ನಿಜಜೀವನದಲ್ಲಿ ಮಂತ್ರಿಯಾಗದಿದ್ದರೂ ಸಿನಿಮಾದಲ್ಲಿ ಮುಖ್ಯಮಂತ್ರಿಯಾದ ಎಲ್‍.ಆರ್. ಶಿವರಾಮೇಗೌಡ

ಹಲವು ಜನಪ್ರಿಯ ರಾಜಕಾರಿಣಿಗಳು ಕನ್ನಡದ ಸಿನಿಮಾಗಳಲ್ಲಿ ಆಗಾಗ ನಟಿಸಿದ್ದಾರೆ. ಈಗ ಆ ಸಾಲಿಗೆ ಮಾಜಿ ಸಂಸದ ಮತ್ತು ಶಾಸಕ ಎಲ್‍.ಆರ್. ಶಿವರಾಮೇಗೌಡ ಸಹ ಸೇರಿದ್ದಾರೆ.

Update: 2025-10-08 13:51 GMT

ಸಿನಿಮಾದಲ್ಲಿ ಮುಖ್ಯಮಂತ್ರಿಯಾದ ಎಲ್‍.ಆರ್. ಶಿವರಾಮೇಗೌಡ

ಕರ್ನಾಟಕದ ಹಲವು ರಾಜಕೀಯ ಮುಖಂಡರು ಸಿನಿಮಾದಲ್ಲೂ ನಟಿಸಿದ ಹಲವು ಉದಾಹರಣೆಗಳಿವೆ. 2018ರಲ್ಲಿ ಬಿಡುಗಡೆಯಾದ ಕವಿತಾ ಲಂಕೇಶ್‍ ನಿರ್ದೇಶನದ ‘ಸಮ್ಮರ್ ಹಾಲಿಡೇಸ್‍’ ಚಿತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಟಿಸಿದ್ದರು. ‘ತನುಜ’ ಚಿತ್ರದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್‍. ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಸುಧಾಕರ್ ನಟಿಸಿದ್ದರು. ‘ಮರಣ ಮೃದಂಗ’ ಮತ್ತು ‘ಪ್ರಜಾಶಕ್ತಿ’ ಚಿತ್ರಗಳಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ನಟಿಸಿದ್ದರು.

ಇದಲ್ಲದೆ, ಹಲವು ಜನಪ್ರಿಯ ರಾಜಕಾರಿಣಿಗಳು ಕನ್ನಡದ ಸಿನಿಮಾಗಳಲ್ಲಿ ಆಗಾಗ ನಟಿಸಿದ್ದಾರೆ. ಈಗ ಆ ಸಾಲಿಗೆ ಮಾಜಿ ಸಂಸದ ಮತ್ತು ಶಾಸಕ ಎಲ್‍.ಆರ್. ಶಿವರಾಮೇಗೌಡ ಸಹ ಸೇರಿದ್ದಾರೆ. ರಾಗಿಣಿ ಅಭಿನಯದ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದಲ್ಲಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಕಾಣಿಸಿಕೊಂಡಿದ್ದಾರೆ. ನಿಜಜೀವನದಲ್ಲಿ ಮಂತ್ರಿಯಾಗದ ಶಿವರಾಮೇಗೌಡ, ಸಿನಿಮಾದಲ್ಲಿ ಮುಖ್ಯಮಂತ್ರಿಯಾಗಿರುವುದು ವಿಶೇಷ. ಮಂಗಳವಾರ ರಾತ್ರಿ ಅವರ ಪಾತ್ರದ ಟೀಸರ್ ಅನಾವರಣ ಮಂಗಳವಾರ ರಾತ್ರಿ ನಡೆಯಿತು.

‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದಲ್ಲಿ ನಟಿಸಿರುವ ಕುರಿತು ಮಾತನಾಡಿರುವ ಶಿವರಾಮೇಗೌಡ, ‘ನಾನು ದೊಡ್ಡ ಮಂತ್ರಿ ಆಗಬೇಕಿದ್ದವನು. ನನ್ನ ಹಣೆಬರಹ ಸರಿ ಇರಲಿಲ್ಲವೇನೋ, ಅಲ್ಲಿಯವರೆಗೂ ಹೋಗೋಕೇ ಆಗಲಿಲ್ಲ. ನನ್ನನ್ನು ರಾಜಕೀಯವಾಗಿ ತುಳಿದವರೇ ಜಾಸ್ತಿ. ಹೋರಾಟದ ಮಧ್ಯೆ ಇಲ್ಲಿಯವರೆಗೂ ಬಂದಿದ್ದೇನೆ. ನಾನು ಶಾಸಕ, ಸಂಸದ ಆಗಿದ್ದೇನೆ. ಆದರೆ, ಮಂತ್ರಿ ಆಗೋಕೆ ಸಾಧ್ಯವಾಗಲಿಲ್ಲ. ನಿಜಜೀವನದಲ್ಲಿ ಮಂತ್ರಿ ಆಗದಿದ್ದರೂ, ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದಲ್ಲಿ ಮುಖ್ಯಮಂತ್ರಿ ಪಾತ್ರ ಮಾಡಿದ್ದೇನೆ’ ಎಂದರು.

