ಕನ್ನಡದ ‘ಸಾಕ್ಷ್ಯ’ ಚಿತ್ರದ ಪಿತಾಮಹ ಎಂ ವಿ ಕೃಷ್ಣಸ್ವಾಮಿ

ಎಂವಿಕೆ ಎಷ್ಟರ ಮಟ್ಟಿಗೆ ಕಾನೂನು ಮತ್ತು ನಿಯಮಗಳ ಪಾಲಕರಾಗಿದ್ದರೆಂದರೆ, ಒಮ್ಮೆ ಇವರು ಸತ್ಯಜಿತ್‌ ರೇ ಅವರನ್ನು ಚಿತ್ರೋತ್ಸವದ ಟಿಕೆಟ್‌ಗಾಗಿ ಸರತಿಸಾಲಿನಲ್ಲಿ ನಿಲ್ಲಿಸಿದ್ದರೆಂಬ ದಂತಕಥೆ ಇದೆ.

Update: 2024-02-05 06:30 GMT

ಕರ್ನಾಟಕ ಸಾಕ್ಷ್ಯಚಿತ್ರ ಜಗತ್ತಿಗೆ ಹೊಸ ದಿಕ್ಕುಗಳನ್ನು ಪರಿಚಯಿಸಿದ ಎಂ ವಿ. ಕೃಷ್ಣಸ್ವಾಮಿ ಅವರು ಬದುಕಿದ್ದರೆ ಅವರಿಗೆ ನೂರು ವರ್ಷ ತುಂಬಿರುತ್ತಿತ್ತು. ಸರ್ ಎಂ ವಿಶ್ವೇಶ್ವರಯ್ಯ ಅವರನ್ನು ಕುರಿತು ಎಂವಿಕೆ ನಿರ್ಮಿಸಿದ ಸಾಕ್ಷ್ಯಚಿತ್ರವನ್ನು ವಿಐಎಸ್‌ಎಲ್ ಪುನಶ್ಚೇತನ ಪ್ರಯತ್ನಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ರಾಜ್ಯದ ರಾಜಕಾರಣಿಗಳು ನೋಡಬೇಕು. ಕನ್ನಡ ಚಿತ್ರರಂಗ ತನ್ನ ತೊಂಭತ್ತನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ, ಕಳೆದ ಮಾರ್ಚ್‌ ತಿಂಗಳಲ್ಲಿ ನಡೆದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಬಿಫೆಸ್)ದ ಹದಿನಾಲ್ಕನೇಯ ಆವೃತ್ತಿ ಒಂದು ಕಾರಣಕ್ಕೆ ಒಂದರ್ಥದಲ್ಲಿ ಅರ್ಥಪೂರ್ಣ.

ಕನ್ನಡ ಚಿತ್ರರಂಗದ ಆರಂಭದ ಕಾಲಘಟ್ಟದಲ್ಲಿ ಅದನ್ನು ಪೋಷಿಸಿ, ಮುನ್ನಡೆಯುವ ಹಾದಿಯನ್ನು ಸುಗಮಗೊಳಿಸಿದ ನಾಲ್ವರು ಮಹನೀಯರನ್ನು ಈ ಸಂದರ್ಭದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂಘಟನಾ ಸಮಿತಿ ನೆನಪಿಸಿಕೊಂಡಿತು. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ತಮ್ಮ ಸೃಜನಶೀಲ ಛಾಯಾಗ್ರಹಣದ ಮೂಲಕ ಇತಿಹಾಸ ನಿರ್ಮಿಸಿ, ಛಾಯಾಗ್ರಹಣಕ್ಕಾಗಿಯೇ ಮೊತ್ತ ಮೊದಲ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ವಿ,ಕೆ.ಮೂರ್ತಿ, ಸಾಕ್ಷ್ಯಚಿತ್ರಗಳ ಪಿತಾಮಹ ಎಂಬ ಹೆಗ್ಗಳಿಕೆಯ ಎಂ.ವಿ. ಕೃಷ್ಣಸ್ವಾಮಿ, ಕನ್ನಡಿಗರ ಪ್ರೀತಿಯ ‘ಎಂವಿಕೆ’ ಹಾಸ್ಯ ಚಕ್ರವರ್ತಿ ನರಸಿಂಹರಾಜು ಹಾಗೂ ನಿರ್ಮಾಪಕ ನಿರ್ದೇಶಕ ಎಸ್.ಕೆ. ಅನಂತಾಚಾರಿ-ಇವರುಗಳ ಜನ್ಮ ಶತಮಾನೋತ್ಸವದ ವರ್ಷವಿದು ಎಂದು ನೆನಪಿಸುವ ಕೆಲಸವನ್ನು ಬಿಫೆಸ್ ಮಾಡಿತು.

