ಶೋಲೆಗೆ 50 ವರ್ಷ: ರಮೇಶ್ ಸಿಪ್ಪಿ ಚಿತ್ರದ ಮೂಲ ಆವೃತ್ತಿಯನ್ನು 4Kಯಲ್ಲಿ ಮರುಸ್ಥಾಪಿಸಿದ ಶೆಹಜಾದ್ ಸಿಪ್ಪಿ
'ದ ಫೆಡರಲ್'ಗೆ ನೀಡಿದ ವಿಶೇಷ ಸಂದರ್ಶನವೊಂದರಲ್ಲಿ, ನಿರ್ಮಾಪಕ ಜಿ.ಪಿ. ಸಿಪ್ಪಿ ಅವರ ಮೊಮ್ಮಗ, ರಮೇಶ್ ಸಿಪ್ಪಿಯವರ 1975ರ ಕ್ಲಾಸಿಕ್ 'ಶೋಲೆ' ಚಿತ್ರವನ್ನು ಅದರ ಸಂಪೂರ್ಣ 3-ಗಂಟೆ 24-ನಿಮಿಷಗಳ ಆವೃತ್ತಿಗೆ ಮರುಸ್ಥಾಪಿಸಿದ ರೋಚಕ ಕಥೆಯನ್ನು ಬಹಿರಂಗಪಡಿಸಿದ್ದಾರೆ.;
ಸುಮಾರು ಹದಿನೆಂಟು ತಿಂಗಳುಗಳ ಹಿಂದೆ, ಭಾರತೀಯ ಚಿತ್ರರಂಗದ ದಂತಕಥೆಯೆನಿಸಿದ ನಿರ್ಮಾಪಕ ಜಿ.ಪಿ. ಸಿಪ್ಪಿ ಅವರ ಮೊಮ್ಮಗ ಶೆಹಜಾದ್ ಸಿಪ್ಪಿ, 'ಸಿಪ್ಪಿ ಫಿಲ್ಮ್ಸ್' ಸಂಸ್ಥೆಯ ಚುಕ್ಕಾಣಿ ಹಿಡಿದಾಗ, ಅವರು ತಮ್ಮ ಅಜ್ಜನ ಸಿನಿಮಾ ಪರಂಪರೆಯನ್ನು ಗೌರವಿಸುವ ಅವಕಾಶವನ್ನು ಕಂಡುಕೊಂಡರಲ್ಲದೆ, ತಮ್ಮ ಚಿಕ್ಕಪ್ಪ ರಮೇಶ್ ಸಿಪ್ಪಿ ಅವರ ಬಹುಕಾಲದ ಮಹತ್ವಾಕಾಂಕ್ಷೆಯೊಂದನ್ನು ಸಾಕಾರಗೊಳಿಸುವ ಸಂಕಲ್ಪವನ್ನೂ ಮಾಡಿದರು. ಅದೇ, ಆಗಸ್ಟ್ 15, 1975 ರಂದು ಬಿಡುಗಡೆಯಾಗಿ ಇತಿಹಾಸ ಸೃಷ್ಟಿಸಿದ 'ಶೋಲೆ' ಚಿತ್ರದ ಮೂಲ, ಕತ್ತರಿ ಪ್ರಯೋಗವಾಗದ, ಸಂಪೂರ್ಣ ಆವೃತ್ತಿಯನ್ನು ಬೆಳ್ಳಿತೆರೆಯ ಮೇಲೆ ಪ್ರದರ್ಶಿಸುವುದು.
''ದ ಫೆಡರಲ್'' ಜೊತೆಗಿನ ವಿಶೇಷ ಸಂವಾದದಲ್ಲಿ, ಶೆಹಜಾದ್ ಸಿಪ್ಪಿ ಅವರು ಲಂಡನ್ ಮತ್ತು ಮುಂಬೈನ ಗೋದಾಮುಗಳಲ್ಲಿ ಕಳೆದುಹೋಗಿದ್ದ ರೀಲ್ಗಳ ಶೋಧದಿಂದ ಆರಂಭಿಸಿ, ಚಿತ್ರದ 3-ಗಂಟೆ-24-ನಿಮಿಷದ ಸಂಪೂರ್ಣ ಆವೃತ್ತಿಯನ್ನು ಮರುಸ್ಥಾಪಿಸಿದವರೆಗಿನ ರೋಚಕ ಪಯಣವನ್ನು ಅನಾವರಣಗೊಳಿಸಿದ್ದಾರೆ. "ನನ್ನ ಹಿನ್ನೆಲೆ ಹೂಡಿಕೆ ಕ್ಷೇತ್ರದ್ದಾದರೂ, ನಮ್ಮಲ್ಲಿರುವ ಅಮೂಲ್ಯ ಚಲನಚಿತ್ರಗಳ ಸಂಗ್ರಹಾಲಯದಲ್ಲಿ ಒಂದು ವಿಶಿಷ್ಟ ಅವಕಾಶವನ್ನು ನಾನು ಗುರುತಿಸಿದೆ. ಆದರೆ ದುರದೃಷ್ಟವಶಾತ್, ಆ ಕಲಾಕೃತಿಗಳ ಬಗ್ಗೆ ಹೆಚ್ಚಿನ ಕೆಲಸಗಳು ನಡೆದಿಲ್ಲ" ಎಂದು ಅವರು ವಿವರಿಸುತ್ತಾರೆ.
ಏಳು ದಶಕಗಳ ಇತಿಹಾಸವಿರುವ ಸಿಪ್ಪಿ ಬ್ಯಾನರ್, ತನ್ನ ಸಂಗ್ರಹದಲ್ಲಿ ಶಾನ್, ಸೀತಾ ಔರ್ ಗೀತಾ, ಸಾಗರ್, ಬ್ರಹ್ಮಚಾರಿ, ಅಂದಾಜ್ ನಂತಹ 33 ಯಶಸ್ವಿ ಚಿತ್ರಗಳನ್ನು ಹೊಂದಿದೆ. ಆದರೆ ಈ ಎಲ್ಲವುಗಳ ನಡುವೆ, ಸಿಪ್ಪಿ ಸಂಸ್ಥೆಯ ಕಿರೀಟಕ್ಕೆ ಅನಭಿಷಿಕ್ತ ರತ್ನವಾಗಿ ರಾರಾಜಿಸುತ್ತಿರುವುದು 'ಶೋಲೆ' ಮಾತ್ರ.
'ಶೋಲೆ' ಚಿತ್ರದ ಸುವರ್ಣ ಮಹೋತ್ಸವ ಸಮೀಪಿಸುತ್ತಿದ್ದಂತೆ, ಶೆಹಜಾದ್ ಅವರು ಈ ಅಪ್ರತಿಮ ಚಿತ್ರದ ಮೂಲ ನೆಗೆಟಿವ್ಗಳನ್ನು ಪತ್ತೆಹಚ್ಚಿ, ಅವುಗಳನ್ನು ಪುನರುಜ್ಜೀವನಗೊಳಿಸಲು ಪಣತೊಟ್ಟರು. ಈ ಪುನರುತ್ಥಾನಗೊಂಡ ಆವೃತ್ತಿಯ ಅತ್ಯಂತ ಮಹತ್ವದ ಅಂಶವೆಂದರೆ, ಚಿತ್ರದ ಮೂಲ ಆಶಯದಂತೆ ಸೇಡಿನ ಕಥೆಗೆ ನ್ಯಾಯ ಒದಗಿಸುವ, ಹಿಂದೆಂದೂ ತೆರೆಯ ಮೇಲೆ ಕಾಣದ ಮೂಲ ಕ್ಲೈಮ್ಯಾಕ್ಸ್. ಇದರಲ್ಲಿ ಠಾಕೂರ್ ಬಲದೇವ್ ಸಿಂಗ್ (ಸಂಜೀವ್ ಕುಮಾರ್) ತನ್ನ ಮೊಳೆಗಳಿದ್ದ ಬೂಟುಗಳಿಂದಲೇ ಗಬ್ಬರ್ ಸಿಂಗ್ನನ್ನು (ಅಮ್ಜದ್ ಖಾನ್) ಹತ್ಯೆಗೈಯುವ ದೃಶ್ಯವಿದೆ.
