ರಾಜ್ಯದ 400 ಚಿತ್ರಮಂದಿರಗಳಲ್ಲಿ ‘ಪುಷ್ಪ 2’; ಎಲ್ಲಿ ಹೋಯಿತು ಟಿಕೆಟ್ ಬೆಲೆಯೇರಿಕೆ ವಿರುದ್ಧದ ʼಕನ್ನಡಪರʼ ಹೋರಾಟ?
‘ಪುಷ್ಪ 2’ ಚಿತ್ರದ ಟಿಕೆಟ್ ಬೆಲೆ ಏರಿಕೆಯಾದರೆ ಚಿತ್ರಮಂದಿರಗಳಿಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಮತ್ತು ಕನ್ನಡ ಹೋರಾಟಗಾರ ಸಾ.ರಾ. ಗೋವಿಂದು ಎಚ್ಚರಿಸಿದ್ದರು. ಈಗ ಮಾತಿನಿಂದ ಹಿಂದೆ ಸರಿದಿದ್ದಾರೆ;
ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ ಚಿತ್ರವು ಡಿಸೆಂಬರ್ 5ರಂದು ಜಗತ್ತಿನಾದ್ಯಂತ 12 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಕರ್ನಾಟಕದಲ್ಲೇ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದ್ದು, ಈ ಪೈಕಿ ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದ ಮೂರು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಆಗುತ್ತಿದೆ.
‘ಪುಷ್ಪ 2’ ಚಿತ್ರದ ಟಿಕೆಟ್ ಬೆಲೆ ಏರಿಕೆಯಾದರೆ ಚಿತ್ರಮಂದಿರಗಳಿಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಮತ್ತು ಕನ್ನಡಪರ ಹೋರಾಟಗಾರ ಸಾ.ರಾ. ಗೋವಿಂದು ಕೆಲವು ದಿನಗಳ ಎಚ್ಚರಿಸಿದ್ದರು. ಆದರೆ, ಇದೀಗ ಅವರು ತಮ್ಮ ಮಾತಿನಿಂದ ಹಿಂದೆ ಸರಿದಿದ್ದಾರೆ …
ಈ ಹಿಂದೆ, ಡಾ. ರಾಜಕುಮಾರ್ ಅಭಿನಯದ ಕೆಲವು ಚಿತ್ರಗಳು ಮೆಜೆಸ್ಟಿಕ್ ಪ್ರದೇಶದಲ್ಲಿ ಎರಡು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿರುವುದುಂಟು. ಇದೇ ಮೊದಲ ಬಾರಿಗೆ ಪರಭಾಷೆಯ ಒಬ್ಬ ನಟನ ಚಿತ್ರಕ್ಕೆ ಸಂತೋಷ್, ತ್ರಿವೇಣಿ ಮತ್ತು ಅನುಪಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ. ಈ ಮೂರೂ ಚಿತ್ರಮಂದಿರಗಳು ಕೂಗಳತೆಯ ದೂರದಲ್ಲಿದ್ದು, ಈ ಮೂರು ಚಿತ್ರಮಂದಿರಗಳಲ್ಲಿ ‘ಪುಷ್ಪ 2’ ಚಿತ್ರದ ಮೂರು ಭಾಷೆಯ ಅವತರಣಿಕೆಗಳು ಬಿಡುಗಡೆಯಾಗುತ್ತಿವೆ. ಕನ್ನಡದ ಚಿತ್ರಗಳಿಗೆ ಸಿಗದ ಇಂಥದ್ದೊಂದು ಸೌಲಭ್ಯ ಪರಭಾಷಾ ಚಿತ್ರಗಳಿಗೆ ಮಾತ್ರವೇಕೆ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಪರಭಾಷಾ ಚಿತ್ರಗಳ ಟಿಕೆಟ್ ಬೆಲೆ ಮತ್ತು ಪ್ರದರ್ಶನಕ್ಕೆ ಯಾವುದೇ ಮಿತಿ ಇಲ್ಲ
