ನನ್ನ ಮದುವೆ ಲೆಕ್ಕ ನಾನೇ ಮರೆತಿದ್ದೇನೆ: ಸ್ಯಾಂಡಲ್‌ವುಡ್ ಕ್ವೀನ್ ಹೀಗೆ ಹೇಳಿದ್ದೇಕೆ?
ತಮ್ಮ ಮದುವೆಯ ಕುರಿತು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಸ್ವತಃ ನಟಿ ರಮ್ಯಾ ಪ್ರತಿಕ್ರಿಯಿಸಿದ್ದಾರೆ.;
ನಟಿ ರಮ್ಯಾ ಅವರು ಮದುವೆಯಾಗುತ್ತಿದ್ದಾರೆ. ನವೆಂಬರ್‌ನಲ್ಲಿ ಮದುವೆ ನಡೆಯಲಿದೆ. ಬಹುಕಾಲದ ಉದ್ಯಮಿ ಗೆಳೆಯನ ಜೊತೆ ನಟಿ ರಮ್ಯಾ, ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಹೊಟೆಲ್ ಒಂದರಲ್ಲಿ ಎಂಗೇಜ್‌ಮೆಂಟ್ ನಡೆದಿದೆ.. ಹೀಗೆ ಕಳೆದ ಕೆಲದಿನಗಳಿಂದ ಕೆಲವು ಸುದ್ದಿಗಳು ವೈರಲ್ ಆಗುತ್ತಿವೆ.
ಆದರೆ, ಇದೀಗ ಈ ಸುದ್ದಿಗಳಿಗೆ ಸ್ವತಃ ನಟಿ ರಮ್ಯಾ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ರಮ್ಯಾ, ನನ್ನನ್ನು ಕೇಳದೆ ಯಾವುದೇ ಸುದ್ದಿ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
"ಮಾಧ್ಯಮಗಳು ಹಲವು ಬಾರಿ ನನಗೆ ಮದುವೆ ಮಾಡಿಸಿವೆ. ಅದೆಷ್ಟು ಬಾರಿ ಎಂದರೆ, ಸ್ವತಃ ನಾನೇ ಅದರ ಲೆಕ್ಕ ಇಡಲಾಗಿಲ್ಲ" ಎಂದಿರುವ ಅವರು, "ಇನ್ನು ಮುಂದೆ ದಯಮಾಡಿ, ನನ್ನ ಮದುವೆಯ ವಿಷಯವನ್ನು ನನ್ನನ್ನೇ ಕೇಳಿ, ಖಚಿತಪಡಿಸಿಕೊಳ್ಳಿ. ನಾನು ಮದುವೆಯಾದರೆ ಮತ್ತು ಯಾವಾಗ ಎಂದು ನಾನೇ ಹೇಳುತ್ತೇನೆ. ದಯವಿಟ್ಟು ಖಚಿತಪಡಿಸಿಕೊಳ್ಳದೆ ಇಂತಹ ವದಂತಿಗಳನ್ನು ಹಬ್ಬಿಸುವುದನ್ನು ನಿಲ್ಲಿಸಿ" ಎಂದು ಬರೆದುಕೊಂಡಿದ್ದಾರೆ.
ಸ್ಯಾಂಡಲ್‌ವುಡ್ ಚಿತ್ರರಂಗದಲ್ಲಿ ನಟಿ ರಮ್ಯಾ ಅವರು ಮತ್ತೆ ನಟಿಯಾಗಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾವನ್ನು ನಿರ್ಮಿಸಿ ತಾವು ಚಿತ್ರರಂಗದಿಂದ ದೂರವಾಗಿಲ್ಲ ಎಂಬುದನ್ನು ಖಾತ್ರಿ ಪಡಿಸಿದ್ದರು.