ಸುದೀಪ್ ಹೊಸ ಚಿತ್ರಕ್ಕೆ ಮುಹೂರ್ತ: 'ಮ್ಯಾಕ್ಸ್ 2' ಅಲ್ಲ, ನಾಯಕಿಯೂ ಇಲ್ಲ!

ಸತ್ಯಜ್ಯೋತಿ ಫಿಲಂಸ್ ಸಂಸ್ಥೆಯು ವಿಷ್ಣುವರ್ಧನ್‍ ಅಭಿನಯದ ‘ಸತ್ಯಜ್ಯೋತಿ’ ಚಿತ್ರವನ್ನು ನಿರ್ಮಿಸಿತ್ತು. 39 ವರ್ಷಗಳ ಹಿಂದೆ ಈ ಚಿತ್ರ ಬಿಡುಗಡೆಯಾಗಿತ್ತು. ಇದೀಗ ಈ ಸಂಸ್ಥೆಯು ಸುದೀಪ್‍ ಚಿತ್ರ ನಿರ್ಮಿಸುವ ಮೂಲಕ ಕನ್ನಡಕ್ಕೆ ವಾಪಸ್ಸಾಗಿದೆ.;

Update: 2025-07-08 06:32 GMT

ಕಿಚ್ಚ ಸುದೀಪ್‌ 

ಕಿಚ್ಚ ಸುದೀಪ್ ಅಭಿನಯದ ಹೊಸ ಚಿತ್ರಕ್ಕೆ ಸೋಮವಾರ ಚೆನ್ನೈನಲ್ಲಿ ಅದ್ದೂರಿ ಚಾಲನೆ ದೊರೆತಿದೆ. ನಿರ್ದೇಶಕ ವಿಜಯ್ ಕಾರ್ತಿಕೇಯ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರ, ಮೊದಲು ಅಂದುಕೊಂಡಂತೆ 'ಮ್ಯಾಕ್ಸ್' ಚಿತ್ರದ ಪ್ರೀಕ್ವೆಲ್ ಅಥವಾ 'ಮ್ಯಾಕ್ಸ್ 2' ಅಲ್ಲ ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಚಿತ್ರದಲ್ಲಿ ನಾಯಕಿ ಪಾತ್ರಕ್ಕೂ ಅವಕಾಶವಿಲ್ಲ ಎಂದು ತಿಳಿದುಬಂದಿದೆ.

ಸುದೀಪ್ ಈ ಕುರಿತು ಮಾತನಾಡಿ, "ಇದು 'ಮ್ಯಾಕ್ಸ್ 2' ಅಲ್ಲ. 'ಮ್ಯಾಕ್ಸ್ 2' ಮಾಡುವ ಪ್ರಯತ್ನ ಮಾಡಿದ್ದೂ ಹೌದು, ಕಥೆಗೆ ಕೂತಿದ್ದೂ ಹೌದು. ಆದರೆ, ಕಥೆ ಮುಂದುವರೆಯುತ್ತಾ ನಾವೇ ತುಂಬಾ ಫೋರ್ಸ್ ಮಾಡಿ ಇದು 'ಮ್ಯಾಕ್ಸ್ 2' ಅಂತ ಹೇಳುತ್ತಿದ್ದೇವೆ ಎಂದನಿಸಿತು. ಏಕೆಂದರೆ, ಇದು ಬೇರೆಯದೇ ಪಾತ್ರ, ಬೇರೆಯದೇ ವ್ಯಕ್ತಿತ್ವ. 'ಮ್ಯಾಕ್ಸ್'ನ ಅರ್ಜುನ್ ಮಹಾಕ್ಷಯ್ ಪಾತ್ರಕ್ಕಿಂತ ವಿಭಿನ್ನವಾದದ್ದು. ಅಲ್ಲಿ ಆತ ಗಂಭೀರವಾಗಿದ್ದರೆ, ಈತ ಮುತ್ತತ್ತಿ ಸತ್ಯರಾಜುನಂತವನು. ಹಾಗಾಗಿ, 'ಮ್ಯಾಕ್ಸ್ 2' ಚಿತ್ರವನ್ನು ಸದ್ಯಕ್ಕೆ ಕೈಬಿಟ್ಟು, ಬೇರೆಯದೇ ಹೊಸ ಚಿತ್ರ ಮಾಡುವುದಕ್ಕೆ ಹೊರಟಿದ್ದೇವೆ" ಎಂದು ತಿಳಿಸಿದರು.

ನಾಯಕಿ ಪಾತ್ರಕ್ಕೆ ಕತ್ತರಿ ಯಾಕೆ?