ಇನ್ನು, ಕರ್ನಾಟಕ ಸೇರಿದಂತೆ ಬೇರೆ ರಾಜ್ಯಗಳಲ್ಲಿ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಪ್ರಾರಂಭವಾಗಿದೆ. ಬೆಂಗಳೂರಿನಲ್ಲಿ ಮೊದಲ ದಿನದ 1000ಕ್ಕೂ ಹೆಚ್ಚು ಪ್ರದರ್ಶನಗಳಿಗೆ ಈಗಾಗಲೇ ಬುಕ್ ಮೈ ಶೋ ಮೂಲಕ ಟಿಕೆಟ್‍ಗಳನ್ನು ಬುಕ್ ಮಾಡಲಾಗುತ್ತಿದೆ. ಬೆಳಗಿನ ಜಾವ ಮೂರು ಗಂಟೆಯಿಂದಲೇ ಪ್ರದರ್ಶನ ಪ್ರಾರಂಭವಾಗುತ್ತಿದೆ. ತಾವರೆಕೆರೆಯ ಬಾಲಾಜಿ ಸಿನಿಮಾದಲ್ಲಿ 3.30ಕ್ಕೆ ಮೊದಲ ಪ್ರದರ್ಶನ ಶುರುವಾಗಲಿದ್ದು, ಒಂದೊಂದು ಟಿಕೆಟ್ ಬೆಲೆ 1000 ರೂ. ನಿಗದಿಪಡಿಸಲಾಗಿದೆ. ಕತ್ತರಿಗುಪ್ಪೆಯ ಕಾಮಾಕ್ಯ ಚಿತ್ರಮಂದಿರದಲ್ಲಿ ಬೆಳಿಗ್ಗೆ ನಾಲ್ಕು ಗಂಟೆಗೆ ಪ್ರದರ್ಶನ ಶುರುವಾಗಲಿದ್ದು, ಟಿಕೆಟ್ ಬೆಲೆ ಕ್ರಮವಾಗಿ 800 ಮತ್ತು 600 ರೂ.ಗಳನ್ನು ನಿಗದಿಪಡಿಸಲಾಗಿದೆ. ಚಂದ್ರೋದಯ ಚಿತ್ರಮಂದಿರದಲ್ಲಿ ನಾಲ್ಕು ಗಂಟೆಗೆ ಮೊದಲ ಪ್ರದರ್ಶನ ಶುರುವಾಗಲಿದ್ದು, 900, 750 ಮತ್ತು 500 ರೂ.ಗಳ ಟಿಕೆಟ್ ಬೆಲೆ ನಿಗದಿಪಡಿಸಲಾಗಿದೆ. ರಾಜಾಜಿನಗರದ ನವರಂಗ್, ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರಗಳಲ್ಲಿ ಆರು ಪ್ರದರ್ಶಗಳು ನಡೆಯಲಿವೆ. ಈ ಪೈಕಿ ಪ್ರಸನ್ನ ಚಿತ್ರಮಂದಿರದ ಮೊದಲ ಪ್ರದರ್ಶನ 3.15ಕ್ಕೆ ಶುರುವಾಗಲಿದೆ. PNR ಫೆಲಿಸಿಟಿ ಮಾಲ್‍ನ ಸಿನಿಫೈಲ್‍ನಲ್ಲಿ ಮೊದಲ 24 ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಬಹುತೇಕ ಏಕಪರದೆಯ ಚಿತ್ರಮಂದಿರಗಳಲ್ಲಿ ಬೆಳಿಗ್ಗೆ 3 ಅಥವಾ 4 ಗಂಟೆಗೆ ಪ್ರದರ್ಶನ ಶುರುವಾಗಲಿದೆ. ಬೆಂಗಳೂರಿನ ಚಿತ್ರಮಂದಿರಗಳ ಪ್ರದರ್ಶನದ ಮಾಹಿತಿ ಮಾತ್ರ ಹೊರಬಿದ್ದಿದೆ. ಇದು ಆರಂಭ ಅಷ್ಟೇ. ಇಲ್ಲಿ ಕೆಲವು ಚಿತ್ರಮಂದಿರಗಳ ಮಾಹಿತಿ ಮಾತ್ರ ಇದೆ. ಇಂದಿನಿಂದ ಪೂರ್ಣಪ್ರಮಾಣದಲ್ಲಿ ಬೇರೆ ಚಿತ್ರಮಂದಿರಗಳಲ್ಲೂ ಬುಕಿಂಗ್ ಶುರುವಾಗಲಿದೆ. ಅಂತಿಮವಾಗಿ ಮೊದಲ ದಿನ ಎಷ್ಟು ಚಿತ್ರಮಂದಿರಗಳಲ್ಲಿ, ಎಷ್ಟು ಪ್ರದರ್ಶನ ಕಾಣಲಿದೆ ಎಂಬ ಕುತೂಹಲ ಎಲ್ಲರಿಗೂ ಇದೆ.
