ರೆಬಲ್ ಸ್ಟಾರ್ ́ಕಲಿಯುಗದ ಕರ್ಣʼ ಅಂಬರೀಷ್ ನಮ್ಮನ್ನಗಲಿ ಏಳು ವರ್ಷ!

ಅಂಬರೀಷ್ ಅಗಲಿ ಏಳು ವರ್ಷವಾದರೂ ʼಏಳೇಳು ಜನ್ಮಕ್ಕೂ ನಾವು ನಿಮಗಷ್ಟೇ ಅಭಿಮಾನಿಗಳುʼ ಎಂದು ಹೇಳಿಕೊಳ್ಳುವವರಿಗೆ ಇಂದಿಗೂ ಕೊರತೆ ಇಲ್ಲ.

Update: 2025-11-24 12:51 GMT
Click the Play button to listen to article

ಕನ್ನಡ ಚಿತ್ರರಂಗದಲ್ಲಿ ವಿಶೇಷಸ್ಥಾನ ಪಡೆದ ನಟ ರೆಬಲ್ ಸ್ಟಾರ್ ಅಂಬರೀಷ್. ಒಂದು ತಲೆಮಾರಿನ ತಾರೆಯ ಕೊನೆಯ ಕೊಂಡಿ ಅವರು. ಅಂಬರೀಷ್ ಅಗಲಿ ಏಳು ವರ್ಷವಾದರೂ ʼಏಳೇಳು ಜನ್ಮಕ್ಕೂ ನಾವು ನಿಮಗಷ್ಟೇ ಅಭಿಮಾನಿಗಳುʼ ಎಂದು ಹೇಳಿಕೊಳ್ಳುವವರಿಗೆ ಇಂದಿಗೂ ಕೊರತೆ ಇಲ್ಲ. ಈ ಬಾರಿಯೂ ಕಂಠೀರವ ಸ್ಟುಡಿಯೋದ ಅಂಬರೀಷ್ ಸಮಾಧಿಯ ಬಳಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಆಗಮಿಸಿದ್ದರು.

ಮಂಡ್ಯದ ಗಂಡು ಎಂದ ಕೂಡಲೇ ನೆನಪಾಗುವುದೇ ನಟ ಅಂಬರೀಷ್. ಪರದೆಯ ಮೇಲೆ ವಿಶಿಷ್ಟ ಮ್ಯಾನರಿಸಂ ಮೂಲಕ ರೆಬಲ್ ಸ್ಟಾರ್ ಎನಿಸಿಕೊಂಡ ಅಂಬಿ ರಿಯಲ್ ಬದುಕಲ್ಲೂ ರೆಬಲ್​ಸ್ಟಾರೇ.

ನಾಗರಹಾವು ಚಿತ್ರದ ಜಲೀಲನ ಸಿಗರೇಟ್ ಸ್ಟೈಲ್, ಸ್ಟ್ರೈಟ್ ಫಾರ್ವಡ್ ವರ್ತನೆ, ಮುಲಾಜೇ ಇಲ್ಲದೆ ಮನಸ್ಸಿಗೆ ಬಂದಿದ್ದನ್ನು ನೇರವಾಗಿ ಹೇಳುವುದು ಇವೆಲ್ಲವೂ ನಿಜ ಜೀವನದ ಶೈಲಿಯೂ ಆಗಿತ್ತು. ಇದನ್ನೇ ಅಭಿಮಾನಿಗಳು ಕೂಡ ಇಷ್ಟ ಪಡುತ್ತಿದ್ದರು.

