬಾರಿ ಅವರೇ ಟ್ರೋಫಿ ಗೆಲ್ಲುವ ನೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರು ಎಂದು ಹೇಳಲಾಗುತ್ತಿದೆ.