ʼಜಾಕಿʼ ಹವಾ | ಹದಿನಾಲ್ಕು ವರ್ಷಗಳ ಬಳಿಕ ಮತ್ತೆ ಅಪ್ಪು ಅಭಿಮಾನದ ಅಬ್ಬರ

ಕನ್ನಡಿಗರು ಅಭಿಮಾನ ಮತ್ತು ಗೌರವದಿಂದ ʼದೇವರ ಮಗʼ ಎಂದೇ ಕೈಜೋಡಿಸುವ ಪುನೀತ್‌ ರಾಜ್‌ ಕುಮಾರ್‌ ಅವರ ೪೯ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಜನಪ್ರಿಯ ಸಿನಿಮಾ ʼಜಾಕಿʼ ಮರುಬಿಡುಗಡೆ ಕಂಡಿದೆ. ಮೂರು ವರ್ಷಗಳ ಹಿಂದೆ ಮರೆಯಾದ ʼಕನ್ನಡಿಗರ ಮಾಣಿಕ್ಯʼ ಇದೀಗ ಮತ್ತೆ ತೆರೆ ಮೇಲೆ ಬಂದಿದ್ದಾರೆ.;

Update: 2024-03-17 06:49 GMT

ಎಲ್ಲ ಕನಸನ್ನೂ ಒಂದೇ ನೆರಳಲ್ಲಿ ಸಾಲಾಗಿ ಇಡಬಾರದೆ…!

ಆ ಊರು, ಈ ಊರು ಎನ್ನದೆ, ತನ್ನವರು, ಪರರು ಎನ್ನದೆ, ಭಾಷೆ, ಧರ್ಮ, ಪ್ರದೇಶಗಳ ಗಡಿಗಳಿಲ್ಲದೆ ಇಡೀ ನಾಡನ್ನೇ ತನ್ನ ಅಭಿಮಾನಿ ಬಳಗ ಮಾಡಿಕೊಂಡಿರುವ ಪುನೀತ್ ರಾಜಕುಮಾರ್ ನಟನೆಯ ಜನಪ್ರಿಯ ಸಿನಿಮಾ ʼಜಾಕಿʼ ರಿ-ರಿಲೀಸ್ ಆಗಿದೆ. ಅಪಾರ ಅಭಿಮಾನಿಗಳ ಪಾಲಿಗೆ ಹದಿನಾಲ್ಕು ವರ್ಷಗಳ ಹಿಂದೆ ಮೊದಲು ಬಿಡುಗಡೆಗೊಂಡಾಗ ಇನ್ನಿಲ್ಲದ ಥ್ರಿಲ್ ಕೊಟ್ಟಿದ್ದ ಜಾಕಿ, ಇದೀಗ ಮತ್ತೆ ಎಲ್ಲಾ ಕನಸೂ ಒಂದೇ ನೆರಳಲ್ಲಿ ಸಾಲಾಗಿ ಸಿಕ್ಕ ಅಪರೂಪದ ಸಂಭ್ರಮ ಕೊಟ್ಟಿದೆ.

ಹಾಗಾಗಿಯೇ ರಾಜ್ಯಾದ್ಯಂತ 150ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಬಿಡುಗಡೆಯಾಗಿರುವ ನಗುವಿನ ಅರಸ ಪುನಿತ್ ಅವರ ಜಾಕಿ, ಅಬ್ಬರದ ಪ್ರದರ್ಶನ ಕಾಣುತ್ತಿದೆ. ಬೆಂಗಳೂರು ನಗರದಲ್ಲೇ 80ಕ್ಕೂ ಹೆಚ್ಚಿ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದ್ದು, ಅಭಿಮಾನಿಗಳ ಹರ್ಷೋದ್ಗಾರದ ನಡುವೆ ಅಪರೂಪದ ಜನಬೆಂಬಲಕ್ಕೆ ಪಾತ್ರವಾಗಿದೆ.

ಮಾ.17ರ ಅಪ್ಪು ಜನ್ಮದಿನದ ಹಿನ್ನೆಲೆಯಲ್ಲಿ ಜಾಕಿ ಸಿನಿಮಾ ಮತ್ತೆ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದೆ. 2010ರಲ್ಲಿ ಬಿಡುಗಡೆಯಾಗಿ ಹಲವು ದಾಖಲೆ ಬರೆದಿದ್ದ ಸಿನಿಮಾ, ಇದೀಗ ೧೪ ವರ್ಷಗಳ ಬಳಿಕ ಮರು ಬಿಡುಗಡೆಯಾಗಿದ್ದು, ಅಭಿಮಾನಿಗಳ ಪಾಲಿಗೆ ಈ ಬಾರಿಯ ʼಸ್ಪೂರ್ತಿ ದಿನʼಕ್ಕೆ ವಿಶೇಷ ಸಂಭ್ರಮ ತಂದಿದೆ. ಹಾಗಾಗಿಯೇ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾದ ಮಾ ೧೫ರ ಮೊದಲ ದಿನದ ಮೊದಲ ಶೋನಿಂದಲೂ ಅಭಿಮಾನಿಗಳ ಹರ್ಷೋದ್ಗಾರ, ಜಯಘೋಷ, ಶಿಳ್ಳೆ, ಡಾನ್ಸ್ಗಳ ಉತ್ಸಾಹ ಮುಗಿಲುಮುಟ್ಟಿದೆ.

ಶುಕ್ರವಾರ ಮೊದಲದಿನದ ಮೊದಲ ಪ್ರದರ್ಶನಕ್ಕೆ ಪುನೀತ್ ಪತ್ನಿ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಅವರೂ ಚಿತ್ರಮಂದಿರಕ್ಕೆ ಹೋಗಿ ಅಭಿಮಾನಿಗಳ ನಡುವೆ ಕುಳಿತು ಸಿನಿಮಾ ನೋಡಿದ್ದಾರೆ. ಸಿನಿಮಾದಲ್ಲಿ ಪುನೀತ್ ಎಂಟ್ರಿ ಸೀನ್ನಲ್ಲಿ ಇಡೀ ಚಿತ್ರಮಂದಿರದಲ್ಲಿ ನೆರೆದ ಅಭಿಮಾನಿಗಳು ಕುಣಿದು ಕುಪ್ಪಳಿಸಿ “ಅಪ್ಪು, ಅಪ್ಪು, ಅಪ್ಪು” ಎಂದು ಹರ್ಷೋದ್ಗಾರ ಮೊಳಗಿಸಿ ಸಂಭ್ರಮಿಸಿದ್ದು ಕಂಡು ಸ್ವತಃ ಅಶ್ವಿನಿ ಅವರೇ ಭಾವೋದ್ವೇಗಕ್ಕೆ ಒಳಗಾಗಿದ್ದರು. ಇದು ಒಂದು ಕಡೆಯ ವಿದ್ಯಮಾನವಾಗಿರಲಿಲ್ಲ; ಚಿತ್ರ ಬಿಡುಗಡೆಯಾಗಿರುವ ಬಹುತೇಕ ಸಿನಿಮಾ ಮಂದಿರಗಳಲ್ಲಿ ಮೊದಲ ದಿನವಷ್ಟೇ ಅಲ್ಲದೆ, ಪ್ರತಿ ಶೋನಲ್ಲೂ ಇದೇ ಸಂಭ್ರಮ ಮುಂದುವರಿದಿದೆ.

