ಭಿನ್ನಮತ, ಸ್ವಾತಂತ್ರ್ಯ ಮತ್ತು ಸೃಜನಶೀಲತೆಯ ರೂಪಕ-ಸ್ನೇಹಲತಾ ರೆಡ್ಡಿ

ನಟಿ ಮತ್ತು ರಾಜಕೀಯ ಕಾರ್ಯಕರ್ತೆಯಾಗಿರುವ ಸ್ನೇಹಲತಾ ರೆಡ್ಡಿ ಅವರು ಫೆಬ್ರವರಿ 13 ರಂದು ಜನಿಸಿದರು ಮತ್ತು ತುರ್ತು ಪರಿಸ್ಥಿತಿಯ ಸಮಯದಲ್ಲಿ ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಕಳೆದರು. ಅವಳ ಮೊಮ್ಮಗಳು ಸಮಾಜವಾದ, ನ್ಯಾಯ, ಸತ್ಯ ಮತ್ತು ಸ್ವಾತಂತ್ರ್ಯಕ್ಕಾಗಿ ಅವಳ ಬಲವಾದ ಉತ್ಸಾಹವನ್ನು ನೆನಪಿಸಿಕೊಳ್ಳುತ್ತಾರೆ.;

Update: 2024-02-15 13:04 GMT
ಸ್ನೇಹಲತಾ ರೆಡ್ಡಿ

ʻನಾನು ಅಜ್ಜಿ ಮೃತಪಟ್ಟ 16 ವರ್ಷಗಳ ನಂತರ ಜನಿಸಿದ್ದರಿಂದ, ಅವಳ ಭೇಟಿ ಸಾಧ್ಯವಾಗಲಿಲ್ಲ.ನನಗೆ ತಿಳಿದಿರುವ ಸಣ್ಣ ವಿವರಗಳೊಂದಿಗೆ ಅವಳ ಬಗ್ಗೆ ಕನಸು ಕಾಣುತ್ತಿದ್ದೆ. ಗುಲಾಬಿ ಬಣ್ಣದ ಶಿಫಾನ್‌ ಸೀರೆ ಧರಿಸುತ್ತಿದ್ದಳು ಮತ್ತು ಕಣ್ಣಿನ ವ್ಯಾಯಾಮ ಮಾಡುತ್ತಿದ್ದಳು; ಕಪ್ಪು ಸ್ಯಾಟಿನ್‌ ಅಥವಾ ವೆಲ್ವೆಟ್‌ ಇರಬಹುದೇನೋ. ಯಾರಿಗಾದರೂ ಚಹಾ ನೀಡಿದಾಗ ಮತ್ತು ಬಂದವರು ಶೌಚದ ಕೊಠಡಿ ಎಲ್ಲಿದೆ ಎಂದು ಕೇಳಲು ಸಂಕೋಚಪಟ್ಟುಕೊಳ್ಳಬಹುದು ಎಂದು ಆಕೆಯೇ ತೋರಿಸುತ್ತಿದ್ದಳು. ಕಿರಾಣಿ ಪದಾರ್ಥಗಳು, ಸೂಪ್ ಸೇರಿದಂತೆ ರೆಸಿಪಿಗಳ ಪಟ್ಟಿಯನ್ನು ಇಟ್ಟುಕೊಂಡಿದ್ದಳು ಎನ್ನುವುದು ನನಗೆ ಗೊತ್ತಿತ್ತು.ಅದೇ ಡೈರಿಯಲ್ಲಿ ಆಕೆಯ ಮಗ, ಅಂದರೆ, ನನ್ನ ತಂದೆ ಬಗ್ಗೆ ಕತೆಗಳನ್ನು ಬರೆದಿಟ್ಟುಕೊಂಡಿದ್ದಾಳೆ ಎನ್ನುವುದೂ ಗೊತ್ತಿದೆ. ಅದರಲ್ಲಿ ಒಂದು ಈ ರೀತಿ ಇದೆ; ʻನಾನು ಸಮುದ್ರದ ಹಾವುಗಳ ರಾಜನಾಗಿದ್ದೆ. ಮತ್ತು ನನ್ನ ಪ್ರೀತಿಯು ಅಲೆಗಳ ರೂಪದಲ್ಲಿತ್ತುʼ. ಆಕೆ ಮದ್ರಾಸಿನ ಮರೀನಾ ಬೀಚ್‌ನಲ್ಲಿ ನನ್ನ ಅಜ್ಜನನ್ನು ನೋಡಿ, ಪರಸ್ಪರ ಪ್ರೀತಿಸಲಾರಂಭಿಸಿದರು; ಸ್ಪೇನ್‌ನಲ್ಲಿ ಒಂದು ವರ್ಷ ಮಧುಚಂದ್ರ ವಿಹಾರ ನಡೆಸಿದರು. ಕ್ಯಾರವಾನ್‌ ಬಾಡಿಗೆ ಪಡೆದು ಸೆವಿಲ್‌ನಿಂದ ಗ್ರನಡಾಕ್ಕೆ ಪ್ರಯಾಣ ಮಾಡಿದರು. ಕಲೆ, ಸಂಭಾಷಣೆ ಮತ್ತು ಸೃಷ್ಟಿಗೆ ಸಂಬಂಧಿಸಿದ ಕಲ್ಪನೆಗಳು ಆಕೆಯನ್ನು ಪ್ರೇರೇಪಿಸುತ್ತಿದ್ದವು ಎನ್ನುವುದು ನನಗೆ ಗೊತ್ತಿದೆ.


