ನಿರ್ದೇಶಕರಾಗಿ 50 ವರ್ಷ ಪೂರೈಸಿದ ರಾಜೇಂದ್ರ ಸಿಂಗ್ ಬಾಬು; ಇಡೀ ದೇಶದಲ್ಲೇ ಮೊದಲು
ಕೃಷ್ಣೇಗೌಡ ನೇತೃತ್ವದ ಕನ್ನಡ ಚಲನಿಚಿತ್ರ ವಾಣಿಜ್ಯ ಮಂಡಳಿಯು ‘SVR 50’ ಎಂಬ ಕಾರ್ಯಕ್ರಮ ಆಯೋಜಿಸಿ ರಾಜೇಂದ್ರ ಸಿಂಗ್ ಬಾಬು ಅವರನ್ನು ಆತ್ಮೀಯವಾಗಿ ಸನ್ಮಾನಿಸಲು ಮುಂದಾಗಿದೆ.
ಇಳಯರಾಜ ಅವರು ಸಂಗೀತ ನಿರ್ದೇಶಕರಾಗಿ 50 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ತಮಿಳು ನಾಡು ಸರ್ಕಾರವು, ಇಳಯರಾಜ ಅವರನ್ನು ಬೃಹತ್ ಕಾರ್ಯಕ್ರಮವೊಂದರಲ್ಲಿ ಗೌರವಿಸಿತು. ಮುಖ್ಯಮಂತ್ರಿ ಸ್ಟಾಲಿನ್, ರಜನಿಕಾಂತ್, ಕಮಲ್ ಹಾಸನ್, ಎ.ಆರ್. ರೆಹಮಾನ್ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಇಳಯರಾಜ ಅವರನ್ನು ಗೌರವಿಸಿದರು.
ಇದೀಗ, ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಸಹ ನಿರ್ದೇಶಕರಾಗಿ 50 ವರ್ಷಗಳಾಗಿವೆ. ಇಡೀ ದೇಶದಲ್ಲಿ 50 ವರ್ಷಗಳನ್ನು ಮುಗಿಸಿ, ಈಗಲೂ ಸಕ್ರಿಯವಾಗಿರುವ ಇನ್ನೊಬ್ಬ ನಿರ್ದೇಶಕರು ಸಿಗುವುದಿಲ್ಲ. ಈ ನಿಟ್ಟಿನಲ್ಲಿ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಹೆಗ್ಗಳಿಕೆಗೆ ದೊಡ್ಡದು. 1975ರಲ್ಲಿ ಬಿಡುಗಡೆಯಾದ ‘ನಾಗಕನ್ಯೆ’ ಚಿತ್ರದ ಮೂಲಕ ನಿರ್ದೇಶಕರಾದ ಬಾಬು, 30ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸುವುದರ ಜೊತೆಗೆ ಈಗಲೂ ಅವರ ‘ರಕ್ತ ಕಾಶ್ಮೀರ’ ಮತ್ತು ‘ಕಂಬಳ’ ಚಿತ್ರಗಳು ಬಿಡುಗಡೆಯಾಗುವುದಕ್ಕಿವೆ. ಈ ಸಂಭ್ರಮವನ್ನು ಹಂಚಿಕೊಳ್ಳಲು ಕೃಷ್ಣೇಗೌಡ ನೇತೃತ್ವದ ಕನ್ನಡ ಚಲನಿಚಿತ್ರ ವಾಣಿಜ್ಯ ಮಂಡಳಿಯು ‘SVR 50’ ಎಂಬ ಕಾರ್ಯಕ್ರಮ ಆಯೋಜಿಸಿ ರಾಜೇಂದ್ರ ಸಿಂಗ್ ಬಾಬು ಅವರನ್ನು ಆತ್ಮೀಯವಾಗಿ ಸನ್ಮಾನಿಸಲು ಮುಂದಾಗಿದೆ.
