ಭಾರತದಲ್ಲೇ ಇದು ಮೊದಲ ಬಾರಿಗೆ; ಪುನೀತ್‍ ಅಭಿಮಾನಿಗಳಿಗೊಂದು ಹೊಸ ಆ್ಯಪ್‍

ಹೆಸರೇ ಹೇಳುವಂತೆ ಪುನೀತ್‍ ಅಭಿಮಾನಿಗಳಿಗೆ ಮಾಡಲಾಗಿರುವ ಆ್ಯಪ್‍ ಇದು. ಭಾರತದಲ್ಲೇ ಸಿನಿಮಾ ನಟರೊಬ್ಬರ ಅಭಿಮಾನಿಗಳನ್ನು ಕನೆಕ್ಟ್ ಮಾಡುವ ನಿಟ್ಟಿನಲ್ಲಿ ಪ್ರಾರಂಭಿಸಲಾಗುತ್ತಿರುವ ಆ್ಯಪ್‍ ಇದು.;

Update: 2025-03-21 02:30 GMT

ಪುನೀತ್‍ ರಾಜಕುಮಾರ್ ಅವರ 50ನೇ ಹುಟ್ಟುಹಬ್ಬ (ಮಾರ್ಚ್ 17) ಇತ್ತೀಚೆಗಷ್ಟೇ ಮುಗಿದಿದೆ. ಈ ಹುಟ್ಟುಹಬ್ಬವನ್ನು ಪುನೀತ್‍ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಆಚರಿಸಿ ಸಂಭ್ರಮಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಅಶ್ವಿನಿ ಪುನೀತ್‍ ರಾಜಕುಮಾರ್‍, ಅಪ್ಪು ಅಭಿಮಾನಿಗಳಿಗೆ ಎರಡು ಉಡುಗೊರೆಗಳನ್ನು ಸದ್ಯದಲ್ಲೇ ಕೊಡಲಿದ್ದಾರೆ.

ಈ ಎರಡು ಉಡುಗೊರೆಗಳ ಪೈಕಿ ಮೊದಲನೆಯದು ಫ್ಯಾನ್‍ಡಮ್‍ ಆ್ಯಪ್‍. ಹೆಸರೇ ಹೇಳುವಂತೆ ಪುನೀತ್‍ ಅಭಿಮಾನಿಗಳಿಗೆ ಮಾಡಲಾಗಿರುವ ಆ್ಯಪ್‍ ಇದು. ಭಾರತದಲ್ಲೇ ಸಿನಿಮಾ ನಟರೊಬ್ಬರ ಅಭಿಮಾನಿಗಳನ್ನು ಕನೆಕ್ಟ್ ಮಾಡುವ ನಿಟ್ಟಿನಲ್ಲಿ ಪ್ರಾರಂಭಿಸಲಾಗುತ್ತಿರುವ ಆ್ಯಪ್‍ ಇದು.


ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅಶ್ವಿನಿ ಪುನೀತ್ ರಾಜಕುಮಾರ್, ‘ಭಾರತದಲ್ಲೇ ಪ್ರಪ್ರಥಮ ಬಾರಿಗೆ Fandom App. #PRKStarFandom app ಅತೀ ಶೀಘ್ರದಲ್ಲಿ… ಒಂದು ಅಧಿಕೃತ ಅಪ್ಲಿಕೇಶನ್‌ನೊಂದಿಗೆ ಮತ್ತೆ ಡಾ. ಪುನೀತ್ ರಾಜಕುಮಾರ್ ಅವರ ಜೊತೆ ಕನೆಕ್ಟ್ ಆಗೋಣ. ನಾವೆಲ್ಲರೂ ಒಟ್ಟಾಗಿ ಮತ್ತೆ ಸಂಭ್ರಮಿಸುವ, ಸುಮಧುರ ನೆನಪುಗಳನ್ನು ಸವಿಯುವ ಹಾಗೂ ಅಪ್ಪುವಿನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಸ್ಥಳ ಈ ಪಿ.ಆರ್.ಕೆ. ಆ್ಯಪ್‌’ ಎಂದು ಬರೆದುಕೊಂಡಿದ್ದಾರೆ.


ಇದಲ್ಲದೆ ಪುನೀತ ನೆನಪಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಹೊಸ ಪುಸ್ತಕವನ್ನು ಹೊರತರುವುದಕ್ಕೆ ತಯಾರಿ ನಡೆಸಿದ್ದಾರೆ. ಪುನೀತ್‍ ಅವರ ಜೀವನ ಚರಿತ್ರೆಯ ಕುರಿತಾದ ಈ ಪುಸ್ತಕಕ್ಕೆ ‘ಅಪ್ಪು’ ಎಂದು ಹೆಸರಿಡಲಾಗಿದೆ. ಅಶ್ವನಿ ಪುನೀತ್ ರಾಜಕುಮಾರ್ ಮತ್ತು ಪ್ರಕೃತಿ ಬನವಾಸಿ ಸೇರಿ ಪುನೀತ್‍ ಅವರ ಜೀವನವನ್ನು, ನಡೆದು ಬಂದ ಹಾದಿಯನ್ನು ಪುಸ್ತಕ ರೂಪದಲ್ಲಿ ಕಟ್ಟಿಕೊಡುತ್ತಿದ್ದಾರೆ.



ಅಪ್ಪು ಜೀವನಚರಿತ್ರೆ ಪುಸ್ತಕದ ಬಗ್ಗೆ ಅಶ್ವಿನಿ ಪುನೀತ್ ರಾಜಕುಮಾರ್ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡು, ‘ಪ್ರಸ್ತುತಪಡಿಸುತ್ತಿದ್ದೇವೆ ‘ಅಪ್ಪು’ – ಅಪ್ಪುವಿನ ಭಾವನಾತ್ಮಕ ಜೀವನಚರಿತ್ರೆ. ಹೆಚ್ಚಿನ ಮಾಹಿತಿ ಶೀಘ್ರದಲ್ಲಿ …’ ಎಂದು ಬರೆದುಕೊಂಡಿದ್ದಾರೆ. ಈ ಪುಸ್ತಕದ ಶೀರ್ಷಿಕೆ ಪುಟ ಬಿಡುಗಡೆ ಸಮಾರಂಭದಲ್ಲಿ ಪುನೀತ್‍ ಮಕ್ಕಳಾದ ಧೃತಿ ಮತ್ತು ವಂದಿತಾ ಹಾಜರಿದ್ದರು. ಈಗಾಗಲೇ ಪುಸ್ತಕದ ಕೆಲಸ ಪ್ರಾರಂಭವಾಗಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ.

Tags:    

Similar News