ಈ ನೆನಪುಗಳ ನೆರವಿನಿಂದ ಅವಳನ್ನು ಕಲ್ಪಿಸಿಕೊಳ್ಳುತ್ತ ನಾನು ಬೆಳೆದೆ; ಅದೃಷ್ಟವೆಂದರೆ, ನಾನು ಹುಟ್ಟಿದ ಮನೆಯಲ್ಲೇ ಈ ಎಲ್ಲವೂ ಸಂಭವಿಸಿತ್ತು. ಅದೇ ಮನೆಯಲ್ಲಿ ತೆಲುಗು ಕವಿಯನ್ನು ನಾನು ಮದುವೆಯಾಗಬಹುದೇ ಎಂದು ತಂದೆಯನ್ನು ಅಂದರೆ, ನನ್ನ ಅಜ್ಜ ಪಟ್ಟಾಭಿರಾಮ ರೆಡ್ಡಿ ಅವರನ್ನು ಕೇಳಿದಳು; ಅದೇ ಮನೆಯ ಹಜಾರದಲ್ಲಿ ರಾಮ ಮನೋಹರ್‌ ಲೋಹಿಯಾ (1910-1967) ಕುರ್ಚಿಯಲ್ಲಿ ಕುಳಿತುಕೊಂಡಿದ್ದರು. ಟೆಲಿಗ್ರಾಂ ಬಂದಿದೆ ಎಂಬ ನಕಲಿ ಟೆಲಿಫೋನ್‌ ಕರೆಗೆ ಉತ್ತರಿಸಿದರು ಎಂಬ ನೆಪದಲ್ಲಿ ಹಾಗೂ ಮುಂದಿನ ಬಿಳಿಯ ಬಾಗಿಲನ್ನು ತೆರೆದ ತಂದೆಯನ್ನು ಬಂಧಿಸಿದ್ದು ಕೂಡ ಇದೇ ಮನೆಯಲ್ಲಿ. ಇದೇ ಮನೆಯಲ್ಲಿ ಜಾರ್ಜ್ ಫರ್ನಾಂಡಿಸ್ (1930-2019) ಅವರು ಮೆಟ್ಟಿಲುಗಳ ಕೆಳಗಿನ ಸಣ್ಣ ಕೋಣೆಯಲ್ಲಿ ಅಡಗಿಕೊಂಡಿದ್ದರು ಮತ್ತು ಇದಕ್ಕೆ ಮುನ್ನ ʻಚಂಡಮಾರುತʼ ಚಿತ್ರದ ಚಿತ್ರೀಕರಿಸುವ ಸಂದರ್ಭದಲ್ಲಿ ನಟ ಅಶೋಕ್ ಮಂದಣ್ಣ ಇದೇ ಕೋಣೆಯಲ್ಲಿ ಆಶ್ರಯ ಪಡೆದಿದ್ದರು: ಜೀವನ ಎನ್ನುವುದು ಕಲೆಯನ್ನು ಅನುಕರಿಸುತ್ತದೆ.

ಆದರೆ, ಅವರ ಬಗ್ಗೆ ಮಾತನಾಡುವುದು ನನಗೆ ಯಾವಾಗಲೂ ಕಷ್ಟಕರ. ಶಾಲೆಯಲ್ಲಿ ಒಮ್ಮೆ ರಾಜ್ಯಶಾಸ್ತ್ರದ ಶಿಕ್ಷಕರೊಬ್ಬರು ತುರ್ತುಪರಿಸ್ಥಿತಿ ಸಂದರ್ಭದಲ್ಲಿ ನನ್ನ ಅಜ್ಜಿಯ ಬಂಧನ, ಸೆರೆವಾಸದ ಬಗ್ಗೆ ಮಾತನಾಡಲು ವಿನಂತಿಸಿದರು. ಆದರೆ, ನನಗೆ ಆಕೆಯ ಸೆರೆವಾಸದ ಬಗ್ಗೆ ವಾಸ್ತವ ಸಂಗತಿಗಳು ತಿಳಿದಿಲ್ಲ; ಆದರೆ, ಆಕೆ ಬಿಟ್ಟುಹೋದ ನೆನಪುಗಳಿಂದ ಬದುಕು ಕಟ್ಟಿಕೊಳ್ಳಲು ನಾನು ಹೆಣಗಾಡುತ್ತಿದ್ದೇನೆ-ಆಕೆ ನಮಗೆ ಬಿಟ್ಟು ಹೋಗಿರುವುದೇನೆಂದರೆ, ಡೈರಿಗಳು, ಬೀಸಣಿಗೆಗಳು, ಲೇಸ್ ಪರದೆಗಳು ಮತ್ತು ಮುಂಭಾಗದ ಗೇಟ್‌ನಲ್ಲಿ ತೂಗಾಡುವ ಗುಲಾಬಿ ಬಣ್ಣದ ಬಳ್ಳಿ.

ಆಂದೋಲನವೊಂದು ಗರಿಗಟ್ಟಿಕೊಳ್ಳಲು ಆಲೋಚನೆಗಳು ಮತ್ತು ಕನಸುಗಳನ್ನು ಮುಕ್ತವಾಗಿ ಸಂವಹನಗೊಳ್ಳಲು ಒಂದು ಭೌತಿಕ ಸ್ಥಳ ಬೇಕಾಗುತ್ತದೆ. ಧಾನ್ಯ ಅಥವಾ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಕಟ್ಟಿದ್ದ ಗೋದಾಮು ಮನೆಯಾಗಿ ಬದಲಾಯಿತು. ನನ್ನ ಅಜ್ಜಿ ಆ ಮನೆಯಲ್ಲಿ ವಾಸಿಸಲು ಆರಂಭಿಸಿದ ಬಳಿಕ ಅದು ಚರ್ಚೆಗಳು, ಹೊಸ ಆಲೋಚನೆಗಳು, ರಾಜಕೀಯ, ರಂಗಭೂಮಿ, ಸಂಗೀತ, ಕವಿತೆ ಮತ್ತು ಚಲನಚಿತ್ರಗಳಿಗೆ ಮುಕ್ತವಾಗಿ ತೆರೆದುಕೊಂಡಿತು. 2013 ರಲ್ಲಿ ನಾನು ಮತ್ತು ನನ್ನ ಹೆತ್ತವರನ್ನು ಈ ಮನೆಯಿಂದ ಖಾಲಿ ಮಾಡಿಸುವವರೆಗೆ ಮುಂಬಾಗಿಲು ದಾಟಿದ ಪ್ರತಿಯೊಬ್ಬರ ಹೆಸರು ದಾಖಲಿಸಿದ್ದೇವೆ - ಮಧು ಲಿಮಯೆ, ಜಾರ್ಜ್ ಫರ್ನಾಂಡಿಸ್, ಮೃಣಾಲ್ ಸೇನ್, ಪಿ.ಲಂಕೇಶ್ , ಯು.ಆ‌ರ್.‌ ಅನಂತಮೂರ್ತಿ, ಪೀಟರ್ ಕೋ, ಲಕ್ಷ್ಮಿ ಕೃಷ್ಣಮೂರ್ತಿ, ಬರ್ನಿಸ್ ರೂಬೆನ್ಸ್, ರಾಮಕೃಷ್ಣ ಹೆಗ್ಡೆ, ಜೆ.ಎಚ್. ಪಟೇಲ್, ಅಲೆಕ್ಸಾಂ ಡರ್ ಜೋಡೊರೊಯಿಸ್ಕಿ, ರಾಜಕಾರಣಿಗಳು, ಕಲಾವಿದರು, ಪತ್ರಕರ್ತರು, ಬಹುಶಃ ನೀವೂ ಸೇರಿದಂತೆ ಒಬ್ಬಿಬ್ಬರಲ್ಲ. ಆ ಸಮಯ ಹೇಗಿತ್ತು ಎಂದು ತಂದೆಯನ್ನು ಕೇಳಿದಾಗ ಅವರು ಹೇಳಿದರು- ಚರ್ಚೆ, ಸಂವಾದ, ಭಿನ್ನ ಅಭಿಪ್ರಾಯದ ಒಡ್ಡೋಲಗದಂತೆ ಇತ್ತು.

ಭಿನ್ನಾಭಿಪ್ರಾಯ. ʻಸ್ವಾತಂತ್ರ್ಯ ಎನ್ನುವುದು ಭಿನ್ನಾಭಿಪ್ರಾಯ ಹೊಂದಿರುವವರ ಸ್ವಾತಂತ್ರ್ಯʼ ಎಂದು ರೋಸಾ ಲಕ್ಸೆಂಬರ್ಗ್ ಹೇಳಿದ್ದರು. ಅಜ್ಜಿ ಅಧಿಕಾರಕ್ಕೆ ಸತ್ಯವನ್ನು ಹೇಳಿದಳು ಎಂದರೆ ಅದರರ್ಥ-ಅವರು ತಮ್ಮ ಜೀವನದ ಎಲ್ಲಾ ಅಂಶಗಳಲ್ಲಿ ಇದನ್ನು ಅಳವಡಿಸಿಕೊಂಡಿಸಿ ದ್ದರು. ಜಾಯ್ಸ್‌ ಪೆಟ್ರಿಷಿಯಾ ಪೊವೆಲ್‌ ಎಂಬ ಜನ್ಮನಾಮದಿಂದ ಜನಿಸಿದ ಅವರು, ವಸಾಹತುಶಾಹಿಯನ್ನು ವಿರೋಧಿಸಿ, ಸ್ನೇಹಲತಾ ರೆಡ್ಡಿ ಎಂಬ ಹೆಸರು ಇರಿಸಿಕೊಂಡರು. ಅವರು ಬಹುಸಂಖ್ಯಾತರನ್ನು ಒಲಿಸಿಕೊಳ್ಳಲು ಪ್ರಯತ್ನಿಸಲಿಲ್ಲ; ಬದಲಾಗಿ, ನ್ಯಾಯ, ಸತ್ಯದ ಮಾರ್ಗ ಹಿಡಿದರು. ಆಕೆಯದು ಆತ್ಯಂತಿಕ ಭಿನ್ನಾಭಿಪ್ರಾಯ. ಬದುಕು ಮತ್ತು ಸಾವಿನ ಭಿನ್ನಮತ.

ಸ್ನೇಹಲತಾ ರೆಡ್ಡಿ ಅವರು 1925 ರಲ್ಲಿ ಏಡನ್‌ನಲ್ಲಿ ಜನಿಸಿದರು. ಸೇನೆಗೆ ಆಹಾರ ಪೂರೈಸುತ್ತಿದ್ದ ತಮಿಳು ಕ್ರಿಶ್ಚಿಯನ್ ಹಾಗೂ ಬಂಗಾಳಿ/ಕಾಶ್ಮೀರಿ ದಂಪತಿಯ ಪುತ್ರಿ. ಆಕೆಯ ಐವರು ಸಹೋದರರಲ್ಲಿ ಇಬ್ಬರು ಚಿಕ್ಕ ವಯಸ್ಸಿನಲ್ಲೇ ನಿಧನರಾದರು. ಅವರಿಗೆ ನೃತ್ಯ, ನಟನೆಯಲ್ಲಿ ಆಸಕ್ತಿಯಿತ್ತು. 1960 ರ ದಶಕದಲ್ಲಿ ಮದ್ರಾಸ್ ಪ್ಲೇಯರ್ಸ್ ಅನ್ನು ಸ್ಥಾಪಿಸಿದರು ಮತ್ತು ಪ್ರಖ್ಯಾತ ನಟ ಪಿಯರೆ ಗಿಂಟ್ ಅವರಿಂದ ಪ್ರದರ್ಶನ ಏರ್ಪಡಿಸಿದರು. ಪಟ್ಟಾಭಿರಾಮ ರೆಡ್ಡಿ ನಿರ್ದೇಶನದ ಸಂಸ್ಕಾರ (1970) ಚಿತ್ರದಲ್ಲಿ ಫ್ರಶ್ನಿಸುವ ಮನೋಭಾವ, ಅನುಭೂತಿ ಹಾಗೂ ಬಲಿಷ್ಟ ಚೈತನ್ಯವಿದ್ದ ಚಂದ್ರಿಯ ಪಾತ್ರವನ್ನು ನಿರ್ವಹಿಸಿದರು.