ಆ ಕಾಲಘಟ್ಟದಲ್ಲಿ ದೇಶವು ತುರ್ತು ಪರಿಸ್ಥಿತಿಯ ಹಿಡಿತದಲ್ಲಿತ್ತು. ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬ ಕಾನೂನನ್ನು ಕೈಗೆತ್ತಿಕೊಳ್ಳುವಂತಹ ಸಂದೇಶವು ಸಾರ್ವಜನಿಕರಿಗೆ ರವಾನೆಯಾಗಬಾರದು ಎಂಬುದು ಸೆನ್ಸಾರ್ ಮಂಡಳಿಯ ದೃಢ ನಿಲುವಾಗಿತ್ತು. ಈ ಘಟನೆಯನ್ನು ಪತ್ರಕರ್ತೆ ಅನುಪಮಾ ಚೋಪ್ರಾ ತಮ್ಮ ಶೋಲೆ: ದಿ ಮೇಕಿಂಗ್ ಆಫ್ ಎ ಕ್ಲಾಸಿಕ್ (2000) ಕೃತಿಯಲ್ಲಿ ದಾಖಲಿಸಿದ್ದಾರೆ. "ರಾಜಕೀಯ ಕಾರಣಗಳಿಗಾಗಿ ತಮ್ಮ ಕಲಾತ್ಮಕ ದೃಷ್ಟಿಕೋನಕ್ಕೆ ಧಕ್ಕೆಯಾಗುತ್ತಿರುವುದಕ್ಕೆ ರಮೇಶ್ ಸಿಪ್ಪಿ ತೀವ್ರವಾಗಿ ಕ್ರುದ್ಧರಾಗಿದ್ದರು. ಚಿತ್ರದ ಟೈಟಲ್ ಕಾರ್ಡ್ನಲ್ಲಿ ತಮ್ಮ ಹೆಸರನ್ನೇ ತೆಗೆದುಹಾಕುವ ಬೆದರಿಕೆಯನ್ನೂ ಒಡ್ಡಿದ್ದರು" ಎಂದು ಶೆಹಜಾದ್ ಹೇಳಿದ್ದಾರೆ.
"ನನ್ನ ಅಜ್ಜ, ವಾರ್ತಾ ಮತ್ತು ಪ್ರಸಾರ ಸಚಿವಾಲಯದೊಂದಿಗೆ ಸಂಧಾನ ನಡೆಸಿದರೂ, ಪರಿಹಾರ ಸಾಧ್ಯವಾಗಲಿಲ್ಲ. ಅಂತಿಮವಾಗಿ, ಜಿ.ಪಿ. ಸಿಪ್ಪಿ ಒಬ್ಬ ಚತುರ ಉದ್ಯಮಿಯಾಗಿದ್ದರು. ಚಿತ್ರವು ಈಗಾಗಲೇ ನಿಗದಿತ ಸಮಯ ಮತ್ತು ಬಜೆಟ್ ಮೀರಿತ್ತು. ಚಿತ್ರವನ್ನು ತೆರೆಗೆ ತರುವುದಷ್ಟೇ ಅವರ ತುರ್ತು ಆದ್ಯತೆಯಾಗಿತ್ತು, ಇದನ್ನು ರಮೇಶ್ ಸಿಪ್ಪಿ ಕೂಡ ಅರಿತಿದ್ದರು" ಎಂದು ಶೆಹಜಾದ್ ವಿಶ್ಲೇಷಿಸುತ್ತಾರೆ.
