ಕ್ರೇಜಿಸ್ಟಾರ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ
ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಶುಭಾಶಯಗಳು ಬರುತ್ತಿವೆ.;
ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಇಂದು (ಮೇ 30) ಜನ್ಮದಿನದ ಸಂಭ್ರಮ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಶುಭಾಶಯಗಳು ಬರುತ್ತಿವೆ. ಬೆಂಗಳೂರಿನ ರಾಜಾಜಿನಗರದಲ್ಲಿ ರವಿಚಂದ್ರನ್ ನಿವಾಸದ ಮುಂದೆ ಅಭಿಮಾನಿಗಳು ಹಾರ, ಕೇಕ್ ಜೊತೆ ಶುಭಾಶಯ ಕೋರುತ್ತಿದ್ದಾರೆ.
ರವಿಚಂದ್ರನ್ ಅವರು 1961 ಮೇ 30ರಂದು ತಮಿಳುನಾಡಿನ ವೆಲ್ಲೂರಿನಲ್ಲಿ ಜನಿಸಿದರು. ಡಾ. ರವಿಚಂದ್ರನ್ 1968ರಲ್ಲಿ 'ಧೂಮಕೇತು' ಚಿತ್ರದ ಮೂಲಕ ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದರು. ಬಳಿಕ ಪ್ರೇಮಲೋಕ, ರಣಧೀರ, ಶಾಂತಿ ಕ್ರಾಂತಿ, ಯುಗಪುರುಷ, ಯುದ್ದಕಾಂಡ, ರಾಮಾಚಾರಿ, ಅಂಜದ ಗಂಡು, ಸ್ವಾಭಿಮಾನ, ನಾನು ನನ್ನ ಹೆಂಡ್ತಿ, ಮನೆದೇವ್ರು, ಗೋಪಿಕೃಷ್ಣ, ಬಣ್ಣದಗೆಜ್ಜೆ, ಶ್ರೀರಾಮಚಂದ್ರ, ಆಣ್ಣಯ್ಯ, ಗಡಿಬಿಡಿ ಗಂಡ, ರಸಿಕ, ಕಲಾವಿದ, ಸಿಪಾಯಿ, ಪುಟ್ನಂಜ, ಕನಸುಗಾರ, ಮಾಂಗಲ್ಯಂ ತಂತುನಾನೇನ, ಪ್ರೀತ್ಸೋದ್ ತಪ್ಪಾ, ಯಾರೇ ನೀನು ಚೆಲುವೆ, ನಾನು ನನ್ನ ಹೆಂಡ್ತೀರು, ಓ ನನ್ನ ನಲ್ಲೆ, ಏಕಾಂಗಿ, ಮಲ್ಲ, ರಾಮಕೃಷ್ಣ, ಕೋದಂಡರಾಮ, ಅಹಂ ಪ್ರೇಮಾಸ್ಮಿ, ಸಾಹುಕಾರ, ಹಠವಾದಿ, ಹೂ, ಅಪೂರ್ವ, ಹೀಗೆ ಅನೇಕ ಸಿನಿಮಾಗಳ ಮೂಲಕ ಪ್ರೇಕ್ಷಕರಿಗೆ ಪ್ರೀತಿ ಪ್ರೇಮದ ರಸದೌತಣ ನೀಡಿದ್ದಾರೆ.
ಇಂದಿನಿಂದ ಪ್ರೇಮಲೋಕ ೨ ಸಿನಿಮಾದ ಶೂಟಿಂಗ್ ಆರಂಭ
ಇನ್ನು ರವಿಚಂದ್ರನ್ ಕೆರಿಯರ್ ಬದಲಿಸಿದ ಸಿನಿಮಾ ಅಂದರೆ 1987ರಲ್ಲಿ ತೆರೆಕಂಡ ಪ್ರೇಮಲೋಕ. ತಾವೇ ನಿರ್ದೇಶಿಸಿ, ನಟಿಸಿ ಗೆದ್ದಿದ್ದರು. ಈಗ ಪ್ರೇಮಲೋಕ ಪಾರ್ಟ್ 2 ಸಿನಿಮಾ ಮಾಡೋಕೆ ಮುಂದಾಗಿದ್ದಾರೆ. ಮೇ 30ರಿಂದ ಶೂಟಿಂಗ್ ಕೂಡ ಶುರುವಾಗಲಿದೆ. ಕಾರ್ಯಕ್ರವೊಂದರಲ್ಲಿ ಅತಿಥಿಯಾಗಿ ರವಿಚಂದ್ರನ್ ಭಾಗವಹಿಸಿದ್ದರು. ‘ಪ್ರೇಮಲೋಕ 2’ ಬಗ್ಗೆ ಮಾಹಿತಿ ನೀಡಿದ್ದಾರೆ. ಮೇ 30ರಂದು ‘ಪ್ರೇಮಲೋಕ 2’ ಸಿನಿಮಾವನ್ನು ಆರಂಭಿಸುತ್ತೇನೆ. ನನ್ನ ದೊಡ್ಡ ಮಗ ಮನೋರಂಜನ್ ಅದರಲ್ಲಿ ನಟಿಸುತ್ತಾನೆ. ಚಿಕ್ಕ ಮಗ ವಿಕ್ರಮ್ ಚಿಕ್ಕ ಪಾತ್ರ ನಟಿಸುತ್ತಾನೆ. ನಾನು ತಂದೆ ಪಾತ್ರದಲ್ಲಿ ನಟಿಸುತ್ತಿದ್ದೇನೆ ಎಂದು ಕ್ರೇಜಿಸ್ಟಾರ್ ತಿಳಿಸಿದ್ದಾರೆ.
ಕೇವಲ 90 ರೂಪಾಯಿಗೆ ಸಿನಿಮಾ ನೋಡಿ
ಇನ್ನು ಕಳೆದ ವಾರ ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ದಿ ಜಡ್ಜ್‌ಮೆಂಟ್ ಸಿನಿಮಾ ಬಿಡುಗಡೆಯಾಗಿತ್ತು. ಇದೀಗ ರವಿಮಾಮನ ಹುಟ್ಟುಹಬ್ಬದ ಪ್ರಯುಕ್ತ ಇಂದು ದಿ ಜಡ್ಜ್‌ಮೆಂಟ್ ಸಿನಿಮಾವನ್ನು ಕೇವಲ 90 ರೂಪಾಯಿ ನೀಡಿ ನೋಡುವ ಅವಕಾಶವನ್ನು ಕರ್ನಾಟಕದ ಪ್ರೇಕ್ಷಕರಿಗೆ ಚಿತ್ರತಂಡ ನೀಡಿದೆ. ಕರ್ನಾಟಕದ ಯಾವುದೇ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿಯೂ ದಿ ಜಡ್ಜ್‌ಮೆಂಟ್ ಸಿನಿಮಾವನ್ನು ಇಷ್ಟು ಕಡಿಮೆ ದರಕ್ಕೆ ಟಿಕೆಟ್ ಕೊಂಡು ನೋಡುವ ಅವಕಾಶ ನೀಡಲಾಗಿದೆ