ಹಾಸ್ಟೆಲ್‌ನಿಂದ ಹೊರಹಾಕಿದ್ರು, ಆಗ ನೆರವಾದ ಗೆಳೆಯನ ಸಾಲ ಇನ್ನೂ ತೀರಿಸಿಲ್ಲ: ಅನುಶ್ರೀ
ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದು ಅತ್ತುಕೊಂಡು ಅಮ್ಮನಿಗೆ ಕಾಲ್ ಮಾಡಿದೆ. ನನಗೆ ಆಗುತ್ತಿಲ್ಲ ಬೆಂಗಳೂರು ಬಿಟ್ಟು ಊರಿಗೆ ಬರುತ್ತೇನೆ ಎಂದೆ. ಆಗ ಅಮ್ಮ ಹೇಳಿದ ಮಾತು ಬದುಕನ್ನೇ ಬದಲಿಸಿತು ಎಂದ;
ಕರಾವಳಿ ಬೆಡಗಿ ಪ್ರಸಿದ್ಧ ಕನ್ನಡ ನಿರೂಪಕಿ ಅನುಶ್ರೀ ಅವರು ಮೊದಲ ಬಾರಿಗೆ ತುಳುವಿನ ಪಾಡ್ ಕಾಸ್ಟ್ ಚಿಲ್ಲಿಂಗ್ ವಿಥ್ ಚಿಲಿಂಬಿ ಕಾರ್ಯಕ್ರಮದಲ್ಲಿ ಮಾತನಾಡಿದ್ದು, ಬೆಂಗಳೂರಿನಲ್ಲಿ ಕೆಲಸ ಕಳೆದುಕೊಂಡು ಪಿಜಿ ಓನರ್ ಮಧ್ಯರಾತ್ರಿ ಮನೆಯಿಂದ ಹೊರ ಹಾಕಿದ ಬಗ್ಗೆ ಮಾತನಾಡಿದ್ದಾರೆ. ಖಾಸಗಿ ಯೂಟ್ಯೂಬ್ ನಲ್ಲಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಕೆಲಸ ಅರಸಿ ಬೆಂಗಳೂರಿಗೆ ಬಂದ ನನ್ನ ಜೀವನದಲ್ಲಿ ಕೆಲಸ ಇಲ್ಲದ ದಿನ ಬಂದಾಗ ಎಲ್ಲಿ ಎಡವಿದ್ದೇನೆ? ಏನಾಯ್ತು? ಯಾಕೆ ಕೆಲಸ ಇಲ್ಲ? ಸೋತೆ ನಾನು ಅಂದು ಕೊಂಡು ಬೆಂಗಳೂರು ಬಿಟ್ಟು ಮತ್ತೆ ಮಂಗಳೂರು ಹೋಗುವ ಅನ್ನಿಸಿತು.
ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದು ಅತ್ತುಕೊಂಡು ಅಮ್ಮನಿಗೆ ಕಾಲ್ ಮಾಡಿದೆ. ನನಗೆ ಆಗುತ್ತಿಲ್ಲ, ಬೆಂಗಳೂರು ಬಿಟ್ಟು ಊರಿಗೆ ಬರುತ್ತೇನೆ ಎಂದೆ. ಅಮ್ಮ ಆಯ್ತು ಬಾ ಎರಡು ಅಗಳು ಅನ್ನ ತಿನ್ನುವ ಶಕ್ತಿ ನಮಗೆ ದೇವರು ಕೊಡ್ತಾರೆ. ಬಾ ಇಲ್ಲೇ ಎರಡು ತುತ್ತು ತಿಂದು ಇಲ್ಲೇ ಬದುಕೋಣ. ಆದ್ರೆ ನೀನು ಪ್ರಯತ್ನವೇ ಪಡದೆ ವಾಪಸ್ ಬರುವುದು ನನ್ನ ಮಗಳಲ್ಲ. ನೀನು ಸ್ವಲ್ಪ ಕೂಡ ಪ್ರಯತ್ನ ಪಡುತ್ತಿಲ್ಲ. ಇಷ್ಟು ಬೇಗ ನೀನು ಸೋಲು ಒಪ್ಪಿಕೊಂಡ್ಯಾ ಅಂತ ಕೇಳಿದರು. ಆಗ ನನಗೆ ರಿಯಲೈಸ್ ಆಯ್ತು ಸಿಕ್ಕಿದ ಕೆಲಸವನ್ನಷ್ಟೇ ಮಾಡಿದ್ದೇನೆ. ನಾನಾಗಿ ಯಾವುದು ಟ್ರೈ ಮಾಡಿಲ್ಲವಲ್ಲ ಎಂದು. ಅಲ್ಲಿಂದ ಮತ್ತೆ ನಾನು ಹಿಂತಿರುಗಿ ಹಾಸ್ಟೆಲ್ ಗೆ ಹೋದೆ. ಅಂದು ರಾತ್ರಿ ಯೋಚಿಸಿದೆ. "ನೀನು ಕೆಲಸವನ್ನು ಪ್ರೀತಿಸಿದರೆ, ಕೆಲಸ ನಿನ್ನನ್ನು ಪ್ರೀತಿಸುತ್ತದೆ" ಎಂದು ಅರಿತುಕೊಂಡೆ ಅದು ನನ್ನ ಇಡೀ ಬದುಕನ್ನು ಬದಲಾಯಿಸಿತು. ಯಾರು ಎಷ್ಟು ಹೊತ್ತಿಗೆ ಬೇಕಾದರೂ ರಾತ್ರಿ ಬೇಕಾದರೂ ಎಬ್ಬಿಸಿ ನನ್ನ ಮುಂದೆ ಕ್ಯಾಮರಾ ಇಟ್ಟರೆ ನಾನು ಮಾತನಾಡುತ್ತೇನೆ. ನನ್ನ ಕೆಲಸವನ್ನು ನಾನು ಅಷ್ಟು ಪ್ರೀತಿಸುತ್ತೇನೆ. ನೀವೊಂದು ಮರವನ್ನು ಪ್ರೀತಿಸುತ್ತೀರಿ ಅಂದರೆ ಅದು ನಿಮಗೆ ಮರಳಿ ಪ್ರೀತಿ ಕೊಡುತ್ತದೆ. ನೀವು ಏನು ಮಾಡುತ್ತೀರಿ ಅದನ್ನು ಪ್ರೀತಿಯಿಂದ ಮಾಡಿ ನಿಮಗೆ ಫಲ ಸಿಗುತ್ತದೆ. ನಾನು ಯಾವಾಗ ನನ್ನ ಕೆಲಸವನ್ನು ಇಷ್ಟು ಪಟ್ಟೆ. ಆ ಕೆಲಸ ನನ್ನ ಕೈಹಿಡಿಯಿತು. ಜನ ನನ್ನನ್ನು ಇಷ್ಟಪಡಲು ಆರಂಭಿಸಿದರು. ನನ್ನ ಅಮ್ಮ ಹೇಳಿದ ಮಾತು ನನ್ನ ಜೀವನದಲ್ಲಿ ಒಂದು ಪ್ರಮುಖ ಪಾತ್ರವಾಯ್ತು.