'ಶೋಲೆ'ಯನ್ನು ಮರುಸ್ಥಾಪಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಕೈಹಾಕಿದಾಗ, ಅವರ ಮುಂದಿದ್ದದ್ದು ಒಂದು ಬೃಹತ್ ಸವಾಲು. ಮೂಲ ಚಿತ್ರದ ನೆಗೆಟಿವ್ಗಳ ಲಭ್ಯತೆಯೇ ಒಂದು ದೊಡ್ಡ ಪ್ರಶ್ನೆಯಾಗಿತ್ತು. ಕೆಲವು ರೀಲ್ಗಳು ಕಂಪನಿಯ ಗೋದಾಮಿನಲ್ಲಿ ಶಿಥಿಲಾವಸ್ಥೆಯಲ್ಲಿದ್ದರೆ, 'ಶೋಲೆ'ಯ ಮೂಲ ಆವೃತ್ತಿಯನ್ನು ಲಂಡನ್ನ ವಿಶ್ಯುಯಲ್ ಎಫೆಕ್ಟ್ಸ್ ಕಂಪನಿ 'ಟೆಕ್ನಿಕಲರ್'ನಲ್ಲಿ ಸಂಗ್ರಹಿಸಲಾಗಿದೆ ಎಂಬ ತಂದೆಯ ಮಾತು ಶೆಹಜಾದ್ಗೆ ನೆನಪಾಯಿತು.
ಅದೃಷ್ಟವಶಾತ್, ಟೆಕ್ನಿಕಲರ್ ಸಂಸ್ಥೆಯನ್ನು ಸಂಪರ್ಕಿಸಿದಾಗ, ಅವರ ಬಳಿ 'ಶೋಲೆ' ಮತ್ತು 'ಶಾನ್' ಚಿತ್ರಗಳ 500 ಕ್ಯಾನ್ ರೀಲ್ಗಳಿದ್ದವು. ಇದೇ ಸಮಯದಲ್ಲಿ, ರಮೇಶ್ ಸಿಪ್ಪಿ ಅವರ ಪುತ್ರ ರೋಹನ್ ಸಿಪ್ಪಿ, ಶೆಹಜಾದ್ರನ್ನು ಫಿಲ್ಮ್ ಹೆರಿಟೇಜ್ ಫೌಂಡೇಶನ್ನ ಸಂಸ್ಥಾಪಕ ನಿರ್ದೇಶಕ ಶೀವೇಂದ್ರ ಸಿಂಗ್ ಡುಂಗರ್ಪುರ್ಗೆ ಪರಿಚಯಿಸಿದರು.
ಡುಂಗರ್ಪುರ್ ಆ ಗತಕಾಲವನ್ನು ನೆನೆಯುವುದು ಹೀಗೆ; "ಮುಂಬೈನ ಗೋದಾಮಿನಲ್ಲಿ 'ಶೋಲೆ'ಯ ಫಿಲ್ಮ್ ಕ್ಯಾನ್ಗಳು ಪತ್ತೆಯಾದರೂ, ಅವು ತೀವ್ರವಾಗಿ ಹಾನಿಯಾಗಿದ್ದವು. ಮೂಲ ಕ್ಯಾಮೆರಾ ನೆಗೆಟಿವ್ ಬಳಸಲು ಅಸಾಧ್ಯವಾದ ಕಾರಣ, ಲಂಡನ್ ಮತ್ತು ಮುಂಬೈನಲ್ಲಿ ದೊರೆತ 'ಇಂಟರ್ಪಾಸಿಟಿವ್'ಗಳೇ ನಮ್ಮ ಆಧಾರವಾದವು. ಅದ್ಭುತವೆಂದರೆ, ಲಂಡನ್ನಲ್ಲಿದ್ದ ರೀಲ್ಗಳಲ್ಲಿ ಸೆನ್ಸಾರ್ನಿಂದ ಕತ್ತರಿಸಲ್ಪಟ್ಟ ಮೂಲ ಅಂತ್ಯ ಮತ್ತು ಇನ್ನೂ ಎರಡು ಅಳಿಸಲಾದ ದೃಶ್ಯಗಳಿದ್ದವು." ಮತ್ತೊಂದು ಮಹತ್ವದ ಆವಿಷ್ಕಾರವೆಂದರೆ, 'ಶೋಲೆ' ಚಿತ್ರೀಕರಣಕ್ಕೆ ಬಳಸಲಾಗಿದ್ದ ಮೂಲ Arri 2C ಕ್ಯಾಮೆರಾ ಕೂಡ ದೊರೆತಿದ್ದು, ಇದು ಮರುಸ್ಥಾಪನೆಯ ಕಾಯಕಕ್ಕೆ ನೆರವಾಯಿತು.
