ಇನ್ನೆರಡು ವರ್ಷದಲ್ಲಿ ಕಾಸರವಳ್ಳಿ ಅವರ ಘಟಶ್ರಾದ್ಧ ಚಿತ್ರದ ಹೊಸರೂಪ

ಇಟಲಿಯ ʼಲ ಇಮಾಜಿನ್‌ ರಿಟ್ರೋವತ ಸಂಸ್ಕರಣ ಘಟಕದಲ್ಲಿ ಘಟಶ್ರಾದ್ಧ ಚಿತ್ರದ ಮರು ಸೃಷ್ಟಿಯ ಕಾರ್ಯ ಆರಂಭವಾಗಲಿದೆ.;

Update: 2024-02-25 12:54 GMT
ಘಟಶ್ರಾದ್ಧ ಚಿತ್ರದ ಪೋಸ್ಟರ್

ಕನ್ನಡ ಚಲನಚಿತ್ರರಂಗದ ಅತ್ಯಮೂಲ್ಯ ಚಿತ್ರಗಳ ಪೈಕಿ ಒಂದೆಂದು ಗುರುತಿಸಿಕೊಂಡಿರುವ ಗಿರೀಶ್‌ ಕಾಸರವಳ್ಳಿ ಅವರ ಘಟಶ್ರಾದ್ಧ ಚಿತ್ರ ಶೀಘ್ರದಲ್ಲಿ ಪುನಶ್ಚೇತನಗೊಂಡು ಸಹೃದಯ ಪ್ರೇಕ್ಷಕರನ್ನು ತಲುಪಲಿದೆ.

ಹಾಲಿವುಡ್‌ನ ಖ್ಯಾತ ನಿರ್ದೇಶಕ ಹಾಗೂ ಚಲನಚಿತ್ರ ಸಂರಕ್ಷಣೆ ಮತ್ತು ಪುನಶ್ಚೇತನ ಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮಾರ್ಟಿನ್‌ ಸ್ಕಾರ್ಸೆಸಿ ಅವರ ಸಿನಿಮಾ ಫೌಂಡೇಷನ್‌ ನ ವರ್ಲ್ಡ್‌ ಸಿನಿಮಾ ಪ್ರಾಜೆಕ್ಟ್‌ ಹಾಗೂ ಸ್ಟಾರ್ ವಾರ್ಸ್‌ ಚಿತ್ರಸರಣಿಯ ನಿರ್ದೇಶಕ ಜಾರ್ಜ್‌ ಲ್ಯೂಕಾಸ್‌ ತಮ್ಮ ಪತ್ನಿಯ ಸಹಕಾರದೊಂದಿಗೆ ಕಟ್ಟಿಕೊಂಡಿರುವ ಹ್ಯಾಬ್ರನ್‌-ಲ್ಯೂಕಾಸ್‌ ಫೌಂಡೇಷನ್‌ ಜತೆಗೂಡಿ ಘಟಶ್ರಾದ್ಧ ಚಿತ್ರವನ್ನು ಮರುಸೃಷ್ಟಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ.

ಇಟಲಿಯ ʼಲ ಇಮಾಜಿನ್‌ ರಿಟ್ರೋವತ ಸಂಸ್ಕರಣ ಘಟಕದಲ್ಲಿ ಘಟಶ್ರಾದ್ಧ ಚಿತ್ರದ ಮರು ಸೃಷ್ಟಿಯ ಕಾರ್ಯ ಆರಂಭವಾಗಲಿದೆ. ಈ ಸಂಸ್ಕರಣ ಕಾರ್ಯ ಘಟಶ್ರಾದ್ಧ ಚಿತ್ರಕ್ಕೆ 50 ವರ್ಷ ತುಂಬುವ ವೇಳೆಗೆ ಪೂರ್ಣಗೊಳ್ಳಲಿದೆ. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ ಮತ್ತು ಪುಣೆಯಲ್ಲಿರುವ ನ್ಯಾಷನಲ್‌ ಫಿಲಂ ಆರ್ಖೈವ್‌ ಆಫ್‌ ಇಂಡಿಯಾದಲ್ಲಿ ಘಟಶ್ರಾದ್ಧದ ಮೂಲ ಕ್ಯಾಮರಾ ನೆಗೆಟೀವ್‌ ಅನ್ನು ಸಂಸ್ಕರಿಸಿ ಇರಿಸಲಾಗಿದೆ.

