ʼಫುಲ್ ಮೀಲ್ಸ್ʼ ನಿರ್ದೇಶಕರಿಗೆ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿ ಶುಭ ಕೋರಿದ ಚಿತ್ರತಂಡ
ʼಫುಲ್ ಮೀಲ್ಸ್ʼ ಚಿತ್ರದ ನಿರ್ದೇಶಕ ಎನ್ ವಿನಾಯಕ ಹುಟ್ಟು ಹಬ್ಬದ ಅಂಗವಾಗಿ ಚಿತ್ರತಂಡ ಮೇಕಿಂಗ್ ವೀಡಿಯೋ ಒಂದನ್ನು ಬಿಡುಗಡೆ ಮಾಡಿ ನಿರ್ದೇಶಕರಿಗೆ ಶುಭಾಶಯ ಕೋರಿದೆ.;
ಲಿಖಿತ್ ಶೆಟ್ಟಿ ನಾಯಕ ನಟನಾಗಿ ನಟಿಸಿ, ನಿರ್ಮಿಸುತ್ತಿರುವ ʼಫುಲ್ ಮೀಲ್ಸ್ʼ ಚಿತ್ರತಂಡ, ಚಿತ್ರದ ಮೇಕಿಂಗ್ ವೀಡಿಯೋ ಬಿಡುಗಡೆ ಮಾಡಿ ನಿರ್ದೇಶಕ ಎನ್ ವಿನಾಯಕ ಅವರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದೆ.
ಸಿನೆಮಾಗೆ ಕೊನೆಯ ಹಂತದ ಡಬ್ಬಿಂಗ್ ಕೆಲಸ ನಡೆಯುತ್ತಿದ್ದು, ಶೀಘ್ರದಲ್ಲಿ ಸಿನೆಮಾವನ್ನು ತೆರೆಗೆ ತರುವ ಪ್ರಯತ್ನದಲ್ಲಿ ಚಿತ್ರತಂಡವಿದೆ. ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಎನ್.ವಿನಾಯಕ, ಈ ಹಿಂದೆ ಹಲವು ಕಿರುಚಿತ್ರ ಮತ್ತು ಮ್ಯೂಸಿಕ್ ವೀಡಿಯೋ ಗಳ ಮೂಲಕ ಸಾಕಷ್ಟು ಗುರುತಿಸಿಕೊಂಡಿದ್ದರು. ಹಾಗೆಯೇ ಕಿರುಚಿತ್ರ ಮತ್ತು ಮ್ಯೂಸಿಕ್ ವೀಡಿಯೋಗಳಿಗಾಗಿ ಹಲವು ಪ್ರಶಸ್ತಿಗಳನ್ನೂ ಪಡೆದಿದ್ದಾರೆ.
ವೆಡ್ಡಿಂಗ್ ಫೋಟೋಗ್ರಾಫರ್ ಸುತ್ತ ಸುತ್ತುವ ಕಥಾ ಹಂದರವನ್ನು ಹೊಂದಿರುವ ಸಿನೆಮಾ, ಮನೋರಂಜನೆಯ ಜೊತೆಗೆ ಸಾಕಷ್ಟು ಹೊಸ ವಿಷಯಗಳನ್ನು ಒಳಗೊಂಡಿದ್ದು, ಪ್ರೇಕ್ಷಕರು ಸಿನೆಮಾವನ್ನು ಇಷ್ಟಪಡುತ್ತಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ.
ಹರೀಶ್ ಗೌಡ ಸಂಭಾಷಣೆ, ಮನೋಹರ್ ಜೋಷಿ ಛಾಯಾಗ್ರಹಣ, ಗುರು ಕಿರಣ್ ಸಂಗೀತ, ದೀಪು ಎಸ್ ಕುಮಾರ್ ಸಂಕಲನ ಚಿತ್ರಕ್ಕಿದೆ. ಉಳಿದಂತೆ ತಾರಾಗಣದಲ್ಲಿ ರಂಗಾಯಣ ರಘು, ವಿಜಯ್ ಚಂಡೂರ್, ರವಿ ಶಂಕರ್ ಗೌಡ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಚಂದ್ರಕಲಾ ಮೋಹನ್, ಸೂರಜ್ ಲೋಕ್ರೆ, ಹೂನ್ನವಳ್ಳಿ ಕೃಷ್ಣ, ರಮೇಶ್ ಪಂಡಿತ್, ನಾಗೇಂದ್ರ ಅರಸ್, ಮೂಗ ಸುರೇಶ್ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ.