BIFFes 2025| ಕ್ರಿಸ್ತೋವ್ ಕಿಸ್ಲೋಸ್ಕಿ ಹಾಗೂ ವಿಮ್ ವೆಂಡರ್ಸ್ ಚಿತ್ರಗಳು ಈ ಬಾರಿ ಪ್ರಮುಖ ಆಕರ್ಷಣೆ
ಖ್ಯಾತ ಚಲನಚಿತ್ರ ನಿರ್ದೇಶಕ ಕ್ರಿಸ್ತೋವ್ ಕಿಸ್ಲೋಸ್ಕಿ, ಶ್ಯಾಮ್ ಬೆನಗಲ್, ಎಂ. ಎಸ್ ಸತ್ಯು, ಗಿರೀಶ್ ಕಾಸರವಳ್ಳಿ, ಪಿ. ಲಂಕೇಶ್, ಜಿ. ಅರವಿಂದನ್, ಅರಿಬಮ್ ಶ್ಯಾಮ್ ಶರ್ಮಾ, ನೀರದ್ ಮಹಾಪಾತ್ರ ಅವರ ಚಿತ್ರಗಳು ಪ್ರದರ್ಶನಗೊಳ್ಳುವ ಮೂಲಕ Biffes ನ ಈ ಅವೃತ್ತಿಯ ಘನತೆ ಹೆಚ್ಚಿಸಲಿವೆ.;
ಬಹು ನಿರೀಕ್ಷಿತ Biffes ನ ಹದಿನಾರನೇ ಆವೃತ್ತಿಗೆ ತೆರೆ ಏಳಲು ಇನ್ನು ಕೇವಲ ಒಂದು ವಾರವಷ್ಟೇ ಉಳಿದಿದೆ. ಭಾರತದ ಹಾಗೂ ವಿಶ್ವದ ಖ್ಯಾತ ಸಿನಿಮಾ ನಿರ್ದೇಶಕರ ಚಿತ್ರಗಳ ಸಾಲು ಸಾಲು ಸಿನಿಮಾವನ್ನು ಪ್ರೀತಿಸುವವರ ಹೃದಯಕ್ಕೆ ತಟ್ಟಲು ಸಜ್ಜಾಗಿವೆ.
ಪೋಲೆಂಡ್ ನ ಖ್ಯಾತ ಚಲನಚಿತ್ರ ನಿರ್ದೇಶಕ ಕ್ರಿಸ್ತೋವ್ ಕಿಸ್ಲೋಸ್ಕಿ ಅವರ ಏಳು ಚಿತ್ರಗಳು, ಇತ್ತೀಚೆಗೆ ನಮ್ಮನ್ನಗಲಿದ ಶ್ಯಾಮ್ ಬೆನಗಲ್ ಅವರ ಐದು ಚಿತ್ರಗಳು, ಎಂ. ಎಸ್ ಸತ್ಯು, ಗಿರೀಶ್ ಕಾಸರವಳ್ಳಿ, ಪಿ. ಲಂಕೇಶ್, ಜಿ. ಅರವಿಂದನ್, ಅರಿಬಂ ಶ್ಯಾಮ್ ಶರ್ಮಾ, ನೀರದ್ ಮಹಾಪಾತ್ರ ಅವರ ಚಿತ್ರಗಳು ಜರ್ಮನಿಯ ಹೊಸತನದ ಚಿತ್ರಗಳಲ್ಲಿ ಅತಿಮುಖ್ಯರೆನ್ನಸಿರುವ ವಿಮ್ ವೆಂಡರ್ಸ್, ಚಿತ್ರಗಳು ಪ್ರದರ್ಶನಗೊಳ್ಳುವ ಮೂಲಕ ಈ ಅವೃತ್ತಿಯ ಘನತೆ ಗೌರವವನ್ನು ಹೆಚ್ಚಿಸಲಿವೆ.
ಈ ಪೈಕಿ ʻಗರಂ ಹವಾʼ ಮತ್ತು ʻಪಲ್ಲವಿʼ ಬಿಡುಗಡೆಯಾಗಿ ಈ ವರ್ಷಕ್ಕೆ ಐವತ್ತು ವರ್ಷವಾಗುತ್ತದೆ. ಎರಡೂ ಚಿತ್ರಗಳೂ ತುರ್ತುಸ್ಥಿತಿಯ ಸಂದರ್ಭದಲ್ಲಿ ಆರಂಭವಾಗಿ ಬಿಡುಗಡೆಯಾದ ಚಿತ್ರಗಳು ಎಂಬುದು ಇಲ್ಲಿ ಗಮನಾರ್ಹ ಸಂಗತಿ.
ಆದರೆ, ಚಿತ್ರರಂಗಕ್ಕೂ ವಿವಾದಕ್ಕೂ ಒಂದು ರೀತಿಯ ಅವಿನಾಭಾವ ಸಂಬಂಧವಿರುವಂತೆ, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೂ, ವಿವಾದಕ್ಕೂ ಅಂಥದ್ದೇ ಸಂಬಂಧವಿರುವುದು ನಿಜ ಎಂಬುದನ್ನು ಒಪ್ಪಿಕೊಳ್ಳದೆ ವಿಧಿ ಇಲ್ಲ. ಕಾರಣ ಇಷ್ಟೇ. ಸ್ಪರ್ಧಾತ್ಮಕ ವಿಭಾಗಗಳಿಗೆ ಆಯ್ಕೆಯಾಗಿರುವ ಚಿತ್ರಗಳ ಬಗ್ಗೆ ಈ ಬಾರಿ ತಕರಾರು ಎದ್ದಿದೆ. ಅಷ್ಟೇ ಅಲ್ಲ. ನ್ಯಾಯಾಲಯದ ಮೆಟ್ಟಿಲನ್ನೂ ಏರಿರುವುದು ಒಂದು ರೀತಿಯಲ್ಲಿ Biffesನ ಘನತೆಗೆ ಧಕ್ಕೆ ಎಂದೇ ಭಾವಿಸಿದರೆ, ಅದರಲ್ಲಿ ತಪ್ಪೇನೂ ಇಲ್ಲ.
ವಿವಾದಕ್ಕೂ Biffes ಗೂ ಅಂಟಿದ ನಂಟು
ಹದಿನಾರನೇ Biffes ನ ಸ್ಪರ್ಧಾತ್ಮಕ ವಿಭಾಗಕ್ಕೆ “ಸಿನಿಮಾಗಳನ್ನು ವೀಕ್ಷಿಸದೇ ಆಯ್ಕೆ ಮಾಡಲಾಗಿದೆ” ಎಂದು ಕೆಲವು ಕನ್ನಡದ ಚಲನಚಿತ್ರ ನಿರ್ಮಾಪಕರು ಗಂಭೀರವಾಗಿ ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. “ಚಿತ್ರಗಳ ಆಯ್ಕೆ ಸಮಿತಿಗೆ ಚಿತ್ರರಂಗವನ್ನು ಪ್ರತಿನಿಧಿಸುವ ಅಂಗಸಂಸ್ಥೆಗಳಿಂದ ಪ್ರತಿನಿಧಿಗಳನ್ನು ಆಯ್ಕೆಮಾಡಿಕೊಂಡು ನಂತರ ಉಳಿದ ಕೆಲಸ ಮಾಡಬೇಕೆಂಬ ನಿಯಮವಿದೆ. ಆದರೆ Biffesನ ಆಯೋಜಕರು ಹಾಗೂ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಆಯ್ಕೆ ಸಮಿತಿ ರಚಿಸಿದ್ದಾರೆ. ಸ್ಪರ್ಧೆಗೆ ಕಳುಹಿಸಿದ ಚಿತ್ರಗಳನ್ನು ಪೂರ್ತಿಯಾಗಿ ವೀಕ್ಷಿಸದೇ ಚಿತ್ರಗಳ ಆಯ್ಕೆ ಪ್ರಕ್ರಿಯೆ ನಡೆದಿದೆ” ಎಂದು 20ಕ್ಕೂ ಹೆಚ್ಚು ನಿರ್ಮಾಪಕರು ಹೈಕೋರ್ಟಿನ ಮೆಟ್ಟಿಲೇರಿದ್ದಾರೆ.
ಕಲಾತ್ಮಕ ನಿರ್ದೇಶಕರ ಸಮರ್ಥನೆ
ಆದರೆ ಈ ಆರೋಪವನ್ನು Biffes ನ ಕಲಾತ್ಮಕ ನಿರ್ದೇಶಕರಾದ ಎನ್ ವಿದ್ಯಾಶಂಕರ್ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ದ ಫೆಡರಲ್-ಕರ್ನಾಟಕದೊಂದಿಗೆ ಮಾತನಾಡಿದ ವಿದ್ಯಾಶಂಕರ್ ಅವರು “ಸ್ಪರ್ಧೆಗೆ ಒಟ್ಟು 136 ಚಿತ್ರಗಳು ಬಂದಿದ್ದವು. ಆಯ್ಕೆ ಸಮಿತಿಯ ಸದಸ್ಯರು ಎಲ್ಲ ಚಿತ್ರಗಳನ್ನೂ ಸಂಪೂರ್ಣವಾಗಿ ನೋಡಿದ್ದಾರೆ. ಅದಕ್ಕೆ ಬೇಕಾದ ಎಲ್ಲ ಸಾಕ್ಷ್ಯಗಳು ಅಕಾಡೆಮಿಯಲ್ಲಿ ಇದೆ. ಅದನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ” ಎಂದು ಹೇಳಿದ್ದಾರೆ. ಈ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್ Biffes ಅನ್ನು ಮುಂದೂಡಬೇಕೆಂಬ ನಿರ್ಮಾಪಕರ ಮನವಿಯನ್ನು ತಿರಸ್ಕರಿಸಿದೆ. ಜೊತೆಯಲ್ಲಿ ರಾಜ್ಯ ಸರ್ಕಾರ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ತುರ್ತು ನೋಟೀಸ್ ಜಾರಿಗೊಳಿಸಿ, ವಿಚಾರಣೆಯನ್ನು ಫೆಬ್ರುವರಿ 24ಕ್ಕೆ ಮುಂದೂಡಿದೆ.
ಹಾಗೆ ನೋಡಿದರೆ ಸ್ಪರ್ಧಾತ್ಮಕ ವಿಭಾಗಗಳಿಗೆ ಕನ್ನಡ ಚಿತ್ರಗಳಿಗೆ ಸಂಬಂಧಿಸಿದಂತೆ ಮಾತ್ರ ವಿವಾದ ಹುಟ್ಟಿಕೊಂಡಿದ್ದು, ಉಳಿದ ವಿಭಾಗಗಳ ಬಗ್ಗೆ ಯಾರಿಗೂ ತಕರಾರಿದ್ದಂತೆ ಕಾಣಿಸುತ್ತಿಲ್ಲ. “ಏಕೆಂದರೆ ಅಂತರಾಷ್ಟ್ರೀಯ ಮಟ್ಟದ ಚಿತ್ರಗಳ ಗುಣಾವಗುಣಗಳನ್ನು ಗಮನದಲ್ಲಿಟ್ಟುಕೊಂಡು ಮಾತನಾಡುವ ಅಥವಾ ಚರ್ಚಿಸುವ ತಿಳುವಳಿಕೆ ಬಹಳಷ್ಟು ಮಂದಿಗೆ ಇದ್ದಂತೆ ತೋರುವುದಿಲ್ಲ” ಎಂದು, ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಅಂತಾರಾಷ್ಟ್ರೀಯ ಚಿತ್ರಗಳನ್ನು ಆಯ್ಕೆ ಮಾಡಿದವರಲ್ಲಿ ಒಬ್ಬರು ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡುತ್ತಾ ಅಭಿಪ್ರಾಯಿಸಿದರು.