ಆದರೆ ವಿ,ಕೆ.ಮೂರ್ತಿ, ಎಂವಿಕೆಗೆ ಸಂದ ಗೌರವ ಇನ್ನಿಬ್ಬರಿಗೆ ದಕ್ಕದಿರುವುದು ವಿಷಾದದ ಸಂಗತಿ. ಕಾಲಪುರುಷ ಬಯಸಿ, ಈ ನಾಲ್ವರು ಮಹನೀಯರು ಇಂದು ನಮ್ಮೊಂದಿಗಿದ್ದಿದ್ದರೆ ಅವರಿಗೆ ಕನ್ನಡಿಗರೆಲ್ಲ ಸೇರಿ ಶತಮಾನಂ ಭವತಿ ಎನ್ನಬಹುದಿತ್ತು. ಏಕೆಂದರೆ ಈ ವರ್ಷ ಅವರಿಗೆಲ್ಲ ನೂರು ವರ್ಷ ತುಂಬುತ್ತಿತ್ತು. ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರನ್ನು ʼದ ಫೆಡರಲ್ʼ ಈಗಾಗಲೇ ಅಂದರೆ ಜುಲೈ 24ರಂದು ನೆನಪಿಸಿಕೊಂಡಿತ್ತು.

 ಈಗ ಎಂವಿಕೆ ಅವರ ಸರದಿ

“ಎಂ.ವಿ.ಕೃಷ್ಣಸ್ವಾಮಿ ಅವರು ಭಾರತದಲ್ಲಿ ಸಾಕ್ಷ್ಯಚಿತ್ರ ನಿರ್ದೇಶನಕ್ಕೆ ತಳಪಾಯ ಹಾಕಿದ ಮಹನೀಯರ ಪೈಕಿ ಒಬ್ಬರು. ಅವರು ಮತ್ತು ಅವರ ತಲೆಮಾರಿನವರು ಸಾಕ್ಷ್ಯಚಿತ್ರ ಆಂದೋಲನಕ್ಕೆ ಈ ರೀತಿಯ ತಳಪಾಯ ಹಾಕದಿದ್ದಲ್ಲಿ, ಇಂದು ಭಾರತದಲ್ಲಿ ಸಾಕ್ಷ್ಯಚಿತ್ರವೆಂಬುದು ಇರುತ್ತಲೇಇರಲಿಲ್ಲ” ಎಂದು ಜಗತ್ತಿನ ಸರ್ವಶ್ರೇಷ್ಠ ಚಲನಚಿತ್ರ ನಿರ್ದೇಶಕರಲ್ಲಿ ಒಬ್ಬರೆನ್ನಿಸಿದ ಸತ್ಯಜಿತ್‌ ರೇ ಹೇಳಿರುವ ಮಾತುಗಳನ್ನು ನೆನಪಿಸಿಕೊಳ್ಳಲು ಈಗ ಸಕಾಲ.