ನನ್ನ ಬಳಿ ಆಕೆಯ ಜೀವನವನ್ನು ಹಂಚಿಕೊಳ್ಳಲು ಕೆಲವು ತುಣುಕುಗಳಿವೆ. ಅದನ್ನು ನಾನು ಗೆದ್ದಲುಗಳಿಂದ ಉಳಿಸಿದ್ದೇನೆ. ಬೆರಳಚ್ಚಿನ ಮತ್ತು ಬಣ್ಣ ಕಳೆದುಕೊಂಡ ಕಾಗದದಲ್ಲಿ ಸಮಾಜವಾದಿ ನಾಯಕ ಮಧು ಲಿಮಯೆ ಅವರು ಸಲ್ಲಿಸಿದ ಗೌರವ ಇಂತಿದೆ- ಫೈಲ್ ಇನ್‌ ಮಿಸ್‌ ರೆಡ್ಡಿ-ಪರ್ಸನಲ್;‌ ʻಸ್ನೇಹಾ ಒಬ್ಬ ಕಲಾವಿದೆ. ಸಹಾನುಭೂತಿಯ ಜೀವ. ಇದರಿಂದ ಬಡವರು ಮತ್ತು ತುಳಿತಕ್ಕೊಳಗಾದವರ ಬಗ್ಗೆ ಸಹಾನುಭೂತಿ ಹೊಂದಲು ಸಾಧ್ಯವಾಯಿತು. ಆಕೆ ಅನ್ಯಾಯಕರ ಮತ್ತು ಅಸಮಾನ ಸಮಾಜದಲ್ಲಿ ಅನುಭವಿಸುವ ನೋವುಗಳು ಮತ್ತು ಅವಮಾನಗಳ ಬಗ್ಗೆ ಆಳವಾದ ತಿಳಿವಳಿಕೆಯನ್ನು ಹೊಂದಿದ್ದಳು. ಬಡವರ ಜೀವನವನ್ನು ಸುಧಾರಿಸಲು ಬಯಸುವ ಅವಳ ಆಶಯಕ್ಕೆ ರಾಮಮನೋಹರ್‌ ಲೋಹಿಯ ಮತ್ತು ನಮ್ಮೆಲ್ಲರ ಜತೆಗಿನ ಸಂಬಂಧ ಆಧಾರʼ.

ಲೋಹಿಯಾ ಅವರ ಬಗ್ಗೆ ನನಗೆ ಕೆಲವು ವಿಷಯ ತಿಳಿದಿದೆ. ನನ್ನ ತಂದೆ ಕೋನಾರ್ಕ್‌ ಮನೋಹರ ರೆಡ್ಡಿ ಅವರ ಹೆಸರನ್ನು ಲೋಹಿಯಾರ ಹೆಸರನ್ನು ಆಧರಿಸಿ ಇಡಲಾಗಿದೆ. ಲೋಹಿಯಾ ದಯಾಪರ ಮತ್ತು ಸೌಮ್ಯ ವ್ಯಕ್ತಿ. ಒಮ್ಮೆ ಅವರು ಮದರಾಸಿನಲ್ಲಿ ಭಾಷಣ ಮಾಡುತ್ತಿದ್ದಾಗ ಜನ ಕಲ್ಲು ಎಸೆದಾಗ, ತಂದೆ ಮತ್ತು ತಾತ ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗಬೇಕಾಯಿತು. ನನ್ನ ಅಜ್ಜಿ ಲೋಹಿಯಾರನ್ನು ಮತ್ತು ಅವರ ಆದರ್ಶಗಳನ್ನು ಬಹಳವಾಗಿ ಮೆಚ್ಚುತ್ತಾರೆ. ಆಕೆ ಸಮಾಜವಾದಿಯಾಗಿದ್ದಳು. ದಿನಚರಿಯಿಂದ ಆಕೆಯ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದು, ಆಕೆ ಹಲವು ಆಸಕ್ತಿಯುಳ್ಳ ವ್ಯಕ್ತಿಯಾಗಿದ್ದಳು. ಆಕೆ ಬರೆಯುತ್ತಾಳೆ: ʻಸ್ವಾತಂತ್ರ್ಯ, ವಿಕೇಂದ್ರೀಕರಣ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ವ್ಯವಹಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ನಾಗರಿಕರ ಜವಾಬ್ದಾರಿ ಸಮಾಜವಾದದ ಅಡಿಪಾಯʼ. ತುರ್ತು ಪರಿಸ್ಥಿತಿ ಬಗ್ಗೆ ಅವರು ಬರೆಯುತ್ತಾರೆ, ʻಭಾರತವು ಸಹಿಷ್ಣುತೆ ಮತ್ತು ನಾಗರಿಕ ಸ್ವಾತಂತ್ರ್ಯದ ಹಳೆಯ ಸಂಪ್ರದಾಯಗಳನ್ನು ಆನುವಂಶಿಕವಾಗಿ ಪಡೆದಿದೆ. ಪೊಲೀಸ್ ಅಥವಾ ನಿರಂಕುಶ ಆಡಳಿತದ ಸಂಪ್ರದಾಯ ನಮಗೆ ಪರಕೀಯವಾದುದು. ಮಾನವ ಹಕ್ಕುಗಳ ನಿರಂತರ ಉಲ್ಲಂಘನೆ ನಮ್ಮ ಸಾಮಾಜಿಕ ಮತ್ತು ನೈತಿಕ ಜೀವನವನ್ನು ನಾಶಪಡಿಸಿದೆ. ಇದು ನಮ್ಮ ಸ್ವಭಾವಕ್ಕೆ ವಿರುದ್ಧವಾದುದು".

