‘45’ ಸಿನಿಮಾ ಬಿಡುಗಡೆ ವಿಳಂಬಕ್ಕೆ ಕಾರಣ ತಿಳಿಸಿದ ಚಿತ್ರತಂಡ
ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಜತೆಯಾಗಿ ನಟಿಸಿರುವ ‘45’ ಸಿನಿಮಾ ಆಗಸ್ಟ್ 15 ರಂದು ಬಿಡುಗಡೆ ಆಗಬೇಕಿತ್ತು. ಆದರೆ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿತ್ತು.;
ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಒಟ್ಟಿಗೆ ನಟಿಸಿರುವ ‘45’ ಸಿನಿಮಾ
ಶಿವರಾಜ್ ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಜತೆಯಾಗಿ ನಟಿಸಿರುವ ‘45’ ಸಿನಿಮಾ ಆಗಸ್ಟ್ 15 ರಂದು ಬಿಡುಗಡೆ ಆಗಬೇಕಿತ್ತು. ಆದರೆ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿತ್ತು. ಇದೀಗ ಸಿನಿಮಾ ಬಿಡುಗಡೆ ಮುಂದೂಡಲು ನಿಜವಾದ ಕಾರಣ ಬಹಿರಂಗವಾಗಿದೆ.
ʻ45’ ಸಿನಿಮಾ ಅನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ನಿರ್ದೇಶನ ಮಾಡುತ್ತಿರುವ ಮೊದಲ ಸಿನಿಮಾ ಇದಾಗಿದೆ. ಅರ್ಜುನ್ ಜನ್ಯ, ತಮ್ಮ ಮೊದಲ ಸಿನಿಮಾ ರಿಚ್ ಆಗಿ, ಅತ್ಯುತ್ತಮ ಗುಣಮಟ್ಟದಿಂದ ಮೂಡಿಬರಲೆಂದು ಕೆಲ ಹಾಲಿವುಡ್ ತಂತ್ರಜ್ಞರ ನೆರವನ್ನು ಪಡೆದುಕೊಂಡಿದ್ದಾರೆ. ಸಿನಿಮಾನಲ್ಲಿ ಸಾಕಷ್ಟು ವಿಎಫ್ಎಕ್ಸ್ ಇದ್ದು, ಇದೇ ಕಾರಣಕ್ಕೆ ಸಿನಿಮಾದ ಬಿಡುಗಡೆ ಆಗಸ್ಟ್ 15 ರಂದು ಮಾಡಲಾಗಿಲ್ಲ ಎಂದು ಚಿತ್ರತಂಡ ತಿಳಿಸಿದೆ.
‘45’ ಸಿನಿಮಾಕ್ಕೆ ಖ್ಯಾತ ಹಾಲಿವುಡ್ ವಿಎಫ್ಎಕ್ಸ್ ಡಿಸೈನ್ ಸಂಸ್ಥೆಯಾದ ಮಾರ್ಜ್ ಮಾಡುತ್ತಿದೆ. ಮಾರ್ವೆಲ್ ಸಿನಿಮಾಗಳಾದ ‘ಸ್ಪೈಡರ್ಮಯಾನ್: ಫಾರ್ ಫ್ರಂ ಹೋಮ್’, ‘ಆಂಟ್ಮ್ಯಾನ್’, ‘ಮೂನ್ಲೈಟ್’, ‘ವಾಂಡಾ ವಿಷನ್’ ಸೇರಿದಂತೆ, ‘ವೆಡ್ನಸ್ ಡೇ’, ‘ಪೆರ್ಸಿ ಜಾಕ್ಸನ್’, ‘ದಿ ಕ್ರಿಯೇಟರ್’, ‘ಸ್ಟ್ರೇಂಜರ್ ಥಿಂಗ್ಸ್ 4’ ಇನ್ನೂ ಹಲವು ಜನಪ್ರಿಯ ಹಾಲಿವುಡ್ ಸಿನಿಮಾಗಳಿಗೆ ಮಾರ್ಜ್ ಸಂಸ್ಥೆ ವಿಎಫ್ಎಕ್ಸ್ ಮಾಡಿದೆ.
ಇದೀಗ ಇದೇ ಸಂಸ್ಥೆ ‘45’ ಸಿನಿಮಾಕ್ಕೂ ವಿಎಫ್ಎಕ್ಸ್ ಮಾಡುತ್ತಿದ್ದು, ಸಿನಿಮಾನಲ್ಲಿ ಗ್ರಾಫಿಕ್ಸ್ ಮತ್ತು ವಿಎಫ್ಎಕ್ಸ್ ಪ್ರಮುಖವಾಗಿದ್ದು ಇದೇ ಕಾರಣಕ್ಕೆ ಸಿನಿಮಾದ ಬಿಡುಗಡೆ ಆಗಸ್ಟ್ 15 ರಂದು ಆಗಲಿಲ್ಲವಂತೆ. ಮಾರ್ಜ್ ಸಂಸ್ಥೆ ಕೆನಡಾ ಮೂಲದ್ದಾಗಿದ್ದು ಈ ಸಂಸ್ಥೆಯ ಮುಖ್ಯ ತಂತ್ರಜ್ಞ ಯಶ್ ಗೌಡ ಸಹ ಈ ಬಗ್ಗೆ ಮಾತನಾಡಿದ್ದು, ‘45’ ನಮ್ಮ ಸಂಸ್ಥೆ ವಿಎಫ್ಎಕ್ಸ್ ಮಾಡುತ್ತಿರುವ ಮೊದಲ ಕನ್ನಡ ಸಿನಿಮಾ ಆಗಿದೆ. ಕತೆಯಲ್ಲಿ ವಿಎಫ್ಎಕ್ಸ್ಗೆ ಮಹತ್ವದ ಪಾತ್ರ ಇರುವ ಕಾರಣದಿಂದಾಗಿ ಹೆಚ್ಚಿನ ಜಾಗೃತೆಯಿಂದ ಕೆಲಸ ನಡೆಯುತ್ತಿದೆ. ಸೆಪ್ಟೆಂಬರ್ 16ರ ಒಳಗೆ ಸಿನಿಮಾದ ಎಲ್ಲ ವಿಎಫ್ಎಕ್ಸ್ ಕಾರ್ಯ ಪೂರ್ಣಗೊಳ್ಳಲಿದೆ, ಅದಾದ ಒಂದು ತಿಂಗಳಲ್ಲಿ ಇನ್ನೊಂದಿಷ್ಟು ಕೆಲಸಗಳು ಇರಲಿವೆ. ಸಿನಿಮಾದ ಬಿಡುಗಡೆ ತಡವಾದರೂ ಸಿನಿಮಾದ ಗುಣಮಟ್ಟ ಅತ್ಯದ್ಭುತವಾಗಿರಲಿದೆ’ ಎಂದಿದ್ದಾರೆ.
ಅದರಂತೆ ಸಿನಿಮಾ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಸಿನಿಮಾನಲ್ಲಿ ಶಿವಣ್ಣ, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಒಟ್ಟಿಗೆ ನಟಿಸಿದ್ದಾರೆ. ಸಿನಿಮಾದ ಹಾಡುಗಳು, ಡಬ್ಬಿಂಗ್ ಎಲ್ಲವೂ ಪೂರ್ಣಗೊಂಡಿದೆ ಎನ್ನಲಾಗುತ್ತಿದೆ.