ತರುವಾಯ, ಎಲ್ಲಾ ರೀಲ್ಗಳನ್ನು ಇಟಲಿಯ ಬೊಲೊಗ್ನಾದಲ್ಲಿರುವ ಎಲ್'ಇಮ್ಮಾಜಿನ್ ರಿಟ್ರೊವಾಟಾಗೆ ಸಾಗಿಸಲಾಯಿತು. ಅಲ್ಲಿ ಮೂರು ವರ್ಷಗಳ ಕಾಲ ನಡೆದ ಸಂಕೀರ್ಣ ಮರುಸ್ಥಾಪನೆ ಪ್ರಕ್ರಿಯೆ ಆರಂಭವಾಯಿತು. "ವಿಶ್ವದ ಶ್ರೇಷ್ಠ ಚಲನಚಿತ್ರಗಳ ಪುನರುಜ್ಜೀವನಕ್ಕೆ ಬೊಲೊಗ್ನಾವನ್ನು ಜಾಗತಿಕವಾಗಿ ಅತ್ಯುತ್ತಮ ಕೇಂದ್ರವೆಂದು ಪರಿಗಣಿಸಲಾಗಿದೆ. ಈ ಗುರುತರ ಜವಾಬ್ದಾರಿಯನ್ನು ಹೊತ್ತ ಶೀವೇಂದ್ರ ಅವರಿಗೆ ನನ್ನ ಕೃತಜ್ಞತೆಗಳು," ಎಂದು ಶೆಹಜಾದ್ ಹೇಳುತ್ತಾರೆ.
ಮರುಸ್ಥಾಪನೆ ಪ್ರಕ್ರಿಯೆ
ಮರುಸ್ಥಾಪನೆಯ ಕುರಿತು ವಿವರಿಸುವ ಡುಂಗರ್ಪುರ್, “ಈ ನೂತನ ಆವೃತ್ತಿಯಲ್ಲಿ, ಪ್ರೇಕ್ಷಕರು ಠಾಕೂರ್ ಅವರ ಮೂಲ ಸೇಡಿನ ಕಥೆಯನ್ನು, ಅಂದರೆ ಗಬ್ಬರ್ನ ಸಾವಿನೊಂದಿಗೆ ಕೊನೆಗೊಳ್ಳುವ ನೈಜ ಅಂತ್ಯವನ್ನು ನೋಡುತ್ತಾರೆ. ಇದುವೇ ಚಿತ್ರಕ್ಕೆ ಒಂದು ತಾರ್ಕಿಕ ಅಂತ್ಯವನ್ನು ಒದಗಿಸುತ್ತದೆ. 1975ರ ಆವೃತ್ತಿಯಂತೆ ಪೊಲೀಸರು ಗಬ್ಬರ್ನನ್ನು ಬಂಧಿಸಿ ಕರೆದೊಯ್ಯುವುದಿಲ್ಲ. ಐವತ್ತು ವರ್ಷಗಳ ನಂತರ, ಪ್ರೇಕ್ಷಕರು 'ಶೋಲೆ'ಯನ್ನು ಅದರ ಸಂಪೂರ್ಣ ಸ್ವರೂಪದಲ್ಲಿ, 3 ಗಂಟೆ 24 ನಿಮಿಷಗಳ ಕಾಲ ಆಸ್ವಾದಿಸಲಿದ್ದಾರೆ," ಎನ್ನುತ್ತಾರೆ.