ಕ್ಲಾಸಿಕ್ ಚಿತ್ರಗಳ ಪ್ರದರ್ಶನ
ʻದ ಫೆಡರಲ್-ಕರ್ನಾಟಕಕ್ಕೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ; ಕ್ರಿಸ್ತೋವ್ ಕಿಸ್ಲೋಸ್ಕಿ ಅವರ A Short Film About Killing ̧ A Short Film About Love ̧ Camera Buff ̧ The Double Life of Vernoique ̧ Three Colours White ̧ Three Colours Blue ̧ Three Colours Red ಸೇರಿದಂತೆ ಏಳು ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಹಾಗೆಯೇ ವಿಮ್ ವೆಂಡರ್ಸ್ ಅವರ Alice in the Cities ̧ Kings of the Road Paris Texas ̧ The American Friend Wings of Desire ಐದು ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಎಂ ಎಸ್ ಸತ್ಯು ಅವರ ʻಗರಂ ಹವಾʼ, ಗಿರೀಶ್ ಕಾಸರವಳ್ಳಿ ಅವರ ʻಘಟಶ್ರಾದ್ಧʼ ಲಂಕೇಶ್ ಅವರ ʻಪಲ್ಲವಿʼ, ಅರವಿಂದನ್ ಅವರ ʻಕುಮ್ಮಾಟಿʼ ಹಾಗೂ ʻಥಂಪೂʼ, ಅರಿಬಮ್ ಶ್ಯಾಮ್ ಶರ್ಮಾ ಅವರ ʻಈಶಾನೌʼ, ನೀರದ್ ಮಹಾಪಾತ್ರ ಅವರ ʻಮಾಯಾ ಮೃಗʼ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಈ ಎಲ್ಲ ಚಿತ್ರಗಳು ಪುನರಾವಲೋಕನ ಮತ್ತು ಸಂರಕ್ಷಿತ ಕ್ಲಾಸಿಕ್ ವಿಭಾಗಗಳಲ್ಲಿ ಪ್ರದರ್ಶನಗೊಳ್ಳಲಿದೆ.
ಮೇಯರ್ ಮುತ್ತಣ್ಣ ಮತ್ತು ನಾಗರಹಾವು
ಇವಲ್ಲದೆ, ಜನ್ಮ ಶತಮಾನೋತ್ಸವ ಆಚರಿಸುತ್ತಿರುವ, ಭಾರತದ ಪ್ರಮುಖ ಚಲನಚಿತ್ರ ವ್ಯಕ್ತಿಗಳನ್ನು ನೆನಪಿಸಿಕೊಳ್ಳುವ ವಿಭಾಗದಲ್ಲಿ ಗುರುದತ್ ಅವರ ʼಕಾಗಜ್ ಕಾ ಫೂಲ್ʼ, ರಿತ್ವಿಕ್ ಘಟಕ್ ಅವರ ʼಸುಬರ್ಣರೇಖಾʼ, ರಾಜ್ ಕಪೂರ್ ಅವರ ʻಆವಾರಾʼ, ಕನ್ನಡದ ಕೆ.ಎಸ್. ಅಶ್ವತ್ಥ್ ಅವರ ʼನಾಗರಹಾವುʼ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ನೆನಪು ಮತ್ತು ಶ್ರದ್ಧಾಂಜಲಿ ವಿಭಾಗದಲ್ಲಿ ಕುಮಾರ್ ಸಾಹ್ನಿ ಅವರ ʻಮಾಯಾ ದರ್ಪಣ್ʼ, ಎಂ.ಟಿ ವಾಸುದೇವನ್ ನಾಯರ್ ಅವರ ʻನಿರ್ಮಾಲ್ಯಂʼ, ಕನ್ನಡದ ಸಿದ್ದಲಿಂಗಯ್ಯ ಅವರ ʻಮೇಯರ್ ಮುತ್ತಣ್ಣ, ಗುರುಪ್ರಸಾದ್ ಅವರ ʻಎದ್ದೇಳು ಮಂಜುನಾಥʼ, ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಕ್ರಿಸ್ತೋವ್ ಕಿಸ್ಲೋಸ್ಕಿ ಪೋಲೆಂಡ್ ನ ಹೊಸ ಅಲೆ ಚಿತ್ರಗಳ ಹರಿಕಾರ
ಇನ್ನು ಕ್ರಿಸ್ತೋವ್ ಕಿಸ್ಲೋಸ್ಕಿ ಅವರ ಬಗ್ಗೆ ಹೇಳಬಹುದಾದರೆ, ಅವರು ಪೋಲೆಂಡ್ ನ ಹೊಸ ಅಲೆ ಚಿತ್ರಗಳ ಹರಿಕಾರರ ಪೈಕಿ ಒಬ್ಬರು. ಅವರ ಚಿತ್ರಗಳು, ಆತ್ಮಾವಲೋಕನ, ಮತ್ತು ತಾತ್ವಿಕ ಗುಣಗಳಿಂದಷ್ಟೇ ಅಲ್ಲದೆ, ತಮ್ಮ ಮಾನವ ಕಾಳಜಿಯಿಂದ ಪ್ರೇಕ್ಷಕರನ್ನು ಮಂತ್ರಮುಗ್ಥರನ್ನಾಗಿಸುತ್ತದೆ. ಅವರ ಚಿತ್ರಗಳು ಹೆಚ್ಚಾಗಿ, ವಿಧಿ ನಿಯಮ, ಆಯ್ಕೆ, ನೈತಿಕತೆ ಮತ್ತು ಸಂಕೀರ್ಣವಾದ ಮಾನವೀಯ ಸಂಬಂಧಗಳನ್ನು ಅರಸುವಿಕೆಯ ಗುಣಗಳಿಂದ ಉಳಿದ ನಿರ್ದೇಶಕರ ಚಿತ್ರಗಳಿಗಿಂತ ಬೇರೆಯದೇ ನೆಲೆಯಲ್ಲಿ ನಿಲ್ಲುತ್ತವೆ. ವಾಸ್ತವವನ್ನು ಆಧ್ಯಾತ್ಮಿಕ ಮತ್ತು ನೈತಿಕ ಪ್ರಶ್ನೆಗಳ ಹಿನ್ನೆಲೆಯಲ್ಲಿ ನೋಡುವುದರ ಮೂಲಕ ಕ್ರಿಸ್ತೋವ್ ಕಿಸ್ಲೋಸ್ಕಿ ಅಂತಾರಾಷ್ಟ್ರೀಯ ಮನ್ನಣೆ ಪಡೆದುಕೊಂಡತು. ತಮ್ಮ ಕೊನೆಯ ಚಿತ್ರವಾದ Three Colours Red ನಿರ್ದೇಶಿಸಿದ ನಂತರ 1996 ರಲ್ಲಿ ನಿಧನರಾದರು. ಆಗ ಅವರಿಗೆ ಕೇವಲ 54 ವರ್ಷ ವಯಸ್ಸು ಮಾತ್ರ. Christopher Nolan, Richard Linklater, ಹಾಗೂ Dardenne ಸೋದರರ ಮೇಲೆ ಕ್ರಿಸ್ತೋವ್ ಕಿಸ್ಲೋಸ್ಕಿ ಅವರ ಪ್ರಭಾವ ಗಾಢವಾಗಿ ಎದ್ದು ಕಾಣುತ್ತದೆ.
