ಬಿಡುಗಡೆಯಾದ ಎರಡೇ ದಿನದಲ್ಲಿ ದಾಖಲೆ ಬರೆದ ʻಕಾಂತಾರ: ಚಾಪ್ಟರ್- 1ʼ
ವಿದೇಶದಲ್ಲಿಯೂ ʻಕಾಂತಾರ: ಚಾಪ್ಟರ್- 1ʼ ಚಿತ್ರವು ಉತ್ತಮ ಪ್ರದರ್ಶನ ಕಾಣುತ್ತಿದೆ. ಅಮೆರಿಕದಲ್ಲಿ ಅಂದಾಜು17.75 ಕೋಟಿ ರೂ. (2 ಮಿಲಿಯನ್ ಡಾಲರ್) ಗಳಿಸಿದೆ. ಬಿಡುಗಡೆ ದಿನದಂದು ವಿಶ್ವದಾದ್ಯಂತ ಚಿತ್ರದ ಒಟ್ಟು 90 ಕೋಟಿ ರೂ. ಆದಾಯ ಗಳಿಸಿದೆ.
ರಿಷಭ್ ಶೆಟ್ಟಿ
ದಸರಾ ಹಬ್ಬದಂದು ಭರ್ಜರಿ ಓಪನಿಂಗ್ ಪಡೆದಿದ್ದ `ಕಾಂತಾರ: ಚಾಪ್ಟರ್ -1'ಸಿನಿಮಾ ಶುಕ್ರವಾರವೂ ತನ್ನ ಗಳಿಕೆ ಹೆಚ್ಚಿಸಿಕೊಂಡು ಮುನ್ನುಗ್ಗುತ್ತಿದೆ.
2022ರಲ್ಲಿ ತೆರೆ ಕಂಡಿದ್ದ ಬ್ಲಾಕ್ ಬಸ್ಟರ್ ಕಾಂತಾರ ಚಿತ್ರದ ಪ್ರೀಕ್ವೆಲ್ ಆಗಿರುವ ರಿಷಬ್ ಶೆಟ್ಟಿ ಅಭಿನಯದ ಈ ಸಿನಿಮಾವು ಗುರುವಾರ ಭಾರತದಲ್ಲಿ 61.85 ಕೋಟಿ ರೂ. ನೆಟ್ ಕಲೆಕ್ಷನ್ ದಾಖಲಿಸಿತ್ತು. ಇದರಲ್ಲಿ ಕೇವಲ ಕನ್ನಡ ಆವೃತ್ತಿಯಿಂದಲೇ 19.60 ಕೋಟಿ ರೂ., ಹಿಂದಿ ಡಬ್ ಆವೃತ್ತಿಯಿಂದ 18.50 ಕೋಟಿ ರೂ. ಗಳಿಸಿತ್ತು. ತಮಿಳು, ತೆಲುಗು ಹಾಗೂ ಮಲಯಾಳಂ ಆವೃತ್ತಿಗಳೂ ಉತ್ತಮ ಕಲೆಕ್ಷನ್ ಕಂಡು, ಮೊದಲ ದಿನವೇ ಈ ಸಿನಿಮಾ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಭರ್ಜರಿ ಯಶಸ್ಸು ಸಾಧಿಸಿದೆ.
Sacnilk ವರದಿ ಪ್ರಕಾರ, ಶುಕ್ರವಾರ ಚಿತ್ರವು ಭಾರತದಲ್ಲಿ 45 ಕೋಟಿ ರೂ. ನೆಟ್ ಕಲೆಕ್ಷನ್ ಗಳಿಸಿದ್ದು, ಒಟ್ಟು ದೇಶೀಯ ಕಲೆಕ್ಷನ್ 106.85 ಕೋಟಿ ರೂ.ಗೆ ಏರಿಕೆಯಾಗಿದೆ. ಇದರೊಂದಿಗೆ ಕಾಂತಾರ:ಚಾಪ್ಟರ್ -1 ಈ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಸಿನಿಮಾವಾಗಿದೆ. ಇತ್ತೀಚೆಗೆ ಬಿಡುಗಡೆಯಾದ ʼಸು ಫರ್ಮ್ ಸೋʼ (92 ಕೋಟಿ ರೂ.) ಚಿತ್ರದ ದಾಖಲೆ ಮುರಿದಿದೆ.
ವಿದೇಶದಲ್ಲಿಯೂ ಈ ಸಿನಿಮಾ ಉತ್ತಮ ಪ್ರದರ್ಶನ ನೀಡಿದ್ದು, ಅಂದಾಜು 2 ಮಿಲಿಯನ್ ಡಾಲರ್ (ಸುಮಾರು 17.75 ಕೋಟಿ ರೂ.) ಗಳಿಸಿದೆ. ಬಿಡುಗಡೆ ದಿನದಂದು ವಿಶ್ವದಾದ್ಯಂತ ಚಿತ್ರದ ಒಟ್ಟು 90 ಕೋಟಿ ರೂ. ಆದಾಯ ಗಳಿಸಿದೆ.
ರಿಷಬ್ ಶೆಟ್ಟಿ ಅವರೇ ಬರೆದು ನಿರ್ದೇಶಿಸಿದ ಮೂಲ ಕಾಂತಾರ ಸಿನಿಮಾ ಕೇವಲ 15 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿ, ಜಗತ್ತಿನಾದ್ಯಂತ 400 ಕೋಟಿ ರೂ.ಗೂ ಹೆಚ್ಚು ಗಳಿಸಿ ಅಚ್ಚರಿಯ ಯಶಸ್ಸು ಸಾಧಿಸಿತ್ತು. ಅದರ ಪ್ರೀಕ್ವೆಲ್ ಕಾಂತಾರ ಚಾಪ್ಟರ್ 1 ಮೂಲ ಕಥೆಯು ಸಾವಿರ ವರ್ಷಗಳ ಹಿನ್ನೆಲೆಯದ್ದಾಗಿದೆ. ರಿಷಬ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ರುಕ್ಮಿಣಿ ವಸಂತ್, ಜಯರಾಮ್ ಮತ್ತು ಗುಲ್ಶನ್ ದೇವಯ್ಯ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಅಡಿ ಈ ಚಿತ್ರವನ್ನು ನಿರ್ಮಿಸಲಾಗಿದೆ.
`ಕಾಂತಾರ: ಚಾಪ್ಟರ್ -1' ಕದಂಬರ ಕಾಲಘಟ್ಟದ ಕಥೆ. ಕದಂಬರ ಆಳ್ವಿಕೆಯ ಕಾಲಘಟ್ಟವನ್ನು ಹಿನ್ನೆಲೆಯಾಗಿಟ್ಟುಕೊಂಡು ಒಂದು ಕಾಲ್ಪನಿಕ ಮತ್ತು ಮಾಯಾಲೋಕ ಸೃಷ್ಟಿಸಿದ್ದಾರೆ ರಿಷಬ್. ಈ ಚಿತ್ರವು ಕರಾವಳಿ ಕರ್ನಾಟಕದ ಕಾಡಿನ ಮಧ್ಯೆ ಇರುವ ಈಶ್ವರನ ಹೂದೋಟ ಎಂದೇ ಹೆಸರಾಗಿರುವ ಒಂದು ನಿಗೂಢ ಸ್ಥಳದ ಸುತ್ತ ಸುತ್ತುತ್ತದೆ. ಧರ್ಮ ಕಾಪಾಡಲಿಕ್ಕೆ ಈಶ್ವರನ ಗಣಗಳು ಬಂದು ನೆಲೆಸಿದ ಜಾಗವದು ಎಂಬ ದಂತಕಥೆ ಇರುವ ಸ್ಥಳವನ್ನು ತನ್ನ ವಶಕ್ಕೆ ಪಡೆಯಲು ರಾಜ ಪ್ರಯತ್ನಿಸಿದಾಗ ಏನೆಲ್ಲಾ ಆಗುತ್ತದೆ ಎಂಬುದು ಕಥೆಯ ಸುತ್ತ ಸಾಗುತ್ತದೆ.