ಬಿಡುಗಡೆಗೆ ಮುನ್ನವೇ ಟಿಕೆಟ್‍ ಮಾರಾಟ; ಆಸಕ್ತರತ್ತ ಸಿನಿಮಾ

ಸಾಮಾನ್ಯವಾಗಿ ಸ್ಟಾರ್ ಚಿತ್ರಗಳ ಟಿಕೆಟ್‍ಗಳು ಮುಂಗಡವಾಗಿ ಮಾರಾಟವಾಗುವುದುಂಟು. ಆದರೆ, ಹೊಸಬರ ಚಿತ್ರದ ಟಿಕೆಟ್‍ಗಳು ಬಿಡುಗಡೆಗೂ ಮೊದಲು ಇಷ್ಟೊಂದು ಸಂಖ್ಯೆಯಲ್ಲಿ ಮಾರಾಟವಾಗಿರುವುದು ವಿಶೇಷವೇ ಸರಿ

Update: 2024-12-28 01:30 GMT

ಒಂದು ಕಡೆ ಕನ್ನಡ ಚಿತ್ರಗಳಿಗೆ ಪ್ರೇಕ್ಷಕರು ಬರುತ್ತಿಲ್ಲ, ಜನ ಟಿಕೆಟ್‍ಗಳನ್ನು ಕೊಂಡು ನೋಡುತ್ತಿಲ್ಲ ಎಂಬ ಕೊರಗನ್ನು ಹಲವು ನಿರ್ಮಾಪಕರು ಮತ್ತು ನಿರ್ದೇಶಕರು ವ್ಯಕ್ತಪಡಿಸಿದರೆ, ಇನ್ನೊಂದು ಕಡೆ ಜನರನ್ನು ಚಿತ್ರಮಂದಿರಗಳತ್ತ ಸೆಳೆಯುವುದಕ್ಕೆ ತಮ್ಮದೇ ಹೊಸ ತಂತ್ರಗಳನ್ನು ಹುಟ್ಟುಹಾಕಿದ್ದಾರೆ. ಆ ಮೂಲಕ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುವಂತೆ ಆಗಿದೆ. ಇದರಿಂದ ನಿರ್ಮಾಪಕರು ಹಾಕಿದ ಬಂಡವಾಳ ವಾಪಸ್ಸಾಗುತ್ತದೋ, ಇಲ್ಲವೋ ಎಂಬುದು ನಂತರದ ಮಾತು. ಕನಿಷ್ಠ ಒಂದಿಷ್ಟು ಪ್ರೇಕ್ಷಕರು ಚಿತ್ರಮಂದಿರಗಳತ್ತ ಬಂದು ಚಿತ್ರ ನೋಡುವಂತೆ ಆಗಿದೆ.

ವಿದ್ಯಾರ್ಥಿಗಳೇ ಈ ಚಿತ್ರದ ಪ್ರೇಕ್ಷಕರು

ಗುರುವಾರ ಬಿಡುಗಡೆಯಾಗುತ್ತಿರುವ ಪ್ರದೀಪ್‍ ದೊಡ್ಡಯ್ಯ ನಿರ್ದೇಶನದ ‘ಔಟ್‍ ಆಫ್‍ ಸಿಲಬಸ್‍’ ಚಿತ್ರದ ಆರು ಸಾವಿರ ಟಿಕೆಟ್‍ಗಳು ಈಗಾಗಲೇ ಮಾರಾಟವಾಗಿವೆ. ಸಾಮಾನ್ಯವಾಗಿ ಸ್ಟಾರ್ ಚಿತ್ರಗಳ ಟಿಕೆಟ್‍ಗಳು ಮುಂಗಡವಾಗಿ ಮಾರಾಟವಾಗುವುದುಂಟು. ಆದರೆ, ಹೊಸಬರ ಚಿತ್ರದ ಟಿಕೆಟ್‍ಗಳು ಬಿಡುಗಡೆಗೂ ಮೊದಲು ಇಷ್ಟೊಂದು ಸಂಖ್ಯೆಯಲ್ಲಿ ಮಾರಾಟವಾಗಿರುವುದು ವಿಶೇಷವೇ ಸರಿ. ಇಲ್ಲಿ ಇನ್ನೂ ಒಂದು ವಿಷಯವನ್ನು ಗಮನಿಸಬೇಕು.