ನೆಗೆಟಿವ್ಗಳು ಸಂಪೂರ್ಣ ಹಾನಿಗೊಳಗಾಗಿದ್ದರಿಂದ ಇಂಟರ್ಪಾಸಿಟಿವ್ಗಳನ್ನು ಅವಲಂಬಿಸಬೇಕಾಯಿತು. ಆದರೆ, ಚಿತ್ರದ ಸೌಂಡ್ ನೆಗೆಟಿವ್ಗಳು ಲಭ್ಯವಿದ್ದರಿಂದ, ಆರ್.ಡಿ. ಬರ್ಮನ್ ಅವರ ಅವಿಸ್ಮರಣೀಯ ಸಂಗೀತದ ಮೂಲ ಸ್ವರೂಪವನ್ನು ಮರಳಿ ತರಲು ಸಾಧ್ಯವಾಯಿತು. ಹಿಂದಿನ 3D ಆವೃತ್ತಿಯಲ್ಲಿ ಆರ್.ಡಿ. ಬರ್ಮನ್ ಸಂಗೀತವನ್ನು ತೆಗೆದುಹಾಕಿ, ರಾಜು ಸಿಂಗ್ ಅವರ ಟ್ರ್ಯಾಕ್ಗಳನ್ನು ಬಳಸಲಾಗಿತ್ತು.
4K ಸ್ಕ್ಯಾನ್ನಿಂದಾಗಿ ಚಿತ್ರದ ಪ್ರತಿ ದೃಶ್ಯದಲ್ಲೂ ಹೆಚ್ಚಿನ ಸ್ಪಷ್ಟತೆ, ತೀಕ್ಷ್ಣತೆ, ಉತ್ತಮ ಕಾಂಟ್ರಾಸ್ಟ್ ಮತ್ತು ವಿಶಾಲವಾದ ಬಣ್ಣಗಳ ಹರವು ಸಾಧ್ಯವಾಗಿದೆ. "ಮರುಸ್ಥಾಪನೆಯ ಉದ್ದೇಶವೇ, 1975ರ ಮೂಲ ದೃಶ್ಯಾನುಭವಕ್ಕೆ ಕಿಂಚಿತ್ತೂ ಚ್ಯುತಿ ಬಾರದಂತೆ ಚಿತ್ರವನ್ನು ಪ್ರಸ್ತುತಪಡಿಸುವುದು" ಎಂದು ಡುಂಗರ್ಪುರ್ ಒತ್ತಿಹೇಳುತ್ತಾರೆ.
ಕೃತಕ ಬುದ್ಧಿಮತ್ತೆ (AI) ಬಳಕೆ ಇಲ್ಲ
ರಮೇಶ್ ಸಿಪ್ಪಿ ಅವರ ಮೂಲ ಆಶಯಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳುವಲ್ಲಿ ಶೆಹಜಾದ್ ಸಂಪೂರ್ಣ ಬದ್ಧತೆ ತೋರಿದ್ದಾರೆ. "ನಾವು ಅಳಿಸಲಾಗಿದ್ದ ದೃಶ್ಯಗಳನ್ನು ಮತ್ತು ಮೂಲ ಕ್ಲೈಮ್ಯಾಕ್ಸ್ ಅನ್ನು ಸೇರಿಸಿದ್ದೇವೆ, ಅಷ್ಟೆ. ಚಿತ್ರದಲ್ಲಿ ಯಾವುದೇ ಭಾಗವನ್ನು ಮರು-ರೆಕಾರ್ಡ್ ಮಾಡಿಲ್ಲ. ಶೋಲೆ ಒಂದು ಐತಿಹಾಸಿಕ ಕಲಾಕೃತಿ. ಅದರ ಮೂಲ ಸ್ವರೂಪಕ್ಕೆ ಕಿಂಚಿತ್ತೂ ಧಕ್ಕೆ ತರಲು ಅಥವಾ ಅಗೌರವಿಸಲು ನಾವು ಬಯಸುವುದಿಲ್ಲ. ಇಲ್ಲದಿದ್ದರೆ, ಅಭಿಮಾನಿಗಳು ನನ್ನನ್ನು ಸುಮ್ಮನೆ ಬಿಡುವುದಿಲ್ಲ," ಎಂದು ನಗುತ್ತಲೇ ದ ಫೆಡರಲ್ ಜತೆ ಹೇಳಿದ್ದಾರೆ.
