ಕರ್ನಾಟಕದಲ್ಲಿ ‘ಪುಷ್ಪ 2’ಗೆ 1000 ಪ್ರದರ್ಶನ; ‘ಭೈರತಿ ರಣಗಲ್’ಗೆ ಚೆನ್ನೈನಲ್ಲಿ ಒಂದೇ ಅವಕಾಶ
ಎಲ್ಲಾ ಸರಿ, ಪರಭಾಷೆ ಚಿತ್ರಗಳಿಗೆ ಕರ್ನಾಟಕದಲ್ಲಿ ದೊಡ್ಡ ಸ್ವಾಗತವೇನೋ ಸಿಗುತ್ತದೆ. ಅದೇ ಕನ್ನಡ ಚಿತ್ರಗಳಿಗೆ ಬೇರೆ ರಾಜ್ಯಗಳಲ್ಲಿ, ಅದರಲ್ಲ ತೆಲುಗು-ತಮಿಳಿನಲ್ಲಿ ಯಾವ ರೀತಿಯ ಸ್ವಾಗತ ಸಿಗುತ್ತದೆ ಮತ್ತು ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಪ್ರಶ್ನೆ ಸಹಜ.;
‘ಪುಷ್ಪ 2’ಗೆ ಬೆಂಗಳೂರಲ್ಲಿ 1000 ಪ್ರದರ್ಶನ; ‘ಭೈರತಿ ರಣಗಲ್’ಗೆ ಚೆನ್ನೈನಲ್ಲಿ ಒಂದು ಪ್ರದರ್ಶನ … ಇದು ವಾಸ್ತವ
ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಪರಭಾಷಾ ಚಿತ್ರಗಳು ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿವೆ. ಡಿಸೆಂಬರ್ 5ರಂದು ಬಿಡುಗಡೆಯಾಗಲಿರುವ ‘ಪುಷ್ಪ 2’ ಚಿತ್ರವನ್ನೇ ತೆಗೆದುಕೊಂಡರೆ, ಚಿತ್ರವು ಮೂರು ಭಾಷೆಗಳಲ್ಲಿ, 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 1000ಕ್ಕೂ ಹೆಚ್ಚು ಪ್ರದರ್ಶನ ಕಾಣುವುದಕ್ಕೆ ಸಜ್ಜಾಗುತ್ತಿದೆ. ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶವೊಂರಲ್ಲೇ ಮೂರು ಚಿತ್ರಮಂದಿರಗಳಲ್ಲಿ ಮೂರು ಭಾಷೆಗಳ ‘ಪುಷ್ಪ 2’ ಬಿಡುಗಡೆಯಾಗುತ್ತಿದೆ. ಟಿಕೆಟ್ ಬೆಲೆಯಂತೂ ಗಗನಕ್ಕೇರಿದೆ.
ಇದು ಮೊದಲೇನಲ್ಲ. ಈ ಹಿಂದೆ ಪರಭಾಷೆಯ, ಅದರಲ್ಲೂ ಅಲ್ಲಿನ ಸ್ಟಾರ್ ಚಿತ್ರಗಳಿಗೆ ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಒಳ್ಳೆಯ ಸ್ವಾಗತ ಸಿಗುತ್ತಿದೆ. ಹೆಚ್ಚು ಪ್ರದರ್ಶನಗಳು ಕುರಿತು, ಟಿಕೆಟ್ ಬೆಲೆ ಏರಿಕೆ ಕುರಿತು, ಇದರಿಂದ ಕನ್ನಡ ಚಿತ್ರಗಳಿಗೆ ಆಗುತ್ತಿರುವ ಅನ್ಯಾಯದ ಕುರಿತು ಸಾಕಷ್ಟು ಚರ್ಚೆಗಳಾಗುತ್ತಲೇ ಇರುತ್ತವೆ. ಆದರೆ, ಇದಕ್ಕೆ ಪರಿಹಾರ ಮಾತ್ರ ಸಿಗುತ್ತಿಲ್ಲ.
ಎಲ್ಲಾ ಸರಿ, ಪರಭಾಷೆ ಚಿತ್ರಗಳಿಗೆ ಕರ್ನಾಟಕದಲ್ಲಿ ದೊಡ್ಡ ಸ್ವಾಗತವೇನೋ ಸಿಗುತ್ತದೆ. ಅದೇ ಕನ್ನಡ ಚಿತ್ರಗಳಿಗೆ ಬೇರೆ ರಾಜ್ಯಗಳಲ್ಲಿ, ಅದರಲ್ಲ ತೆಲುಗು-ತಮಿಳಿನಲ್ಲಿ ಯಾವ ರೀತಿಯ ಸ್ವಾಗತ ಸಿಗುತ್ತದೆ ಮತ್ತು ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಪ್ರಶ್ನೆ ಸಹಜ. ಕನ್ನಡದ ‘ಕಾಂತಾರ’, ‘ಕೆಜೆಎಫ್’ ಸೇರಿದಂತೆ ಬೆರಳಣಿಕೆಯ ಚಿತ್ರಗಳಿಗೆ ಆಂಧ್ರ ಪ್ರದೇಶ, ತಮಿಳುನಾಡಿನಲ್ಲಿ ಒಳ್ಳೆಯ ಸ್ವಾಗತ ಸಿಗುವುದು ಬಟ್ಟರೆ ಮಿಕ್ಕಂತೆ ಕನ್ನಡ ಚಿತ್ರಗಳಿಗೆ ಆ ರಾಜ್ಯದಲ್ಲಿ ಗೆದ್ದಿದ್ದು ಕಡಿಮೆಯೇ. ಅದರಲ್ಲೂ ಚಿತ್ರ ಆಯಾ ಭಾಷೆಗಳಿಗೆ ಡಬ್ ಆಗಿ ಬಿಡಗುಡೆಯಾಗಬೇಕು. ನೇರವಾಗಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸಿದರೆ ಯಾರೂ ನೋಡುವುದೇ ಇಲ್ಲ. ತಮಿಳು ಅಥವಾ ತೆಲುಗಿಗ ಡಬ್ ಆದ ಕನ್ನಡ ಚಿತ್ರಗಳಿಗೆ ಸಿಗುವ ಸ್ವಾಗತ ಸಹ ಅಷ್ಟಕ್ಕಷ್ಟೇ. ಇದಕ್ಕೆ ಹೊಸ ಉದಾಹರಣೆ ‘ಭೈರತಿ ರಣಗಲ್’.