ಹಾಸ್ಟೆಲ್‌ನಿಂದ ಹೊರಹಾಕಿದ್ರು
ಒಂದು ಸಮಯದಲ್ಲಿ ನನ್ನನ್ನು ಹಾಸ್ಟೆಲ್‌ನಿಂದ ಹೊರಹಾಕಿದರು. ಮೂರು ತಿಂಗಳು ಹಾಸ್ಟೆಲ್ ಫೀಸ್ ಕಟ್ಟಿರಲಿಲ್ಲ. ಹಾಸ್ಟೆಲ್ ಓನರ್ ತುಂಬಾ ಜೋರು ಇದ್ರು. ಹಾಸ್ಟೆಲ್‌ನಿಂದ ಹೊರಹಾಕಿದಾಗ ಮತ್ತೆ ಮೆಜೆಸ್ಟಿಕ್‌ಗೆ ಹೋದೆ. ವಾಪಸ್ ಊರಿಗೆ ಹೋಗುವ ಪ್ಲಾನ್. ಆಗ ನನ್ನ ಫ್ರೆಂಡ್ ತಮೀಶ್ ಸಹಾಯ ಮಾಡಿದರು. ನಾನು ಮೆಜೆಸ್ಟಿಕ್ ಗೆ ಹೋಗುತ್ತಿರಬೇಕಾದರೆ ಅವರ ಕಾಲ್ ಬಂತು. ಎಲ್ಲಿದ್ದೀಯಾ ಅಂತ ಕೇಳಿದರು. ನಾನು ನಡೆದ ವಿಷ್ಯ ಹೇಳಿದೆ. ಅವರು ತುಂಬಾ ರೆಬೆಲ್, ಅದು ಹೇಗೆ ಒಂದು ಹೆಣ್ಣನ್ನು ಹೊರಗಡೆ ಹಾಕಿದರು? ಇದು ಸರಿಯಲ್ಲ ನಾನು ಬರುತ್ತೇನೆ ಎಂದು ಮೆಜೆಸ್ಟಿಕ್ ಗೆ ಬಂದು ಬೈಕ್ ನಲ್ಲಿ ಪಿಕ್ ಮಾಡಿಕೊಂಡು ನೇರವಾಗಿ ಪಿಜಿಗೆ ಹೋಗಿ 3 ತಿಂಗಳ ದುಡ್ಡು ಕಟ್ಟಿ, ನೀವು ಒಂದು ಹೆಣ್ಣು ಅದು ಹೇಗೆ ನೀವು ಮತ್ತೊಬ್ಬ ಹೆಣ್ಣನ್ನು ಹೊರಗಡೆ ಹಾಕಿದ್ರಿ ಅಂತ ಕೇಳಿದರು.
ಆ ಸ್ನೇಹಿತನ ಸಾಲ ಇನ್ನೂ ತೀರಿಸಿಲ್ಲ. ಕೆಲವು ಸಾಲ ತೀರಿಸಬಾರದು. ಕೆಲವು ಋಣ ಇರಬೇಕು. ಕಷ್ಟಕಾಲದಲ್ಲಿ ನೆರವು ನೀಡಿದ ವ್ಯಕ್ತಿಯ ನೆನಪು ಸದಾ ಇರಬೇಕು. ಜೀವನದಲ್ಲಿ ಏನೂ ಇಲ್ಲ ಎಂದಾಗ ಶಾರ್ಟ್‌ಕಟ್ ತೆಗೆದುಕೊಳ್ಳಬೇಡಿ. ಸೋತಾಗ ನೆವೆರ್ ಗೀವಪ್, ಕೈಲಾಗದು ಎಂದು ಬಿಟ್ಟುಬಿಡಬೇಡಿ, ಪ್ರಯತ್ನ ಮಾಡಿ ಅನುಶ್ರೀ ಎಂದು ಹೇಳಿದ್ದಾರೆ.
ರಕ್ಷಿತ್ ಶೆಟ್ಟಿ ಜೊತೆ ಮೂರು ಬಾರಿ ನನ್ನ ಮದುವೆ
ನನ್ನ ಬಳಿ ಕೋಟ್ಯಂತರ ಜನ ಕೇಳುವ ಪ್ರಶ್ನೆ ನಿಮ್ಮ ಮದುವೆ ಯಾವಾಗ? ಯೂಟ್ಯೂಬ್ ನಲ್ಲಿ ನನಗೆ 10 ಸಾವಿರ ಮದುವೆ ಮಾಡಿಸಿದ್ದಾರೆ. ಬಹುಷ ನಾನು ರಿಯಲ್ ಆಗಿ ಮದುವೆಯಾದ್ರೆ ಯಾರೂ ನಂಬಲಿಕ್ಕಿಲ್ಲ; ಅಷ್ಟು ಮದುವೆಯಾಗಿದೆ. ಯೂಟ್ಯೂಬ್ ನಲ್ಲಿ ಮೂರು ಬಾರಿ ನನ್ನ ಮತ್ತು ರಕ್ಷಿತ್ ಶೆಟ್ಟಿ ಮದುವೆ ಮಾಡಿಸಿದ್ದಾರೆ. ಒಂದು ಸಲ ನಾನೇ ಅವರಿಗೆ ಲಿಂಕ್ ಕಳಿಸಿದೆ. ಶೆಟ್ರೆ, ಕಂಗ್ರಾಜುಲೇಷನ್ ಎಂದೆ. ಅವರು ಹೋ, ಇದ್ಯಾವಾಗ ಮಾರ್ರೇ ಆದದ್ದು. ನೀವು ಕರೀಲೇ ಇಲ್ಲ ಅಂದರು. ನಾನಂದೆ ನಾವಿಬ್ಬರೂ ಬರಲೇ ಇಲ್ಲ. ಆದರೂ ನಮ್ಮ ಮದುವೆಯಾಗಿದೆ ಎಂದೆ.