ಅದೇನೆಂದರೆ, ಅಡ್ವಾನ್ಸ್ ಬುಕ್ಕಿಂಗ್‍ ಸಮಯದಲ್ಲಿ ಇಂಥ ಚಿತ್ರಮಂದಿರದಲ್ಲಿ ಇಂಥಾ ಪ್ರದರ್ಶನದ ಟಿಕೆಟ್‍ ಎಂದು ನಮೂದಾಗಿರುತ್ತದೆ. ಆದರೆ, ಅವರು ಸುಮಾರು 15 ದಿನಗಳ ಹಿಂದೆಯೇ ಬುಕ್‍ ಮೈ ಶೋ ಮೂಲಕ ಅಡ್ವಾನ್ಸ್ ಬುಕ್ಕಿಂಗ್ ಪ್ರಾರಂಭಿಸಿದ್ದರು. ಆಗ ಚಿತ್ರ ಯಾವ ಚಿತ್ರಮಂದಿರದಲ್ಲಿ, ಎಷ್ಟು ಗಂಟೆಗೆ ಪ್ರದರ್ಶನವಿರುತ್ತದೆ ಎಂಬುದರ ಕುರಿತು ಸ್ಪಷ್ಟತೆ ಇರಲಿಲ್ಲ. ಹೀಗೆಯೇ ಅವರು ಐದು ಸಾವಿರ ಟಿಕೆಟ್‍ಗಳನ್ನು ಮಾರಾಟ ಮಾಡಿದ್ದರು.

ಈ ಕುರಿತು ‘ದ ಫೆಡೆರಲ್ ಕರ್ನಾಟಕ’ ಜೊತೆಗೆ ಮಾತನಾಡಿರುವ ಪ್ರದೀಪ್‍, ’ಚಿತ್ರಮಂದಿರ ಗೊತ್ತಿಲ್ಲ, ಶೋ ಗೊತ್ತಿಲ್ಲ. ಆದರೂ ಬುಕ್‍ ಮೈ ಶೋ ಮೂಲಕ ಟಿಕೆಟ್‍ ಮಾರಾಟ ಮಾಡಿದ್ದೇವೆ. ಐದು ಸಾವಿರ ಟಿಕೆಟ್‍ ಮಾರಾಟಕ್ಕೆ ಡೆಪಾಸಿಟ್‍ ಕೊಟ್ಟಿದ್ದೇವೆ. ನಾನು ಮೂಲತಃ motivational speaker. 60ಕ್ಕೂ ಹೆಚ್ಚು ಕಾಲೇಜುಗಳಿಗೆ ಮುಖ್ಯ ಅತಿಥಿಯಾಗಿ ಹೋಗಿದ್ದೇನೆ. ಹಲವು ಕಾಲೇಜಿನ ವಿದ್ಯಾರ್ಥಿಗಳ ಜೊತೆಗೆ ಒಡನಾಟವಿದೆ. ಹಾಗಾಗಿ, ಕಾಲೇಜು ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಚಿತ್ರ ಮಾಡಿದ್ದೇನೆ. ವಿದ್ಯಾರ್ಥಿಗಳು ಹೆಚ್ಚಾಗಿ ಟಿಕೆಟ್‍ ಪಡೆದಿದ್ದಾರೆ. ಮದುವೆಗೆ ಆಹ್ವಾನ ಕೊಟ್ಟು, ಗಿಫ್ಟ್ ಕೊಟ್ಟರೂ, ಜನ ಬರದಂತ ಪರಿಸ್ಥಿತಿ ಇರುವಾಗ, ಯಾವುದೇ ಆಫರ್‍ಗಳಿಲ್ಲದೆ ಹೊಸಬರ ಚಿತ್ರವೊಂದಕ್ಕೆ ಜನ ಟಿಕೆಟ್‍ ಖರೀದಿಸುತ್ತಿದ್ದಾರೆ ಎಂದರೆ ಖುಷಿಯಾಗುತ್ತದೆ’ ಎನ್ನುತ್ತಾರೆ.

