Kannada Cinema Review: ವ್ಯವಸ್ಥೆ ವಿರುದ್ಧ ಸೂಕ್ಷ್ಮ ಪ್ರಶ್ನೆ ಎತ್ತುವ ‘ಯುದ್ಧಕಾಂಡ’

‘ಯುದ್ಧಕಾಂಡ’ ಚಿತ್ರವು ವ್ಯವಸ್ಥೆಯಲ್ಲಿನ ಓರೆಕೋರೆಗಳನ್ನು ಎತ್ತಿಹಿಡಿಯುವ ಜೊತೆಗೆ ಸೂಕ್ಷ್ಮ ಪ್ರಶ್ನೆ ಎತ್ತುವ ಮತ್ತು ಅದೇ ಸಮಯದಲ್ಲಿ ಎಚ್ಚರಿಸುವ ಒಂದು ಚಿತ್ರ.;

Update: 2025-04-21 05:18 GMT

ಚಿತ್ರ: ಯುದ್ಧಕಾಂಡ

ತಾರಾಗಣ: ಅಜೇಯ್‍ ರಾವ್‍, ಪ್ರಕಾಶ್‍ ಬೆಳವಾಡಿ, ಅರ್ಚನಾ ಜೋಯಿಸ್‍, ಟಿ.ಎಸ್‍. ನಾಗಾಬರಣ ಮುಂತಾದವರು

ನಿರ್ದೇಶನ: ಪವನ್‍ ಭಟ್‍

ನಿರ್ಮಾಣ: ಅಜೇಯ್‍ ರಾವ್‍

ಬೇರೆ ಭಾಷೆಗಳಲ್ಲಿ ‘ಜೈ ಭೀಮ್‍’, ‘ಜಾಲಿ ಎಲ್‍.ಎಲ್‍.ಬಿ’, ‘ಪಿಂಕ್‍’, ‘ಮುಲ್ಕ್’, ‘ಸೆಕ್ಷನ್‍ 375’, ‘ಸಿರ್ಫ್‍ ಏಕ್‍ ಬಂದಾ ಖಾಫೀ ಹೇ’ ಮುಂತಾದ ಹಲವು ಕೋರ್ಟ್ ರೂಂ ಡ್ರಾಮಾಗಳು ಬರುತ್ತಿದ್ದರೂ, ಕನ್ನಡದಲ್ಲಿ ಮಾತ್ರ ಈ ಶೈಲಿಯ ಚಿತ್ರಗಳು ಕಡಿಮೆಯೇ. ಬಂದರೂ ಪಕ್ವವಾಗಿರಲಿಲ್ಲ. ಈ ವಾರ ಬಿಡುಗಡೆಯಾಗಿರುವ ‘ಯುದ್ಧಕಾಂಡ’ ಒಂದೊಳ್ಳೆಯ ಸಾಮಾಜಿಕ ಕಳಕಳಿ ಸಾರುವ ಜೊತೆಗೆ ಇಡೀ ಸಮಾಜಕ್ಕೆ ಎಚ್ಚರಿಕೆ ನೀಡುವಂತಹ ಒಂದು ಚಿತ್ರ.

ನಿವೇದಿತಾ (ಅರ್ಚನಾ ಜೋಯಿಸ್) ಎಂಬ ಮಹಿಳೆ ಕೋರ್ಟ್ ಆವರಣದಲ್ಲಿ ಶಾಸಕನ ತಮ್ಮನನ್ನು ಗುಂಡಿಟ್ಟು ಕೊಲ್ಲುತ್ತಾಳೆ. ಈ ಪ್ರಕರಣದಲ್ಲಿ ಬಂಧಿಯಾಗುವ ನಿವೇದಿತಾಗೆ ತೀವ್ರ ಶಿಕ್ಷೆ ಆಗಬೇಕು ಎಂಬ ಮಾತು ಕೇಳಿಬರುತ್ತದೆ. ಆಕೆಯ ಪರವಾಗಿ ಯಾರೂ ಕೇಸ್‍ ತೆಗೆದುಕೊಳ್ಳದ ಹೊತ್ತಿನಲ್ಲಿ ಕಾನೂನಿನಲ್ಲಿ ಪದವಿ ಪಡೆದು ಸಣ್ಣಪುಟ್ಟ ಕೇಸ್‍ಗಳನ್ನು ನೋಡಿಕೊಂಡಿರುವ ಭರತ್‍ಗೆ (ಅಜೇಯ್‍ ರಾವ್‍) ಈ ಕೇಸ್‍ ವಾದಿಸಲು ಮುಂದಾಗುತ್ತಾನೆ. ಇಷ್ಟಕ್ಕೂ ನಿವೇದಿತಾ ಆ ಕೊಲೆ ಮಾಡಿದ್ದೇಕೆ? ಆಕೆಯನ್ನು ಶಿಕ್ಷೆಯಿಂದ ಬಚಾವ್‍ ಮಾಡುವುದಕ್ಕೆ ಭರತ್‍ಗೆ ಸಾಧ್ಯವಾಗುತ್ತದಾ? ಈ ನಿಟ್ಟಿನಲ್ಲಿ ಆತ ಏನೆಲ್ಲಾ ಸವಾಲುಗಳನ್ನು ಎದುರಿಸಬೇಕಾಗುತ್ತದೆ? ಎಂಬುದು ಗೊತ್ತಾಗಬೇಕಿದ್ದರೆ ‘ಯುದ್ಧಕಾಂಡ’ ಚಿತ್ರವನ್ನು ನೋಡಬೇಕು.

