ದ ಟಾಸ್ಕ್‌: ವೈದ್ಯಲೋಕದ ಸಂಚಿನ ವಿರುದ್ಧ ಮಿಂಚಿನ ಯುದ್ಧ

ಇದು ನೈಜ ಘಟನೆಯ ಹಿನ್ನೆಲೆಯಲ್ಲಿ ಮೂಡಿ ಬಂದಿರುವ ಚಿತ್ರ. ಹೀಗಾಗಿಯೇ ಚಿತ್ರದಲ್ಲಿನ ಸಿನಿಮೀಯ ಸಾಹಸಗಳನ್ನು ಹೊರತು ಪಡಿಸಿದರೆ ಉಳಿದಂತೆ ಹೆಚ್ಚು ಸಹಜತೆಯೇ ತುಂಬಿದೆ.

Update: 2025-11-23 10:06 GMT

ಒಂದು ಕಡೆ ವೈದ್ಯಲೋಕವನ್ನೇ ವ್ಯಾಪಾರಕ್ಕಿಟ್ಟ ದಿಗ್ಗಜ ಉದ್ಯಮಿ. ಮತ್ತೊಂದೆಡೆ ಆತನ ವಿರುದ್ಧದ ಸಮರ ಸಾರಿ ನಿಲ್ಲುವ ಸಮಾಜಮುಖಿ ವ್ಯಕ್ತಿಗಳು.‌ ಪ್ರತಿಯೊಂದು‌ ಪಾತ್ರಗಳಿಗೂ ಆದ್ಯತೆ ನೀಡುವ ಚಿತ್ರಕಥೆಯ ಮೂಲಕ ಒಂದು ಪರಿಪೂರ್ಣ ಮಾದರಿಯ ಚಿತ್ರವನ್ನು ನೀಡಿದ್ದಾರೆ ನಿರ್ದೇಶಕ ರಾಘು ಶಿವಮೊಗ್ಗ.

ದ ಟಾಸ್ಕ್ ಎನ್ನುವ ಹೆಸರಿಗೆ ಪೂರಕವಾಗಿ ಇಲ್ಲಿರುವುದು ಒಂದು ಅಪಹರಣದ ಕೆಲಸ.

ಅದು ಎಸ್ ಎಸ್ ಎಲ್ ಸಿಯ ವಿದ್ಯಾರ್ಥಿನಿಯೊಬ್ಬಳನ್ನು ಮಡಿಕೇರಿಯಿಂದ ಬೆಂಗಳೂರಿಗೆ ಕರೆದು ತರುವ ಟಾಸ್ಕ್. ಆ ಹುಡುಗಿ ಹೀಗೆ ಅಪಹೃತಗೊಂಡು ಬೆಂಗಳೂರು ಸೇರಲು ಸಿದ್ಧವಾಗಿರುವಂಥವಳು. ಆದರೆ ಮನೆ ಮಂದಿ, ಊರ ಮಂದಿ, ಈ ಪ್ರಯಾಣ ತಡೆಯಲು ನಿಂತ ವಿರೋಧಿ ಪಡೆ ಮತ್ತು ಪೊಲೀಸ್ ಇಲಾಖೆ.. ಇವೆಲ್ಲವೂ ಅಪಹರಣದ ವಿರುದ್ಧ ಕಾರ್ಯಾಚರಣೆಗಿಳಿಯುತ್ತವೆ. ಆದರೆ ಇವೆಲ್ಲವನ್ನೂ ಮೀರಿ ಇಬ್ಬರು ಯುವಕರು ಈ ಅಪಹರಣವನ್ನು ಯಶಸ್ವಿಗೊಳಿಸಲು‌ ಪಣತೊಡುತ್ತಾರೆ.

ಚಿತ್ರದುದ್ದಕ್ಕೂ ಇವರ ಸಾಹಸವೇ ತುಂಬಿಕೊಂಡಿದೆ.

ಸಾಹಸಿಗ ಯುವಕರಾದ ಕಂಠಿ ಮತ್ತು ವಿಷ್ಣು ಎನ್ನುವ ಇಬ್ಬರನ್ನು ಈ‌‌ ಕೆಲಸಕ್ಕೆಂದೇ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ನೇಮಿಸಿರುತ್ತಾರೆ.

