ಅಪ್ಪ-ಮಗನಾಗಿ ಹೃದಯಸ್ಪರ್ಶಿ ಕಥೆ; S/O ಮುತ್ತಣ್ಣ' ಆಗಸ್ಟ್ 22ಕ್ಕೆ ತೆರೆಗೆ
S/O ಮುತ್ತಣ್ಣ ಚಿತ್ರವು ಅಪ್ಪ-ಮಗನ ಬಾಂಧವ್ಯದ ಸುತ್ತ ಹೆಣೆದ ಹೃದಯಸ್ಪರ್ಶಿ ಕಥೆಯಾಗಿದ್ದು, ರಂಗಾಯಣ ರಘು ಮತ್ತು ಪ್ರಣಂ ದೇವರಾಜ್ ತಂದೆ-ಮಗನಾಗಿ ಅಭಿನಯಿಸಿದ್ದಾರೆ.;
ಅಪ್ಪ-ಮಗನ ಬಾಂಧವ್ಯಧ ಸನ್ನಿವೇಶಗಳನ್ನೊಳಗೊಂಡ ಕೌಟುಂಬಿಕ ಕಥಾಹಂದರ ಹೊಂದಿರುವ ಬಹು ನಿರೀಕ್ಷಿತ S\O ಮುತ್ತಣ್ಣ
ನಟ ಪ್ರಣಂ ದೇವರಾಜ್ ನಾಯಕನಾಗಿ, ಶ್ರೀಕಾಂತ್ ಹುಣಸೂರು ನಿರ್ದೇಶನದಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ಚಿತ್ರ 'S/O ಮುತ್ತಣ್ಣ' ಇದೇ ಆಗಸ್ಟ್ 22ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಾಣಲಿದೆ. ಅಪ್ಪ-ಮಗನ ಬಾಂಧವ್ಯದ ಸುತ್ತ ಹೆಣೆದಿರುವ ಈ ಭಾವನಾತ್ಮಕ ಕಥೆಯಲ್ಲಿ, ಹಿರಿಯ ನಟ ರಂಗಾಯಣ ರಘು ಮತ್ತು ಪ್ರಣಂ ದೇವರಾಜ್ ತಂದೆ-ಮಗನಾಗಿ ಅಭಿನಯಿಸಿದ್ದು, ಅವರ ನಡುವಿನ ಸನ್ನಿವೇಶಗಳು ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಲಿವೆ ಎನ್ನಲಾಗಿದೆ.
ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲಕ್ಕೆ ತೆರೆ
ಸಿನಿಮಾದ ಕುರಿತಾದ ನಿರೀಕ್ಷೆಗಳು ಈಗಾಗಲೇ ಹೆಚ್ಚಿದ್ದು, ಚಿತ್ರದ 'ಕಮಂಗಿ ನನ್ನ ಮಗನೆ' ಹಾಡು ಜನಪ್ರಿಯವಾಗಿದೆ. ಅಲ್ಲದೆ, ಬಿಡುಗಡೆಯಾದ ಟೀಸರ್ ಕೂಡ ಸಿನಿಪ್ರಿಯರಿಂದ ಉತ್ತಮ ಮೆಚ್ಚುಗೆ ಗಳಿಸಿದೆ. ಬಹುನಿರೀಕ್ಷಿತ ಈ ಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎಂಬ ಅಭಿಮಾನಿಗಳ ಕಾತುರಕ್ಕೆ ಈಗ ತೆರೆ ಬಿದ್ದಿದ್ದು, ಚಿತ್ರತಂಡ ಆಗಸ್ಟ್ 22ರಂದು ಬಿಡುಗಡೆ ದಿನಾಂಕವನ್ನು ಖಚಿತಪಡಿಸಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲೂ ಬಿಡುಗಡೆಗೆ ಸಿದ್ಧತೆ
ಚಿತ್ರದ ವಿತರಣೆಯನ್ನು ಕರ್ನಾಟಕದಾದ್ಯಂತ ಪ್ರತಿಷ್ಠಿತ ಬೆಂಗಳೂರು ಕುಮಾರ್ ಫಿಲಂಸ್ ಸಂಸ್ಥೆ ವಹಿಸಿಕೊಂಡಿದೆ. ವಿಶೇಷವೆಂದರೆ, ದೇಶಾದ್ಯಂತ ಬಿಡುಗಡೆಯಾಗುವ ಮೊದಲೇ, ಚಿತ್ರತಂಡ ಆಗಸ್ಟ್ ಮೊದಲ ವಾರದಲ್ಲಿ ಅಮೆರಿಕಾ ಮತ್ತು ದುಬೈನಲ್ಲಿ 'S/O ಮುತ್ತಣ್ಣ' ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.
ತಾರಾಬಳಗ ಮತ್ತು ತಾಂತ್ರಿಕ ತಂಡ
ಪುರಾತನ ಫಿಲಂಸ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಎಸ್.ಆರ್.ಕೆ. ಫಿಲಂಸ್ ಸಹಕಾರ ನೀಡಿದೆ. ಪ್ರಣಂ ದೇವರಾಜ್ ಅವರಿಗೆ ನಾಯಕಿಯಾಗಿ 'ದಿಯಾ' ಖ್ಯಾತಿಯ ಖುಷಿ ರವಿ ನಟಿಸಿದ್ದಾರೆ. ತಾರಾಬಳಗದಲ್ಲಿ ಸುಚೇಂದ್ರ ಪ್ರಸಾದ್, ಗಿರೀಶ್ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್ ಪ್ರಭು, ಸುಧಾ ಬೆಳವಾಡಿ, ಅರುಣ್ ಚಕ್ರವರ್ತಿ ಮುಂತಾದ ಅನುಭವಿ ಕಲಾವಿದರು ಇದ್ದಾರೆ.
ಸಚಿನ್ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದು, ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಮತ್ತು ಪ್ರಮೋದ್ ಮರವಂತೆ ಅವರು ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣ ಮತ್ತು ಹರೀಶ್ ಕೊಮ್ಮೆ ಅವರ ಸಂಕಲನ ಈ ಚಿತ್ರಕ್ಕಿದೆ. 'S/O ಮುತ್ತಣ್ಣ' ಒಂದು ಉತ್ತಮ ಸಂದೇಶವುಳ್ಳ ಮನರಂಜನಾತ್ಮಕ ಚಿತ್ರವಾಗಲಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ.