ಗಾಯಕಿ ಮಂಗ್ಲಿ ಕಾರು ಅಪಘಾತ: ಮೂವರಿಗೆ ಗಾಯ
ಗಾಯಕಿ ಮಂಗ್ಲಿ ಅವರು ಇಬ್ಬರು ಸಹಾಯಕರೊಂದಿಗೆ ಶಂಶಾಬಾದ್‌ನಿಂದ ನಗರಕ್ಕೆ ಹಿಂತಿರುಗುತ್ತಿದ್ದಾಗ ತೊಂಡಪಲ್ಲಿ ರಸ್ತೆಯಲ್ಲಿ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಭಾರಿ ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.;
ಹೈದರಾಬಾದ್: ಜನಪ್ರಿಯ ಗಾಯಕಿ ಮಂಗ್ಲಿ ( ಸತ್ಯವತಿ ರಾಥೋಡ್) ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೊಳಗಾಗಿದೆ.
ಮಂಗ್ಲಿ ಅವರು ಇಬ್ಬರು ಸಹಾಯಕರೊಂದಿಗೆ ಶಂಶಾಬಾದ್‌ನಿಂದ ನಗರಕ್ಕೆ ಹಿಂತಿರುಗುತ್ತಿದ್ದಾಗ ತೊಂಡಪಲ್ಲಿ ರಸ್ತೆಯಲ್ಲಿ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಭಾರಿ ವಾಹನವೊಂದು (ಡಿಸಿಎಂ) ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರಿಗೂ ಗಾಯಗಳಾಗಿವೆ. ಪೊಲೀಸರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಿದ್ದಾರೆ. ರಸ್ತೆ ಅಪಘಾತದ ವೇಳೆ ಹಿಂಬದಿಯಿಂದ ಗುದ್ದಿದ ವಾಹನ ಚಾಲಕ ಮದ್ಯದ ಅಮಲಿನಲ್ಲಿದ್ದ ಎನ್ನಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಮೂಲತಃ ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯವರಾದ ಸತ್ಯವತಿ ರಾಥೋಡ್ ಮಂಗ್ಲಿ ಎಂದೇ ಜನಪ್ರಿಯಗೊಂಡಿದ್ದಾರೆ. ಇವರು ಜನಪ್ರಿಯ ತೆಲುಗು ಗಾಯನ ಕಾರ್ಯಕ್ರಮಗಳು, ಜಾನಪದ ಹಾಡು ಹಾಗೂ ಸಿನಿಮಾ ಹಾಡುಗಳಿಂದಲೇ ಫೇಮಸ್ ಆಗಿದ್ದಾರೆ. ಕನ್ನಡದ ರಾಬರ್ಟ್ ಚಿತ್ರದ 'ಕಣ್ಣು ಹೊಡೆಯೋಕೆ' ಸಾಂಗ್ ನಿಂದ ಕನ್ನಡ ನಾಡಿನ ಜನರಿಗೆ ಚಿರಪರಿಚಿತರಾಗಿರುವ ಮಂಗ್ಲಿ, ಇತ್ತೀಚೆಗೆ ತೆರೆಕಂಡ ಕಾಟೇರ ಚಿತ್ರದ 'ಪಸಂದಗವ್ನೆʼ ಹಾಡನ್ನು ಕೂಡ ಹಾಡಿದ್ದಾರೆ. ಈ ಸಾಂಗ್ ಕೂಡಾ ಸೂಪರ್ ಹಿಟ್ ಆಗಿತ್ತು.