“ಘಟಶ್ರಾದ್ಧ ಚಿತ್ರ ಚಲನಚಿತ್ರ ನಿರ್ದೇಶಕನಾಗಿ ನನ್ನ ಮೊದಲ ಚಿತ್ರ. ಈ ಚಿತ್ರವನ್ನು ಸಂಸ್ಕರಿಸಿ ಕಾರ್ಯವನ್ನು ಜಗತ್ತಿನ ಅತ್ಯುತ್ತಮ ನಿರ್ದೇಶಕರು ಕೈಗೆತ್ತಿಕೊಂಡಿರುವುದು ನನಗೆ ನಿಜಕ್ಕೂ ಹೆಮ್ಮೆ ಎನ್ನಿಸುತ್ತಿದೆ. ಈ ಚಿತ್ರದ ಸಂಸ್ಕರಣ ಮತ್ತು ಮರುಸೃಷ್ಟಿ ಕಾರ್ಯ 2026ರ ವೇಳೆಗೆ ಪೂರ್ಣಗೊಳ್ಳಲಿದೆ. ಅದು ಘಟಶ್ರಾದ್ಧ ಚಿತ್ರದ ಐವತ್ತನೇ ವರ್ಷ. ಅದು ಮರುಸೃಷ್ಟಿಗೊಂಡಾಗ ತಳೆಯಬಹುದಾದ ರೂಪವನ್ನು ನೋಡಲು ನಾನು ಕಾತುರನಾಗಿದ್ದೇನೆ” ಎಂದು, ತಮ್ಮ ಮೊದಲ ಚಿತ್ರದ ಹೊಸ ರೂಪ ಕುರಿತು ಗಿರೀಶ್‌ ಕಾಸರವಳ್ಳಿ ಪ್ರತಿಕ್ರಿಯಿಸಿದ್ದಾರೆ.

ಘಟಶ್ರಾದ್ಧ ಚಿತ್ರ ಚಲನಚಿತ್ರ ನಿರ್ದೇಶಕ ಗಿರೀಶ್‌ ಕಾಸರವಳ್ಳಿ

ಘಟಶ್ರಾದ್ಧ ಹೊಸ ರೂಪ ತಳೆದು ಹೊರಬರಲು ಕಾರಣರಾಗಿರುವ ಫಿಲಂ ಹೆರಿಟೇಜ್‌ ಫೌಂಡೇಷನ್‌ ನ ಶಿವೇಂದ್ರ ಸಿಂಗ್‌ ಡುಂಗರ್ಪುರ್‌ ಅವರು ತಾವು ದೇಶದ ಪ್ರತಿಭಾಷೆಯ ಅತ್ಯುತ್ತಮ ಕಲಾತ್ಮಕ ಚಿತ್ರವನ್ನು ಸಂಸ್ಕರಿಸಿ ಮುಂದಿನ ತಲೆಮಾರಿಗೆ ದಾಟಿಸುವ ಕೆಲಸವನ್ನು ಮಾಡುತ್ತಿರುವುದಾಗಿಯೂ, ಘಟಶ್ರಾದ್ಧ ಈ ಪ್ರಯತ್ನದ ಮುಂದಿವರಿದ ಭಾಗವೆಂದು ಹೇಳಿಕೊಂಡಿದ್ದಾರೆ.

ಗಿರೀಶ್‌ ಕಾಸರವಳ್ಳಿ ಅವರು ಈ ಘಟಶ್ರಾದ್ಧ ಚಿತ್ರವನ್ನು ನಿರ್ದೇಶಿಸಿದ್ದು 1977ರಲ್ಲಿ. ಈ ಚಿತ್ರರಂಗ ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲೇ ಒಂದು ಮೈಲಿಗಲ್ಲಿನಂಥ ಚಲನಚಿತ್ರ ಕೃತಿ ಎಂದು ಗುರುತಿಸಲಾಗಿದೆ. ಇದು ಜ್ಞಾನಪೀಠ ಪುರಸ್ಕೃತ ಸಾಹಿತಿ ಯು ಆರ್‌ ಅನಂತಮೂರ್ತಿ ಅವರ ಕಾದಂಬರಿಯನ್ನು ಆಧರಿಸಿದ ಚಿತ್ರ.

ಈ ಚಿತ್ರ 1977ರ ಚಲನಚಿತ್ರಗಳಿಗಾಗಿ ನೀಡುವ 25ನೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಮೂರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು. 2002 ರಲ್ಲಿ, ಘಟಶ್ರಾದ್ಧವು ಸಿನಿಮಾದ ಶತಮಾನೋತ್ಸವದ ಸಂಭ್ರಮಾಚರಣೆಯ ಸಂದರ್ಭದಲ್ಲಿ 100 ಇತರರ ಪೈಕಿ ಪ್ಯಾರಿಸ್‌ನ ನ್ಯಾಷನಲ್ ಆರ್ಕೈವ್‌ನಿಂದ ಆಯ್ಕೆಯಾದ ಏಕೈಕ ಭಾರತೀಯ ಚಲನಚಿತ್ರವಾಯಿತು. 2009ರಲ್ಲಿ ನಡೆದ ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಘಟಶ್ರಾದ್ಧ ಇದು 1.6 ಮಿಲಿಯನ್ ಮತಗಳನ್ನು ಪಡೆದು, ಭಾರತೀಯ ಚಿತ್ರರಂಗದ 20 ಅತ್ಯುತ್ತಮ ಚಲನಚಿತ್ರಗಳಲ್ಲಿ ಒಂದೆಂದು ಆಯ್ಕೆಯಾಯಿತು.

Tags:    

Similar News