ಕುಡುಬಿ ಸಮುದಾಯದವರಿಗಾಗಿ ‘ಗುಂಮ್ಟಿ’

ಕೆಲವು ದಿನಗಳ ಹಿಂದೆ ‘ಗುಂಮ್ಟಿ’ ಎಂಬ ಚಿತ್ರ ಬಿಡುಗಡೆಯಾಯಿತು. ಕರಾವಳಿ ತೀರದ ಕುಡುಬಿ ಜನಾಂಗದ ಕುರಿತು ಸಂದೇಶ್‍ ಶೆಟ್ಟಿ ಅಜ್ರಿ, ಈ ಚಿತ್ರ ಮಾಡಿದ್ದಾರೆ. ಈ ಚಿತ್ರವನ್ನು ನಿರ್ದೇಶಿಸಿ, ಅದರಲ್ಲಿ ನಾಯಕನಾಗಿಯೂ ನಟಿಸಿದ್ದಾರೆ. ಚಿತ್ರದ ಬಿಡುಗಡೆಗಡೆಗೂ ಮೊದಲೇ 22 ಪ್ರದರ್ಶನಗಳ ಟಿಕೆಟ್‍ ಮಾರಾಟವಾಗಿತ್ತು ಎಂಬುದು ವಿಶೇಷ.

ಈ ಕುರಿತು ಮಾತನಾಡುವ ಸಂದೇಶ್‍, ‘ಕುಡುಬಿ ಜನಾಂಗದ ಸಾಕಷ್ಟು ಜನ ಉಡುಪಿ, ಕುಂದಾಪುರ, ಬೈಂದೂರು ಮುಂತಾದ ಕಡೆ ವಾಸವಿದ್ದಾರೆ. ನಮ್ಮ ಚಿತ್ರ ಅವರ ಸಂಪ್ರದಾಯ ಮತ್ತು ಆಚರಣೆಗಳ ಸುತ್ತುವುದರ ಜೊತೆಗೆ, ನಶಿಸಿಹೋಗುತ್ತಿರುವ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದಕ್ಕೆ ಆ ಜನಾಂಗದವರು ಮಾಡುತ್ತಿರುವ ಹೋರಾಟವನ್ನು ಚಿತ್ರದಲ್ಲಿ ತೋರಿಸಲಾಗಿದೆ. ರಾಜ್ಯದಲ್ಲಿ ಕುಡುಬಿ ಜನಾಂಗದವರು ಸುಮಾರು 40 ಸಾವಿರ ಜನ ಇದ್ದಾರೆ. ಆ ಸಮುದಾಯದ ಬೆಂಬಲವಿದೆ. ಅವರೆಲ್ಲರೂ ದೊಡ್ಡ ಸಂಖ್ಯೆಯಲ್ಲಿ ಬಂದು ಚಿತ್ರಗಳನ್ನು ನೋಡುತ್ತಿದ್ದಾರೆ. ದೂರದೂರುಗಳಿಂದ ಬಸ್ಸು, ಟೆಂಪೋ ಟ್ರಾವಲರ್‍ಗಳಲ್ಲಿ ಬಂದು ಚಿತ್ರ ನೋಡಿ ಸಂಭ್ರಮಿಸುತ್ತಿದ್ದಾರೆ’ ಎನ್ನುತ್ತಾರೆ.