ಬಾಲ್ಯದಲ್ಲೇ ಕ್ರೂರಿ ಹಾಸ್ಟೆಲ್ ವಾರ್ಡನ್ ನನ್ನು ಕೊಂದು ಜೈಲು ಶಿಕ್ಷೆ ಪಡೆದವರು ಇವರು. ಆದರೆ ಜೈಲಿನಿಂದ ಹೊರ ಬಂದ ಬಳಿಕ ತಮ್ಮ ಮೆಚ್ಚಿನ ಪೊಲೀಸ್ ಅಧಿಕಾರಿಯ ಮಾರ್ಗದರ್ಶನದಲ್ಲಿ ಜೀವನ‌ ನಡೆಸಿದವರು. ಒಮ್ಮೆ ಕೊಲೆಗಾರರಾಗಿ ಜೈಲಿನ ರುಚಿ ನೋಡಿದ ಇವರಿಗೆ ತಮ್ಮ‌ ಒಳ್ಳೆಯತನವನ್ನು ಸಮಾಜದ ಮುಂದೆ ಸಾಬೀತು ಪಡಿಸುವ ಹಂಬಲ ಇರುತ್ತದೆ. ಈ ಪ್ರಯತ್ನದಲ್ಲಿ ಮುಂದೇನಾಗುತ್ತದೆ ಎನ್ನುವುದನ್ನು ರೋಚಕವಾಗಿ ಕಟ್ಟಿಕೊಟ್ಟಿರುವ ಚಿತ್ರವೇ ದಿ ಟಾಸ್ಕ್.

ಇದು ನೈಜ ಘಟನೆಯ ಹಿನ್ನೆಲೆಯಲ್ಲಿ ಮೂಡಿ ಬಂದಿರುವ ಚಿತ್ರ. ಹೀಗಾಗಿಯೇ ಚಿತ್ರದಲ್ಲಿನ ಸಿನಿಮೀಯ ಸಾಹಸಗಳನ್ನು ಹೊರತು ಪಡಿಸಿದರೆ ಉಳಿದಂತೆ ಹೆಚ್ಚು ಸಹಜತೆಯೇ ತುಂಬಿದೆ. ಇಬ್ಬರು ಯುವಕರು ಪ್ರಾಣಾಪಾಯವನ್ನು ಲೆಕ್ಕಿಸದೇ ಬೆಂಗಳೂರಿಗೆ ಕರೆದು ತರುವ ಆ ‌ಹುಡುಗಿ ಯಾರು? ಅವಳ ಹಿನ್ನೆಲೆ ಏನು? ಎನ್ನುವುದು ಮೊದಲ ಕುತೂಹಲಕಾರಿ ಅಂಶ. ಆದರೆ ಇದಕ್ಕೆ ಉತ್ತರ ಸಿಕ್ಕರೂ ಕೂಡ ಕಥೆಯ ಮೇಲಿನ ಆಕರ್ಷಣೆ ಕಳೆದುಹೋಗದಂತೆ ಚಿತ್ರವನ್ನು ತೆರೆಗೆ ತರಲಾಗಿದೆ.

ಚಿತ್ರ: ದಿ ಟಾಸ್ಕ್

ನಿರ್ದೇಶನ: ರಾಘು ಶಿವಮೊಗ್ಗ

ನಿರ್ಮಾಣ: ವಿಜಯ ಕುಮಾರ್ ಸಿ, ರಾಮಣ್ಣ ಇ.