ಅಕ್ಟೋಬರ್ 23ರಂದು ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಅಲ್ಲಿಂದ ನಾಲ್ಕು ದಿನಗಳ ಕಾಲ ಕಲಾವಿದರ ಸಂಘದಲ್ಲಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಚಿತ್ರಗಳ ಚಿತ್ರೋತ್ಸವ ನಡೆಯಲಿದೆ. ‘ನಾಗರಹೊಳೆ’, ‘ಅಂತ’, ‘ಬಂಧನ’, ‘ಮುತ್ತಿನ ಹಾರ’, ‘ಹೂವು ಹಣ್ಣು’, ‘ಕುರಿಗಳು ಸಾರ್ ಕುರಿಗಳು’ ಸೇರಿದಂತೆ ಎಂಟು ಚಿತ್ರಗಳ ಪ್ರದರ್ಶನವಿರುತ್ತದೆ. ಚಿತ್ರಗಳ ಪ್ರದರ್ಶನದ ನಂತರ ಆ ಚಿತ್ರಗಳ ಕುರಿತಾದ ಸಂವಾದ ಸಹ ನಡೆಯಲಿದೆ. ಈ ಸಂದರ್ಭದಲ್ಲಿ ಕನ್ನಡ ಹಾಗೂ ಇತರ ಭಾಷೆಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಅಕ್ಟೋಬರ್ 27 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಅಂದು ರಾಜೇಂದ್ರಸಿಂಗ್ ಬಾಬು ಅವರಿಗೆ ಚಿತ್ರರಂಗದ ಪರವಾಗಿ ಆತ್ಮೀಯವಾಗಿ ಸನ್ಮಾನ ಸಮಾರಂಭ ನಡೆಯಲಿದೆ. ಅಂದು ಬಾಬು ಕುರಿತು ಎರಡು ಪುಸ್ತಕಗಳು ಬಿಡುಗಡೆಯಾಗಲಿವೆ. ಬಾಬು ನಡೆದು ಬಂದ ಹಾದಿಯ ಬಗ್ಗೆ ಬಿ.ಎಸ್. ಲಿಂಗದೇವರು ಒಂದು ಸಾಕ್ಷ್ಯಚಿತ್ರ ನಿರ್ದೇಶಿಸುತ್ತಿದ್ದು, ಅದು ಸಹ ಅಂದು ಪ್ರದರ್ಶನವಾಗಲಿದೆ. ಹಂಸಲೇಖ ಅವರ ನೇತೃತ್ವದಲ್ಲಿ ರಾಜೇಂದ್ರಸಿಂಗ್ ಬಾಬು ಅವರ ನಿರ್ದೇಶನದ ಚಿತ್ರಗಳ ಜನಪ್ರಿಯ ಹಾಡುಗಳನ್ನು ಹಂಸಲೇಖ ಅವರ ತಂಡದವರು ಹಾಡಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಸಮಾರಂಭದಲ್ಲಿ ಶಿವರಾಜಕುಮಾರ್, ರಮೇಶ್ ಅರವಿಂದ್ ಸೇರಿದಂತೆ ಕನ್ನಡ ಚಿತ್ರರಂಗದಲ್ಲಿ ಹಲವು ನಟ-ನಟಿಯರು ಭಾಗವಹಿಸುವ ನಿರೀಕ್ಷೆ ಇದೆ.
ಸಮಾರಂಭದ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ನಾಗತಿಹಳ್ಳಿ ಚಂದ್ರಶೇಖರ್, ಪಿ. ಶೇಷಾದ್ರಿ, ನಂಜುಂಡೇಗೌಡ, ವಿಜಯಲಕ್ಷ್ಮಿ ಸಿಂಗ್, ಸಂಗೀತ ನಿರ್ದೇಶಕ ಹಂಸಲೇಖ, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಪತ್ರಕರ್ತ ಗಂಗಾಧರ್ ಮೊದಲಿಯರ್, ಬಿ.ಎಸ್. ಲಿಂಗದೇವರು, ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್ ಕೆ. ವಿಶ್ವನಾಥ್, ಸಂಕಲನಕಾರ ಕೆಂಪರಾಜ್ ಹಾಗೂ ಸಮಾರಂಭದ ಆಯೋಜಕರಾದ ಕೃಷ್ಣೇಗೌಡಉಪಸ್ಥಿತರಿದ್ದರು.