Sandalwood | ಸಂಕಷ್ಟ ಎದುರಿಸಲು ಒಗ್ಗೂಡಿದ ಚಿತ್ರರಂಗ: ಶಿವರಾಜಕುಮಾರ್ ನಾಯಕತ್ವ
ಕನ್ನಡ ಚಿತ್ರರಂಗ ಇಂದು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಪ್ರಮುಖವಾಗಿ ಕನ್ನಡ ಚಿತ್ರಗಳಿಗೆ ಮಲ್ಟಿಪ್ಲೆಕ್ಸ್ಗಳಲ್ಲಿ ಸೂಕ್ತ ಪ್ರದರ್ಶನಗಳು ಸಿಗುತ್ತಿಲ್ಲ. ಸಿಕ್ಕರೂ ಟಿಕೆಟ್ ಬೆಲೆ ಜಾಸ್ತಿಯಾಗಿದೆ. ಮೇಲಾಗಿ ಚಿತ್ರಮಂದಿರಗದವರಿಗೆ ಬೇರೆಬೇರೆ ರೀತಿಯ ಸಮಸ್ಯೆ ಇದೆ.;
ಡಾ. ಶಿವರಾಜ್ ಕುಮಾರ್
ಕನ್ನಡ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕಳೆದ ಕೆಲವು ವರ್ಷಗಳಿಂದ ಚರ್ಚೆ ಆಗತ್ತಲೇ ಇದೆ. ಆದರೆ, ಇದುವರೆಗೂ ಪರಿಹಾರ ಮಾತ್ರ ಸಿಕ್ಕಿಲ್ಲ. ಈ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಶಿವರಾಜಕುಮಾರ್ ಅವರ ನಿವಾಸದಲ್ಲಿ ಶನಿವಾರ ಚಿತ್ರರಂಗದ ಪ್ರಮುಖರು ಸಭೆ ನಡೆಸಿದ್ದಾರೆ.
ಅಷ್ಟೇ ಅಲ್ಲ, ಈ ಸಂಬಂಧ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು, ಶಿವರಾಜಜಕುಮಾರ್, ‘ದುನಿಯಾ’ ವಿಜಯ್, ಧ್ರುವ ಸರ್ಜಾ ಸೇರಿದಂತೆ ಹಲವರು ನಟರು, ನಿರ್ಮಾಪಕರು, ವಿತರಕರು, ಪ್ರದರ್ಶಕರು ಸಭೆ ಸೇರಿ, ಕನ್ನಡ ಚಿತ್ರರಂಗ ಎದುರಿಸುತ್ತಿರುವ ಹಲವು ಸವಾಲು ಮತ್ತು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಹಲವು ಸಮಸ್ಯೆಗಳು, ಹಲವು ಸಂಕಷ್ಟಗಳು
ಕನ್ನಡ ಚಿತ್ರರಂಗ ಇಂದು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಪ್ರಮುಖವಾಗಿ ಕನ್ನಡ ಚಿತ್ರಗಳಿಗೆ ಮಲ್ಟಿಪ್ಲೆಕ್ಸ್ಗಳಲ್ಲಿ ಸೂಕ್ತ ಪ್ರದರ್ಶನಗಳು ಸಿಗುತ್ತಿಲ್ಲ. ಸಿಕ್ಕರೂ ಟಿಕೆಟ್ ಬೆಲೆ ಜಾಸ್ತಿಯಾಗಿದೆ. ಮೇಲಾಗಿ ಚಿತ್ರಮಂದಿರಗದವರಿಗೆ ಬೇರೆಬೇರೆ ರೀತಿಯ ಸಮಸ್ಯೆ ಇದೆ. ಚಿತ್ರಮಂದಿರಗಳನ್ನು ಕಟ್ಟುವುದಕ್ಕೆ ಸಬ್ಸಿಡಿ, ಕಡಿಮೆ ಬಡ್ಡಿಯಲ್ಲಿ ಸಾಲ ಕೊಡುವ ವ್ಯವಸ್ಥೆ ಸೇರಿದಂತೆ ಹಲವು ವಿಷಯಗಳನ್ನು ಚರ್ಚಿಸುವುದರ ಜೊತೆಗೆ, ಮುಖ್ಯಮಂತ್ರಿಗಳಿಗೆ ಈ ಎಲ್ಲಾ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟು, ಸೂಕ್ತ ಪರಿಹಾರ ಕಂಡುಕೊಳ್ಳುವುದು ಚಿತ್ರರಂಗದವರ ಯೋಚನೆ.
