ಕಾಂತಾರ ಚಾಪ್ಟರ್ 1: ಬಿಡುಗಡೆ ದಿನಾಂಕದ ಬಗ್ಗೆ ಸ್ಪಷ್ಟನೆ ನೀಡಿದ ಚಿತ್ರ ತಂಡ
ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿರುವ ಚಿತ್ರತಂಡ, ಈ ಹಿಂದೆ ನಿಗದಿಪಡಿಸಿರುವಂತೆ ಇದೇ ವರ್ಷ ಅಕ್ಟೋಬರ್ 2ರಂದು ಕಾಂತಾರ ಚಾಪ್ಟರ್ 1 ಬಿಡುಗಡೆಯಾಗಲಿದೆ ಎಂದಿದೆ.;
ಕಾಂತಾರ ಪೋಸ್ಟ್
'ಕಾಂತಾರ ಚಾಪ್ಟರ್ 1' ಚಿತ್ರವು ಈ ಹಿಂದೆ ನಿಗದಿಪಡಿಸಿದ ದಿನಾಂಕವಾದ ಅಕ್ಟೋಬರ್ 2ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ. ಬಿಡುಗಡೆ ದಿನಾಂಕದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಹೊಂಬಾಳೆ ಫಿಲಂಸ್ ತಿಳಿಸಿದ್ದು, ಯಾವುದೇ ಊಹಾಪೋಹ ಅಥವಾ ವದಂತಿಗಳನ್ನು ನಂಬದಂತೆ ಮತ್ತು ಹರಡದಂತೆ ಮನವಿ ಮಾಡಿದೆ.
ಇತ್ತೀಚೆಗೆ 'ಕಾಂತಾರ' ಚಿತ್ರತಂಡ ಚಿತ್ರೀಕರಣದ ಸೆಟ್‌ನಲ್ಲಿ ಅವಘಡಗಳು ಮತ್ತು ಕಲಾವಿದರ ಸಾವಿನಂತಹ ವಿಷಯಗಳಿಂದ ಸುದ್ದಿಯಾಗಿತ್ತು. ಈ ಬಗ್ಗೆಯೂ ಹೊಂಬಾಳೆ ಸಂಸ್ಥೆ ಈ ಹಿಂದೆಯೇ ಸ್ಪಷ್ಟನೆ ನೀಡಿತ್ತು. ಇದೀಗ ಮತ್ತೆ ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ದಿನಾಂಕದ ಬಗ್ಗೆ ಹರಡಿದ್ದ ಗೊಂದಲಗಳಿಗೆ ಸ್ಪಷ್ಟನೆ ನೀಡಿದೆ.
ಯಶಸ್ವಿ ಸರಣಿಯ ಮುಂದುವರಿಕೆ
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ 'ಕಾಂತಾರ' ಸಿನಿಮಾ 2022ರ ಸೆಪ್ಟೆಂಬರ್ 30ರಂದು ತೆರೆಕಂಡು, ಕನ್ನಡ ಭಾಷೆಯಲ್ಲಿ ವಿಶ್ವದಾದ್ಯಂತ ಅಪಾರ ಮೆಚ್ಚುಗೆ ಗಳಿಸಿತ್ತು. ನಂತರ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಿಗೆ ಡಬ್ ಆಗಿ ಇನ್ನಷ್ಟು ಪ್ರೇಕ್ಷಕರನ್ನು ತಲುಪಿತ್ತು. 'ಕಾಂತಾರ'ದ ಭಾರಿ ಯಶಸ್ಸಿನ ನಂತರ, ರಿಷಬ್ ಶೆಟ್ಟಿ 'ಕಾಂತಾರ ಚಾಪ್ಟರ್ 1' ಅನ್ನು ನಿರ್ದೇಶಿಸಿ, ನಟಿಸುತ್ತಿದ್ದಾರೆ. ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸುತ್ತಿದ್ದು, ಬಿ. ಅಜನೀಶ್ ಲೋಕೇಶ್ ಸಂಗೀತ ನೀಡುತ್ತಿದ್ದಾರೆ.
ಯೋಜನೆಯಂತೆ ಎಲ್ಲವೂ ಸುಸೂತ್ರವಾಗಿ ಸಾಗುತ್ತಿದೆ ಎಂದು ಚಿತ್ರತಂಡ ತಿಳಿಸಿದೆ. 'ಕಾಂತಾರ ಚಾಪ್ಟರ್ 1' ಸಹ ಪ್ರೇಕ್ಷಕರನ್ನು ಮತ್ತಷ್ಟು ಆಳವಾದ ಕಥೆ, ಸಂಸ್ಕೃತಿ ಮತ್ತು ದೈವಿಕ ಲೋಕಕ್ಕೆ ಕರೆದೊಯ್ಯುವ ಭರವಸೆ ನೀಡಿದೆ. ನಿಮ್ಮ ಕಾತುರಕ್ಕೆ ತಕ್ಕಂತೆ ಚಿತ್ರವೂ ಅಂದುಕೊಂಡ ದಿನಾಂಕದಂದೇ ತೆರೆಗೆ ಬರಲಿದೆ ಎಂದು ಹೊಂಬಾಳೆ ಫಿಲಂಸ್ ಭರವಸೆ ನೀಡಿದೆ. ಆದ್ದರಿಂದ, ಯಾವುದೇ ಅನಧಿಕೃತ ಮಾಹಿತಿಗಳಿಗೆ ಕಿವಿಗೊಡದೆ ಅಧಿಕೃತ ಪ್ರಕಟಣೆಗಳನ್ನಷ್ಟೇ ನಂಬಲು ಚಿತ್ರತಂಡ ಮನವಿ ಮಾಡಿದೆ.