ದೀಪಿಕಾ ಬೆನ್ನಲ್ಲೇ ಸೋನಾಕ್ಷಿ: ಪತಿ ಜಹೀರ್ ಜತೆ ಮಸೀದಿ ಭೇಟಿ ವಿಡಿಯೋ ವೈರಲ್, ಹಿಜಾಬ್ ಚರ್ಚೆ ಮುನ್ನೆಲೆಗೆ
ನಟಿ ಸೋನಾಕ್ಷಿ ಸಿನ್ಹಾ ಹಾಗೂ ಆಕೆಯ ಪತಿ ಜಹೀರ್ ಇಕ್ಬಾಲ್ ಅವರು ಯುಎಇ ಪ್ರವಾಸೋದ್ಯಮ ಜಾಹೀರಾತಿಗಾಗಿ ಅಬುಧಾಬಿಯ ಪ್ರಖ್ಯಾತ ಶೇಖ್ ಜಾಯೆದ್ ಗ್ರ್ಯಾಂಡ್ ಮಸೀದಿಗೆ ಭೇಟಿ ನೀಡಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೋನಾಕ್ಷಿ ಸಿನ್ಹಾ
ನಟಿ ದೀಪಿಕಾ ಪಡುಕೋಣೆ ಅವರು ಜಾಹೀರಾತುವೊಂದರಲ್ಲಿ ಹಿಜಾಬ್ ಧರಿಸಿ ಕಾಣಿಸಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ವಿವಾದ ಸೃಷ್ಟಿಸಿದ ಬೆನ್ನಲ್ಲೇ, ಇದೀಗ ಬಾಲಿವುಡ್‌ನ 'ದಬಂಗ್' ಗರ್ಲ್ ಸೋನಾಕ್ಷಿ ಸಿನ್ಹಾ ಮತ್ತು ಅವರ ಪತಿ ಜಹೀರ್ ಇಕ್ಬಾಲ್ ಕೂಡ ಇದೇ ರೀತಿಯ ಕಾರಣಕ್ಕಾಗಿ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಯುಎಇ ಪ್ರವಾಸೋದ್ಯಮದ ಪ್ರಚಾರಕ್ಕಾಗಿ ಅಬುಧಾಬಿಯ ಪ್ರಖ್ಯಾತ ಶೇಖ್ ಜಾಯೆದ್ ಗ್ರ್ಯಾಂಡ್ ಮಸೀದಿಗೆ ಭೇಟಿ ನೀಡಿರುವ ಈ ನವದಂಪತಿಯ ವಿಡಿಯೋ, ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಹಿಜಾಬ್ ಕುರಿತ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.
ಸೋನಾಕ್ಷಿ ಸಿನ್ಹಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಸುಂದರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮಸೀದಿಯ ಭವ್ಯ ವಾಸ್ತುಶಿಲ್ಪದ ನಡುವೆ ಅವರು ಆಕರ್ಷಕವಾಗಿ ನಡೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಸೆರೆಹಿಡಿಯಲಾಗಿದೆ. "ಸ್ವಲ್ಪ ಸುಕೂನ್ (ಶಾಂತಿ) ಸಿಕ್ಕಿತು, ಇಲ್ಲಿಯೇ ಅಬುಧಾಬಿಯಲ್ಲಿ!" ಎಂದು ಬರೆದುಕೊಂಡು, ತಾವು ಅಬುಧಾಬಿ ಪ್ರವಾಸೋದ್ಯಮದ ಜಾಹೀರಾತಿನ ಭಾಗವಾಗಿದ್ದೇವೆಂದು ಸ್ಪಷ್ಟಪಡಿಸಿದ್ದಾರೆ.
ಮಸೀದಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸೋನಾಕ್ಷಿ ಮತ್ತು ಜಹೀರ್ ಇಬ್ಬರೂ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸುತ್ತಿದ್ದರು. ಸೋನಾಕ್ಷಿ ಅವರು ಹಸಿರು ಮತ್ತು ಬಿಳಿ ಬಣ್ಣದ ಪ್ರಿಂಟೆಡ್ ಕುರ್ತಾ-ಪೈಜಾಮ ಧರಿಸಿ, ಮಸೀದಿಯ ಪಾವಿತ್ರ್ಯತೆಗೆ ಗೌರವ ಸೂಚಿಸುವ ಸಲುವಾಗಿ ಹಸಿರು ದುಪಟ್ಟಾದಿಂದ ತಮ್ಮ ತಲೆಯನ್ನು ಮುಚ್ಚಿಕೊಂಡಿದ್ದರು. ಪತಿ ಜಹೀರ್ ಇಕ್ಬಾಲ್ ಅವರು ಕಪ್ಪು ಶರ್ಟ್ ಮತ್ತು ಹಸಿರು ಪ್ಯಾಂಟ್‌ನಲ್ಲಿ ಸರಳವಾಗಿ ಕಾಣಿಸಿಕೊಂಡು ಪತ್ನಿಗೆ ಸಾಥ್ ನೀಡಿದ್ದರು.
ದೀಪಿಕಾ ಟ್ರೋಲ್
ಕೆಲವೇ ದಿನಗಳ ಹಿಂದೆ ನಟಿ ದೀಪಿಕಾ ಪಡುಕೋಣೆ ಅವರು ಇದೇ ಮಸೀದಿಗೆ ಭೇಟಿ ನೀಡಿದ್ದ ಪ್ರವಾಸೋದ್ಯಮ ಜಾಹೀರಾತಿನಲ್ಲಿ ಹಿಜಾಬ್ ಧರಿಸಿದ್ದಕ್ಕಾಗಿ ತೀವ್ರ ಟ್ರೋಲ್‌ಗೆ ಗುರಿಯಾಗಿದ್ದರು. ಆ ವಿವಾದ ಮಾಸುವ ಮುನ್ನವೇ ಸೋನಾಕ್ಷಿಯವರ ಈ ಪೋಸ್ಟ್ ಹೊರಬಿದ್ದಿರುವುದು ನೆಟ್ಟಿಗರಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಸೋನಾಕ್ಷಿಯ ಪೋಸ್ಟ್‌ಗೆ ಪರ-ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. "ಸೋನಾಕ್ಷಿಗೆ ಇದು ಸಾಮಾನ್ಯ, ಆದರೆ ದೀಪಿಕಾಗೆ ಯಾಕಲ್ಲ? ಇಬ್ಬರೂ ತಮ್ಮ ಪತಿಯೊಂದಿಗೆ ಅದ್ಭುತವಾಗಿ ಕಾಣುತ್ತಿದ್ದರು. ದಯವಿಟ್ಟು ಜನರನ್ನು ಟ್ರೋಲ್ ಮಾಡುವುದನ್ನು ನಿಲ್ಲಿಸಿ," ಎಂದು ಒಬ್ಬ ಅಭಿಮಾನಿ ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ. "ದೇವಾಲಯವೇ ಇರಲಿ, ಮಸೀದಿಯೇ ಇರಲಿ, ಅಲ್ಲಿ ತಲೆಯನ್ನು ಮುಚ್ಚಿಕೊಳ್ಳುವುದು ಆಧ್ಯಾತ್ಮಿಕ ಗೌರವದ ಸಂಕೇತ," ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಕಳೆದ ವರ್ಷ ಜೂನ್ 23 ರಂದು ಮುಂಬೈನಲ್ಲಿ ಸರಳವಾಗಿ ವಿವಾಹವಾಗಿದ್ದರು. ತಮ್ಮ ಏಳು ವರ್ಷಗಳ ಪ್ರೀತಿಯನ್ನು ವಿವಾಹದ ಮೂಲಕ ಅಧಿಕೃತಗೊಳಿಸಿದ್ದರು. ಸಿನಿರಂಗದಲ್ಲಿ, ಸೋನಾಕ್ಷಿ ಇತ್ತೀಚೆಗೆ 'ನಿಕಿತಾ ರಾಯ್' ಎಂಬ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಮುಂದಿನ ದಿನಗಳಲ್ಲಿ ಅವರು ನಟ ಸುಧೀರ್ ಬಾಬು ಜೊತೆಗಿನ ತೆಲುಗು ಚಿತ್ರ 'ಜಟಾಧಾರ'ದಲ್ಲಿ ನಟಿಸಲಿದ್ದು, ಈ ಸಿನಿಮಾ ನವೆಂಬರ್ 7 ರಂದು ತೆರೆಗೆ ಬರಲಿದೆ.