ತನ್ನ ಸೆರೆಮನೆ ದಿನಚರಿಯಲ್ಲಿ ಅಜ್ಜಿ ಬರೆಯುತ್ತಾರೆ: ʻಆತ್ಮದ ಕರಾಳ ರಾತ್ರಿಯಲ್ಲಿ, ಅದು ಪ್ರತಿದಿನ ಬೆಳಗಿನ ಜಾವ 3 ಗಂಟೆಗೆ ಆಗುತ್ತದೆ. ನಾನು ನಿಜವಾಗಿಯೂ ಸಾಯಲು ಬಯಸಿದ ಸಮಯವಿದುʼ. ಅವರು ಎ ವರ್ಗದ ಮೀಸಾ ಹಕ್ಕುಗಳಿರುವ ರಾಜಕೀಯ ಖೈದಿಯಾಗಿದ್ದರು. ಆದರೆ, ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಸೌಲಭ್ಯಗಳ ಕೊರತೆಯಿಂದಾಗಿ, ಅವರನ್ನು ಸಿ ವರ್ಗದ ಕೈದಿಗಳೊಂದಿಗೆ ಇರಿಸಲಾಯಿತು.. ಮಹಿಳಾ ಕೈದಿಗಳಿಗೆ ಇಡೀ ದಿನ ಅಕ್ಕಿಯನ್ನು ಸ್ವಚ್ಛಗೊಳಿಸಲು ಸೂಚಿಸಲಾಗುತ್ತಿತ್ತು; ಜೈಲುವಾಸದ ಈ ಅಂಶ ದೀರ್ಘಾವಧಿಯ ಅಸ್ತಮಾಕ್ಕೆ ಕಾಣಿಕೆ ನೀಡಿದೆ. ಯಾವುದೇ ಮನರಂಜನೆ, ಹೊರಾಂಗಣ ಚಟುವಟಿಕೆಗಳು ಅಥವಾ ಯಾವುದೇ ಸೌಕರ್ಯಗಳು ಇರಲಿಲ್ಲʼ.

ಕುಟುಂಬದವರ ಒತ್ತಾಯದ ಮೇರೆಗೆ ಆಕೆಗೆ ಶೌಚಕ್ಕೆ ರಂಧ್ರವಿರುವ ಕಪ್ಪು ಮೂಲೆಯೊಂದನ್ನು ನೀಡಿದರು; ಅದು ಏಕಾಂತ ಬಂಧನ. ಅಕ್ಕಪಕ್ಕದ ಪುರುಷ ರಾಜಕೀಯ ಕೈದಿಗಳು ವಾಲಿಬಾಲ್ ಆಡುತ್ತಿದ್ದಾಗ ಮತ್ತು ತಮ್ಮ ಜೀವನವನ್ನು ಯೋಜಿಸುತ್ತಿರುವಾಗ, ಅಜ್ಜಿ ಆಗಾಗ ಕುಸಿದು ಬೀಳುತ್ತಿದ್ದಳು. ಆಕೆಗೆ ಅಸ್ತಮಾ ಕಾಡಿದಾಗ, ಮುಂಭಾಗದ ಗೇಟಿನ ಸಿಬ್ಬಂದಿಯನ್ನು ಕರೆಯಲು ಮತ್ತು ಅವರು ವೈದ್ಯರನ್ನು ಕರೆತರಲು ಒಂದು ಗಂಟೆ ಬೇಕಾಗುತ್ತಿತ್ತು. ಇದು ಮಹಿಳಾ ಆಂದೋಲನವೇ? ಆದರೆ, ಮಹಿಳೆಯರು ಮುಂದೆ ಚಲಿಸಲು ಯಾರೂ ಸಿದ್ಧರಿರಲಿಲ್ಲ.

ಅವಳಿಗೆ ತೀವ್ರ ಆಸ್ತಮಾ ಇತ್ತು ಹಾಗೂ ಪ್ರತಿದಿನ ಇನ್ಹೇಲರ್‌ ಹಾಗೂ ಅಲರ್ಜಿಗೆ ಆಂಟಿಹಿಸ್ಟಮೈನ್‌ಗಳನ್ನು ತೆಗೆದುಕೊಳ್ಳಬೇಕಿತ್ತು. ಇದರಿಂದ ಅವಳ ಆರೋಗ್ಯ ದುರ್ಬಲಗೊಂಡಿತು. ಸೆಲ್‌ನಲ್ಲಿ ಗಾಳಿ ಸಂಚಾರ ಅಥವಾ ಬಿಸಿಯೂಟ ಇರಲಿಲ್ಲ; ತೇವ ಮತ್ತು ತಂಪಾಗಿತ್ತು ಎಂದು ಅವರು ಬರೆಯುತ್ತಾರೆ. ಇದರಿಂದ ಆಕೆಯ ಆರೋಗ್ಯ ಹದಗೆಟ್ಟಿತು. ಡಿಸೆಂಬರ್ 6, 1976 ರಂದು ಬರೆದಿದ್ದಾರೆ: ʻಬೆಳಗಿನ ವೇಳೆ ಬೇಕೆಂ ದೇ ಬಂಧನದಲ್ಲಿ ಇರಿಸಲಾಗುತ್ತಿದೆ. ಅಸ್ತಮಾ ಕಾಡಿದಾಗ ಸಹಾಯ ಮಾಡುವುದನ್ನು ತಪ್ಪಿಸಲು ವಾರ್ಡನ್‌ಗಳು ಉದ್ದೇಶಪೂರ್ವಕವಾಗಿ ಕಚೇರಿಗೆ ಬೀಗ ಹಾಕಿರುತ್ತಾರೆ. ಅಗತ್ಯ ಔಷಧಗಳನ್ನು ಖರೀದಿಸುವುದಿಲ್ಲ ಅಥವಾ ಕೊಡುವುದಿಲ್ಲ. ಕೊಲ್ಲುತ್ತಿದ್ದೇವೆ ಎಂದು ಏಕೆ ಬಹಿರಂಗವಾಗಿ ಹೇಳಬಾರದು? ಇಡೀ ವ್ಯವಸ್ಥೆ ಭ್ರಷ್ಟವಾಗಿದೆ; ಭಯಾನಕ ಮತ್ತು ದುಷ್ಟವಾಗಿದೆ. ಮೀಸಾ ನಿಯಮಗಳ ಅರಿವಿಲ್ಲದೆ