ಇದು ತೆಲುಗು ಅವತರಣಿಕೆಯ ವಿವರ. ಕನ್ನಡ ಅವತರಣಿಕೆಗೆ ಸದ್ಯಕ್ಕೆ ನಾಲ್ಕು ಚಿತ್ರಮಂದಿರಗಳನ್ನು ಮಾತ್ರ ನೀಡಲಾಗಿದ್ದು, 12 ಪ್ರದರ್ಶನಗಳನ್ನು ಮಾತ್ರ ನೀಡಲಾಗಿದೆ.
ಈ ಹಿಂದೆ ಕೆಲವು ಸ್ಟಾರ್ ನಟರ ಪರಭಾಷಾ ಚಿತ್ರಗಳಿಗೆ ರಾಜ್ಯದಲ್ಲಿ ಅತೀ ಹೆಚ್ಚು ಚಿತ್ರಮಂದಿರಗಳನ್ನು ಪ್ರದರ್ಶನಕ್ಕೆ ಮೀಸಲಿಡಲಾಗುತ್ತಿತ್ತು. ಬೇರೆ ರಾಜ್ಯಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಪ್ರದರ್ಶನ ಪ್ರಾರಂಭವಾದರೆ, ಬೆಂಗಳೂರಿನಲ್ಲಿ ಪ್ರದರ್ಶನ ಬೆಳಿಗ್ಗೆ 5ಕ್ಕೆ ಶುರುವಾಗುವುದರ ಜೊತೆಗೆ ಮೊದಲ ದಿನ ಆರು ಪ್ರದರ್ಶನಗಳನ್ನು ಮಾಡಲಾಗುತ್ತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ, ಸ್ಟಾರ್ ನಟರ ಪರಭಾಷಾ ಚಿತ್ರಗಳು ಬಿಡುಗಡೆ ಆದಾಗಲೆಲ್ಲಾ ಟಿಕಟ್ ಬೆಲೆ ಗಗನಕ್ಕೇರುತ್ತಿತ್ತು. ಬೇರೆ ರಾಜ್ಯಗಳಲ್ಲಿ 200 ರೂ. ಗರಿಷ್ಠ ಬೆಲೆಯಾದರೆ, ಬೆಂಗಳೂರಿನ ಕೆಲವು ಮಲ್ಟಿಪ್ಲೆಕ್ಸ್‌ಗಳಲ್ಲಿ 2000 ರೂ. ಟಿಕೆಟ್ ನಿಗದಿ ಮಾಡಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾದ 'The Greatest of All Time' (GOAT), ‘ವೆಟ್ಟಾಯನ್’, ‘ಜೈಲರ್’, ‘ದೇವರ’, ‘ಆದಿಪುರುಷ್, ‘RRR’ ಮುಂತಾದ ಹಲವು ಚಿತ್ರಗಳಿಗೆ ರಾಜ್ಯದಲ್ಲಿ ಈ ಎಲ್ಲಾ ಸೌಲಭ್ಯಗಳೂ ಸಿಕ್ಕಿವೆ.
ಈ ಕುರಿತು ಕಳೆದ ಒಂದು ದಶಕದಿಂದ ಚರ್ಚೆ ನಡೆಯುತ್ತಿದ್ದರೂ, ಇದುವರೆಗೂ ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ ಎಂಬುದು ಮಾತ್ರ ವಿಚಿತ್ರ. ಸಿದ್ದರಾಮಯ್ಯ ಅವರು ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದಾಗ, ಕನ್ನಡ ಚಿತ್ರರಂಗವು ಏಕರೂಪ ಟಿಕೆಟ್ ಬೆಲೆ ಬಗ್ಗೆ ಗಮನಸೆಳೆದಿತ್ತು. ಮುಖ್ಯಮಂತ್ರಿಗಳು ಸಹ 200 ರೂ.ಗಿಂತ ಟಿಕೆಟ್ ದರ ಹೆಚ್ಚು ಇರಬಾರದು ಎಂದು ಆದೇಶ ಹೊರಡಿಸಿದ್ದರು. ಆದರೆ, ಈ ಆದೇಶದಲ್ಲಿ ತಾಂತ್ರಿಕ ಸಮಸ್ಯೆಗಳನ್ನು ಗುರುತಿಸಿದ ಚಿತ್ರಮಂದಿರಗಳ ಮಾಲೀಕರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದ್ದರು. ಆ ನಂತರ ಕೆಲವು ವರ್ಷಗಳ ಈ ವಿಷಯ ನೆನೆಗುದಿಗೆ ಬಿದ್ದಿತ್ತು. ಈ ಸಂಬಂಧ ಚಿತ್ರರಂಗದ ಕೆಲವು ನಿರ್ದೇಶಕರು ಮತ್ತು ನಿರ್ಮಾಪಕರು ವಾಣಿಜ್ಯ ಮಂಡಳಿಯೆದುರು ಕುಳಿತು ಧರಣಿ ಸಹ ನಡೆಸಿದ್ದರು.