ತಾರಾಗಣ: ಜಯಸೂರ್ಯ ಆರ್ ಅಜಾದ್, ಸಾಗರ್ ರಾಮ್ ಮುಂತಾದವರು

ದ್ಯಕೀಯ ಲೋಕದ ಪಾತಕಿ ಓರ್ವ ಕೊರೊನಾ ಭಾದಿತರ ಮೇಲೆ ಕೋವಿಡ್ ಲಸಿಕೆಯ ಪ್ರಯೋಗ ನಡೆಸುತ್ತಿರುತ್ತಾನೆ. ಇದರಿಂದ ರೋಗಿಗಳ ಸಾವಾಗುತ್ತದೆ. ಈ ಸತ್ಯ ಅಚಾನಕ್ಕಾಗಿ ಒಂದು ರೋಗಿಯ ಕಡೆಯ ವ್ಯಕ್ತಿಗೆ ಗೊತ್ತಾಗಿ ಹೋಗುತ್ತದೆ.‌ ಆತನನ್ನು ಮುಗಿಸುವ ಪ್ರಯತ್ನದಲ್ಲಿ ಹೊಸ ಹೊಸ ಸಾಕ್ಷಿಗಳ ಸೃಷ್ಟಿಯಾಗುತ್ತದೆ. ಪಾತಕಿಯು ಸಾಕ್ಷಿಗಳ ಬಾಯಿ ಮುಚ್ಚಿಸುವ ಪ್ರಯತ್ನದಲ್ಲಿ ತೊಡಗಿದರೆ ವಕೀಲೆಯೊಬ್ಬಳು ಮಾತ್ರ ಸಾಕ್ಷಿಯ ರಕ್ಷಣೆಗೆ ಮುಂದಾಗುತ್ತಾಳೆ. ಈಕೆಯ ಹೋರಾಟದಲ್ಲಿ ಕೈ ಜೋಡಿಸಿದವರು ಎದುರಿಸುವ ಸಮಸ್ಯೆಗಳೇನು? ನಡೆಸುವ ಹೋರಾಟ ಹೇಗಿತ್ತು? ಎನ್ನುವುದೇ ಈ ಚಿತ್ರದ ಹೂರಣ.

ಚಿತ್ರದಲ್ಲಿನ ಎರಡು ನಾಯಕ ಪ್ರಧಾನ ಪಾತ್ರಗಳಾದ ಕಂಠಿ ಮತ್ತು ವಿಷ್ಣುವಿಗೆ ಜಯಸೂರ್ಯ ಆರ್ ಆಜಾದ್ ಮತ್ತು ಸಾಗರ್ ರಾಮ್ ಜೀವಕೊಟ್ಟು ಅಭಿನಯಿಸಿದ್ದಾರೆ. ನಟನೆಯ ಜತೆಯಲ್ಲೇ ಸಾಹಸ ದೃಶ್ಯಗಳಲ್ಲಿ ಅಪಾರವಾಗಿ ತೊಡಗಿಸಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದ ಕೀರ್ತಿ ಇವರದು. ಈ ಹೋರಾಟದ ಮಾಸ್ಟರ್ ಮೈಂಢ್ ನಿವೃತ್ತ ಪೊಲೀಸ್ ಅಧಿಕಾರಿಯ ಪಾತ್ರವನ್ನು ಅಚ್ಯುತ್ ಕುಮಾರ್ ನಿಭಾಯಿಸಿದ್ದಾರೆ. ಅಚ್ಯುತ್ ಅವರಿಗೆ ಈ‌ ಮಾಹಿತಿಯನ್ನು ಒದಗಿಸುವ ಲಾಯರ್ ಪ್ರತಿಮಾ ಪಾತ್ರವನ್ನು ಸಂಗೀತಾ ಭಟ್ ನಿರ್ವಹಿಸಿದ್ದಾರೆ. ಸಂಗೀತಾ ತಮ್ಮ ಎರಡನೇ ಇನ್ನಿಂಗ್ಸ್ ನಲ್ಲಿ ನಿರ್ವಹಿಸುತ್ತಿರುವ ವಿಭಿನ್ನ ಪಾತ್ರಗಳ ಪಟ್ಟಿಯಲ್ಲಿ ಇದಕ್ಕೂ ಪ್ರಮುಖ ಸ್ಥಾನ ಸಿಗುವುದು ಖಚಿತ. ಚಿತ್ರದಲ್ಲಿನ ಎಸ್ ಎಸ್ ಎಲ್ ಸಿ ಹುಡುಗಿಯ ಪಾತ್ರಕ್ಕೆ ಬಾಲನಟಿ ಶ್ರೀಲಕ್ಷ್ಮೀ ನೀಡಿರುವ ನಟನೆ ಆಕರ್ಷಕವಾಗಿದೆ. ಭಯ, ನೋವು, ತುಂಟತನ, ಸಾಹಸ ಹೀಗೆ ಎಲ್ಲ ಭಾವಗಳಲ್ಲೂ ಪಳಗಿರುವ ಹುಡುಗಿಯ ಅಭಿನಯ ಪ್ರತಿಭೆಗೆ ರಾಜ್ಯ ಪ್ರಶಸ್ತಿ ಅರಸಿಕೊಂಡು ಬಂದರೂ ಅಚ್ಚರಿ ಇಲ್ಲ. ಬಾಲಕಿಯ ತಂದೆ ತಾಯಿಯ ಆತಂಕವನ್ನು ಗೋಪಾಲಕೃಷ್ಣ ದೇಶಪಾಂಡೆ ಮತ್ತು ಹರಿಣಿ ಹಂಚಿಕೊಂಡಿದ್ದಾರೆ.

