Sandalwood | ಎಂಟ್ರಿ ಸುಲಭ, ಹೋರಾಟ ನಿರಂತರ; ಸ್ಟಾರ್ ಮಕ್ಕಳಿಗೆ ಕಷ್ಟ...ಕಷ್ಟ...
ಸ್ಟಾರ್ ಮಕ್ಕಳು ಎಂದರೆ ಬಡವರ ಮಕ್ಕಳ ಹೊಟ್ಟೆಯ ಮೇಲೆ ಹೊಡೆಯುವ ನೆಪೋಟಿಸಂ ಕಿಡ್‍ಗಳು ಎಂದು ಹಣೆಪಟ್ಟಿ ಅಂಟಿಸಲಾಗಿದೆ. ಆದರೆ, ಚಿತ್ರರಂಗದ ಹಿನ್ನೆಲೆ ಇರುವ ಸ್ಕ್ಕಾರ್ ಮಕ್ಕಳಿಗೂ ಸಾಕಷ್ಟು ಸವಾಲುಗಳಿವೆ;
ನಟ-ನಿರ್ದೇಶಕ ಉಪೇಂದ್ರ ಅವರ ಮಗ ಆಯುಷ್, ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಆಯುಷ್ ಅಭಿನಯದ ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ ಇತ್ತೀಚೆಗೆ ಮಂತ್ರಾಲಯದಲ್ಲಿ ನೆರವೇರಿದೆ. ಚಿತ್ರ ಸದ್ಯದಲ್ಲೇ ಅಧಿಕೃತವಾಗಿ ಘೋಷಣೆಯಾಗಿ, ಸೆಟ್ಟೇರಲಿದೆ.
ಆಯುಷ್ ಚಿತ್ರರಂಗಕ್ಕೆ ಎಂಟ್ರಿ ಕೊಡುವ ವಿಷಯ ಕಳೆದ ವಾರದ ಮಾತು. ಅದಕ್ಕೂ ಮೊದಲು ಯುವ ರಾಜಕುಮಾರ್ ಅಭಿನಯದ ಮೂರನೇ ಚಿತ್ರ ಸೆಟ್ಟೇರಿದ ಸುದ್ದಿ ಬಂತು. ಈ ಚಿತ್ರಕ್ಕೆ ‘ದುನಿಯಾ’ ವಿಜಯ್ ಮಗಳು ರಿತನ್ಯಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇನ್ನೊಂದು ಕಡೆ ಧೀರೇನ್ ರಾಮ್‍ಕುಮಾರ್ ಅಭಿನಯದ ‘ಪಬ್ಬರ್’ ಎಂಬ ಚಿತ್ರ ಸೆಟ್ಟೇರಿದ್ದು, ಈ ಚಿತ್ರದಲ್ಲಿ ‘ನೆನಪಿರಲಿ’ ಪ್ರೇಮ್ ಮಗಳು ಅಮೃತಾ ಪ್ರೇಮ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಇಲ್ಲೊಂದು ವಿಷಯವನ್ನು ಗಮನಿಸಬೇಕು. ಮೇಲೆ ಹೇಳಿದ ಸಿನಿಮಾಗೆ ನಾಯಕ-ನಾಯಕಿಯಾಗಿ ಆಯ್ಕೆಯಾಗಿರುವವರೆಲ್ಲಾ ಸ್ಟಾರ್ ಮಕ್ಕಳು. ಹಿಂದೊಮ್ಮೆ ಈ ಮಕ್ಕಳ ಅಪ್ಪಂದಿರು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಈಗ ಮಕ್ಕಳ ಸರದಿ. ಮಕ್ಕಳು ಸಹ ಅದೃಷ್ಟ ಅರಸಿ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ.