‘ಪುಷ್ಪ 2’ಗೆ ಮುತ್ತಿಗೆ ಹಾಕುವುದಾಗಿ ಗೋವಿಂದು ಹೇಳಿಕೆ
ಈ ಹಿಂದೆ ಆಗಿರುವ ತಪ್ಪನ್ನು ಸರಿಪಡಿಸಿ, ಗೃಹ ಇಲಾಖೆಯಿಂದಲೇ ಆದೇಶ ಹೊರಡಿಸುವಂತೆ ಇತ್ತೀಚೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮನವಿ ಮಾಡಿತ್ತು. ಮನವಿ ನೀಡಿದ ನಂತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಸಾ.ರಾ. ಗೋವಿಂದು, ‘ರಜನಿಕಾಂತ್ ಅಭಿನಯದ ‘ವೆಟ್ಟಾಯನ್’ ಚಿತ್ರಕ್ಕೆ ಬೆಂಗಳೂರಿನ ಮಲ್ಟಿಪ್ಲೆಕ್ಸ್‌ಗಳಲ್ಲಿ ಆರು ಸ್ಕ್ರೀನ್ ಕೊಟ್ಟರೆ, ಕನ್ನಡ ಚಿತ್ರಗಳಿಗೆ ಎರಡು ಸ್ಕ್ರೀನ್‍ಗಳನ್ನು ಮಾತ್ರ ನೀಡಲಾಗಿತ್ತು. ಹಾಗೆಯೇ ಕೆಲವು ಕಡೆ ಮಲ್ಟಿಪ್ಲೆಕ್ಸ್‌ಗಳಲ್ಲಿ 1500 ರೂ. ವರೆಗೂ ಟಿಕೆಟ್ ಬೆಲೆ ನಿಗದಿಪಡಿಸಲಾಗಿತ್ತು. ಇದು ತಕ್ಷಣವೇ ನಿಲ್ಲಬೇಕು. ಪರಭಾಷೆಯ ದೊಡ್ಡ ಸ್ಟಾರ್‌ಗಳ ಚಿತ್ರಗಳ ಟಿಕೆಟ್ ಬೆಲೆ ಹೆಚ್ಚು ಮಾಡಿದರೆ ಇನ್ನು ಮುಂದೆ ಸುಮ್ಮನಿರುವುದಿಲ್ಲ. ನವೆಂಬರ್ 15ರೊಳಗೆ ಈ ಕುರಿತ ಸರ್ಕಾರ ಆದೇಶ ಮಾಡದಿದ್ದರೆ, ‘ಪುಷ್ಪ 2’ ಚಿತ್ರಕ್ಕೆ 200 ರೂ.ಗಳಿಗಿಂತ ಜಾಸ್ತಿ ದರ ಇಟ್ಟರೆ, ಚಿತ್ರಮಂದಿರಗಳಿಗೆ ಮುತ್ತಿಗೆ ಹಾಕಲಾಗುತ್ತದೆ, ಉಗ್ರ ಹೋರಾಟ ಮಾಡಲಾಗುತ್ತದೆ’ ಎಂದು ಅವರು ಎಚ್ಚರಿಕ ನೀಡಿದ್ದರು.
ಆದರೆ, ಗಡುವು ಮುಗಿದು 15 ದಿನಗಳಾಗಿವೆ. ಸದ್ಯದಲ್ಲೇ ‘ಪುಷ್ಪ 2’ ಚಿತ್ರಕ್ಕೆ ಅಡ್ವಾನ್ಸ್ ಬುಕ್ಕಿಂಗ್ ಸಹ ಶುರುವಾಗಲಿದೆ. ಈಗಾಗಲೇ ಮೆಜೆಸ್ಟಿಕ್ ಪ್ರದೇಶದ ಮೂರು ಚಿತ್ರಮಂದಿರಗಳು ಸೇರಿದಂತೆ ರಾಜ್ಯದ 450ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುತ್ತಿರುವ ಸುದ್ದಿ ಇದೆ. ಇನ್ನು, ಚಿತ್ರಕ್ಕೆ ಬೇಡಿಕೆ ಹೆಚ್ಚಿರುವುದರಿಂದ ಟಿಕೆಟ್ ಬೆಲೆ ಸಹ ವಿಪರೀತ ಏರುವ ನಿರೀಕ್ಷೆಗಳಿವೆ. ಹೀಗಿರುವಾಗ ವಾಣಿಜ್ಯ ಮಂಡಳಿ ಮೌನ ವಹಿಸಿದೆ.