"ಹತ್ತು ವರ್ಷಗಳ ಹಿಂದೆ 'ಶೋಲೆ' 3D ಆವೃತ್ತಿ ಬಿಡುಗಡೆಯಾದಾಗ, ಅವರು ಆರ್.ಡಿ. ಬರ್ಮನ್ ಅವರ ಸಂಗೀತವನ್ನು ತೆಗೆದುಹಾಕಿದ್ದರು, ಇದು ಚಿಕ್ಕಪ್ಪ ರಮೇಶ್ ಅವರಿಗೆ ತೀವ್ರ ಅಸಮಾಧಾನ ತಂದಿತ್ತು. ಆ ತಪ್ಪನ್ನು ನಾನು ಪುನರಾವರ್ತಿಸಲು ಸಿದ್ಧನಿಲ್ಲ," ಎಂದು ಅವರು ವಿಷಾದದಿಂದ ಹೇಳಿಕೊಳ್ಳುತ್ತಾರೆ.
ಆ ಕಾಲದ ಹಿಂದಿ ಚಿತ್ರಗಳಿಗೆ ಹೋಲಿಸಿದರೆ 'ಶೋಲೆ'ಯ ನಿರ್ಮಾಣದ ಗುಣಮಟ್ಟ ಅಸಾಧಾರಣವಾಗಿತ್ತು. ಯುಕೆನಿಂದ ಜೇಮ್ಸ್ ಬಾಂಡ್ ಚಿತ್ರಗಳಿಗೆ ಕೆಲಸ ಮಾಡಿದ್ದ ಸಾಹಸ ನಿರ್ದೇಶಕರು ಮತ್ತು ಕ್ಯಾಮೆರಾಮನ್ಗಳನ್ನು ಕರೆಸಲಾಗಿತ್ತು. ಪರಿಪೂರ್ಣತೆಗಾಗಿ ಹಂಬಲಿಸುತ್ತಿದ್ದ ರಮೇಶ್ ಸಿಪ್ಪಿ, ಬಜೆಟ್ಗಿಂತ ಮೂರು ಪಟ್ಟು ಹೆಚ್ಚು ಖರ್ಚು ಮಾಡಿದ್ದರು. ಸಲೀಂ-ಜಾವೇದ್ ಅವರ ಪಾತ್ರಸೃಷ್ಟಿ, ದ್ವಾರಕಾ ದೀವೇಚಾ ಅವರ ಛಾಯಾಗ್ರಹಣ ಮತ್ತು ಆರ್.ಡಿ. ಬರ್ಮನ್ ಅವರ ಸಂಗೀತ ಚಿತ್ರದ ಆತ್ಮವಾಗಿತ್ತು. "ಕೇವಲ 30 ಲಕ್ಷದಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದ ಕಾಲದಲ್ಲಿ, 3 ಕೋಟಿ ಖರ್ಚು ಮಾಡಿದಾಗ ಇಡೀ ಕುಟುಂಬವೇ ಮುಳುಗಿಹೋಯಿತು ಎಂದು ಎಲ್ಲರೂ ಭಾವಿಸಿದ್ದರು" ಎಂದು ಶೆಹಜಾದ್ ನೆನಪಿಸಿಕೊಳ್ಳುತ್ತಾರೆ.