ಕೇವಲ ನಟ, ನಿರ್ದೇಶಕರಾಗಿ ಮಾತ್ರ ಎಂವಿಕೆ ಕನ್ನಡ ಚಿತ್ರರಂಗವನ್ನು ಬೆಳೆಸಲಿಲ್ಲ. ಫಿಲಂ ಡಿವಿಷನ್, ನ್ಯಾಷನಲ್ ಫಿಲಂ ಡೆವಲಪ್ಮೆಂಟ್ ಕಾರ್ಪೋರೇಷನ್, ಭಾರತದ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನಿರ್ದೇಶನಾಲಯ, ಫಿಲಂ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಫಿಲಂ ಸೆನ್ಸಾರ್ ಮಂಡಳಿ..ಹೀಗೆ ಚಿತ್ರರಂಗದ ಹಲವಾರು ಸಂಸ್ಥೆಗಳಲ್ಲಿ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸುವ ಮೂಲಕ ಕನ್ನಡ ಸಿನಿಮಾಕ್ಕೆ ರಾಷ್ಟ್ರೀಯ ಸ್ಥಾನಮಾನ ದೊರಕಿಸಿಕೊಟ್ಟವರು ಎಂವಿಕೆ. ಎಂವಿಕೆ ಎಷ್ಟರ ಮಟ್ಟಿಗಿನ ಕಾನೂನು ಮತ್ತು ನಿಯಮಗಳ ಪಾಲಕರಾಗಿದ್ದರೆಂದರೆ, ಒಮ್ಮೆ ಇವರು ಸತ್ಯಜಿತ್‌ರೇ ಅವರನ್ನು ಚಿತ್ರೋತ್ಸವದ ಟಿಕೆಟ್‌ಗಾಗಿ ಸರತಿಸಾಲಿನಲ್ಲಿ ನಿಲ್ಲಿಸಿದ್ದರೆಂಬ ದಂತಕಥೆ ಇದೆ.

ರೋಬೋರ್ತೋ ರೊಸೆಲಿನಿ ಸಹಾಯಕ

ಎಂವಿಕೆ ಇಟಲಿಯ ಚಿತ್ರಜಗತ್ತಿನಲ್ಲಿ ದಂತಕತೆಯಾಗಿದ್ದ ರೋಬೋರ್ತೋ ರೊಸೆಲಿನಿ ಅವರ ʼವಿಯಾಗಿಯೋ ಇನ್ ಇಟಾಲಿಯಾʼ ಚಿತ್ರಕ್ಕೆ ಸಹಾಯಕರಾಗಿ ದುಡಿದವರು. ನಲವತ್ತರ ದಶಕದಲ್ಲೇ ಚಲನಚಿತ್ರದ ಬಗ್ಗೆ ಅಧ್ಯಯನ ನಡೆಸಲು ಪ್ಯಾರಿಸ್, ಲಂಡನ್ ಹಾಗೂ ರೋಮ್‌ಗೆ ತೆರಳಿದ್ದವರು. ಬ್ರಿಟಿಷ್ ಮತ್ತು ಕೆನಡಿಯನ್ ಸಾಕ್ಷ್ಯಚಿತ್ರಗಳ ಪಿತಾಮಹನೆನ್ನಿಸಿಕೊಂಡ ಜಾನ್ ಗ್ರಿಯರ‍್ಸನ್ ಬಳಿ ಸಾಕ್ಷ್ಯಚಿತ್ರ ನಿರ್ಮಾಣದ ಪಟ್ಟುಗಳನ್ನು ಕಲಿತವರು.

ಎಂವಿಕೆ ಮಾಡಿದ ಸಾಧನೆಗೆ ಅವರಿಗೆ ಹಲವಾರು ಪ್ರಶಸ್ತಿ-ಪುರಸ್ಕಾರಗಳು ಸಂದಿವೆ. ಭಾರತದ ಸಾಕ್ಷ್ಯಚಿತ್ರಕ್ಕೆ ಭದ್ರ ಬುನಾದಿ ಹಾಕಿದ ಎಜ್ರಾ ಮಿರ್ ಅವರ ಹೆಸರಿನಲ್ಲಿ ಕೊಡಲಾಗುತ್ತಿರು ಎಜ್ರಾಮಿರ್ ಪ್ರಶಸ್ತಿಗೆ ಎಂವಿಕೆ ಭಾಜನರು. ಇದಲ್ಲದೆ ಅವರಿಗೆ ವಿ.ಶಾಂತಾರಾಮ್ ಹೆಸರಿನಲ್ಲಿ ಸ್ಥಾಪಿತವಾದ ಪ್ರಶಸ್ತಿಯೂ ಸಂದಿದೆ.