ಕಡಿಮೆಯಾದ ಸ್ಟಾರ್ ನಟರ ಚಿತ್ರಗಳ ಸಂಖ್ಯೆ
ಇದೆಲ್ಲದರ ಜೊತೆಗೆ ಕನ್ನಡದ ಜನಪ್ರಿಯ ನಟರು ಚಿತ್ರಗಳನ್ನು ಹೆಚ್ಚು ಮಾಡಬೇಕೆಂಬ ಮನವಿಯೂ ನಿರ್ಮಾಪಕರು ಮತ್ತು ಪ್ರದರ್ಶಕರ ವಲಯದಲ್ಲಿ ಕೇಳಿ ಬಂದಿದೆ. ಕೆಲವು ನಟರನ್ನು ಹೊರತುಪಡಿಸಿದರೆ, ಮಿಕ್ಕಂತೆ ಬಹಳಷ್ಟು ಕಲಾವಿದರು ಮೂರ್ನಾಲ್ಕು ವರ್ಷಗಳಿಗೆ ಒಂದು ಚಿತ್ರ ಮಾಡುತ್ತಿರುವುದರಿಂದ, ಪ್ರಮುಖವವಾಗಿ ಇದರಿಂದ ಏಕಪರದೆಯ ಚಿತ್ರಮಂದಿರಗಳಿಗೆ ದೊಡ್ಡ ಏಟು ಬಿದ್ದಿದೆ.
ಈ ವರ್ಷವೇ ತೆಗೆದುಕೊಂಡರೆ, ಕಳೆದ ನಾಲ್ಕೂವರೆ ತಿಂಗಳಲ್ಲಿ ದೊಡ್ಡ ಸ್ಟಾರ್ ನಟರ ಚಿತ್ರಗಳ್ಯಾವುವೂ ಬಿಡುಗಡೆಯಾಗಿಲ್ಲ. ಕಳೆದ ವರ್ಷದ ಡಿಸೆಂಬರ್ ಕೊನೆಯಲ್ಲಿ ಉಪೇಂದ್ರ ಅಭಿನಯದ ಮತ್ತ ನಿರ್ದೇಶನದ ‘ಯುಐ’ ಮತ್ತು ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರಗಳು ಬಿಡುಗಡೆಯಾಗಿದ್ದು ಬಿಟ್ಟರೆ, ಮಿಕ್ಕಂತೆ ಸ್ಟಾರ್ ಚಿತ್ರಗಳು ಬಿಡುಗಡೆಯಾಗಿಲ್ಲ.