ಅಷ್ಟಕ್ಕೂ ಅಭಿಮಾನಿಗಳ ಆ ಸಂಭ್ರಮಕ್ಕೆ ಕೇವಲ ಅಪ್ಪು ತಮ್ಮೊಂದಿಗೆ ಈಗ ಇಲ್ಲ; ಅಪರೂಪದ ಜೀವವನ್ನು ನಾವು ಕಳೆದುಕೊಂಡಿದ್ದೇವೆ ಎಂಬ ಮಿಸ್ಸಿಂಗ್ ಫೀಲ್‌ಗೆ ಈ ʼಜಾಕಿʼ ಒಂದು ಸಮಾಧಾನ ಕೊಟ್ಟಿದೆ ಎಂಬುದಷ್ಟೇ ಕಾರಣವಲ್ಲ. ಬದಲಾಗಿ ಆವರೆಗೆ ಸಿನಿಮಾದಲ್ಲಿ ಅಪ್ಪು ಕಾಣಿಸಿಕೊಂಡ ಗೆಟಪ್, ಇಮೇಜ್ ಗೆ ಭಿನ್ನವಾಗಿ ʼಜಾಕಿʼ ಅಪ್ಪುವನ್ನು ತೋರಿಸಿದೆ ಎಂಬುದು ಕೂಡ ಕಾರಣ. ಅಪ್ಪು ಗೆಟಪ್, ಬಾಡಿ ಲಾಂಗ್ವೇಜ್, ಡಾನ್ಸ್.. ಎಲ್ಲವೂ ಈ ಜಾಕಿ ಸಿನಿಮಾದಲ್ಲಿ ಹೊಸ ಹುರುಪು ಮತ್ತು ʼಪವರ್ʼರನ್ನು ಅಭಿಮಾನಿಗಳಿಗೆ ನೀಡಿತ್ತು. ಇದೀಗ ಅದೇ ಎನರ್ಜಿ, ಪವರ್ ಮತ್ತೆ ಪ್ರೇಕ್ಷಕರನ್ನು ಸಿನಿಮಾ ಮಂದಿರದ ಸೀಟು ಬಿಟ್ಟು ಎದ್ದು ಕುಣಿಯುವಂತೆ ಮಾಡುತ್ತಿದೆ.

ಜಾಕಿ ಸಿನಿಮಾವೇ ಯಾಕೆ?

ಅಷ್ಟಕ್ಕೂ ಈ ʼಜಾಕಿʼ ಸಿನಿಮಾವೇ ಯಾಕೆ ಅಪ್ಪು ಜನ್ಮದಿನಕ್ಕೆ ಮರು ಬಿಡುಗಡೆಯಾಯಿತು? ಏನಿದರ ವಿಶೇಷ? ಎಂಬುದು ಕಾಡುವ ಪ್ರಶ್ನೆ.

ಮೊದಲನೆಯದಾಗಿ ಇದು ಪುನೀತ್ ಅವರ ಹೋಂ ಬ್ಯಾನರ್ ಸಿನಿಮಾ. ಎರಡನೆಯದಾಗಿ ಅಪ್ಪು, ಆವರೆಗೆ ತೆರೆಯ ಮೇಲೆ ಕಾಣಿಸಿಕೊಂಡಿದ್ದಕ್ಕಿಂತ ಭಿನ್ನವಾಗಿ, ಪಕ್ಕಾ ಲೋಕಲ್ ಹುಡುಗನಾಗಿ ಕಾಣಿಸಿಕೊಂಡು ಆವರೆಗಿನ ಇಮೇಜ್ ಬದಲಿಸಿದ ಮಾಸ್ ಸಿನಿಮಾ ಇದು. ಜೊತೆಗೆ ಸಿನಿಮಾದಲ್ಲಿ ಪುನೀತ್ ಅವರ ಕೆಲವು ಡೈಲಾಗ್ಗಳು ಈಗ ಅವರ ನಿಧನದ ಬಳಿಕ ಬೇರೆಯದೇ ಭಾವನಾತ್ಮಕ ಅರ್ಥ ಪಡೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ. ದುನಿಯಾ ಸೂರಿ ನಿರ್ದೇಶನದ ಸಿನಿಮಾದಲ್ಲಿ ಪುನೀತ್ ಅವರ ಜೋಡಿಯಾಗಿ ಭಾವನಾ ನಟಿಸಿದ್ದು, ರಂಗಾಯಣ ರಘು, ಹರ್ಷಿಕಾ ಪೂಣಚ್ಚ, ರವಿ ಕಾಳೆ, ಶೋಭರಾಜ್ ಮತ್ತಿತರರು ತಾರಾಗಣದಲ್ಲಿದ್ದಾರೆ.