‘ಭಾರತಿ’ ಚಿತ್ರದ ನಾಯಕ ನಟ

ಮೇಲುಕೋಟೆ ಬಳಿಯ ಬೆಳಕವಾಡಿ ಗ್ರಾಮದಲ್ಲಿ ಹುಟ್ಟಿದ ಎಂವಿಕೆ ಕಲಿತದ್ದು ಮಹಾರಾಜ ಕಾಲೇಜಿನಲ್ಲಿ. ಬಯಸಿದ್ದು ಚಲನಚಿತ್ರದಲ್ಲಿ ನಟರಾಗಬೇಕೆಂದು. ಹಾಗೆ ಅವರು ಅಭಿನಯಿಸಿದ ಚಿತ್ರ; ಆರ್ ಎಂ ವೀರಭದ್ರಯ್ಯ 1948ರಲ್ಲಿ ನಿರ್ದೇಶಿಸಿದ ಭಾರತಿ. ಈ ಚಿತ್ರದಲ್ಲಿ ಅವರು ನಾಯಕರಾದರೆ, ಟಿ. ಸೂರ್ಯಕುಮಾರಿ ಚಿತ್ರದ ನಾಯಕಿ. ಇವರೊಂದಿಗೆ ತಾರಾಗಣದಲ್ಲಿದ್ದವರು, ರಾಜಕುಮಾರಿ, ಸಂಪತ್. ಚಿತ್ರಕತೆ ಹಾಗೂ ಗೀತೆಗಳನ್ನೂ ಬರೆದವರು ಎಂ ನರೇಂದ್ರ ಬಾಬು.

ಎಂವಿಕೆ ಅವರು ಸುಬ್ಬಾ ಶಾಸ್ತ್ರಿ (1966) ಹಾಗೂ ಪಾಪ ಪುಣ್ಯ (1971)ಎಂಬ ಎರಡು ಚಿತ್ರಗಳನ್ನು ನಿರ್ದೇಶಿಸಿದರು. ‘ಸುಬ್ಬಾ ಶಾಸ್ತ್ರಿ’ ಚಿತ್ರ ಎ.ಎನ್ ಮೂರ್ತಿರಾಯರ ‘ಆಷಾಢಭೂತಿ’ ನಾಟಕವನ್ನು ಆಧರಿಸಿದ್ದರೆ, ‘ಪಾಪ-ಪುಣ್ಯ’ ವಿ.ಸೀತಾರಾಮಯ್ಯ ಅವರ ಶ್ರೀಶೈಲಶೇಖರ ಕಥೆಯನ್ನು ಆಧರಿಸಿದ್ದು.ಇವರ ಸುಬ್ಬಾಶಾಸ್ತ್ರಿ ಚಿತ್ರಕ್ಕೆ ವೀಣಾ ವಿದ್ವಾನ್ ದೊರೆಸ್ವಾಮಿ ಅಯ್ಯಂಗಾರ್ ಸಂಗೀತ ನೀಡಿದರೆ, ಪಾಪ ಪುಣ್ಯಕ್ಕೆ ಖ್ಯಾತ ಸಂಗೀತಗಾರ ಪದ್ಮಚರಣ್ ಸಂಗೀತ ಸಂಯೋಜಕರಾಗಿ ದುಡಿದಿದ್ದಾರೆ.

ಎಂವಿಕೆ ಅವರನ್ನು ಎರಡು ಕಾರಣಗಳಿಗಾಗಿ ನಾವು ನೆನಪಿಸಿಕೊಳ್ಳಬೇಕಿದೆ. ಆವರು ಬದುಕಿದ್ದರೆ ಅವರಿಗೆ ನೂರುವರ್ಷ ಎಂಬುದು ಒಂದು ಕಾರಣವಾದರೆ, ಮತ್ತೊಂದು ಕಾರಣ ಅವರು ಸರ್.ಎಂ.ವಿ (ಮೋಕ್ಷಗುಂಡಂ ವಿಶ್ವೇಶ್ವರಾಯ) ಅವರ ಕುರಿತಾದ ಸಾಕ್ಷ್ಯಚಿತ್ರ.