ಪಾಲಿಡಾರ್ ಕಂಪನಿ ಚಿತ್ರದ ಸಂಭಾಷಣೆ ಮತ್ತು ಹಾಡುಗಳಿದ್ದ ಎಲ್ಪಿ (LP) ರೆಕಾರ್ಡ್ ಬಿಡುಗಡೆ ಮಾಡಿತ್ತು. "ಹಳ್ಳಿಗಳ ಮೂಲೆಮೂಲೆಗಳಲ್ಲಿ ಈ ರೆಕಾರ್ಡ್ ಅನ್ನು ಧ್ವನಿವರ್ಧಕದಲ್ಲಿ ಹಾಕಲಾಗುತ್ತಿತ್ತು. ಇದರಿಂದಾಗಿಯೇ ಸಂಭಾಷಣೆಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದವು" ಎನ್ನುತ್ತಾರೆ ಅವರು.
ಬಸಂತಿಯ ಟಾಂಗಾ, ಧರ್ಮೇಂದ್ರ ಹತ್ತಿದ ನೀರಿನ ಟ್ಯಾಂಕ್ ಅಥವಾ 'ಯೇ ದೋಸ್ತಿ' ಹಾಡಿನ ಬೈಕ್ನ ಯಾವುದೇ ಕುರುಹು ಈಗ ಉಳಿದಿಲ್ಲ. ಇತ್ತೀಚೆಗೆ ಆನಂದ್ ಮಹೀಂದ್ರ ಅವರ ಬೈಕ್ ಕಂಪನಿ, ಹಾಡಿನಲ್ಲಿ ಬಳಸಿದ್ದ ಬಿಎಸ್ಎ ಎಂಸಿ20 ಮಾದರಿಯ ಬಗ್ಗೆ ವಿಚಾರಿಸಿತ್ತು. "ಅದರ ಪ್ರತಿಕೃತಿಯನ್ನು ನಿರ್ಮಿಸುತ್ತಿದ್ದೇನೆ" ಎನ್ನುತ್ತಾರೆ ಶೆಹಜಾದ್.
'ಶೋಲೆ'ಯ ಈ ಅಂತಿಮ ಆವೃತ್ತಿಯು ಟೊರೊಂಟೊ, ನ್ಯೂಯಾರ್ಕ್ ಮತ್ತು ಲಂಡನ್ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಳ್ಳಲಿದೆ. ಭಾರತದಲ್ಲೂ ಬಿಡುಗಡೆ ಮಾಡುವ ಯೋಚನೆಯಿದ್ದು, ದಿನಾಂಕ ಇನ್ನೂ ಅಧಿಕೃತವಾಗಿಲ್ಲ.
"ಈ ಮರುಸ್ಥಾಪನೆಯನ್ನು ನಾನು ಚಿತ್ರದ ಮೇಲಿನ ಗೌರವದಿಂದ ಕೈಗೊಂಡಿದ್ದೇನೆ. ಭಾರತದ ಸಾಂಸ್ಕೃತಿಕ ಪರಂಪರೆಯ ಈ ಅವಿಭಾಜ್ಯ ಅಂಗವನ್ನು ಸಂರಕ್ಷಿಸುವುದು ನನ್ನ ಆದ್ಯ ಕರ್ತವ್ಯವೆಂದು ಭಾವಿಸುತ್ತೇನೆ. ಜನರು ಈ ಚಿತ್ರವನ್ನು ಅದರ ಮೂಲ ಸ್ವರೂಪದಲ್ಲಿ, ಬೆಳ್ಳಿತೆರೆಯ ಮೇಲೆ ನೋಡಬೇಕು," ಎನ್ನುವ ಶೆಹಜಾದ್, "ಇದೇ ಬಹುಶಃ 'ಶೋಲೆ'ಯು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುವ ಅಂತಿಮ ಅಧ್ಯಾಯವಾಗಬಹುದು" ಎಂದು ತಮ್ಮ ಶ್ರಮದ ಫಲದ ಬಗ್ಗೆ ವಿಶ್ವಾಸ ವ್ಯಕ್ತಪಡಿಸುತ್ತಾರೆ.