'ಕರಾವಳಿ'ಯಲ್ಲಿ ಮಾವೀರನ ಅಬ್ಬರ; ವಿಭಿನ್ನ ಲುಕ್‌ನಲ್ಲಿ ರಾಜ್ ಬಿ ಶೆಟ್ಟಿ
‘ಕರಾವಳಿ’ ಚಿತ್ರಕ್ಕೆ ಚಂದ್ರಶೇಖರ್ ಬಂಡಿಯಪ್ಪ ಕಥೆ-ಚಿತ್ರಕಥೆ ಬರೆದಿದ್ದು, ಗುರುದತ್ ಗಾಣಿಗ ನಿರ್ದೇಶನ ಮಾಡುತ್ತಿದ್ದಾರೆ.;
ವಿಭಿನ್ನ ಲುಕ್‌ನಲ್ಲಿ ರಾಜ್ ಬಿ ಶೆಟ್ಟಿ
ರಾಜ್ ಬಿ. ಶೆಟ್ಟಿ ಚಿತ್ರದಿಂದ ಚಿತ್ರಕ್ಕೆ ವಿಭಿನ್ನವಾದ ಪಾತ್ರಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ‘ರಾಕ್ಷಸಪುರದೊಳ್’ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ‘ಸು ಫ್ರಮ್ ಸೋ’ ಚಿತ್ರದಲ್ಲಿ ಕರುಣಾಕರ ಗುರೂಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಮಧ್ಯೆ, ಗುರುದತ್ ಗಾಣಿಗ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಕರಾವಳಿ’ ಚಿತ್ರಕ್ಕೆ ಇದೀಗ ರಾಜ್ ಬಿ. ಶೆಟ್ಟಿ ಎಂಟ್ರಿ ಕೊಟ್ಟಿದ್ದು, ಅವರ ಪಾತ್ರ ಪರಿಚಯದ ಟೀಸರ್ ಬಿಡುಗಡೆಯಾಗಿದೆ. ರಾಜ್ ಲುಕ್ ನೋಡುತ್ತಿದ್ದರೆ ಕಂಬಳ ಓಡಿಸುವ ಓಟಗಾರನ ಅಥವಾ ಕಂಬಳ ನಡೆಸುವ ಕುಟುಂಬದವನ ಪಾತ್ರ ಎಂದನಿಸುತ್ತದೆ. ಪಾತ್ರದ ಬಗ್ಗೆ ಸಿನಿಮಾತಂಡ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.
ಈ ಚಿತ್ರವನ್ನು ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರವನ್ನು ನಿರ್ದೇಶಿಸಿದ್ದ ಗುರುದತ್ ಗಾಣಿಗ ನಿರ್ದೇಶಿಸುತ್ತಿದ್ದಾರೆ. ಇದು ಕಂಬಳದ ಸುತ್ತ ಸುತ್ತುವ ಚಿತ್ರವಂತೆ. ಇದು ಪ್ರಾಣಿಗಳು ಮತ್ತು ಮನುಷ್ಯನ ನಡುವಿನ ಸಂಬಂಧದ ಕುರಿತಾದ ಚಿತ್ರ ಎನ್ನುವ ಗುರುದತ್ ಗಾಣಿಗ, ‘ಭಾರತೀಯ ಸಂಸ್ಕೃತಿಯಲ್ಲಿ ಪ್ರಾಣಿಗಳನ್ನು ಮಕ್ಕಳ ತರಹ ಸಾಕುತ್ತಾರೆ. ಮನೆಯ ಸದಸ್ಯರಂತೆ ಸಾಕುವ ಪರಿಪಾಠ ಇದೆ. ಆ ಹಿನ್ನೆಲೆಯಲ್ಲಿ ಚಿತ್ರ ಸಾಗುತ್ತದೆ’ ಎಂದು ಹೇಳಿಕೊಂಡಿದ್ದಾರೆ.
ಈ ಚಿತ್ರ ಕಂಬಳದ ಕುರಿತು ಸುತ್ತುತ್ತದಂತೆ. ‘ಕಂಬಳ ಎನ್ನುವುದು10 ಸೆಕೆಂಡ್ ಅಷ್ಟೇ ಕ್ರೀಡೆಯಲ್ಲ. ಅದರ ಹಿಂದೆ ಒಂದು ಜೀವನವಿದೆ. ಅದನ್ನು ತೋರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಪ್ರಾಣಿಗಳ ತರಹ ಮನುಷ್ಯ ಮತ್ತು ಪ್ರಾಣಿಗಳಲ್ಲಿರುವ ಮನುಷ್ಯತ್ವದ ಕುರಿತು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ. ಮನುಷ್ಯತ್ವವಿರುವ ಪ್ರಾಣಿಯ ಜೊತೆಗಿನ ನಾಯಕನ ಒಡನಾಟವನ್ನು ಈ ಚಿತ್ರದಲ್ಲಿ ತೋರಿಸುತ್ತಿದ್ದೇವೆ’ ಎಂದಿದ್ದಾರೆ.
‘ಕರಾವಳಿ’ ಚಿತ್ರಕ್ಕೆ ಚಂದ್ರಶೇಖರ್ ಬಂಡಿಯಪ್ಪ ಕಥೆ-ಚಿತ್ರಕಥೆ ಬರೆದಿದ್ದು, ಗುರುದತ್ ಗಾಣಿಗ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಪ್ರಜ್ವಲ್‍ಗೆ ನಾಯಕಿಯಾಗಿ ಸಂಪದ ಹುಲಿವಾನ ನಟಿಸುತ್ತಿದ್ದು, ಮಿಕ್ಕಂತೆ ಮಿತ್ರ, ‘ಸಿದ್ಲಿಂಗು’ ಶ್ರೀಧರ್, ಗೋವಿಂದೇಗೌಡ, ವಿದ್ಯಾ ಮೂರ್ತಿ ಮುಂತಾದವರು ನಟಿಸುತ್ತಿದ್ದಾರೆ.
ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಮುಂದಿನ ವರ್ಷ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ, ಅಭಿಮನ್ಯು ಸದಾನಂದನ್ ಛಾಯಾಗ್ರಹಣವಿದೆ.