ಹಾಲಿವುಡ್ ನಟ ಎರಿಕ್ ರಾಬರ್ಟ್ಸ್ ಅಭಿನಯದ ʼಮೈ ಹೀರೋʼ ಚಿತ್ರ ಆ.30ಕ್ಕೆ ಬಿಡುಗಡೆ
ಹಾಲಿವುಡ್ ನಟ ಎರಿಕ್ ರಾಬರ್ಟ್ಸ್ ಅಭಿನಯಿಸಿರುವ, ಅವಿನಾಶ್ ವಿಜಯ್ ಕುಮಾರ್ ಅವರ ಚೊಚ್ಚಲ ನಿರ್ದೇಶನದ 'ಮೈ ಹೀರೋ' ಸಿನಿಮಾ ಆ.30ರಂದು ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ.
ʼದಿ ಡಾರ್ಕ್ ನೈಟ್ʼ ಮತ್ತು ʼಸೂಟ್ಸ್ʼ ಖ್ಯಾತಿಯ ಹಾಲಿವುಡ್ ನಟ ಎರಿಕ್ ರಾಬರ್ಟ್ಸ್ ಅಭಿನಯಿಸಿರುವ, ಅವಿನಾಶ್ ವಿಜಯ್ ಕುಮಾರ್ ಅವರ ಚೊಚ್ಚಲ ನಿರ್ದೇಶನದ 'ಮೈ ಹೀರೋ' ಸಿನಿಮಾ ಆ.30ರಂದು ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ.
ವರ್ಣಬೇಧ ಮತ್ತು ಜಾತೀಯತೆಯ ಕಥಾಹಂದರ ಹೊಂದಿರುವ ಸಿನಿಮಾ ಇದಾಗಿದ್ದು, ಕರ್ನಾಟಕ, ಮಧ್ಯಪ್ರದೇಶ ಮತ್ತು ಅಮೆರಿಕದ ವಿವಿಧ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ.
ಚಿತ್ರದಲ್ಲಿ ಜಿಲಾಲಿ ರೆಜ್-ಕಲ್ಲಾಹ್ ಮತ್ತು ಡ್ರಾಮಾ ಜೂನಿಯರ್ ಖ್ಯಾತಿಯ ವೇದಿಕ್ ಕೌಶಲ್, ಜೊತೆಗೆ ಕನ್ನಡದ ಪ್ರಮುಖ ನಟರಾದ ದತ್ತಣ್ಣ, ಪ್ರಕಾಶ್ ಬೆಳವಾಡಿ, ನಿರಂಜನ್ ದೇಶಪಾಂಡೆ, ಅಂಕಿತಾ ಅಮರ್ ಮತ್ತು ತನುಜಾ ಕೃಷ್ಣಪ್ಪ ನಟಿಸಿದ್ದಾರೆ.
ಈ ಸಿನಿಮಾದ ಬಗ್ಗೆ ಮಾತನಾಡಿರುವ ನಿರ್ದೇಶಕ ಅವಿನಾಶ್ ವಿಜಯ್‌ಕುಮಾರ್, "ಅಂತಾರಾಷ್ಟ್ರೀಯ ಮಟ್ಟದ ಸಬ್ಜೆಕ್ಟ್ ಇಟ್ಟುಕೊಂಡು ಈ ಕಥೆ ಮಾಡಿದ್ದೇವೆ. ವಿದೇಶದಲ್ಲಿನ ವರ್ಣಭೇದ ನಮ್ಮಲ್ಲಿನ ಜಾತೀಯತೆಯ ಮೇಲೆ ಇಡೀ ಸಿನಿಮಾ ಸಾಗುತ್ತದೆ. ಸಿಟಿಯಲ್ಲಿ ಈ ಜಾತೀಯತೆ ಬಗ್ಗೆ ಗೊತ್ತಾಗದಿದ್ದರೂ ಹಳ್ಳಿಗಳಲ್ಲಿನ ಸ್ಥಿತಿಯ ಜತೆಗೆ ಹಿಂದುಳಿದ ವರ್ಗದವರ ಮೇಲಿನ ಶೋಷಣೆಯ ಬಗ್ಗೆಯೂ ಈ ಸಿನಿಮಾ ಮೂಲಕ ಹೇಳಹೊರಟಿದ್ದೇವೆ. 