ಆಗಸ್ಟ್ 10 ಕ್ಕೆ ವಿಶ್ವೇಶ್ವರಾಯ ಅವರ ಕನಸಿನ ಕೂಸಾದ ಭದ್ರಾವತಿಯ ಮೈಸೂರು ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಮರುಜೀವ ದಕ್ಕಲಿದೆ. ಅನೇಕ ಬಾರಿ ಹೆಸರಿನ ಬದಲಾವಣೆ ಇತಿಹಾಸದ ಹೆಜ್ಜೆಗಳನ್ನು ಗುರುತಿಸುವುದುಂಟು. ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (ವಿಶ್ವೇಶ್ವರಾಯ ಐರನ್ ಅಂಡ್ ಸ್ಟೀಲ್ ಲಿಮಿಟೆಡ್-ವಿಐಎಸ್‌ಎಲ್). ಕರ್ನಾಟಕದ ಚಿತ್ರ ಭಂಡಾರದಲ್ಲಿರುವ ಈ ಸಾಕ್ಷ್ಯಚಿತ್ರವನ್ನು ವಿಐಎಸ್‌ಎಲ್ ಅನ್ನು ಅಳಿಸಲು ಅಥವ ಉಳಿಸಲು ತಂತ್ರಗಾರಿಕೆ ನಡೆಸುತ್ತಿರುವ ಇಂದಿನ ರಾಜಕಾರಣಿಗಳು ವೀಕ್ಷಿಸುವುದು ಇಂದಿನ ತುರ್ತು ಎನ್ನಿಸುತ್ತದೆ.

ಸರ್ ಎಂವಿ ಅವರ ಪರಿಶ್ರಮದಿಂದಾಗಿ ಭದ್ರಾವತಿಯಲ್ಲಿ 1918ರಲ್ಲಿ ಕಟ್ಟಿಗೆಯ ಇಂಧನದ ಡಿಸ್ಟಿಲೇಷನ್ ಕಾರ್ಖಾನೆಯಾಗಿ ಅದಕ್ಕೆ ಸಂಗಾತಿಯಾಗಿ ಇದ್ದಿಲಿನ ಊದುಕುಲುಮೆಯೂ ಸ್ಥಾಪಿತವಾಯಿತು. ಆಗ ಅದರ ಹೆಸರು-ದಿ ಮೈಸೂರು ಡಿಸ್ಟಿಲೇಷನ್ ಅಂಡ್ ಐರನ್ ವರ್ಕ್ಸ್.. 1923ರ ವೇಳೆಗೆ ದುಃಸ್ಥಿತಿಯಲ್ಲಿದ್ದ ಈ ಕಾರ್ಖಾನೆಗೆ ಮತ್ತೆ ಜೀವತುಂಬಿ ಅದನ್ನು ಪುನಶ್ಚೇತನಗೊಳಿಸಿದ್ದು ಸರ್ ಎಂವಿ.

1936ರ ವೇಳೆಗೆ ಮೆದು ಉಕ್ಕು ತಯಾರಿಕೆಗಾಗಿ ಒಂದು ಪುಟ್ಟ ಪರಿವರ್ತಕ, ವಿಶೇಷ ಉಕ್ಕು ತಯಾರಿಸಲು ಎರಡು ವಿದ್ಯುತ್ ಕುಲುಮೆಗಳು ಸ್ಥಾಪನೆಯಾದಾಗ ಅದು ಮೈಸೂರು -ದಿ ಮೈಸೂರು ಐರನ್ ಅಂಡ್ ಸ್ಟೀಲ್ ವರ‍್ಕ್ಸ್ ಎಂದಾಯಿತು. ಮುಂದೆ ಈ ಕಾರ್ಖಾನೆಗಾಗಿ ಜೀವ ಸವೆಸಿದ ಸರ್ ಎಂವಿ ಅವರ ಗೌರವಾರ್ಥ ಈ ಕಾರ್ಖಾನೆಯನ್ನು ವಿಶ್ವೇಶ್ವರಾಯ ಐರನ್ ಅಂಡ್ ಸ್ಟೀಲ್ ಲಿಮಿಟೆಡ್-ವಿಐಎಸ್‌ಎಲ್ ಎಂದು ಗುರುತಿಸಲಾಯಿತು.