ದಾಸ ಪರಂಪರೆಗೆ ದೊಡ್ಡ ಪ್ರೇಕ್ಷಕವರ್ಗ

ಹೀಗೆ ಸಮುದಾಯವನ್ನು ಗುರಿಯಾಗಿಸಿಕೊಂಡು ಚಿತ್ರ ಮಾರಾಟ ಮಾಡುವ ಪ್ರಯತ್ನಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ನಿರ್ದೇಶಕ ಮಧುಸೂದನ ಹವಾಲ್ದಾರ್‍ ದಾಸಪರಂಪರೆಯ ಪ್ರಮುಖರ ಕುರಿತು ಕೆಲವು ವರ್ಷಗಳಿಂದ ಚಿತ್ರ ಮಾಡುತ್ತ ಬಂದಿದ್ದಾರೆ. ಈಗಾಗಲೇ ಅವರು ‘ಶ್ರೀ ಜಗನ್ನಾಥ ದಾಸರು’, ‘ಶ್ರೀ ಪ್ರಸನ್ನ ವೆಂಕಟ ದಾಸರು’ ಮತ್ತು ‘ದಾಸವರೇಣ್ಯ ಶ್ರೀ ವಿಜಯ ದಾಸರು’ ಚಿತ್ರಗಳನ್ನು ಮಾಡಿ ಬಿಡುಗಡೆ ಮಾಡಿದ್ದಾರೆ. ‘ದಾಸವರೇಣ್ಯ ಶ್ರೀ ವಿಜಯ ದಾಸರು’ ಚಿತ್ರದ ಮುಂದುವರೆದ ಭಾಗ ಇತ್ತೀಚೆಗೆ ಪ್ರಾರಂಭವಾಗಿದೆ. ಈ ಚಿತ್ರಗಳಿಗೆ ದೊಡ್ಡ ವೀಕ್ಷಕ ವರ್ಗವಿದೆ. ಅವರು ಈ ಚಿತ್ರಗಳನ್ನು ನೋಡಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ.

ಈ ಚಿತ್ರವನ್ನು ಹವಾಲ್ದಾರ್‌ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವುದಿಲ್ಲ. ಆಯ್ದ ಮಲ್ಟಿಪ್ಲೆಕ್ಸ್ಗಳಲ್ಲಿ ಮಾತ್ರ ಬಿಡುಗಡೆ ಮಾಡಲಾಗುತ್ತದೆ. ಪ್ರದರ್ಶನಗಳ ಸಂಖ್ಯೆ ಕಡಿಮೆಯಾದರೂ, ಅವೆಲ್ಲಾ ತುಂಬಿರುತ್ತವೆ. ಅದು ಹೇಗೆ ಸಾಧ್ಯವೆಂಧರೆ, ಸೋಷಿಯಲ್‍ ಮೀಡಿಯಾ ಮೂಲಕ ಮಾಧ್ವ ಸಮುದಾಯವರನ್ನು ತಲುಪುವ ಪ್ರಯತ್ನ ಮಾಡಲಾಗುತ್ತದೆ. ಚಿತ್ರದ ಪ್ರಚಾರ ಮಾಢಲಾಗುತ್ತದೆ. ಸಮುದಾಯದವರು ದೊಡ್ಡ ಸಂಖ್ಯೆಯಲ್ಲಿ ಬಂದು ಚಿತ್ರಗಳನ್ನು ನೋಡುತ್ತಿದ್ದಾರೆ. ಬರೀ ಕರ್ನಾಟಕದಲ್ಲಷ್ಟೇ ಅಲ್ಲ, ಹೊರದೇಶಗಳಲ್ಲೂ ಇದೇ ರೀತಿ ಚಿತ್ರವನ್ನು ಪ್ರದರ್ಶನ ಮಾಡಲಾಗುತ್ತದೆ. ಸಮುದಾಯವರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರ ನೋಡುತ್ತಿರುವುದರಿಂದ, ನಿರ್ಮಾಪಕರಿಗೆ ಹಾಕಿದ ಬಂಡವಾಳಕ್ಕೆ ಮೋಸವಾಗಿಲ್ಲ ಎಂಬುದರ ಜೊತೆಗೆ ಈ ಸರಣಿಯಲ್ಲಿ ಇನ್ನಷ್ಟು ಚಿತ್ರಗಳು ನಿರ್ಮಾಣವಾಗುತ್ತಿದೆ ಎಂಬುದು ವಿಶೇಷ.