2020-21ರಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಬಾಲಕನ ಮೇಲೆ ನಡೆದ ನೈಜ ಕೃತ್ಯ ಆಧರಿತ ಸಿನಿಮಾ ಇದು. ಇದರ ಜತೆಗೆ ಅಮೆರಿಕಾ ಪ್ರಜೆಯೊಬ್ಬರು ಭಾರತದ ಹಿಂದೂಯಿಸಂ ಅನ್ನು ಫಾಲೋ ಮಾಡುತ್ತಿರುತ್ತಾರೆ. ಅದೂ ಕೂಡ ನೈಜ ಘಟನೆ ಆಧರಿತವೇ. ಒಂದು ಸಂದರ್ಭದಲ್ಲಿ ಆ ಇಬ್ಬರೂ ಒಂದೇ ಕಡೆ ಸಿಗುತ್ತಾರೆ. ಅಲ್ಲಿಂದ ಏನೆಲ್ಲ ಘಟಿಸುತ್ತದೆ ಎಂಬುದೇ ಈ ಸಿನಿಮಾದ ತಿರುಳು. ಆ ಶೋಷಣೆಯ ಬದುಕನ್ನು ಜನರ ಮುಂದೆ ತೆರೆದಿಡಬೇಕು, ಅದರ ನಿರ್ಮೂಲನೆ ಆಗಬೇಕು ಎಂಬುದು ನಮ್ಮ ಚಿತ್ರದ ಮೂಲ ಉದ್ದೇಶ. ಅದನ್ನು ಕಮರ್ಷಿಯಲ್ ಆಗಿಯೇ ಹೇಳಿದ್ದೇವೆ" ಎಂದರು.
ಈ ಸಿನಿಮಾದಲ್ಲಿ ಅಮೆರಿಕನ್ ನಟರೊಬ್ಬರನ್ನೇ ನಾವು ಮುಖ್ಯಪಾತ್ರಧಾರಿಯಾಗಿ ಕರೆದುಕೊಂಡು ಬಂದಿದ್ದೇವೆ. ಈ ಮೂಲಕ ಇಲ್ಲಿನ ಜಾತಿ ತಾರತ್ಯಮದ ಕಥೆಯನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದೇವೆ. ಅಮೆರಿಕದಲ್ಲಿನ ವರ್ಣಭೇದವನ್ನು ಅಲ್ಲಿನ ನಟರ ಆಂಗಲ್‌ನಿಂದ ಸಿನಿಮಾಕ್ಕೆ ಅಳವಡಿಸಿಕೊಂಡಿದ್ದೇವೆ. ವಿಶೇಷ ಏನೆಂದರೆ ಈ ಚಿತ್ರದಲ್ಲಿ ಅಮೆರಿಕನ್ ಟೆಕ್ನಿಷಿಯನ್‌ಗಳೂ ಕೆಲಸ ಮಾಡಿದ್ದಾರೆ. ಕಥೆಯೂ ಎಲ್ಲ ಕಡೆ ಸಲ್ಲುವುದರಿಂದ ನಮಗೂ ಅರ್ಥವಾಗುತ್ತದೆ. ವಿದೇಶಿ ಪ್ರೇಕ್ಷಕರಿಗೂ ಹೊಂದಿಕೆ ಆಗುತ್ತದೆ ಎಂದು ಅವರು ಹೇಳಿದರು.
ಚಿತ್ರಕ್ಕೆ ಅವಿನಾಶ್ ವಿಜಯ್ ಕುಮಾರ್ ಕಥೆ ಮತ್ತು ಚಿತ್ರಕಥೆ ಬರೆದಿದ್ದು, ಮುತ್ತು ರಾಜ್ ಟಿ ಸಂಕಲನ, ಗಗನ್ ಬಡೇರಿಯಾ ಸಂಗೀತ, ವೀಣಾ ಎಸ್ ನಾಗರಾಜ್ ಅವರ ಛಾಯಾಗ್ರಹಣ ಇದೆ.