ಪ್ರಜ್ವಲ್, ವಿಜಯ್ ರಾಘವೇಂದ್ರ, ಗುರುನಂದನ್, ಧರ್ಮ ಕೀರ್ತಿರಾಜ್, ಅಜೇಯ್ ರಾವ್, ಪೃಥ್ವಿ ಅಂಬರ್ ಮುಂತಾದ ನಟರು ನಟಿಸಿದ ಚಿತ್ರಗಳು ಈ ವರ್ಷ ಬಿಡುಗಡೆಯಾಗಿವೆಯಾದರೂ, ಇದರಿಂದ ಚಿತ್ರರಂಗಕ್ಕೆ ದೊಡ್ಡ ಲಾಭವೇನೂ ಆಗಿಲ್ಲ. ದೊಡ್ಡವರ ಚಿತ್ರಗಳು ಬಿಡಗುಡೆಯಾಗುತ್ತಿಲ್ಲ, ಹೊಸಬರ ಚಿತ್ರಗಳನ್ನು ಜನ ನೋಡುತ್ತಿಲ್ಲ. ಇದೆಲ್ಲದರಿಂದ ಚಿತ್ರಮಂದಿರಗಳು ಖಾಲಿಯಾಗಿವೆ. ಇದೇ ಪರಿಸ್ಥಿತಿ ಮುಂದುವರೆದರೆ, ಈ ವರ್ಷ ಇನ್ನಷ್ಟು ಚಿತ್ರಮಂದಿರಗಳಿಗೆ ಬೀಗ ಹಾಕುವ ಪರಿಸ್ಥಿತಿ ಎದುರಾಗಬಹುದು ಎಂದು ಈ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಹೇಳಲಾಗುತ್ತಿದೆ. ಮೂರ್ನಾಲ್ಕು ವರ್ಷಗಳ ಹಿಂದೆ ಕೋವಿಡ್ ಸಮಯದಲ್ಲಿ ರಾಜ್ಯಾದ್ಯಂತ ಹಲವು ಚಿತ್ರಮಂದಿರಗಳು ಬಂದ್ ಆಗಿದ್ದವು. ನಂತರ ಪರಿಸ್ಥಿತಿ ಕೊಂಚ ಸುಧಾರಿಸಿತಾದರೂ, ಈಗ ಪ್ರೇಕ್ಷಕರ ಅಭಾವದಿಂದ ಇನ್ನಷ್ಟು ಚಿತ್ರಮಂದಿರಗಳು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸದ್ಯದಲ್ಲೇ ಮತ್ತೊಂದು ಸಭೆ; ಆ ನಂತರ ಮುಖ್ಯಮಂತ್ರಿಗಳ ಭೇಟಿ
ಈ ನಿಟ್ಟಿನಲ್ಲಿ ಚಿತ್ರರಂಗ ಶಿವರಾಜಕುಮಾರ್ ಅವರ ನೇತೃತ್ವದಲ್ಲಿ ಮತ್ತು ಮನೆಯಲ್ಲಿ ಸಭೆ ಸೇರಿದೆ. ಹಾಗಂತ ಇದೇ ಅಂತಿಮವಲ್ಲ. ಮೇ ಕೊನೆಯ ವಾರದಲ್ಲಿ ಇನ್ನೊಮ್ಮೆ ಚರ್ಚೆ ನಡೆಸಿ, ಮುಖ‍್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುತ್ತದೆ.
ಈ ಕುರಿತು ಮಾತನಾಡಿರುವ ಕರ್ನಾಟಕ ಪ್ರದರ್ಶಕರ ಸಂಘದ ಆಧ್ಯಕ್ಷ ಕೆ.ವಿ. ಚಂದ್ರಶೇಖರ್, ‘ಏಕಪರದೆಯ ಚಿತ್ರಮಂದಿರಗಳನ್ನು ಉಳಿಸುವ ನಿಟ್ಟಿನಲ್ಲಿ ಸಾಕಷ್ಟು ಚರ್ಚೆ ಮಾಡಲಾಗಿದೆ. ಈ ಸಂಬಂಧ ಸರ್ಕಾದಿಂದ ಚಿತ್ರರಂಗಕ್ಕೆ ಆಗಬೇಕಿರುವ ಕೆಲಸಗಳ ಕುರಿತು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಅವರನ್ನು ಭೇಟಿಯಾಗಿ ಚರ್ಚಿಸುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ’ ಎನ್ನುತ್ತಾರೆ.
ಒಟ್ಟಿನಲ್ಲಿ ಕನ್ನಡ ಚಿತ್ರರಂಗ ಕೊನೆಗೂ ಎಚ್ಚೆತ್ತಿರುವ ಹಾಗೆ ಕಾಣುತ್ತಿದೆ. ಮೊದಲ ಹಂತವಾಗಿ ಒಂದು ಸಭೆಯಂತೂ ಆಗಿದೆ. ಮುಂದಿನ ದಿನಗಳಲ್ಲಿ ಏನೆಲ್ಲಾ ಆಗುತ್ತದೆ ಎಂದು ಕಾದು ನೋಡಬೇಕಿದೆ.