ಜೊತೆಗೆ ಕಳೆದ ವರ್ಷವೇ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು, ಇನ್ನು ಮುಂದೆ ಅಪ್ಪುವಿನ ಪ್ರತಿ ಜನ್ಮದಿನಕ್ಕೂ ಒಂದೊಂದು ಸಿನಿಮಾ ರಿ ರಿಲೀಜ್ ಮಾಡುವುದಾಗಿ ಹೇಳಿದ್ದರು. ಅದರಲ್ಲೂ ತಮ್ಮದೇ ಬ್ಯಾನರ್ನ ಸಿನಿಮಾಗಳನ್ನು ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಅರ್ಪಿಸುವ ಮಾತನಾಡಿದ್ದರು. ಅವರ ಆ ಆಲೋಚನೆಯ ಜೊತೆ ಈಗ ಕನ್ನಡದ ಪ್ರಮುಖ ನಿರ್ಮಾಣ ಸಂಸ್ಥೆ ಮತ್ತು ವಿತರಕರಾದ ಕೆ ಆರ್ ಜಿ ಸ್ಟುಡಿಯೋ ಕೈಜೋಡಿಸಿದೆ. ಹಾಗಾಗಿ ಇದೀಗ ಜಾಕಿ ಮರು ಬಿಡುಗಡೆಯಾಗಿದೆ.

ಕಳೆದ ಮೂರು ದಿನಗಳಿಂದ ರಾಜ್ಯಾದ್ಯಂತ ಎಲ್ಲಾ ಶೋಗಳು ಹೌಸ್ಫುಲ್ ಪ್ರದರ್ಶನ ಕಾಣುತ್ತಿರುವ ʼಜಾಕಿʼಯ ಯಶಸ್ಸು ಮತ್ತು ಅಭಿಮಾನಿಗಳು ಪುನೀತ್ ಮೇಲೆ ಇಟ್ಟಿರುವ ಅಭಿಮಾನ ಅಪ್ಪು ಸಿನಿಮಾಗಳಿಗೆ ಮಾತ್ರವಲ್ಲ, ಕನ್ನಡ ಚಿತ್ರರಂಗಕ್ಕೂ ಹೊಸ ಚೇತರಿಕೆ ತಂದಿದೆ. ಪರೀಕ್ಷೆಗಳು ಮತ್ತು ಚುನಾವಣಾ ಕಾವಿನ ನಡುವೆ ಬಿಡುಗಡೆಯಾಗಿರುವ ಹೊಸ ಚಿತ್ರಗಳು ಹಾಕಿದ ದುಡ್ಡು ವಾಪಸ್ ತರಿಸುವುದು ಕಷ್ಟ ಎಂಬ ಸ್ಥಿತಿಯಲ್ಲಿ ʼಜಾಕಿʼ ಬಿಡುಗಡೆಯಾಗಿ ಮೂರು ದಿನಗಳು ಕಳೆದರೂ ಹೌಸ್ ಫುಲ್ ಆಗಿ ಮುಂದುವರಿದಿರುವುದು ಇನ್ನಷ್ಟು ಅಪ್ಪು ಸಿನಿಮಾಗಳ ಮರು ಬಿಡುಗಡೆಗೆ ಪ್ರೇರಣೆ ನೀಡಿದೆ.

ಮುಂದಿನ ಬಾರಿ ʼಅಪ್ಪುʼ ಸಿನಿಮಾ!