ನನ್ನನ್ನು ಒಂಟಿಯಾಗಿ ಇರಿಸಲಾಗಿದೆ- ಮಾನವ ಸಂಪರ್ಕವಿಲ್ಲ, ತಾಜಾ ಗಾಳಿಯಿಲ್ಲ. ಆರೋಗ್ಯ, ಆಹಾರ, ಶುಚಿತ್ವವನ್ನು ನಿರ್ಲಕ್ಷಿಸಲಾಗಿದೆ. ಮನಸ್ಸಿಗೆ ಸಾವಿರ ಕಣ್ಣುಗಳಿವೆ. ಆದರೆ, ಹೃದಯ ಮಾತ್ರ ಒಂದೇ. ಆದರೆ, ಇಡೀ ಪ್ರಪಂಚದ ಬೆಳಕಿನಲ್ಲಿ ತಪ್ಪು ಏಕೆ ಜಯಿಸುತ್ತದೆ?ʼ ಅಸ್ತಮಾ ಆಕೆಯನ್ನು ಜೈಲಿನಲ್ಲಿ ಕೊಂದಿತು. ಬಿಡುಗಡೆಗಿಂತ ಮೊದಲೇ ಸಾವಿನ ಬಗ್ಗೆ ತಿಳಿದಿದ್ದಳು. ಆದರೆ, ಆಕೆ ಮೇಲೆ ಯಾವುದೇ ನಿರ್ದಿಷ್ಟ ಆರೋಪ ಹೊರಿಸಲಿಲ್ಲ; ಯಾವುದೇ ಪ್ರಶ್ನೆಗಳನ್ನು ಕೇಳಲಿಲ್ಲ.

ಹೀಗಿದ್ದರೂ, ಜೈಲಿನಲ್ಲಿದ್ದ ಕೈದಿಗಳು, ಲೈಂಗಿಕ ಕಾರ್ಯ ಅಥವಾ ಕೊಲೆ ಆರೋಪ ಹೊತ್ತು ಸೆರೆಯಾದವರ ಹಕ್ಕುಗಳಿಗಾಗಿ ಹೋರಾಡಿದರು. ಸೆರೆಯಾಳುಗಳಿಗೆ ಉತ್ತಮ ಆಹಾರ, ನೀರು ಮತ್ತು ಶುಚಿತ್ವಕ್ಕಾಗಿ ಹೋರಾಡಿದರು. ಅವರು ಬರೆಯುತ್ತಾರೆ-ʼಆತ್ಮಹತ್ಯೆಗೆ ಯತ್ನಿಸಿದ ಕ್ಯಾಬರೆ ನರ್ತಕಿಯನ್ನು 15 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆದರೆ, ಆಕೆಯನ್ನು ಏಕೆ ಜೈಲಿಗೆ ಕಳುಹಿಸಿದ್ದಾರೆ? ಅವಳನ್ನು ನರ್ಸಿಂಗ್ ಹೋಂಗೆ ಕಳುಹಿಸಬೇಕಿತ್ತು. ಅಲ್ಲಿ ಆಕೆ ಚಿಕಿತ್ಸೆ ಪಡೆಯಬಹುದು; ಜೈಲಿನಲ್ಲಿಲ್ಲ; ಆಕೆ ಸಾಕಷ್ಟು ಅನುಭವಿಸಿದ್ದು,ಅವಳನ್ನು ಈ ರೀತಿ ನೋಡಿಕೊಳ್ಳಬಾರದುʼ.

ಜೈಲಿನಲ್ಲಿದ್ದ ಸಮಯದಲ್ಲಿ ಕಾಂಗ್ರೆಸ್ ಸಂಸದರಾಗಿದ್ದ ಕುಟುಂಬದ ಸ್ನೇಹಿತ ಮುರಾರಿ, ʻಕ್ಷಮೆ ಕೇಳಿದರೆ ಬಿಡುಗಡೆ ಮಾಡುವುದಾಗಿ ಇಂದಿ ರಾ ಗಾಂಧಿಯವರು ಸಂದೇಶ ಕಳಿಸಿದ್ದಾರೆʼ ಎಂದು ಹೇಳಿದರು. ಇದಕ್ಕೆ ಸ್ನೇಹಲತಾ ರೆಡ್ಡಿ ಹೇಳಿದರು; ʻನಾನು ತಪ್ಪು ಮಾಡದೆ ಇರುವಾಗ ಕ್ಷಮೆ ಕೇಳುವುದಿಲ್ಲ; ಇದು ಆತ್ಯಂತಿಕ ಭಿನ್ನಾಭಿಪ್ರಾಯ; ಸಾಯುತ್ತಿರುವ ಭಿನ್ನಾಭಿಪ್ರಾಯ.ʼ