ಬಡಜನತೆಗೆ ಹಸಿವು ನೀಗಿಸುವ ಸಲುವಾಗಿ ಸರ್ಕಾರಿ ನ್ಯಾಯಬೆಲೆ ಅಂಗಡಿಗಳನ್ನು ಸ್ಥಾಪಿಸಿವೆ ಎನ್ನುವ ಅವರು, ‘ನ್ಯಾಯಬೆಲೆ ಅಂಗಡಿಗಳಲ್ಲಿ ಏನೇನಾಗುತ್ತದೆ ಎಂಬುದು ಗೊತ್ತಿದೆ. ಆ ವಿಷಯಗಳನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಒಂದು ಸಿನಿಮಾ ಮಾಡುವುದು ಎಷ್ಟು ಕಷ್ಟ ಎಂಬುದು ನನಗೂ ಗೊತ್ತಿದೆ. ಈ ಚಿತ್ರದಲ್ಲಿ ಒಂದೊಳ್ಳೆಯ ಸಂದೇಶ ಹೇಳುವ ಪ್ರಯತ್ನ ಮಾಡಿದ್ದಾರೆ.

ಇಲ್ಲಿ ತೆಗೆದುಕೊಂಡಿರುವ ಕೆಲವು ವಿಷಯಗಳನ್ನು ಮನದಟ್ಟು ಮಾಡಿದರೆ, ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯ ಈ ಚಿತ್ರ ಪ್ರದರ್ಶನ ಕಾಣುವುದರಲ್ಲಿ ಸಂಶಯವಿಲ್ಲ. ನನಗೆ ದೊಡ್ಡ ಪಾತ್ರ ಕೊಡುತ್ತಾರೆ ಅಂದುಕೊಂಡಿದ್ದೆ. ಆದರೆ, ನನಗೆ ಒಂದೊಳ್ಳೆಯ ಪಾತ್ರ ಕೊಟ್ಟಿದ್ದಾರೆ. ನಾನು ಚಿತ್ರದಲ್ಲಿ ಸಂಭಾವನೆ ಪಡೆಯದೆ ನಟಿಸಿದ್ದೇನೆ. ಇವತ್ತು ಪ್ಯಾನ್‍ ಇಂಡಿಯಾ ಚಿತ್ರಗಳ ಎದುರು, ಸಿನಿಮಾ ಮಾಡುವುದು ಕಷ್ಟ. ಇತ್ತೀಚೆಗೆ, ರಾಮನಗರದಲ್ಲಿ ಚಿತ್ರೀಕರಣ ಮುಗಿದಿದೆ. ಯಾರ್ಯಾರು ನ್ಯಾಯಬೆಲೆ ಅಂಗಡಿಯಿಂದ ರೇಶನ್‍ ತಂದು ಊಟ ಮಾಡುತ್ತಿದ್ದಾರೋ, ಅವರು ಒಮ್ಮೆ ನೋಡಿದರೆ ನಿರ್ಮಾಪಕರ ಜೋಳಿಗೆ ತುಂಬುತ್ತದೆ. ಬೇರೆ ವಿಷಯಗಳ ಬಗ್ಗೆ ಹಲವು ಚಿತ್ರಗಳು ಬಂದಿವೆ. ಆದರೆ, ಇಂಥದ್ದೊಂದು ವಿಚಾರದ ಬಗ್ಗೆ ಯಾರೂ ಚಿತ್ರ ಮಾಡಿರಲಿಲ್ಲ.ಸ ಈ ಚಿತ್ರವನ್ನು ಎಲ್ಲರೂ ನೋಡಿ ಹಾರೈಸಿ’ ಎಂದರು.

ಈ ಹಿಂದೆ ‘ತಾಯವ್ವ’ ಚಿತ್ರವನ್ನು ನಿರ್ದೇಶಿಸಿದ್ದ ಸಾತ್ವಿಕ ಪವನ್‍ ಕುಮಾರ್, ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರಕ್ಕೆ ಛಾಯಾಗ್ರಹಣ ಮತ್ತು ನಿರ್ದೇಶನ ಮಾಡುತ್ತಿದ್ದಾರೆ. ಜಯಶಂಕರ ಟಾಕೀಸ್ ಬ್ಯಾನರಿನಲ್ಲಿ ತೇಜು ಮೂರ್ತಿ ಮತ್ತು ಎಸ್. ಪದ್ಮಾವತಿ ನಿರ್ಮಿಸುತ್ತಿದ್ದು, ಚಿತ್ರಕ್ಕೆ ಬಿ. ರಾಮಮೂರ್ತಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ರಾಗಿಣಿ ಜೊತೆಗೆ ಕುಮಾರ್ ಬಂಗಾರಪ್ಪ, ದೊಡ್ಡಣ್ಣ, ಶ್ರೀನಾಥ್‍, ರೋಹಿತ್‍ ಶ್ರೀನಾಥ್‍ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಅನಂತ ಆರ್ಯನ್ ಸಂಗೀತ ಸಂಯೋಜಿಸಿದ್ದಾರೆ.

Tags:    

Similar News