ನಿರ್ದೇಶಕ ರಾಘು ಶಿವಮೊಗ್ಗ ಒಟ್ಟು ಚಿತ್ರವನ್ನು ಅದ್ಭುತವಾಗಿ ಮೂಡುವಂತೆ ಮಾಡಿದ್ದಾರೆ‌. ಇಲ್ಲಿ ರಾಘು ನಿರ್ದೇಶಕರಾಗಿ ಮಾತ್ರ ಉಳಿದಿಲ್ಲ. ಒಂದು‌ ಪ್ರಮುಖ ನೆಗೆಟಿವ್ ಪಾತ್ರವನ್ನು ಕೂಡ ನಿಭಾಯಿಸಿದ್ದಾರೆ. ಆದರೆ ಇಲ್ಲಿಯೂ ಕೂಡ ಕೈವ ಚಿತ್ರದ ಕಲೀಮ್ ಪಾತ್ರದ ಕ್ರೂರತೆಯನ್ನೇ ಮುಂದುವರಿಸಿದಂತೆ ಕಾಣುತ್ತಾರೆ. ಮಫ್ತಿ ಶಿವರಾಜ್ ಕುಮಾರ್ ಲುಕ್ ನಲ್ಲಿದ್ದರೂ ಭರಮಪ್ಪನ ಪಾತ್ರದಲ್ಲಿ ಬೆರಗಾಗಿಸುವ ನಟನೆ ನೀಡಿದ್ದಾರೆ. ಅದರಲ್ಲಿ ಹೆಣ್ಣು ಮಕ್ಕಳ ವಿಚಾರದಲ್ಲಿ ಬರಗೆಟ್ಟಂತೆ ಆಡುವ ಭರಮಪ್ಪನ ಇಮೇಜ್ ಭಯಬೀಳಿಸುತ್ತದೆ.

ಮೇಲ್ನೋಟಕ್ಕೆ ಮಹಾನ್ ಸಮಾಜ ಸೇವಕನಂತೆ ಕಾಣಿಸುವ ವೈದ್ಯಲೋಕದ ದಿಗ್ಗಜ, ಉಚಿತ ಸೇವೆಯ ಮುಖವಾಡ‌ ಹೊತ್ತ ನರಾಧಮ

ಸೂರ್ಯ ಪ್ರಕಾಶ್ ಪಾತ್ರವನ್ನು ಬಾಲಾಜಿ ಮನೋಹರ್ ನಿರ್ವಹಿಸಿದ್ದಾರೆ. ಸಂಗೀತ ಭಟ್ ಸಹಾಯಕ ವಕೀಲನಾಗಿ ಬಿ.ಎಮ್ ಗಿರಿರಾಜ್ ಭ್ರಷ್ಟ ಬುದ್ಧಿಯ ಕುತಂತ್ರ ವ್ಯಕ್ತಿತ್ವಕ್ಕೆ ಕನ್ನಡಿಯಾಗಿ ಕಂಡಿದ್ದಾರೆ.