‘ಯುದ್ಧಕಾಂಡ’ ಚಿತ್ರವು ವ್ಯವಸ್ಥೆಯಲ್ಲಿನ ಓರೆಕೋರೆಗಳನ್ನು ಎತ್ತಿಹಿಡಿಯುವ ಜೊತೆಗೆ ಸೂಕ್ಷ್ಮ ಪ್ರಶ್ನೆ ಎತ್ತುವ ಮತ್ತು ಅದೇ ಸಮಯದಲ್ಲಿ ಎಚ್ಚರಿಸುವ ಒಂದು ಚಿತ್ರ. ಮಹಿಳೆಯರು ಮತ್ತು ಮಕ್ಕಳ ಮೇಲಿನ ಹೆಚ್ಚುತ್ತಿರುವ ದೌರ್ಜನ್ಯದ ಕುರಿತು ಹೇಳುವುದರ ಜೊತೆಗೆ, ದೌರ್ಜನ್ಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಮತ್ತು ದೌರ್ಜನ್ಯ ಆಗಲಿಕ್ಕೆ ಬಿಡಬಾರದು ಎಂಬ ಸಂದೇಶವನ್ನು ಈ ಚಿತ್ರದಲ್ಲಿ ನೀಡಲಾಗಿದೆ. ಈ ವಿಷಯವನ್ನು ಒಂದಿಷ್ಟು ಬುದ್ಧಿವಂತಿಕೆ ಮತ್ತು ಒಂದಿಷ್ಟು ಭಾವನಾತ್ಮಕತೆಯನ್ನು ಬಳಸಿ ಚಿತ್ರಕಥೆ ಹೆಣೆಯಲಾಗಿದೆ.

ಈ ತರಹದ ಕಥೆ ಹೇಳುವ ಗಂಭೀರತೆ ನಿರ್ದೇಶಕ ಪವನ್‍ ಅವರಿಗೆ ಗೊತ್ತಿದೆ. ಹಾಗಾಗಿ, ಅವರು ಹೆಚ್ಚು ಕಮರ್ಷಿಯಲ್‍ ವಿಷಯಗಳನ್ನು ತುರುಕದೆ ಕಥೆ ಹೇಳುವ ಪ್ರಯತ್ನ ಮಾಡಿದ್ದಾರೆ. ಚಿತ್ರದ ಮೊದಲಾರ್ಧ ನಿಧಾನವಾಗಿ ಸಾಗುತ್ತದೆ. ಲಾ ಕಾಲೇಜಿನಿಂದ ಉತ್ತೀರ್ಣನಾಗಿ ಬರುವ ಭರತ್‍ನ ಹೋರಾಟ, ಅವನ ಸಣ್ಣ ಪ್ರೇಮಕಥೆ ಒಂದಿಷ್ಟು ಸಮಯ ತಿನ್ನುತ್ತದೆ. ಕ್ರಮೇಣ ವೇಗ ಪಡೆದುಕೊಳ್ಳುವ ಚಿತ್ರ ಕೊನೆಗೆ ಭಾವನಾತ್ಮಕವಾಗಿ ಮುಗಿಯುತ್ತದೆ. ಚಿತ್ರದ ಕೊನೆಯಲ್ಲಿ ಲಾಯರ್‍ ಒಬ್ಬ ನ್ಯಾಯಾಲಯದಲ್ಲಿ ಭಗವದ್ಗೀತೆಯ ಸಾಲುಗಳನ್ನು ನಾಟಕೀಯವಾಗಿ ಹೇಳುವುದು ಸ್ವಲ್ಪ ಅಸಹಜ ಅಂತನಿಸಿದರೂ, ಒಟ್ಟಾರೆ ನ್ಯಾಯಾಲಯದ ಕಲಾಪ ನೋಡಿಸಿಕೊಂಡು ಹೋಗುತ್ತದೆ. ಚಿತ್ರದಲ್ಲಿ ಇನ್ನಷ್ಟು ತಿರುವುಗಳ ಜೊತೆಗೆ ವಾದ-ಪ್ರತಿವಾದದ ಅವಶ್ಯಕತೆಯೂ ಇತ್ತು. ಇದರ ಹೊರತಾಗಿ, ಸಿನಿಮಾ ಎಂದರೆ ಬರೀ ಮನರಂಜನೆಯಲ್ಲ, ಅದರಾಚೆಗೂ ಒಂದು ಜವಾಬ್ದಾರಿ ಮತ್ತು ಬದ್ಧತೆ ಇದೆ ಎಂಬುದನ್ನು ಈ ಚಿತ್ರ ಸಾರುತ್ತದೆ.

‘ಯುದ್ಧಕಾಂಡ’ ಚಿತ್ರದ ಮೂಲಕ ಅಜೇಯ್ ತಮ್ಮ ಹಳೆಯ ಕಮರ್ಷಿಯಲ್‍ ಚೌಕಟ್ಟು ಬಿಟ್ಟು ನಟಿಸಿದ್ದಾರೆ. ಕೆಲವೊಮ್ಮೆ ಅವರ ಅಭಿನಯ ಸ್ವಲ್ಪ ಜಾಸ್ತಿಯಾಯಿತೇನೋ ಎಂದನಿಸುವುದೂ ಬಿಟ್ಟರೆ, ಅವರು ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಇದು ಪ್ರಕಾಶ್‍ ಬೆಳವಾಡಿ ಅವರ ಅತ್ಯುತ್ತಮ ಚಿತ್ರ ಎಂದರೆ ತಪ್ಪಿಲ್ಲ. ಅವರನ್ನೇಕೆ ಕನ್ನಡ ಚಿತ್ರರಂಗ ಸರಿಯಾಗಿ ಬಳಸಿಕೊಳ್ಳುತ್ತಿಲ್ಲವೋ ಗೊತ್ತಿಲ್ಲ. ಅರ್ಚನಾ ಜೋಯಿಸ್‍ ತಮ್ಮ ತೂಕದ ಅಭಿನಯದಿಂದ ಇಷ್ಟವಾಗುತ್ತಾರೆ. ನಾಯಕಿ ಸುಪ್ರೀತಾ ಸತ್ಯನಾರಾಯಣ್‍ಗೆ ಇಲ್ಲಿ ಹೆಚ್ಚು ಕೆಲಸವಿಲ್ಲ. ನಾಗಾಭರಣ, ನಾಗೇಂದ್ರ ಶಾ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ.

ಅಜೇಯ್‍ ರಾವ್‍ ಈ ಚಿತ್ರಕ್ಕೆ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿರುವ ವಿಷಯ ಪದೇಪದೇ ಸುದ್ದಿಯಾಗುತ್ತಲೇ ಇದೆ. ಅವರು ಈ ಚಿತ್ರಕ್ಕೆ ಅದೆಷ್ಟು ಖರ್ಚು ಮಾಡಿದ್ದಾರೋ ಗೊತ್ತಿಲ್ಲ. ತುಂಬಾ ಖರ್ಚೇನೂ ಚಿತ್ರದಲ್ಲಿ ಕಾಣುವುದಿಲ್ಲ. ಇನ್ನು, ಸಾಲ ಎಷ್ಟು ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಆದರೆ, ಹೆಣ್ಣುಮಕ್ಕಳ ಬಗೆಗಿನ ಅವರ ಕಾಳಜಿ ಮತ್ತು ಸಾಮಾಜಿಕ ಕಳಕಳಿ ಪ್ರತಿ ದೃಶ್ಯದಲ್ಲೂ ಕಾಣುತ್ತದೆ.

Tags:    

Similar News