ಶಿವರಾಜಕುಮಾರ್ ಅಭಿನಯದ ‘ಭೈರತಿ ರಣಗಲ್’, ಮೊನ್ನೆ ನವೆಂಬರ್ 29ರಂದು ತೆಲುಗು ಮತ್ತು ತಮಿಳಿಗೆ ಡಬ್ ಆಗಿ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಬಿಡುಗಡೆಯಾಗಿದೆ. ತೆಲುಗು ಮತ್ತು ತಮಿಳು ಅವತರಣಿಕೆಗಳನ್ನು ಮೈರಾ ಕ್ರಿಯೇಷನ್ಸ್ ಮತ್ತು ಎ.ಪಿ ಇಂಟರ್‍ನ್ಯಾಷನಲ್ ಸಂಸ್ಥೆಗಳು ಕ್ರಮವಾಗಿ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ತಮಿಳು ನಾಡಿನಲ್ಲಿ ಬಿಡುಗಡೆ ಮಾಡಿವೆ. ಇನ್ನು, ತೆಲುಗು ನಟ ನಾನಿ ಮತ್ತು ತಮಿಳು ನಟ ಶಿವಕಾರ್ತಿಕೇಯನ್ ಇಬ್ಬರೂ ತೆಲುಗು ಮತ್ತು ತಮಿಳು ಚಿತ್ರಗಳ ಟ್ರೇಲರ್‌ಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಹೀಗಿರುವಾಗ, ಚಿತ್ರ ಮೂರು ರಾಜ್ಯಗಳಲ್ಲಿ ಭರ್ಜರಿಯಾಗಿ ಬಿಡುಗಡೆ ಆಗಿರಬಹುದು ಅಂತಂದುಕೊಂಡರೆ ಸುಳ್ಳು.
‘ಭೈರತಿ ರಣಗಲ್’ನ ತೆಲುಗು ಅವತರಣಿಕೆಯನ್ನು ಹೈದರಾಬಾದ್‍ನಲ್ಲಿ ಬಿಡುಗಡೆ ಮಾಡಲಾಗಿದೆ. ನಗರದ 36 ಚಿತ್ರಮಂದಿರಗಳಲ್ಲಿ ತೆಲುಗು ಅವತರಣಿಕೆ ಬಿಡುಗಡೆಯಾಗಿದ್ದು, ಬಹುತೇಕ ಚಿತ್ರಮಂದಿರಗಳಲ್ಲಿ ಕೇವಲ ಒಂದು ಪ್ರದರ್ಶನ ಮೀಸಲಿಡಲಾಗಿದೆ. ಕೆಲವು ಚಿತ್ರಮಂದಿರಗಳಿಗೆ ಎರಡು ಪ್ರದರ್ಶನಗಳಿದ್ದು, ಒಟ್ಟಾರೆ ದಿನವೊಂದಕ್ಕೆ 45 ಪ್ರದರ್ಶನಗಳು ಮೀರುವುದಿಲ್ಲ. ಇನ್ನು, ಚೆನ್ನೈ ನಗರದಲ್ಲಿ ‘ಭೈರತಿ ರಣಗಲ್’ನ ತೆಲುಗು ಮತ್ತು ತಮಿಳು ಅವತರಣಿಕೆಗಳಿಗೆ ತಲಾ ಒಂದೊಂದು ಪ್ರದರ್ಶನ ನೀಡಲಾಗಿದೆ.
ಇದು ವಾಸ್ತವ. ಇದಕ್ಕೆ ಪ್ರತಿಯಾಗಿ ಪರಭಾಷಾ ಚಿತ್ರಗಳಿಗೆ ಅದರಲ್ಲೂ ರಜನಿಕಾಂತ್, ವಿಜಯ್ ಮುಂತದವರ ಚಿತ್ರಗಳಿಗೆ ಬೆಂಗಳೂರಿನಲ್ಲಿ ದಿನವೊಂದಕ್ಕೆ ಸಾವಿರ ಪ್ರದರ್ಶನ ಸಿಗುತ್ತದೆ. ಟಿಕೆಟ್ ಬೆಲೆ ಎರಡು ಸಾವಿರದವರೆಗೂ ಇರುತ್ತದೆ. ಆದರೆ, ಕನ್ನಡ ಚಿತ್ರಗಳಿಗೆ ಮಾತ್ರ ಬೇರೆ ರಾಜ್ಯಗಳಿಗೆ ಪ್ರದರ್ಶನ ಸಿಕ್ಕರೆ ಅದೇ ಭಾಗ್ಯ ಎನ್ನುವಂತಾಗಿದೆ. ಇನ್ನಾದರೂ ಚಿತ್ರರಂಗವಾಗಲೀ, ಚಿತ್ರರಂಗದ ಸಂಘ-ಸಂಸ್ಥೆಗಳಾಗಲೀ ಈ ಬಗ್ಗೆ ತಲೆ ಕೆಡಿಸಿಕೊಳ್ಳದಿದ್ದರೆ, ಬಹಳ ಕಷ್ಟವಿದೆ.