ಸ್ಟಾರ್ ಮಕ್ಕಳ ದೊಡ್ಡ ಪರಂಪರೆ
ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ಜನಪ್ರಿಯ ಮಕ್ಕಳು ಸಹ ಚಿತ್ರರಂಗಕ್ಕೆ ಬರುವುದು ಇಂದು ನಿನ್ನೆಯದಲ್ಲ. 1961ರಲ್ಲಿ ಬಿಡುಗಡೆಯಾದ ‘ವಿಜಯನಗರದ ವೀರಪುತ್ರ’ ಚಿತ್ರದಲ್ಲಿ ಆರ್. ನಾಗೇಂದ್ರ ರಾಯರು ಪ್ರಮುಖ ಪಾತ್ರ ನಿರ್ವಹಿಸುವುದರ ಜೊತೆಗೆ ಚಿತ್ರವನ್ನು ನಿರ್ಮಿಸಿ-ನಿರ್ದೇಶನ ಮಾಡಿದರೆ, ಅವರ ಮಕ್ಕಳಾದ ಆರ್.ಎನ್. ಸುದರ್ಶನ್, ಆರ್.ಎನ್. ಜಯಗೋಪಾಲ್ ಮತ್ತು ಆರ್.ಎನ್. ಕೃಷ್ಣಪ್ರಸಾದ್ ಬೇರೆಬೇರೆ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಈ ಪೈಕಿ ಸುದರ್ಶನ್ ನಾಯಕನಾದರೆ, ಜಯಗೋಪಾಲ್ ಚಿತ್ರಕಥೆ ಮತ್ತು ಸಾಹಿತ್ಯವನ್ನು ರಚಿಸಿದ್ದರು. ಕೃಷ್ಣಪ್ರಸಾದ್ ಛಾಯಾಗ್ರಹಣ ಮಾಡಿದ್ದರು. ಹೀಗೆ ಶುರುವಾದ ಪರಂಪರೆ ಇಲ್ಲಿಯವರೆಗೂ ಅವ್ಯಾಹತವಾಗಿ ಮುಂದುವರೆದಿದೆ.
ಒಂದು ದಶಕದಲ್ಲಿ ಹೊಸ ಅಲೆ
ಕಳೆದ ಒಂದು ದಶಕದಿಂದಿತ್ತೀಚೆಗೆ ಹಲವು ನಟ-ನಟಿಯರ ಮಕ್ಕಳು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ರವಿಚಂದ್ರನ್ ಮಕ್ಕಳಾದ ಮನೋರಂಜನ್ ಮತ್ತು ವಿಕ್ರಮ್, ಅಂಬರೀಶ್ ಮಗ ಅಭಿಷೇಕ್ ಅಂಬರೀಶ್, ಶಶಿಕುಮಾರ್ ಮಗ ಅಕ್ಷಿತ್, ರಾಮ್‍ಕುಮಾರ್ ಮಗ ಧೀರೇನ್, ದೇವರಾಜ್ ಎರಡನೇ ಮಗ ಪ್ರಣಾಮ್ ದೇವರಾಜ್, ಡಿಂಗ್ರಿ ನಾಗರಾಜ್ ಮಗ ರಾಜವರ್ಧನ್, ಇಂದ್ರಜಿತ್ ಲಂಕೇಶ್ ಮಗ ಸಮರ್ಜಿತ್ ಲಂಕೇಶ್, ರಾಘವೇಂದ್ರ ರಾಜಕುಮಾರ್ ಮಕ್ಕಳಾದ ವಿನಯ್ ಮತ್ತು ಯುವ ರಾಜಕುಮಾರ್, ಕೆ. ಮಂಜು ಮಗ ಶ್ರೇಯಸ್ ಮಂಜು, ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ, ರಾಮ್‍ಕುಮಾರ್ ಮಗಳು ಧನ್ಯಾ ರಾಮ್‍ಕುಮಾರ್, ಮಾಲಾಶ್ರೀ ಮಗಳು ಆರಾಧನಾ, ಪ್ರೇಮ್ ಮಗಳು ಅಮೃತಾ, ‘ದುನಿಯಾ’ ವಿಜಯ್ ಮಕ್ಕಳಾದ ರಿತನ್ಯಾ ಮತ್ತು ಮೋನಿಷಾ ಮುಂತಾದವರು ಚಿತ್ರರಂಗದಲ್ಲಿ ಭವಿಷ್ಯ ಅರಸಿ ಬಂದಿದ್ದಾರೆ. ಇದಲ್ಲದೆ, ಶರಣ್ ಮಗ ಹೃದಯ್, ಪ್ರೇಮ್ ಮಗ ಏಕಾಂತ್, ಗಣೇಶ್ ಮಕ್ಕಳಾದ ವಿವಾನ್ ಮತ್ತು ಚಾರಿತ್ರ್ಯ, ನವೀನ್ ಕೃಷ್ಣ ಮಗ ಹರ್ಷಿತ್ ಸೇರಿದಂತೆ ಕೆಲವರು ಬಾಲನಟರಾಗಿ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ.