‘ತಾರಕೇಶ್ವರ’ ಚಿತ್ರದ ಬಿಡುಗಡೆಗೂ ಮೊದಲೇ ಟಿಕೇಟುಗಳನ್ನು ಮಾರಾಟ ಮಾಡಿದ್ದರು ನಿರ್ಮಾಪಕ ಮತ್ತು ನಾಯಕ ಗಣೇಶ್‍ ರಾವ್ ಕೇಸರ್ಕರ್. ಅವರು ಚಿತ್ರದ ಟಿಕೆಟ್‍ಗಳನ್ನು ಮೊದಲೇ ಮುದ್ರಣ ಮಾಡಿ, ಮಾಡಿ ಮಾರಾಟ ಮಾಡಿದ್ದರು. ಒಂದು ಟಿಕೆಟ್‍ಗೆ ನೂರು ರೂಪಾಯಿ ದರ ನಿಗದಿಪಡಿಸಿ, ಅದನ್ನು ಖರೀದಿಸಿದವರು ಕರ್ನಾಟಕದ ಯಾವುದೇ ಜಿಲ್ಲೆ, ತಾಲ್ಲೂಕು ಕೇಂದ್ರದಲ್ಲೂ ಸಿನಿಮಾ ವೀಕ್ಷಿಸುವ ಅನುಕೂಲವನ್ನು ಮಾಡಿಕೊಡಲಾಗಿತ್ತು. ವಿಶೇಷವೆಂದರೆ, ಚಿತ್ರದ ಟ್ರೇಲರ್‍ ಬಿಡುಗಡೆಗೆ ಬಂದಿದ್ದ ಆಹ್ವಾನಿತರು ಒಂದಷ್ಟು ಟಿಕೆಟ್‌ಗಳನ್ನು ಸ್ಥಳದಲ್ಲೇ ಖರೀದಿಸಿದ್ದರು. ಸುಮಾರು 50 ಸಾವಿರ ಮೌಲ್ಯದ ಟಿಕೆಟ್‍ಗಳು ಬಿಡುಗಡೆಗೂ ಮೊದಲೇ ಮಾರಾಟವಾಗಿದ್ದವು.

ಬಿಡುಗಡೆಗೂ ಮೊದಲೇ 75 ಸಾವಿರ ಟಿಕೆಟ್ ಮಾರಾಟ

ದರ್ಶನ್‍ ಅಭಿನಯದ ‘ಕಾಟೇರ’ ಚಿತ್ರದ ಒಂದು ಲಕ್ಷ ಟಿಕೆಟ್‍ಗಳು ಮೊದಲೇ ಮಾರಾಟವಾಗಿದ್ದವು. ಆದರೆ, ಇದು ದೊಡ್ಡ ವಿಷಯವಲ್ಲ. ಏಕೆಂದರೆ, ದರ್ಶನ್‍ ಅವರಿಗೆ ರಾಜ್ಯದಲ್ಲಿ ದೊಡ್ಡ ಅಭಿಮಾನಿವೃಂದವಿದೆ. ಅವರೆಲ್ಲೂ ಮೊದಲ ಕೆಲವು ದಿನಗಳ ಕಾಲ ಚಿತ್ರವನ್ನು ನೋಡುವುದಕ್ಕೆ ಸಹಜವಾಗಿಯೇ ಟಿಕೆಟ್ಗಳನ್ನು ಕಾಯ್ದಿರಿಸುತ್ತಾರೆ. ಅದು ದೊಡ್ಡ ವಿಷಯವೇ ಅಲ್ಲ. ಆದರೆ, ಭಕ್ತರು ಮೊದಲೇ ಟಿಕೆಟ್‍ಗಳನ್ನು ಕೊಂಡು, ಚಿತ್ರ ಬಿಡುಗಡೆಯಾದಾಗ ಹೋಗಿ ನೋಡುವುದು ದೊಡ್ಡ ವಿಷಯವೇ ಸರಿ. ಇಲ್ಲ ಚಿತ್ರಕ್ಕಿಂತ ಹೆಚ್ಚು ಭಕ್ತಿ, ಗೌರವ, ಅಭಿಮಾನ ಪ್ರಮುಖ ಪಾತ್ರ ವಹಿಸುತ್ತದೆ. ಅಂಥದ್ದೊಂದು ದೊಡ್ಡ ಸಾಧನೆಯನ್ನು ಸುಚೇಂದ್ರ ಪ್ರಸಾದ್‍ ಅಭಿನಯದ ‘ವಿರಾಟಪುರದ ವಿರಾಗಿ’ ಚಿತ್ರ ಮಾಡಿತ್ತು.

ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಸ್‍. ಲಿಂಗದೇವರು, ತಮ್ಮ ‘ವಿರಾಟಪುರದ ವಿರಾಗಿ’ ಚಿತ್ರದ ಬಿಡುಗಡೆಗೂ ಮೊದಲ 75 ಸಾವಿರ ಟಿಕೆಟ್‍ಗಳನ್ನು ಮಾರಾಟ ಮಾಡಿದ್ದರು. ಚಿತ್ರವು 2023ರ ಜನವರಿಯಲಲಿ ಬಿಡುಗಡೆಯಾಗಿತ್ತು. ಆ ಚಿತ್ರದ ಪ್ರಚಾರ ಮಾಡುವುದಕ್ಕಾಗಿಯೇ ಆರು ರಥಗಳು ರಾಜ್ಯಾದ್ಯಾಂತ 7000 ಕಿ.ಮೀ. ಪ್ರಯಾಣ ಮಾಡಿದ್ದವು. 400ಕ್ಕೂ ಹೆಚ್ಚು ಸಭೆ ನಡೆಸಲಾಗಿತ್ತು. ಹಾನಗಲ್ಲ ಕುಮಾರಸ್ವಾಮಿಗಳ ಜೀವನಚರಿತ್ರೆಯನ್ನು ಆಧರಿಸಿದ ಈ ಚಿತ್ರದ ಸುಮಾರು 75 ಸಾವಿರ ಪಾಸ್‌ಗಳನ್ನು ಬಿಡುಗಡೆಗೂ ಮೊದಲೇ ಮಾರಾಟ ಮಾಡಲಾಗಿತ್ತು. ರಥಯಾತ್ರೆಯ ಸಂದರ್ಭದಲ್ಲಿ ಭಕ್ತರು ಟಿಕೆಟ್‍ಗಳನ್ನು (ಪಾಸ್‍) ಕೊಂಡು ಚಿತ್ರವನ್ನ ವೀಕ್ಷಿಸಿದ್ದರು.

ಈ ತರಹದ ಪ್ರಯೋಗಗಳು ಎಲ್ಲಾ ಚಿತ್ರಗಳಿಗೂ ಮಾಡುವುದಕ್ಕೆ ಸಾಧ್ಯವಿಲ್ಲ. ಕೆಲವು ಚಿತ್ರಗಳು ಮಾತ್ರ ಸಾಧ್ಯ. ಅದನ್ನು ಮನಗಂಡಿರುವ ಕೆಲವರು ತಮ್ಮದೇ ರೀತಿಯಲ್ಲಿ ಚಿತ್ರವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ದಾರಿ ಯಾವುದೇ ಇರಲಿ, ಇದರಿಂದ ಕನ್ನಡ ಚಿತ್ರಗಳನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸುವುದಕ್ಕೆ ಸಾಧ್ಯವಾಗುತ್ತಿರುವುದು ಸಂತೋಷದ ಸಂಗತಿ. 

Tags:    

Similar News