ಸೆರೆವಾಸದ ಸಮಯದಲ್ಲಿ ಜೈಲು ಡೈರಿಯಲ್ಲಿ ಬರೆದರು- ಜುಲೈ 25, 1976 ರಂದು: ʻದೀರ್ಘ ಮತ್ತು ಏಕಾಂಗಿ ದಿನ. ನಾನು ಸಾವಿನಿಂದ ಕೆಲವು ಇಂಚು ದೂರದಲ್ಲಿದ್ದೇನೆ. ನನಗೆ ಬಿಡುಗಡೆ ನೀಡಬೇಕಿದೆʼ. ಜುಲೈ 29, 1976-ʻಕಳೆದ ರಾತ್ರಿ, ನನಗೆ ನಿದ್ದೆ ಬರಲಿಲ್ಲ, ಅಳುತ್ತಿದ್ದೆ, ತಡೆಯಲಾಗಲಿಲ್ಲ. ಮುಖ ತೊಳೆಯುವಂಥ ಸರಳ ಕ್ರಿಯೆಯನ್ನು ಮಾಡಿದರೂ ಸುಸ್ತಾಗುತ್ತಿದೆ. ಹೃದಯ ಕಾರ್ಟಿಸೋನ್‌ನಿಂದ ದುರ್ಬಲಾವಾಗಿದೆ ಎಂದು ಭಯವಾಗುತ್ತಿದೆʼ. ಆಗಸ್ಟ್ 8, 1976-ʻರಾತ್ರಿಯಿಡೀ ಅಸ್ತಮಾ ಕಾಟ. ಪರಿಹಾರವಿಲ್ಲʼ. ಇದು ಹೀಗೆಯೇ ಮುಂದುವರಿಯುತ್ತದೆ. ಆಕೆ ಒಂಬತ್ತೂವರೆ ತಿಂಗಳು ಸೆರೆಯಲ್ಲಿದ್ದರು. ವಾರ್ಡನ್‌ ಗಳಿಂದ ಭಾವನಾತ್ಮಕ ಮತ್ತು ದೈಹಿಕ ಹಿಂಸೆ ನಂತರವೂ ಕುಟುಂಬಕ್ಕೆ ಭೇಟಿಗೆ ಅವಕಾಶ ನೀಡಲಿಲ್ಲ. ಪೋಷಕರಿಗೆ ಪ್ರವೇಶ ನಿರಾಕರಿಸಲಾಯಿತು. ಆಕೆಯನ್ನು ಕಸ್ಟಡಿಯಲ್ಲಿ ಸಾವಿನ ಆರೋಪ ತಪ್ಪಿಸಿಕೊಳ್ಳಲು ಬಿಡುಗಡೆಗೊಳಿಸಲಾಯಿತು. ಐದು ದಿನಗಳ ನಂತರ ಆಕೆ ಮನೆಯಲ್ಲೇ ಕುಸಿದಳು. ಚಂಡಮಾರುತದ ಚಿತ್ರೀಕರಣದಲ್ಲಿ ಆಕೆಯ ಪಾತ್ರವು ಹಜಾರದಲ್ಲಿ ನೆಲಕ್ಕೆ ಕುಸಿಯುತ್ತದೆ. ಮತ್ತೊಮ್ಮೆ, ಜೀವನವು ಕಲೆಯನ್ನು ಅನುಕರಿಸಿತು. ನಾನು ಆಕೆಯನ್ನು ಗುಲಾಬಿ ಬಣ್ಣದ ಶಿಫಾನ್‌ ಸೀರೆಯಲ್ಲಿ, ಕೇಶದಲ್ಲಿ ಹೂವು ಹಾಗೂ ಕಾಲಿನಲ್ಲಿ ಕಾಲಂದಿಗೆಯೊಂದಿಗೆ ಕಲ್ಪಿಸಿಕೊಳ್ಳುತ್ತೇನೆʼ

ನಾನು ಅವಳ ನಾಟಕ ʻಸೀತಾʼ ಓದಿದ್ದೇನೆ. ನನ್ನ ಅಜ್ಜ ನಾಟಕಕ್ಕೆ ಮುನ್ನುಡಿ ಬರೆದಿದ್ದಾರೆ. ಅವರು ಬರೆಯುತ್ತಾರೆ; ʻನನ್ನ ಮನಸ್ಸಿನಲ್ಲಿ ಸೀತೆ ಮತ್ತು ಸ್ನೇಹ ಒಬ್ಬರೇ. ಇಬ್ಬರೂ ಅನ್ಯಾಯ ಮತ್ತು ಕಾನೂನಿನ ವಿರುದ್ಧ ಹೋರಾಡುವ ಧೈರ್ಯಶಾಲಿ ಆತ್ಮಗಳುʼ. ಭಾಗ 1 ದೃಶ್ಯ 4 ರಲ್ಲಿ ಸೀತೆಯ ಸ್ವಗತ ಹೀಗಿದೆ: ʻಬಾ ರಾಮ, ಈ ರಾಜತ್ವವನ್ನು ಬಿಟ್ಟುಬಿಡು; ಈ ಉದಾತ್ತತೆಯ ಸ್ವಪ್ನಶೀಲ ಕನಸುಗಳನ್ನು ತೊರೆದುಬಿಡು. ಈ ಪ್ರತಿಷ್ಠೆಯನ್ನು ಬಿಟ್ಟುಬಿಡು. ನಾವು ಕಾಡಿಗೆ ಹಿಂತಿರುಗಿ ಹೋಗೋಣ. ನಾನು ಪ್ರೀತಿಯ ಅದ್ಭುತಗಳನ್ನು ತೋರಿಸುತ್ತೇನೆ. ನೀನು ಹೇಗೆ ಇಷ್ಟು ಬೇಗ ಇದನ್ನೆಲ್ಲ ಮರೆತುಬಿಟ್ಟೆ? ನಾವು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸಿದವರಲ್ಲವೇ? ಇಲ್ಲ, ಇಲ್ಲ. ಜಗತ್ತು ಈಗಲೂ ಅದ್ಭುತ ಸಂಗತಿಗಳಿಂದ ತುಂಬಿದೆʼ.

ನಿರ್ದಿಷ್ಟ ಆದರ್ಶಗಳಿಂದ ಹುಟ್ಟಿರುವ ಮಹಿಳಾ ವಿಮೋಚನಾ ಚಳವಳಿ ಬಗ್ಗೆ ಆಲೋಚಿಸುತ್ತಿದ್ದೇನೆ ಮತ್ತು ಏಕೆ ನಮ್ಮ ಕ್ರಿಯಾಶೀಲತೆ, ನಮ್ಮ ಆದರ್ಶಗಳು, ನಮ್ಮ ಭಿನ್ನಾಭಿಪ್ರಾಯಗಳು ಮತ್ತು ಅಂತಿಮವಾಗಿ ನಮ್ಮ ಆದರ್ಶಗಳ ಮೇಲೆ ಯಾವುದು ಪ್ರಭಾವ ಬೀರುತ್ತದೆ ಎಂಬ ಬಗ್ಗೆ ಯೋಚಿಸುತ್ತಿದ್ದೇನೆ. ಇಂದು ಇದನ್ನು ಮಹಿಳಾ ಬಂಡವಾಳಶಾಹಿ ಚಳುವಳಿ ಎಂದು ಕರೆಯಬಹುದೇ? ಮತ್ತು ಆ ಆದರ್ಶಗಳು, ಸ್ಫೂರ್ತಿಯ ಮೂಲಸೆಲೆ ಯಾವುದು?