ಆ್ಯಂಬುಲೆನ್ಸ್ ಚಾಲಕನಾಗಿ ಅರವಿಂದ್ ಕುಪ್ಲೀಕರ್ ಮತ್ತು ಆತನ ಪತ್ನಿಯಾಗಿ ಆರೋಹಿತ ವಾಸ್ತವ ಜಗತ್ತಿನ ಎರಡು ಮುಖಗಳಿಗೆ ಜೀವ ನೀಡಿದ್ದಾರೆ. ಎರಡೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಪೊಲೀಸ್ ಅಧಿಕಾರಿಯಾಗಿ ಸಂಪತ್ ಮೈತ್ರೇಯ ಮನದಲ್ಲಿ ಸ್ಥಾನ‌ ಪಡೆಯುತ್ತಾರೆ. ಒಂದು ಕ್ಷಣ ಬಂದು ಹೋಗುವ ಪಿ.ಡಿ.‌ ಸತೀಶ್, ಎರಡು ದೃಶ್ಯದಲ್ಲಷ್ಟೇ ಬರುವ ಪೊಲೀಸ್ ಕಾನ್ಸ್‌ಟೇಬಲ್ ಪಾತ್ರಧಾರಿ ಭರತ್ ಜಿ.ಬಿ, ಕೂಲಿ‌ ಕೆಲಸಗಾರ್ತಿಯಾಗಿ ಕಾಣಿಸುವ ಬಿಂದು ಬೀರುವ ಪ್ರಭಾವ ಕೂಡ ಇದಕ್ಕೆ ಹೊರತಲ್ಲ.


ಕಥೆಯ ವೇಗಕ್ಕೆ ತಕ್ಕಂತೆ ಜೂಡಸ್ಯಾಂಡಿ ಹಿನ್ನೆಲೆ ಸಂಗೀತ ಆಕರ್ಷಕವಾಗಿ ಮೂಡಿ ಬಂದಿದೆ. ನಾಗೇಂದ್ರ ಪ್ರಸಾದ್, ನಾಗಾರ್ಜುನ ಶರ್ಮ ಮತ್ತು ಪ್ರಮೋದ್ ಮರವಂತೆ ರಚಿಸಿರುವ ಹಾಡುಗಳು ಸಾಂದರ್ಭಿಕವಾಗಿ ಮೂಡಿ ಬಂದಿವೆ. ವಿಎಫ್ಎಕ್ಸ್ ತಂತ್ರಜ್ಞಾನದಲ್ಲಿ‌ ಸಹಜತೆ ಇದೆ

ಕ್ರೈಮ್ ಸಿನಿಮಾ ಎನ್ನುವ ಕಾರಣಕ್ಕೆ ಅಸಭ್ಯ ಸಂಭಾಷಣೆಗಳನ್ನೋ, ಐಟಂ ಹಾಡುಗಳನ್ನೋ ತುರುಕಲಾಗಿಲ್ಲ ಎನ್ನುವುದು ಸಮಾಧಾನ. ಆ ನಿಟ್ಟಿನಲ್ಲಿ ತಮ್ಮ 'ಚೂರಿಕಟ್ಟೆ'ಯ ಟ್ರ್ಯಾಕ್ ರೆಕಾರ್ಡ್ ನ ರಾಘು ಶಿವಮೊಗ್ಗ ಹಾಗೆಯೇ ಉಳಿಸಿಕೊಂಡಿದ್ದಾರೆ. ಒಂದು ಕ್ರೈಂ ಥ್ರಿಲ್ಲರ್ ಚಿತ್ರವನ್ನು ಭಾವನಾತ್ಮಕವಾಗಿ ಮನಮುಟ್ಟುವಂತೆ ತೋರಿಸುವ ಕಲೆ ಈ ನಿರ್ದೇಶಕರಿಗೆ ಸಿದ್ಧಿಸಿದೆ. ಕ್ಷಣ ಕ್ಷಣವೂ ರೋಚಕವಾಗಿರುವ ಟಾಸ್ಕ್ ಮಾಸ್ ಹಾಗೂ ಕ್ಲಾಸ್ ಪ್ರೇಕ್ಷಕರಿಗೆ ಪ್ರಿಯವಾಗುವುದರಲ್ಲಿ ಸಂದೇಹವಿಲ್ಲ.

Tags:    

Similar News