ಕಾವ್ಯಾತ್ಮಕ ಅಸ್ತಿತ್ವವಾದಿ ಚಿತ್ರಗಳು
ಚಿತ್ರ ನಿರ್ದೇಶಕರು, ನಿರ್ಮಾಪಕರು ಹಾಗೂ ಛಾಯಾಗ್ರಾಹಕರಾರ ವಿಮ್ ವೆಂಡರ್ಸ್ ತಮ್ಮ ಕಾವ್ಯಾತ್ಮಕ ಹಾಗೂ ಅಸ್ತಿತ್ವವಾದಿ ಚಿತ್ರ ವಸ್ತುಗಳ ಮೂಲಕ ಜಗತ್ತಿನ ಚಿತ್ರಲೋಕದ ಗಮನವನ್ನು ಸೆಳೆದಿದ್ದಾರೆ. ಇವರ ಚಿತ್ರಗಳು ಏಕಾಂಗಿತನ, ನೆನಪುಗಳ ಲೋಕ, ಪ್ರವಾಸದ ಮೂಲಕ ಅರಸುವಿಕೆ ಹಾಗೂ ಬದಲಾಗುತ್ತಿರುವ ಜಗತ್ತನ್ನು ನೋಡುವ ಕ್ರಮದಿಂದಾಗಿ ಲೋಕದಾದ್ಯಂತ ಪ್ರೇಕ್ಷಕರ ಮೆಚ್ಚಿಗೆ ಗಳಿಸಿವೆ. ಇವರನ್ನು ಜರ್ಮನಿಯ ಹೊಸ ಅಲೆ ಚಿತ್ರಗಳ ಹರಿಕಾರರಲ್ಲಿ ಒಬ್ಬರು ಎಂದು ನಿಸ್ಸಂದೇಹವಾಗಿ ಹೇಳಬಹುದು. Alice in the Cities (1974) Wrong Move (1975) Kings of the Road (1976) The American Friend (1977) Paris, Texas (1984) . Wings of Desire (1987) Until the End of the World (1991) Faraway, So Close! (1993) . Buena Vista Social Club (1999, Documentary) . The Salt of the Earth (2014, Documentary) ಹಾಗೂ Perfect Days (2023) ಇವರ ಮುಖ್ಯ ಚಿತ್ರಗಳು .
ಅವರು ಹೇಳುವ ಮಾತುಗಳು ಚಿತ್ರವನ್ನು ನಿರ್ದೇಶಿಸುವವರಿಗೆ ಒಂದು ಪಾಠದಂತಿದೆ. “ನೀವು ಯಶಸ್ವಿ ಚಿತ್ರಗಳನ್ನು ಮಾಡಬೇಕೆಂದು ಬಯಸಿದರೆ, ದಯವಿಟ್ಟು ಚಿತ್ರ ಮಾಡಲೇ ಬೇಡಿ. ನಿಮ್ಮ ಅತ್ಯುತ್ತಮ ಚಿತ್ರ ನಿರುದ್ದಿಶ್ಯದಿಂದ ಕೂಡಿರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ನಾನು ಅತ್ಯುತ್ತಮ, ಯಶಸ್ವಿ ಚಿತ್ರಗಳನ್ನು ಮಾಡಬೇಕೆಂದುಕೊಂಡಾಗಲೆಲ್ಲ ನಾನು ವಿಫಲನಾಗಿದ್ದೇನೆ. ಮನುಷ್ಯರೊಂದಿಗೆ ಸಂವಾದಿಸುವ ಸಿನಿಮಾ ಮಾಡಿ. ನಿಮ್ಮ ಅನುಭವವನ್ನು ದೃಶ್ಯೀಕರಿಸಿ. ತಂತಾನೆ ಅದು ಅತ್ಯುತ್ತಮ ಚಿತ್ರವಾಗುತ್ತದೆ”
ಅವರ ಇನ್ನೊಂದು ಮಾತು ಕೂಡ ಅತಿ ಮುಖ್ಯ. “ಚಿತ್ರ ನಿರ್ಮಾಣ ಎಂದಿಗೂ ಒಂದು ವ್ಯವಹಾರವೇ. ಅದನ್ನು ವೈಭವೀಕರಿಸುವ ಅಗತ್ಯವೇನಿಲ್ಲ. ಸಿನಿಮಾದ ವ್ಯವಹಾರ ಮತ್ತು ಸೃಜನಶೀಲತೆಯನ್ನು ಒಟ್ಟಾಗಿ ನೋಡುವುದು ಸರಿಯಲ್ಲ” ಈ ಮಾತುಗಳನ್ನು ಕನ್ನಡದ ಮತ್ತು ಭಾರತದ ಈ ಕಾಲದ ನಿರ್ದೇಶಕರು ಕೇಳಿಸಿಕೊಳ್ಳುತ್ತಾರೆ ಎಂಬುದು ನಂಬಿಕೆಯಷ್ಟೇ.