2013 ರಲ್ಲಿ ನಾವು ವಾಸಿಸುತ್ತಿದ್ದ ಮನೆಯಿಂದ ಸ್ಥಳಾಂತರಗೊಂಡೆವು. ನಾವು ಸುಣ್ಣ ಬಳಿದ ಗೋಡೆಗಳಿಗೆ ಅಂಟಿಕೊಂಡ ಸುಗಂಧ ಸುವಾಸನೆ, ಭಸ್ಮಗಳು, ಕೆಲವು ಶಿಲ್ಪಗಳು ಮತ್ತು ಕೆಲವು ಪತ್ರಗಳೊಂದಿಗೆ ಗಾಜಿನ ಜಾಡಿಗಳಲ್ಲಿ ಅವಳನ್ನು ಮರಳಿ ತಂದಿದ್ದೇವೆ. ಆ ಮನೆಯ ಗೋಡೆಗಳಿಗೆ ಪುನಃ ಬಣ್ಣ ಬಳಿಯಲಾಯಿತು; ನಮ್ಮ ಅಜ್ಜ-ಅಜ್ಜಿ ಮತ್ತು ಅವರ ತಂದೆತಾಯಿ ಸುಂದರವಾಗಿ, ಮುಕ್ತವಾಗಿ ಮತ್ತು ಕಲಾತ್ಮಕವಾಗಿ ಸೃಷ್ಟಿಸಿದ್ದ ಜಾಗವನ್ನು ಮರುಪಡೆಯಲಾಯಿತು. ಅದಕ್ಕೆ ಸುಣ್ಣ ಹೊಡೆಯಲಾಯಿತು. ಮರೆಯಲಾಯಿತು ಮತ್ತು 'ದಿ ಆರ್ಟ್ಸ್ ವಿಲೇಜ್' ಎಂದು ಮರುನಾಮಕರಣ ಮಾಡಲಾಯಿತು. ನಮ್ಮೆಲ್ಲ ಕಲೆ ಕೊನೆಗೊಂಡಿದ್ದರೂ, ಇದು ಬಾಲಿವುಡ್‌ ನ ನೃತ್ಯ ಮತ್ತು ಪೈಲೇಟ್ ಕಲೆಯ ಹೊಸ ಅಲೆ - ಖಾಲಿ ಹಲಗೆ, ಸ್ವಚ್ಛಗೊಳಿಸಿದ ತಟ್ಟೆಯನ್ನು ಹೋಲುವ ಕಲಾತ್ಮಕ ಹಳ್ಳಿ.

ನನ್ನ ಉದ್ಧೇಶವೇನೆಂದರೆ, ಹೆಸರುಗಳ ಮೇಲೆ ಮತ್ತೆ ಬಣ್ಣ ಬಳಿಯಲಾಯಿತು, ಚರಿತ್ರೆಯನ್ನು ಪುನರ್‌ ನಿರ್ಮಿಸಲಾಯಿತು. ನಾನು ಹೇಳುತ್ತಿರುವುದೇನೆಂದರೆ, ಚರಿತ್ರೆಯ ಪುಸ್ತಕಗಳನ್ನು ಇಂದಿಗೂ ಓದಿಲ್ಲ. ಮತ್ತು ನಾವು ಒಂದು ಕಾರಣ, ಕಲೆ, ಸ್ವಾತಂತ್ರ್ಯ, ನ್ಯಾಯಕ್ಕೆ ನೀಡುವ ಹೆಸರು ಯಾವುದೇ ಇರಬಹುದು, ಅದು ಪ್ರೇರೇಪಣೆ, ಒತ್ತು ಅಥವಾ ಚಾಲಕಶಕ್ತಿ ಅದನ್ನು ಪ್ರಶ್ನಿಸುವಂತೆ ಮಾಡುತ್ತದೆ. ನಮ್ಮ ಕ್ರಿಯಾಶೀಲತೆಯ ಸಾರವೇನು? ನಾನು ಇದನ್ನು ಏಕೆ ಕೇಳುತ್ತಿದ್ದೇನೆ ಎಂದರೆ, ನಮ್ಮ ಜೀವನವನ್ನು ದಬ್ಬಾಳಿಕೆಯ ನಿರಂಕುಶ ಪ್ರಭುತ್ವಗಳು ನಿಯಂತ್ರಿಸುತ್ತಿದ್ದರೂ, ನಮ್ಮ ಭೂಮಿ ದುರಂತದ ಹವಾಮಾನ ಬದಲಾವಣೆಯ ದುರಂತದಿಂದ ನಾಶವಾಗುತ್ತಿದ್ದರೂ ಮತ್ತು ಪ್ರಳಯದ ಬೆದರಿಕೆ ಎದುರಾಗುತ್ತಿದ್ದರೂ, ಅತ್ಯಂತ ತೀವ್ರ ಕೆಡುಕು ಎದುರಾಗಿದ್ದರೂ, ನಮ್ಮ ಪ್ರೇರೇಪಣೆಯ ಸಾರವು ಸತ್ಯ, ಮಾನವೀಯ ತೆ,ಸ್ವಾತಂತ್ರ್ಯದಲ್ಲಿನ ನಂಬಿಕೆ ಆಗಿರಬಹುದೇ? ಅಲ್ಲವಾಗಿದ್ದರೆ, ಅದು ಏನು?

Tags:    

Similar News