ಅವಕಾಶವಷ್ಟೇ ಅಲ್ಲ, ಪ್ರತಿಭೆ ಮತ್ತು ಅದೃಷ್ಟ ಮುಖ್ಯ
ಆದರೆ, ಹೀಗೆ ಬಂದ ಹಲವರು ನಿರಾಸೆ ಎದುರಿಸಿದ್ದೇ ಹೆಚ್ಚು. ಈ ಪೈಕಿ ಬಹಳಷ್ಟು ಸ್ಟಾರ್‌ಗಳ ಮಕ್ಕಳು ತಮ್ಮ ಮೊದಲ ಚಿತ್ರಗಳಲ್ಲಿ ದೊಡ್ಡ ಗೆಲುವನ್ನು ಕಾಣಲಿಲ್ಲ. ಅವರೆಲ್ಲಾ ತಮ್ಮ ಪ್ರತಿಭೆಯಿಂದ ಗಮನಸೆಳೆದರೂ, ಚಿತ್ರಗಳು ಸೋತಿದ್ದರಿಂದ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಮೊದಲ ಚಿತ್ರಗಳೇ ದೊಡ್ಡ ಮಟ್ಟದಲ್ಲಿ ಸೋತಿದ್ದರಿಂದ ಕೆಲವರಿಗೆ ಮುಂದೆ ಅವಕಾಶಗಳು ಸಿಗುವುದು ಕಷ್ಟವಾಯಿತು. ಇನ್ನೂ ಕೆಲವರಿಗೆ ಅವಕಾಶಗಳು ಸಿಕ್ಕರೂ, ಮುಂದಿನ ಪ್ರಯತ್ನಗಳು ಸತತವಾಗಿ ಸೋತಿದ್ದರಿಂದ, ಅವರು ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವುದಕ್ಕೆ ಕಷ್ಟಪಡುತ್ತಲೇ ಇದ್ದಾರೆ.
ಮಾಲಾಶ್ರೀ ಮಗಳು ಆರಾಧನಾ ರಾಮ್ ಅಭಿನಯದ ಮೊದಲ ಚಿತ್ರ ‘ಕಾಟೇರ’ ದೊಡ್ಡ ಯಶಸ್ಸು ಪಡೆಯಿತು. ಆದರೆ, ಅದ್ಯಾಕೋ ಗೊತ್ತಿಲ್ಲ. ಆರಾಧನಾಗೆ ಇನ್ನೂ ಒಂದು ಅವಕಾಶ ಸಿಕ್ಕಿಲ್ಲ. ಮೊದಲ ಚಿತ್ರ ಬಿಡುಗಡೆಯಾಗಿ ಒಂದೂವರೆ ವರ್ಷಗಳ ನಂತರವೂ ಆಕೆಯ ಎರಡನೆಯ ಚಿತ್ರ ಶುರುವಾಗಿಲ್ಲ. ನಿಜಕ್ಕೂ ಅವಕಾಶ ಸಿಗುತ್ತಿಲ್ಲವೋ ಅಥವಾ ಆರಾಧನಾ ಚ್ಯೂಸಿಯಾಗಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಇನ್ನೊಂದು ಚಿತ್ರದಲ್ಲಿ ಆರಾಧನಾ ಹೆಸರು ಕಾಣಿಸಿಲ್ಲ.
ಎಂಟ್ರಿ ಸುಲಭವಾದರೂ ನಿರಂತರ ಹೋರಾಟ
ಚಿತ್ರರಂಗದ ಹಿನ್ನೆಲೆಯವರಾದ್ದರಿಂದ ಇವರಿಗೆ ಚಿತ್ರರಂಗಕ್ಕೆ ಬರುವುದು ಸುಲಭವಾಗಿರಬಹುದು. ಆದರೆ, ಏನೇ ಹಿನ್ನೆಲೆ ಇದ್ದರೂ, ಎಷ್ಟೇ ಪ್ರತಿಭೆ ಇದ್ದರೂ ಮುಂದಿನ ಹೋರಾಟ ಒಂಟಿಯಾಗಿ ಮಾಡಬೇಕಾಗುತ್ತದೆ. ಇದಕ್ಕೆ ಹಿನ್ನೆಲೆ, ವಶೀಲಿ ಯಾವುದೂ ಸಹಾಯ ಮಾಡುವುದಿಲ್ಲ. ಪ್ರಮುಖವಾಗಿ ಪ್ರತಿಭೆ ಇರಬೇಕು. ಮೇಲಾಗಿ ಅದೃಷ್ಟ ಇರಬೇಕು. ಹಾಗಾದಾಗ, ಮಾತ್ರ ಜನ ಪ್ರೀತಿಯಿಂದ ಸ್ವೀಕರಿಸುತ್ತಾರೆ. ಇಲ್ಲವಾದರೆ ನಿರ್ದಾಕ್ಷಿಣ್ಯವಾಗಿ ಪಕ್ಕಕ್ಕೆ ಇಡುತ್ತಾರೆ. ಸುಮ್ಮನೆ ಒಮ್ಮೆ ಕನ್ನಡ ಚಿತ್ರರಂಗದ ಇತಿಹಾಸವನ್ನೂ ಸೂಕ್ಷ್ಮವಾಗಿ ನೋಡಿದರೆ, ಸ್ವೀಕೃತರಾದವರ ಮತ್ತು ಕಳೆದು ಹೋದ ಸಾಕಷ್ಟು ಮಂದಿ ಸಿಗುತ್ತಾರೆ. ಚಿತ್ರರಂಗದ ಹಿನ್ನೆಲೆ ಇದ್ದವರೆಲ್ಲಾ ಇಲ್ಲಿ ದೊಡ್ಡದಾಗಿ ಬೆಳೆಯುವುದಕ್ಕೆ ಸಾಧ್ಯವಾಗಿಲ್ಲ ಎಂಬುದನ್ನು ಹಲವು ಉದಾಹರಣೆಗಳ ಮೂಲಕ ನಿರೂಪಿಸಬಹುದು.
