ದೇವಾನು ದೇವತೆಗಳ ಅಧಿಪತಿಯಾದ ಶರಣ್‍; ‘ರಾಮರಸ’ ಚಿತ್ರದಲ್ಲಿ ನಟನೆ

‘ಜಟ್ಟ’ ಗಿರಿರಾಜ್‍ ನಿರ್ದೇಶನದಲ್ಲಿ ನಿರ್ಮಾಪಕ-ನಿರ್ದೇಶಕ ಗುರು ದೇಶಪಾಂಡೆ ಮತ್ತು ವಿಕ್ರಮ್‍ ಆರ್ಯ ಜೊತೆಯಾಗಿ ನಿರ್ಮಿಸುತ್ತಿರುವ ಚಿತ್ರ ‘ರಾಮರಸ’.;

Update: 2025-02-07 08:13 GMT
ಶರಣ್‌

ಶರಣ್‍ ಹೊಸ ಚಿತ್ರವೊಂದರಲ್ಲಿ ನಟಿಸದೆ ಕೆಲವು ಸಮಯವೇ ಆಗಿತ್ತು. ಇತ್ತೀಚಿನ ವರ್ಷಗಳಲ್ಲಿ ಅದೇ ‘ಅವತಾರ ಪುರುಷ’, ‘ಅವತಾರ ಪುರುಷ 2’ ಮತ್ತು ‘ಛೂ ಮಂತರ್’ ಚಿತ್ರಗಳ ಸುತ್ತಲೇ ಗಿರಕಿ ಹೊಡೆಯುತ್ತಿದ್ದ ಶರಣ್‍, ಅದರಿಂದ ಕೊನೆಗೂ ಆಚೆ ಬಂದಿದ್ದಾರೆ. ಆ ಚಿತ್ರಗಳ ಬಿಡುಗಡೆ ಗೊಂದಲ, ಮುಂದೂಡಿಕೆ … ಈ ಬಗ್ಗೆಯೇ ಸುದ್ದಿಯಾಗುತ್ತಿದ್ದ ಶರಣ್‍ ಮಧ್ಯದಲ್ಲೊಂದು ಅರವಿಂದ್‍ ಕುಪ್ಳೀಕರ್‍ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿಯಾಯಿತಾದರೂ, ಆ ಚಿತ್ರದ ಸುದ್ದಿಯೇ ಇಲ್ಲ.

ಇದೀಗ ಕೊನೆಗೂ ಹೊಸ ಚಿತ್ರವೊಂದರಲ್ಲಿ ಶರಣ್‍ ಹೆಸರು ಕೇಳಿ ಬರುತ್ತಿದೆ. ಈಗ ಅವರು ಹೊಸ ಚಿತ್ರವೊಂದರಲ್ಲಿ ದೇವಾನು ದೇವತೆಗಳ ಅಧಿಪತಿಯಾಗಿ, ಹೋಮ - ಹವನ ಮತ್ತು ಯಜ್ಞಗಳ ಒಡೆಯನಾದ ದೇವೇಂದ್ರನಾಗಿ ಕಾಣಿಸಿಕೊಂಡಿದ್ದಾರೆ. ಅದೇ ‘ರಾಮರಸ’.