'ಮ್ಯಾಕ್ಸ್' ಚಿತ್ರದಂತೆಯೇ ಈ ಹೊಸ ಚಿತ್ರದಲ್ಲೂ ಸುದೀಪ್‌ಗೆ ನಾಯಕಿ ಇರುವುದಿಲ್ಲವಂತೆ. ಈ ನಿರ್ಧಾರದ ಬಗ್ಗೆ ಸುದೀಪ್ ವಿವರಣೆ ನೀಡಿದ್ದಾರೆ: "ಚಿತ್ರದಲ್ಲಿ ಒಂದು ನಾಯಕಿ ಪಾತ್ರ ಇತ್ತು. ನನಗೂ ನಾಯಕಿಗೆ ಸಂಬಂಧವೂ ಇತ್ತು. ಒಂದು ಫ್ಲಾಶ್‌ಬ್ಯಾಕ್ ಕಥೆ ಸಹ ಇತ್ತು. ಆದರೆ, ಕಥೆಯ ಓಟಕ್ಕೆ ನಾಯಕಿ ಮತ್ತು ಆಕೆಯ ದೃಶ್ಯಗಳ ಅವಶ್ಯಕತೆ ಇದೆಯಾ? ಎಂಬ ವಿಷಯ ಚರ್ಚೆಗೆ ಬಂತು. ದೃಶ್ಯದ ಅವಶ್ಯಕತೆ ಇಲ್ಲ ಎಂದರೆ ಸಿನಿಮಾದ ಓಟ ಹೇಗಿರುತ್ತದೆ? ಆ ದೃಶ್ಯವಿಲ್ಲದಿದ್ದರೆ ಏನಾದರೂ ಸಮಸ್ಯೆಯಾಗುತ್ತದಾ? ಎಂಬ ಚರ್ಚೆಯೂ ನಡೆಯಿತು. ಚಿತ್ರೀಕರಣ ಮಾಡಿ, ನಂತರ ಎಡಿಟ್ ಮಾಡುವ ಬದಲು, ಸ್ಕ್ರಿಪ್ಟ್ ಹಂತದಲ್ಲೇ ಎಡಿಟ್ ಮಾಡಿದ್ದೇವೆ. ನಾಯಕಿ ಪಾತ್ರವನ್ನು ಸುಮ್ಮನೆ ತುರುಕಬಾರದು. ಚಿತ್ರದಲ್ಲಿ ನಾಯಕಿ ಇರಬೇಕೆಂದರೆ ಒಳ್ಳೆಯ ಪಾತ್ರ ಇರಬೇಕು. ನಾಯಕಿಯಾಗಿ ಬರುವವರು ಸಹ ಆಸೆ ಇಟ್ಟುಕೊಂಡು ಬಂದಿರುತ್ತಾರೆ. ಕೆಲವೊಮ್ಮೆ ಆ ಪಾತ್ರಕ್ಕೆ ನ್ಯಾಯ ಸಲ್ಲಿಸುವುದಕ್ಕೆ ಆಗುವುದಿಲ್ಲ. ಹಾಗಾಗಿ, ನಾಯಕಿ ಪಾತ್ರವನ್ನು ಬಿಟ್ಟಿದ್ದೇವೆ."

ಬಿಲ್ಲ ರಂಗ ಭಾಷಾ'ಕ್ಕೂ ಮೊದಲು ಈ ಚಿತ್ರ ಯಾಕೆ?

ಕೆಲವು ತಿಂಗಳ ಹಿಂದೆ ಸುದೀಪ್ ಅಭಿನಯದ ಬಹುನಿರೀಕ್ಷಿತ 'ಬಿಲ್ಲ ರಂಗ ಭಾಷಾ' ಚಿತ್ರ ಸೆಟ್ಟೇರಿತ್ತು. ಈ ಚಿತ್ರದ ಕುರಿತು ಮಾತನಾಡುವ ಸುದೀಪ್, "‘ಬಿಲ್ಲ ರಂಗ ಭಾಷಾ’ ದೊಡ್ಡ ಸಿನಿಮಾ. ತುಂಬಾ ಸೆಟ್‌ಗಳಲ್ಲಿ ಚಿತ್ರೀಕರಣ ಮಾಡುವುದಿದೆ. ಅದೊಂದು ಬೇರೆ ಪ್ರಪಂಚ. ಎಂಟು ಎಕರೆ ಪ್ರದೇಶದಲ್ಲಿ ಸೆಟ್ ನಿರ್ಮಾಣವಾಗುತ್ತಿದೆ. ಈ ವರ್ಷ ಖಂಡಿತಾ ಆ ಚಿತ್ರ ಬಿಡುಗಡೆಯಾಗುವುದಿಲ್ಲ. ಅದೊಂದು ದೊಡ್ಡ ಪ್ರಕ್ರಿಯೆ. ಅದಕ್ಕೂ ಮೊದಲು ಒಂದು ಚಿತ್ರವನ್ನು ಬೇಗ ಮುಗಿಸಬೇಕು ಎಂಬ ಯೋಚನೆ ಬಂತು. ಹಾಗಾಗಿ, ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದೇವೆ" ಎಂದರು.

ಇನ್ನೂ ಹೆಸರಿಡದ ಈ ಚಿತ್ರವನ್ನು ತಮಿಳಿನ ಜನಪ್ರಿಯ ನಿರ್ಮಾಣ ಸಂಸ್ಥೆ ಸತ್ಯಜ್ಯೋತಿ ಫಿಲಂಸ್ ನಿರ್ಮಿಸುತ್ತಿದೆ. ವಿಷ್ಣುವರ್ಧನ್ ಅಭಿನಯದ 'ಸತ್ಯಜ್ಯೋತಿ' ಚಿತ್ರವನ್ನು 39 ವರ್ಷಗಳ ಹಿಂದೆ ನಿರ್ಮಿಸಿದ್ದ ಈ ಸಂಸ್ಥೆ, ಇದೀಗ ಸುದೀಪ್ ಚಿತ್ರ ನಿರ್ಮಿಸುವ ಮೂಲಕ ಕನ್ನಡಕ್ಕೆ ಮರಳಿದೆ.

ಈ ಚಿತ್ರಕ್ಕೆ ವಿಜಯ್ ಕಾರ್ತಿಕೇಯ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಮತ್ತು ಶೇಖರ್ ಚಂದ್ರ ಛಾಯಾಗ್ರಹಣವಿದೆ.

Tags:    

Similar News