ಬಡವರ ಮಕ್ಕಳಷ್ಟೇ ಸವಾಲುಗಳು
ಸ್ಟಾರ್ ಮಕ್ಕಳು ಎಂದರೆ ಒಂದು ಕಾಲಕ್ಕೆ ಅವರನ್ನು ನೋಡುತ್ತಿದ್ದ ರೀತಿ ಬೇರೆ ಇತ್ತು. ಅವರೇನು ಮಾಡಬಹುದು ಎಂಬ ಕುತೂಹಲ ಪ್ರೇಕ್ಷಕರಿಗಿರುತ್ತಿತ್ತು. ಆದರೆ, ಈಗ ಅವರನ್ನು ನೋಡುವ ರೀತಿ ಬೇರೆಯಾಗಿದೆ. ಸ್ಟಾರ್ ಮಕ್ಕಳು ಎಂದರೆ ಬಡವರ ಮಕ್ಕಳ ಹೊಟ್ಟೆಯ ಮೇಲೆ ಹೊಡೆಯುವ, ಅವರ ಅವಕಾಶಗಳು ಕಿತ್ತುಕೊಳ್ಳುವ ನೆಪೋಟಿಸಂ ಕಿಡ್‍ಗಳು ಎಂದು ಹಣೆಪಟ್ಟಿ ಅಂಟಿಸಲಾಗಿದೆ. ಆದರೆ, ಬಡವರ ಮಕ್ಕಳಷ್ಟೇ, ಚಿತ್ರರಂಗದ ಹಿನ್ನೆಲೆ ಇರುವ ಮಕ್ಕಳಿಗೂ ಸಾಕಷ್ಟು ಸವಾಲುಗಳಿವೆ. ಅಪ್ಪನ ಹೆಸರಿಂದಲೇ ಮಕ್ಕಳು ಸಹ ದೊಡ್ಡ ಹೆಸರು ಮಾಡಬಹುದು ಎಂದಿದ್ದರೆ, ಬಹಳಷ್ಟು ಮಕ್ಕಳು ಕಷ್ಟಪಡಬೇಕಿರಲಿಲ್ಲ. ಆದರೆ, ಸ್ಟಾರ್ ಮಕ್ಕಳು ಸಾಕಷ್ಟು ಸೈಕಲ್ ಹೊಡೆದಿದ್ದಾರೆ, ಈಗಲೂ ಹೊಡೆಯುತ್ತಲೇ ಇದ್ದಾರೆ.
ಹೀಗಿರುವಾಗಲೇ, ಇನ್ನಷ್ಟು ಚಿತ್ರರಂಗದವರ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡುವ ಸುದ್ದಿಗಳು ಬರುತ್ತಲೇ ಇರುತ್ತವೆ. ಪ್ರಮುಖವಾಗಿ, ಸುಧಾರಾಣಿ ಮಗಳು ನಿಧಿ, ಶ್ರುತಿ ಮಗಳು ಗೌರಿ, ಉಪೇಂದ್ರ ಮಗಳು ಐಶ್ವರ್ಯಾ, ‘ದುನಿಯಾ’ ವಿಜಯ್ ಮಗ ಸಾಮ್ರಾಟ್ … ಸೇರಿದಂತೆ ಇನ್ನಷ್ಟು ಜನರು ಚಿತ್ರರಂಗಕ್ಕೆ ಎಂಟ್ರಿ ಕೊಡುವ ಸುದ್ದಿಗಳು ಆಗಾಗ ಕೇಳಿಬರುತ್ತವೆ.