ನಾನು ಯಾವುದೇ ಸಿಂಗಲ್ ಹುಡುಗನ ಜೊತೆ ಫೋಟೋ ಹಾಕಿದರೂ ಸಾಕು. ನನ್ನ ಜೊತೆ ಮದುವೆ ಮಾಡಿಸಿ ಬಿಡುತ್ತಾರೆ. ನನ್ನ ಕಸಿನ್ ನ ಗಂಡನೊಟ್ಟಿಗೂ ಪಾಪ ಮದುವೆ ಮಾಡಿಸಿ ಬಿಟ್ಟಿದ್ದರು. ನನ್ನ ಕಸಿನ್ ಕರೆ ಮಾಡಿ, ನಿನ್ನ ಮದುವೆ ಮಾಡುವುದರಲ್ಲಿ ನನ್ನ ಗಂಡನನ್ನೂ ಬಿಟ್ಟಿಲ್ಲ ಮಾರಾಯ್ತಿ ಅಂದಳು. ನಾನೀಗ ಅದನ್ನು ತುಂಬಾ ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ತಲೆಬಿಸಿ ಮಾಡಿಕೊಳ್ಲುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಇನ್ನೂ ಬಾಲ್ಯದ ಕೆಲ ವಿಚಾರಗಳು ಅಪ್ಪ-ಅಮ್ಮನ ಜೀವನ ನಮ್ಮ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ವಯಸ್ಸಾಗ್ತಾ ಇದೆ ಅನ್ನುವ ಬಗ್ಗೆ ನಾನು ಯೋಚನೆ ಮಾಡ್ತಿಲ್ಲ ಅಂದಿದ್ದಾರೆ. ಮೊದಲು ಮದುವೆಯೇ ಬೇಡ ಅನ್ನುತ್ತಿದ್ದ ನಾನು ಈಗ ಮದುವೆಯಾಗುವ ನಿರ್ಧಾರವನ್ನ ಮಾಡಿದ್ದೇನೆ ಎಂದು ಹೇಳಿದ್ದಾರೆ. ಮುಂದೊಂದು ದಿನ ಖಂಡಿತ ಮದುವೆಯಾಗುವುದು ಪಕ್ಕ ಎಂದು ಕೂಡ ಹೇಳಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಶುಭ ಸಮಾಚಾರವನ್ನೂ ನೀಡಿದ್ದಾರೆ.
ಸದ್ಯಕ್ಕೆ ಅನುಶ್ರೀ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮೊದಲ ಬಾರಿ ತುಳುವಿನ ಸಂದರ್ಶನದಲ್ಲಿ ಭಾಗವಹಿಸಿದ ನಟಿ, ನಿರೂಪಕಿ ಅನುಶ್ರೀ ಸದ್ಯ ಕೋಟ್ಯಂತರ ಕನ್ನಡಿಗರ ಪ್ರಶ್ನೆಗೆ ಉತ್ತರ ನೀಡುವ ಮೂಲಕ ತಾವು ಮದುವೆಯಾಗುವ ಯೋಚನೆಯಲ್ಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದನ್ನು ಕೇಳಿದ ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.