ಅಂಬರೀಷ್ ವೃತ್ತಿ ಬದುಕಿನಲ್ಲಿ ʼಅಂತʼ ಸಿನಿಮಾ ಬದುಕನ್ನೇ ಬದಲಿಸಿದಂಥ ಚಿತ್ರ. ಈ ಸಿನಿಮಾದಿಂದ ಕೇವಲ ಅಂಬಿ ವೃತ್ತಿ ಬದುಕಷ್ಟೇ ಬದಲಾಗಿದ್ದಲ್ಲ. ಕನ್ನಡ ಚಿತ್ರರಂಗದಲ್ಲೇ ಬದಲಾವಣೆ ಶುರುವಾಗಿತ್ತು.‘ಅಂತ’ ಸ್ಯಾಂಡಲ್​ವುಡ್​ನಿಂದ ಹಿಡಿದು ಬಾಲಿವುಡ್​ ತನಕ ಸದ್ದು ಮಾಡಿತ್ತು. ಅಭಿಮಾನಿಗಳ ಎದೆಯಲ್ಲಿ ಅಂಬರೀಷ್ ಹೆಸರನ್ನು ಭದ್ರ ಮಾಡಿತ್ತು. ಆದರೆ ಇವತ್ತಿಗೆ ಇಂಥ ಅಂಬರೀಷ್ ಅವರನ್ನು ಕಳೆದುಕೊಂಡು 7ವರ್ಷಗಳೇ ಕಳೆದಿವೆ. ಇಷ್ಟು ವರ್ಷಗಳಲ್ಲಿ ಅಂಬಿ ಕುಟುಂಬ, ಅಂಬಿಯ ನೂರಾರು ನೆನಪುಗಳನ್ನು ಮೆಲುಕು ಹಾಕುತ್ತಲೇ ಮುಂದೆ ಹೆಜ್ಜೆ ಇಟ್ಟಿದೆ. ನಟಿಯಾಗಿದ್ದ ಪತ್ನಿ ಸುಮಲತಾ, ಪತಿಯ ಹಾದಿಯಲ್ಲಿ ನಡೆದು ರಾಜಕಾರಣಿಯಾಗಿದ್ದಾರೆ.

ವೈಯಕ್ತಿಕ ಬದುಕಿನಲ್ಲಿ ಅತ್ತೆಯಾಗಿದ್ದಾರೆ. ಕಳೆದ ವರ್ಷದಿಂದ ಅಜ್ಜಿಯೂ ಆಗಿದ್ದಾರೆ. ಯಾಕೆಂದರೆ ಪುತ್ರ ಅಭಿಷೇಕ್ ಮದುವೆಯಾಗಿದ್ದಾರೆ. ಗಂಡು ಮಗುವಿನ ತಂದೆಯೂ ಆಗಿದ್ದಾರೆ. ಮಗು ಫೊಟೋ ಬಿಡುಗಡೆ ಮಾಡಿದಾಗಿನಿಂದ ಎಲ್ಲರ ಬಾಯಲ್ಲೂ ಜ್ಯೂನಿಯರ್ ಅಂಬಿ ಎನ್ನುವ ಹೆಸರೇ ಕೇಳಿ ಬಂದಿದೆ. ಸುಮಲತಾ ಕೂಡ ಸೋಶಿಯಲ್ ಮೀಡಿಯಾದಲ್ಲಿ ಅಂಬರೀಷ್ ಫೊಟೋ ಹಾಕಿ ಹಿ ಈಸ್ ಬ್ಯಾಕ್ ಎಂದು ಹೇಳಿಕೊಂಡಿದ್ದರು. ಈ ಬಾರಿ ಕೂಡ ನೀವಿರಬೇಕಾದ ಜಾಗ ಎಂದಿಗೂ ಖಾಲಿಯಾಗಿಯೇ ಇರುತ್ತದೆ ಎಂದು ಬರೆದುಕೊಂಡಿದ್ದಾರೆ. ಅಂದಹಾಗೆ ಆಂಧ್ರದ ಸುಮಲತಾ ಮೈಸೂರು ಜಾಣನ‌ ಪ್ರೇಮಕ್ಕೆ ಸಿಕ್ಕ ಕಥೆಯೇ ರೋಚಕ.

ಮಂಡ್ಯದ ಗಂಡು ಮತ್ತು ಗುಂಟೂರು ಬೆಡಗಿಯ ಪ್ರೇಮವೇ ಒಂದು ಸುಂದರ ಕಥೆ. ಈ ಅಪರೂಪದ ಜೋಡಿ ಒಬ್ಬರನ್ನೊಬ್ಬರು ಭೇಟಿಯಾಗಿದ್ದು, ಪ್ರೀತಿ ಮಾಡಿದ್ದು, ಎಲ್ಲವೂ ಬಲುರೋಚಕ. ಹಾಲು ಜೇನಿನಂತಿದ್ದ ಈ ಜೋಡಿ, ಅದೆಷ್ಟೋ ಪ್ರೇಮಿಗಳಿಗೆ ಮಾದರಿ. 33 ವರ್ಷಗಳ ಹಿಂದೆ ಪ್ರೇಮಿಗಳಾಗಿ ಸಪ್ತಪದಿ ತುಳಿದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಸುಮಲತಾ ಪಾಲಿಗೆ ಅಂಬಿ ಪ್ರೇಮಕೈದಿಯಾಗಿದ್ದರು.