ಎಂವಿಕೆ ಫಿಲಂ ಡಿವಿಷನ್‌ಗಾಗಿ ನಿರ್ದೇಶಿಸಿದ ಭಾರತರತ್ನ ಸರ್ ಎಂ ವಿಶ್ವೇಶ್ವರಾಯ ಕುರಿತಾದ ಸಾಕ್ಷ್ಯಾಚಿತ್ರ ನಮ್ಮ ಚಿತ್ರ ಭಂಡಾರ ಅನರ್ಘ್ಯರತ್ನ. ಇವರಲ್ಲದೆ ಬೇರಾರೂ ವಿಶ್ವೇಶ್ವರಾಯ ಅವರನ್ನು ಕುರಿತು ಸಾಕ್ಷ್ಯಚಿತ್ರ ಮಾಡಲು ಸಾಧ್ಯವಿರಲಿಲ್ಲ. ಏಕೆಂದರೆ ಕ್ಯಾಮರಾ ಎದುರಿಸುವುದನ್ನು ಅಷ್ಟಾಗಿ ಇಷ್ಟಪಡದಿದ್ದ ವಿಶ್ವೇಶ್ವರಾಯ ಅವರನ್ನು ಒಪ್ಪಿಸಿ, ಅವರ ಕುರಿತು ಸಾಕ್ಷ್ಯಾಚಿತ್ರ ನಿರ್ಮಿಸಿದ ಯಶಸ್ಸು ಎಂವಿಕೆಗೆ ಸಲ್ಲಬೇಕು. ಖ್ಯಾತ ಛಾಯಾಗ್ರಾಹಕ ಎಸ್ ಎನ್ ಎಸ್ ಶಾಸ್ತ್ರಿ ಅವರು ಕ್ಯಾಮರಾ ಕರ್ನಾಟಕವನ್ನು ಅಭಿವೃದ್ಧಿ ಪಥದಲ್ಲಿ ನಡೆಸಲು ಕಾರಣಕರ್ತರಾದ ಹಾಗೂ ಕೈಗಾರಿಕೀಕರಣಕ್ಕೆ ನಾಂದಿ ಹಾಡಿದ ಸರ್ ಎಂವಿ ಅವರನ್ನು ಮನೋಜ್ಞವಾಗಿ ಸೆರೆಹಿಡಿದಿದೆ. ಸರ್ ಎಂವಿ ಅವರ ವ್ಯಕ್ತಿತ್ವವನ್ನು ಎಂವಿಕೆ ಅದ್ಭುತವಾಗಿ ಕಟ್ಟಿಕೊಟ್ಟಿರುವುದಕ್ಕಾಗಿ ಎಂವಿಕೆ ಅವರನ್ನು ನಾವು ಇಂದು ನೆನಪಿಸಿಕೊಳ್ಳಲೇಬೇಕಿದೆ.

ಎಂವಿಕೆ ಬದುಕಿದ್ದರೆ ಡಿಸೆಂಬರ್ 8, 2022ಕ್ಕೆ ಅವರಿಗೆ ನೂರು ತುಂಬುತ್ತಿತ್ತು. ಅವರು 2010ರ ಸೆಪ್ಟೆಂಬರ್ 27ಕ್ಕೆ ನಮ್ಮನ್ನು ಅಗಲಿದರು ಎಂಬುದು ಕೇವಲ ಇತಿಹಾಸವಷ್ಟೇ.

Tags:    

Similar News