‘ಜಟ್ಟ’ ಗಿರಿರಾಜ್‍ ನಿರ್ದೇಶನದಲ್ಲಿ ನಿರ್ಮಾಪಕ-ನಿರ್ದೇಶಕ ಗುರು ದೇಶಪಾಂಡೆ ಮತ್ತು ವಿಕ್ರಮ್‍ ಆರ್ಯ ಜೊತೆಯಾಗಿ ನಿರ್ಮಿಸುತ್ತಿರುವ ಚಿತ್ರ ‘ರಾಮರಸ’. ಈ ಚಿತ್ರದ ಶೀರ್ಷಿಕೆಯನ್ನು ಕಳೆದ ವರ್ಷ ರಾಮನವಮಿಯ ಸಂದರ್ಭದಲ್ಲಿ ಘೋಷಿಸಲಾಗಿತ್ತು. ಆ ನಂತರ ಚಿತ್ರದ ನಾಯಕನನ್ನಾಗಿ ಕಾರ್ತಿಕ್‍ ಮಹೇಶ್‍ ಅವರನ್ನು ಪರಿಚಯಿಸಲಾಯಿತು. ಹೇಬಾ ಪಟೇಲ್‍ ಮತ್ತು ಬಾಲಾಜಿ ಮನೋಹರ್‍ ಸಹ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಘೋಷಿಸಲಾಯಿತು. ಈಗ ಆ ಚಿತ್ರಕ್ಕೆ ಶರಣ್‍ ಆಗಮನವಾಗಿದೆ. ಗುರುವಾರ ಬೆಳಿಗ್ಗೆ ‘ರಾಮರಸ’ದಲ್ಲಿ ಶರಣ್ ನಟಿಸುತ್ತಿರುವ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಲಾಗಿದೆ.

ಹಾಗಂತ ಇಷ್ಟಕ್ಕೇ ಮುಗಿಯುವುದಿಲ್ಲ. ಈ ಚಿತ್ರದಲ್ಲಿ ಶರಣ್‍ ಎಷ್ಟು ಹೊತ್ತು ಇರುತ್ತಾರೆ ಎಂಬುದು ಸದ್ಯಕ್ಕೆ ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಈ ಚಿತ್ರದ ಮುಂದಿನ ಅಧ್ಯಾಯವನ್ನು ರೂಪಿಸುವುದಕ್ಕೆ ಚಿತ್ರತಂಡ ಉದ್ದೇಶಿಸಿದ್ದು, ಆ ಮುಂದಿನ ಅಧ್ಯಾಯದಲ್ಲಿ ಇನ್ನಷ್ಟು ಬಹಿರಂಗವಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

‘ರಾಮರಸ’ ಒಂದು ಹಾರಾರ್ ಕಾಮಿಡಿ ಜಾನರ್‍ನ ಚಿತ್ರವಾಗಿದ್ದು, ಗುರು ದೇಶಪಾಂಡೆ ನಡೆಸುತ್ತಿರುವ ಜಿ ಅಕಾಡೆಮಿ ಎಂಬ ತರಬೇತಿ ಸಂಸ್ಥೆಯ 16 ಜನ ಹೊಸ ಪ್ರತಿಭೆಗಳಿಗೆ ತರಬೇತಿ ನೀಡಿ ಈ ಚಿತ್ರದಲ್ಲಿ ನಟಿಸಲು ಅವಕಾಶ ನೀಡಲಾಗಿದೆ. ಅವರೊಂದಿಗೆ ಕನ್ನಡದ ಖ್ಯಾತ ನಟರೊಬ್ಬರು ನಟಿಸುತ್ತಿದ್ದಾರೆ ಎಂದು ಕಳೆದ ವರ್ಷವೇ ಹೇಳಲಾಗಿತ್ತು. ಆದರೆ, ಆ ಖ್ಯಾತ ನಟ ಯಾರು ಎಂಬ ವಿಷಯವನ್ನು ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ. ಈಗ ಶರಣ್‍ ನಟಿಸುತ್ತಿರುವ ಸುದ್ದಿ ಹೊರಬಿದ್ದಿದೆ.

ಬಿ.ಜೆ. ಭರತ್ ಈಗಾಗಲೇ ‘ರಾಮರಸ’ ದ ಎರಡು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನು, ಹಿರಿಯ ಛಾಯಾಗ್ರಾಹಕ ಎ.ವಿ. ಕೃಷ್ಣಕುಮಾರ್ ಈ ಚಿತ್ರದ ಛಾಯಾಗ್ರಹಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ.

Tags:    

Similar News