'ಆಹುತಿ' ಸಿನಿಮಾವೇ ಅಂಬಿ ಹಾಗೂ ಸುಮಲತಾ ಪ್ರೀತಿಗೆ ಬುನಾದಿ ಹಾಕಿಕೊಟ್ಟಿತ್ತು. ಇವರಿಬ್ಬರೂ ಆಹುತಿ ಸೆಟ್​ನಲ್ಲಿ ಮೊದಲ‌ ಬಾರಿ ಭೇಟಿಯಾಗಿದ್ದರು. ಅಂಬರೀಷ್ ಪರಿಚಿತರೆಲ್ಲರೂ ಸುಮಲತಾ ಬಳಿ ಅಂಬಿಯನ್ನ ಹೊಗಳಿ ಅಟ್ಟಕ್ಕೇರಿಸುತ್ತಿದ್ದರು. ಇದೇ ಚಿತ್ರರಂಗ ಅಂಬಿ ಬಗ್ಗೆ ಅಂದು ಅಡಿದ ಮಾತುಗಳೇ ಸುಮಲತಾ, ರೆಬೆಲ್ ಸ್ಟಾರ್ ಪ್ರೀತಿಯಲ್ಲಿ ಬೀಳುವಂತೆ ಮಾಡಿತ್ತು. ಒಂದಲ್ಲ ಎರಡಲ್ಲ.. ಬರೋಬ್ಬರಿ ಆರು ವರ್ಷ ಪ್ರೀತಿ ಮಾಡಿದ್ದರು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡರು. ಆ ಬಳಿಕವೇ ಸಪ್ತಪದಿ ತುಳಿಯಲು ನಿರ್ಧರಿಸಿದ್ದರು.

ಅಂಬರೀಷ್ ಸುಮಲತಾ ಸ್ಟಾರ್ ಜೋಡಿ ಮದುವೆ ಆಗಲು ನಿರ್ಧರಿಸಿದ್ದಾಗಿತ್ತು. ಆದರೆ ಈ‌ ವಿವಾಹ ಅದ್ಧೂರಿತನ, ಆಡಂಬರವಿಲ್ಲದೆ, ಸರಳವಾಗಿ ವಿವಾಹವಾಗಿ ನಡೆದಿತ್ತು ಎಂದರೆ ನಂಬಲೇಬೇಕು.‌ ಮದುವೆಯಾದ ಮೊದಲ ವರ್ಷದಲ್ಲೇ ಅಂಬಿ ಹಾಗೂ ಸುಮಲತಾ ದಂಪತಿಗೆ ಮುದ್ದಾದ ಪುತ್ರನ ಜನನವಾಗಿತ್ತು.

ಅಂಬರೀಷ್ ಪ್ರೇಮ ದಾಂಪತ್ಯದ್ದು ಒಂದು ಕಥೆಯಾದರೆ, ಸ್ನೇಹದ್ದು ಅದಕ್ಕಿಂತ ದೊಡ್ಡ ಕಥೆ. ಯಾರಿಗೆ ಎಷ್ಟೇ ಸ್ನೇಹಿತರಿದ್ದರೂ ಆಪ್ತಮಿತ್ರರು ಎನ್ನುವ ಅನುಬಂಧ ಇರುವುದು ಒಂದಿಬ್ಬರಲ್ಲಿ ಮಾತ್ರ. ಆದರೆ

ಅಂಬರೀಷ್ ಗೆ 200ಕ್ಕೂ ಹೆಚ್ಚು ಪ್ರಾಣ ಸ್ನೇಹಿತರಿದ್ದರೆಂದು ಒಮ್ಮೆ ಖುದ್ದು ರಜನಿಕಾಂತ್ ಅವರೇ ಹೇಳಿಕೊಂಡಿದ್ದರು.