ಅದರಂತೆ ಮುಂದಿನ ಬಾರಿಯ ಪುನೀತ್ ಹುಟ್ಟುಹಬ್ಬಕ್ಕೆ ನಾಯಕನಟನಾಗಿ ಅವರ ಮೊದಲ ಸಿನಿಮಾ ʼಅಪ್ಪುʼ ಬಿಡುಗಡೆಗೆ ಸಿದ್ಧತೆಗಳು ಆರಂಭವಾಗಿವೆ. ಅಲ್ಲದೆ, ʼಜಾಕಿʼ ಸಿನಿಮಾ ನೋಡಿದ ಬಹುತೇಕ ಅಭಿಮಾನಿಗಳ ಅವರ ಅಪಾರ ಜನಪ್ರಿಯ ಸಿನಿಮಾ ʼರಾಜಕುಮಾರʼದ ಮರು ಬಿಡುಗಡೆಗೂ ಒತ್ತಾಯಿಸುತ್ತಿದ್ದಾರೆ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಆ ಸಿನಿಮಾ ಕೂಡ ಮುಂದಿನ ದಿನಗಳಲ್ಲಿ ಚಿತ್ರಮಂದಿರಗಳಿಗೆ ಬರಬಹುದು.

ವಿ ಹರಿಕೃಷ್ಣ ಅವರ ಸಂಗೀತ ಮತ್ತು ಯೋಗರಾಜ್ ಭಟ್ ಅವರ ಸಾಹಿತ್ಯದ ಸಿನಿಮಾದ ಹಾಡುಗಳು ಮತ್ತು ಸಂಭಾಷಣೆಯ ತುಣುಕುಗಳು ಈಗ ಭಾರೀ ವೈರಲ್ ಆಗುತ್ತಿವೆ. ಒಂದು ಚಿತ್ರ ಹದಿನಾಲ್ಕು ವರ್ಷಗಳ ಬಳಿಕವೂ ಇಷ್ಟೊಂದು ಕ್ರೇಜ್ ಸೃಷ್ಟಿಸಿರುವುದು ಕನ್ನಡದ ಮಟ್ಟಿಗಂತೂ ಹೊಸತು. ಅಪ್ಪು ನಿಧನದ ಬಳಿಕ ಅತಿ ಹೆಚ್ಚು ವೈರಲ್ ಆಗಿರುವ ಅವರ ಸಿನಿಮಾದ ಡೈಲಾಗ್, “ಇರೋದು ಒಂದು ಜೀವನ, ಹಿಂದೇನಾಯ್ತು ನೆನಪಿಲ್ಲ, ಮುಂದೇನಾಗುತ್ತೋ ಗೊತ್ತಿಲ್ಲ,.. ನೇವೇನು ತಿಂತೀವಿ, ಎಲ್ಲಿ ಮಲಗ್ತೀವಿ,. ಎಲ್ಲಾ ಬರೆದುಬಿಟ್ಟಿದಾನೆ,, ವಿಧಿ,.. ನಮ್ಮದೇನಿಲ್ಲ”, “ಪಟಾಕಿ ಯಾವಂದೇ ಆಗಿರಲಿ,, ಅಂಟಿಸೋರು ನಾವಾಗಿರಬೇಕು,..” ಮುಂತಾದವು ಈಗ ಮತ್ತೆ ಸದ್ದು ಮಾಡತೊಡಗಿವೆ.

ಸಿನಿಮಾದಲ್ಲಿ ಒಂದು ದೃಶ್ಯದಲ್ಲಿ ಪುನೀತ್ ಹೇಳುವ “ಇದೊಂದೇ ಮಾಸ್ಟರ್ ಪೀಸ್…” ಎಂಬ ಡೈಲಾಗ್ ಈಗ ಈ ಸಿನಿಮಾಕ್ಕೂ ಅನ್ವಯಿಸುತ್ತದೆ. ಪುನೀತ್ ಅವರ ಮಾಸ್ಟರ್ ಪೀಸ್ ʼಜಾಕಿʼ ಈಗ ಸ್ಯಾಂಡಲ್ ವುಡ್ನಲ್ಲಿ ಹವಾ ಎಬ್ಬಿಸಿದೆ.

Tags:    

Similar News