ಅಸಹಾಯಕ ಪರಿಸ್ಥಿತಿಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
ಈ ಕುರಿತು ಮಾತನಾಡಿರುವ ಸಾ.ರಾ. ಗೋವಿಂದು, ಈ ವಿಷಯದಲ್ಲಿ ವಾಣಿಜ್ಯ ಮಂಡಳಿ ಏನೂ ಮಾಡದ ಅಸಾಹಯಕ ಪರಿಸ್ಥಿತಿಯಲ್ಲಿದೆ ಎಂದು ಹೇಳಿದ್ದಾರೆ. ‘ಈಗಾಗಲೇ ಕಾಂಪಿಟೇಶನ್ ಕಮಿಷನ್ ಆಫ್ ಇಂಡಿಯಾದ ಕೇಸ್ ಇದೆ. ಈಗ ಇದರ ವಿರುದ್ಧ ಹೋರಾಟ ಮಾಡಿದರೆ, ಮತ್ತೆ ಇನ್ನೊಂದು ಕೇಸ್ ಆಗುತ್ತದೆ. ಹಾಗಾಗಿ, ಈ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಇಡಬಬೇಕು. ಟಿಕೆಟ್ ದರ ಇಳಿಕೆ ಮಾಡುವುದಾಗಿ ಸರ್ಕಾರ ಹೇಳಿದೆ. ಸರ್ಕಾರದ ಜೊತೆಗೆ ಸಂಪರ್ಕವಿಟ್ಟುಕೊಂಡು ಅದರ ಮೂಲಕವೇ ಪರಿಹಾರ ಸಿಗಬೇಕಿದೆ. ಈ ವಿಷಯದಲ್ಲಿ ವಾಣಿಜ್ಯ ಮಂಡಳಿಯ ಕೈ ಕಟ್ಟಿಹಾಕಿದಂತಾಗಿದೆ’ ಎಂದು ಹೇಳಿದ್ದಾರೆ.
ಅಲ್ಲಿಗೆ, ‘ಪುಷ್ಪ 2’ ಚಿತ್ರವು ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಟಿಕೆಟ್ ಬೆಲೆ, ಪ್ರದರ್ಶನಗಳ ಸಂಖ್ಯೆ, ಚಿತ್ರಮಂದಿರಗಳ ಸಂಖ್ಯೆ ಎಲ್ಲವೂ ಹೆಚ್ಚಾಗಲಿದೆ. ಆದರೆ, ಇದರ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಏನೂ ಮಾಡದಂತಹ ಪರಿಸ್ಥಿತಿಯಲ್ಲಿದೆ. ಸರ್ಕಾರದ ಎದುರು ಹಲವು ಬೇರೆ ಸವಾಲುಗಳಿರುವುದರಿಂದ ಈ ಸಂದರ್ಭದಲ್ಲಿ ಈ ವಿಷಯದಲ್ಲಿ ಕ್ರಮ ಕೈಗೊಳ್ಳುವುದು ಅನುಮಾನ ಎನ್ನಲಾಗುತ್ತಿದೆ. ಈ ಹಿಂದೆ, ಪರಭಾಷಾ ಚಿತ್ರಗಳ ಅತಿಕ್ರಮಣ ಮತ್ತು ಟಿಕೆಟ್ ಬೆಲೆಯ ವಿರುದ್ಧ ಕೆಲವು ಕನ್ನಡಪರ ಸಂಘಟನೆಗಳು ಹೋರಾಟ ಮಾಡಿದ್ದವು. ಆದರೆ, ಈಗ ಅವು ಸಹ ಮೌನವಾಗಿವೆ. ಇದೆಲ್ಲದರ ಮಧ್ಯೆಯೇ, ‘ಪುಷ್ಪ 2’ ಸದ್ಯದಲ್ಲೇ ಬಿಡುಗಡೆಯಾಗಿ, ರಾಜ್ಯದಲ್ಲಿ ಹೊಸ ದಾಖಲೆ ಮಾಡುವುದಕ್ಕೆ ಸಜ್ಜಾಗಿದೆ.