ಬೀಗ ಬಿದ್ದಿದ್ದ ಬಿಗ್‌ಬಾಸ್ ಮನೆ ಓಪನ್: ಲೈಟ್ ಆನ್, ಆಟ ಶುರು
ಕಲರ್ಸ್ ಕನ್ನಡ ಅವರ ಅಧಿಕೃತ ಪೇಜ್‌ನಲ್ಲಿ ಪ್ರೋಮೋ ಒಂದನ್ನು ಬಿಡುಗಡೆ ಮಾಡಿದೆ. ಈ ಪ್ರೋಮೋದಲ್ಲಿ ಮನೆಯ ಬಾಗಿಲು ಮತ್ತೆ ತೆರೆಯಲ್ಪಟ್ಟಿದ್ದು, ಎಲ್ಲ ಲೈಟ್‌ಗಳು ಆನ್ ಆಗಿದೆ.
ಬಿಗ್‌ಬಾಸ್
ಮಾಲಿನ್ಯ ನಿಯಂತ್ರಣ ನಿಯಮಗಳ ಉಲ್ಲಂಘನೆಯಿಂದಾಗಿ ಬೀಗ ಜಡಿಯಲಾಗಿದ್ದ ಬಿಗ್‌ಬಾಸ್ ಚಿತ್ರೀಕರಣದ ಜಾಲಿವುಡ್ ಸ್ಟುಡಿಯೋಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು, ಜನಪ್ರಿಯ ರಿಯಾಲಿಟಿ ಶೋ ಮತ್ತೆ ಆರಂಭವಾಗಿದೆ. ರಾಮನಗರ ಜಿಲ್ಲಾಡಳಿತವು 10 ದಿನಗಳ ಷರತ್ತುಬದ್ಧ ಅನುಮತಿ ನೀಡಿದ ಹಿನ್ನೆಲೆಯಲ್ಲಿ, ಮನೆಯಿಂದ ಹೊರಗಿದ್ದ ಸ್ಪರ್ಧಿಗಳು ಮತ್ತೆ ಒಳಗೆ ಪ್ರವೇಶಿಸಿದ್ದು, ಬಿಗ್‌ಬಾಸ್ ಆಟ ಪುನಾರಂಭಗೊಂಡಿದೆ.
ಈ ಕುರಿತು ಕಲರ್ಸ್ ಕನ್ನಡ ವಾಹಿನಿಯು ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹೊಸ ಪ್ರೋಮೋವನ್ನು ಬಿಡುಗಡೆ ಮಾಡಿದೆ. ಪ್ರೋಮೋದಲ್ಲಿ ಬಿಗ್‌ಬಾಸ್ ಮನೆಯ ಬಾಗಿಲು ಮತ್ತೆ ತೆರೆಯಲ್ಪಟ್ಟಿದ್ದು, ಲೈಟ್‌ಗಳು ಆನ್ ಆಗಿವೆ ಮತ್ತು ಕ್ಯಾಮೆರಾಗಳು ಸಕ್ರಿಯಗೊಂಡಿವೆ. ಮನೆಯಿಂದ ಹೊರಹೋಗಿದ್ದ ಸ್ಪರ್ಧಿಗಳು ಮರಳಿ ಮನೆಯೊಳಗೆ ಪ್ರವೇಶಿಸುವ ದೃಶ್ಯಗಳು ಪ್ರೋಮೋದಲ್ಲಿವೆ.
ಪ್ರಕರಣದ ಹಿನ್ನೆಲೆ
ಬಿಗ್‌ಬಾಸ್ ಚಿತ್ರೀಕರಣ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋ, ತ್ಯಾಜ್ಯ ನೀರನ್ನು ಸಂಸ್ಕರಿಸದೆ ಹೊರಬಿಡುತ್ತಿತ್ತು ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ (KSPCB) ಪರವಾನಗಿ ಪಡೆಯದೆ ಕಾರ್ಯನಿರ್ವಹಿಸುತ್ತಿತ್ತು. ಈ ನಿಯಮ ಉಲ್ಲಂಘನೆಗಳಿಗಾಗಿ ಅಧಿಕಾರಿಗಳು ಸ್ಟುಡಿಯೋಗೆ ಬೀಗ ಜಡಿದಿದ್ದರು.
ಇದರ ಬೆನ್ನಲ್ಲೇ, ಸ್ಟುಡಿಯೋದ ಮಾತೃಸಂಸ್ಥೆಯಾದ ವೇಲ್ಸ್ ಸ್ಟುಡಿಯೋಸ್, ರಾಮನಗರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತ್ತು. "ನಾವು ಸ್ಟುಡಿಯೋ ನಡೆಸಲು ಪರವಾನಗಿ ಪಡೆದಿದ್ದೇವೆ, ಆದರೆ ಕೆಲವು ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಪಾಲಿಸಲು ವಿಳಂಬವಾಗಿದೆ. ಕೆಎಸ್ಪಿಸಿಬಿ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸುತ್ತೇವೆ ಮತ್ತು ಅಗತ್ಯ ದಾಖಲೆಗಳನ್ನು ಶೀಘ್ರವೇ ಸಲ್ಲಿಸುತ್ತೇವೆ. ಎಲ್ಲವನ್ನು ಸರಿಪಡಿಸಿಕೊಳ್ಳಲು ನಮಗೆ 15 ದಿನಗಳ ಕಾಲಾವಕಾಶ ನೀಡಿ," ಎಂದು ಮನವಿ ಮಾಡಿತ್ತು. ಈ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, 10 ದಿನಗಳ ಕಾಲಾವಕಾಶವನ್ನು ಷರತ್ತುಬದ್ಧವಾಗಿ ನೀಡಿದ್ದಾರೆ.
ಪ್ರಸಾರವಾದ ಬ್ಯಾಕ್‌ಅಪ್ ಎಪಿಸೋಡ್
ಶೋ ಸ್ಥಗಿತಗೊಂಡಿದ್ದಾಗ, ಅಕ್ಟೋಬರ್ 8ರಂದು ವಾಹಿನಿಯು ಬ್ಯಾಕ್‌ಅಪ್ ಎಪಿಸೋಡ್ ಒಂದನ್ನು ಪ್ರಸಾರ ಮಾಡಿತ್ತು. ಈ ಸಂಚಿಕೆಯಲ್ಲಿ ಮಂಜು ಭಾಷಿಣಿ ಮತ್ತು ರಾಶಿಕಾ ಶೆಟ್ಟಿ ನಡುವೆ ಮಾತಿನ ಚಕಮಕಿ ನಡೆದಿದ್ದು, ಇದಕ್ಕೆ 'ಅಸುರಾಧಿಪತಿ' ಕಾಕ್ರೋಚ್ ಸುಧೀ ಅವರ ಮಾತು ಕಾರಣವಾಗಿತ್ತು ಎಂದು ಪ್ರೋಮೋದಲ್ಲಿ ತೋರಿಸಲಾಗಿದೆ. ಇದೀಗ ಶೋ ಪುನಾರಂಭಗೊಂಡಿರುವುದರಿಂದ, ಗುರುವಾರದ ಹೊಸ ಸಂಚಿಕೆಯ ಮೇಲೆ ವೀಕ್ಷಕರ ಕುತೂಹಲ ಹೆಚ್ಚಾಗಿದೆ.