ಮುಂಬೈ: ಖ್ಯಾತ ಹಿರಿಯ ರೇಡಿಯೋ ನಿರೂಪಕ ಅಮೀನ್ ಸಯಾನಿ ಅವರು ಹೃದಯಘಾತದಿಂದ ಇಹಲೋಕ ತ್ಯಜಿಸಿದ್ದಾರೆ.
ಸಯಾನಿ ಅವರಿಗೆ 91 ವರ್ಷ ವಯಸ್ಸಾಗಿತ್ತು. ನಿಧನದ ಸುದ್ದಿಯನ್ನು ಪುತ್ರ ರಜಿಲ್ ಸಯಾನಿ ಖಚಿತಪಡಿಸಿದ್ದಾರೆ.
ಮಂಗಳವಾರ ರಾತ್ರಿ ಸಯಾನಿ ಅವರಿಗೆ ಹೃದಯಾಘಾತವಾಗಿದ್ದು, ಅವರನ್ನು ದಕ್ಷಿಣ ಮುಂಬೈನ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಉಳಿಸಲಾಗಲಿಲ್ಲ. ಕಳೆದ ರಾತ್ರಿ HN ರಿಲಯನ್ಸ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ನಾಳೆ ಅಂತ್ಯಕ್ರಿಯೆ ನಡೆಯಲಿದ್ದು, ಕುಟುಂಬಸ್ಥರು ಶೀಘ್ರದಲ್ಲೇ ಹೇಳಿಕೆ ನೀಡಲಿದ್ದಾರೆ ಎಂದು ರಾಜಿಲ್ ಹೇಳಿದ್ದಾರೆ.
ಡಿಸೆಂಬರ್ 21, 1932 ರಂದು ಮುಂಬೈನಲ್ಲಿ ಜನಿಸಿದ ಅಮೀನ್ ಸಯಾನಿ ರೇಡಿಯೋ ಸಿಲೋನ್‌ನಲ್ಲಿನ 'ನಮಸ್ತೆ ಬೆಹ್ನೋ ಔರ್ ಭಾಯಿಯೋಂ, ಮೈನ್ ಆಪ್ಕಾ ದೋಸ್ತ್ ಅಮೀನ್ ಸಯಾನಿ ಬೋಲ್ ರಹಾ ಹೂನ್' ಎಂಬ ಅವರ ಧ್ವನಿ ಕೇಳುಗರ ನೆನಪಿನ ಪುಟಗಳನ್ನು ತೆರೆಯತ್ತವೆ.
ಸಯಾನಿಗೆ ಡಿಸೆಂಬರ್ 1952 ರಲ್ಲಿ ರೇಡಿಯೊ ಸಿಲೋನ್‌ನಲ್ಲಿ 'ಬಿನಾಕಾ ಗೀತ್ ಮಾಲಾ' ಕಾರ್ಯಕ್ರಮವನ್ನು ಆಯೋಜಿಸುವ ಅವಕಾಶ ಸಿಕ್ಕಿತು. ಇದು 1952 ರಿಂದ 1994 ರವರೆಗೆ 42 ವರ್ಷಗಳವರೆಗೆ ಭಾರೀ ಜನಪ್ರಿಯತೆಯನ್ನು ಗಳಿಸಿತು. ಮೊದಲು ರೇಡಿಯೊ ಸಿಲೋನ್‌ನಲ್ಲಿ ಮತ್ತು ವಿವಿಧ್ ಭಾರತಿಯಲ್ಲಿ ಈ ಕಾರ್ಯಕ್ರಮ ಪ್ರಸಾರವಾಯಿತು. ರೇಡಿಯೋದಲ್ಲಿ 54 ಸಾವಿರಕ್ಕೂ ಅಧಿಕ ಕಾರ್ಯಕ್ರಮಗಳಿಗೆ ಅಮೀನ್ ಸಯಾನಿ ಅವರು ಧ್ವನಿ ನೀಡಿದ್ದರು. 19 ಸಾವಿರಕ್ಕೂ ಅಧಿಕ ಜಿಂಗಲ್ಸ್ಗೆ ಅವರ ಧ್ವನಿ ಬಳಕೆ ಆಗಿತ್ತು. ನಿರೂಪಕನಾಗಿ ಅವರು ಕೆಲವು ಸಿನಿಮಾಗಳಿಗೂ ಕೆಲಸ ಮಾಡಿದ್ದರು. ದೇಶಾದ್ಯಂತ ಆಲ್ ಇಂಡಿಯಾ ರೇಡಿಯೋವನ್ನು ಜನಪ್ರಿಯಗೊಳಿಸಿದ ಕೊಡುಗೆ ಅಮೀನ್ ಸಯಾನಿ ಅವರಿಗಿದೆ.