"ಅಂಬಿಗೆ ಅವನ ಗೆಳೆತನವೇ ಸ್ವರೂಪ. ಚಿತ್ರರಂಗದಲ್ಲಿ ಅಂಬರೀಷ್ ರಂತಹ ಒಬ್ಬ ನಟ ಬರಬಹುದು.. ಆದ್ರೆ, ಅಂಬರೀಷ್ ಅವರಂತಹ ಮನುಷ್ಯ ಬರಲು ಸಾಧ್ಯವಿಲ್ಲ," ಅಂತ ಅಂಬಿ ಗೆಳೆತವನ್ನು ಸೂಪರ್ ಸ್ಟಾರ್ ರಜನಿಕಾಂತ್ ಸ್ಮರಿಸಿದ್ದರು. ಈ‌ ಮಾತು ಹೇಳುವಾಗ ರಜನಿಕಾಂತ್ ಕಣ್ಣುಗಳು ಒದ್ದೆಯಾಗಿದ್ದವು. ಕೇವಲ ರಜನಿಕಾಂತ್ ಮಾತ್ರವಲ್ಲ, ಮೆಗಾ ಸ್ಟಾರ್ ಚಿರಂಜೀವಿ, ಮೋಹನ್ ಬಾಬು ಹಾಗೂ ಉತ್ತರದಲ್ಲಿ ಶತ್ರುಘ್ನ ಸಿನ್ಹ ತನಕ‌ ಸ್ಟಾರ್ ನಟರೊಡನೆ ಆತ್ಮೀಯ ಒಡನಾಟವಿತ್ತು. ಕನ್ನಡದ ಮಟ್ಟಿಗೆ ಅಂಬರೀಷ್ ಮತ್ತು ವಿಷ್ಣುವರ್ಧನ್ ಸ್ನೇಹದ ಬಗ್ಗೆ ಒಂದು ಪುಸ್ತಕವನ್ನೇ ಬರೆಯಬಹುದು.

ಅಂಬರೀಷ್ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಾಗಲೂ ಅಜಾತ ಶತ್ರುವಾಗಿದ್ದರು.‌ ಆದರೆ ಏಳು ವರ್ಷಗಳ‌ ಹಿಂದೆ ನವೆಂಬರ್ ಕೊನೆಯಲ್ಲಿ ದೇವರೇ ಶತ್ರುವಾಗಿದ್ದ. ಬದಲಾದ ಹವಾಮಾನದಲ್ಲಿ ಅಂಬಿಯ ಆರೋಗ್ಯ ಏರುಪೇರಾಗಿತ್ತು. ಅಂಬರೀಷ್ ಮಾತಿನಲ್ಲಿ ಎಷ್ಟೇ ಒರಟು ವ್ಯಕ್ತಿಯಾಗಿದ್ದರೂ ಹೃದಯದಲ್ಲಿ ತುಂಬಾನೇ ಮೃದು ವ್ಯಕ್ತಿತ್ವ ಹೊಂದಿದ್ದರು. ಸಾವಿಗೂ ಮೊದಲು ಟಿ.ವಿಯಲ್ಲಿ ಮಂಡ್ಯದ ಕನಗನಮರಡಿಯಲ್ಲಿ ನಡೆದ ಭೀಕರ ಬಸ್ ದುರಂತದ ಸುದ್ದಿ ನೋಡುತ್ತಿದ್ದರು. ಬಹುಶಃ ಇದೇ ನೋವನ್ನೇ ಮನಸಿಗೆ ಹಚ್ಚಿಕೊಂಡರೇನೋ‌ ಗೊತ್ತಿಲ್ಲ. ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ್ದರು. ಆದರೆ ಅಂಬರೀಷ್ ಆಸ್ಪತ್ರೆಯಿಂದ ಜೀವಂತವಾಗಿ ಮರಳಲಿಲ್ಲ. ಆದರೆ ಅವರ ಪ್ರಭಾವಲಯ ತಂದುಕೊಟ್ಟ ಜೀವಂತಿಕೆ ಕನ್ನಡಿಗರಿಂದ ಇಂದಿಗೂ ದೂರಾಗಿಲ್ಲ.

Tags:    

Similar News