ದುನಿಯಾ ವಿಜಯ್ ಲ್ಯಾಂಡ್‌ಲಾರ್ಡ್ ದೀಪಾವಳಿ ಅಥವಾ ದಸರಾಗೆ ಬಿಡುಗಡೆ
ವರಮಹಾಲಕ್ಷ್ಮಿ ಹಬ್ಬದಂದು ಚಿತ್ರತಂಡ ಹೊಸ ಸುದ್ದಿ ನೀಡಿದ್ದು, ಆನಂದ್ ಆಡಿಯೊ ಕಂಪನಿ 'ಲ್ಯಾಂಡ್‌ಲಾರ್ಡ್' ಚಿತ್ರದ ಆಡಿಯೋ ಹಕ್ಕುಗಳನ್ನು ದೊಡ್ಡ ಬೆಲೆಗೆ ಖರೀದಿಸಿದೆ.;
ದುನಿಯಾ ವಿಜಯ್
'ಕಾಟೇರ' ಚಿತ್ರದ ಯಶಸ್ವಿ ಕಥೆಗಾರ ಜಡೇಶ ಕೆ. ಹಂಪಿ ಅವರ ನಿರ್ದೇಶನದಲ್ಲಿ, ಚಾಲೆಂಜಿಂಗ್ ಸ್ಟಾರ್ ದುನಿಯಾ ವಿಜಯ್ ನಾಯಕರಾಗಿ ನಟಿಸಿರುವ ಬಹುನಿರೀಕ್ಷಿತ 'ಲ್ಯಾಂಡ್ಲಾರ್ಡ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಹಳ್ಳಿಯ ಹಿನ್ನೆಲೆಯಲ್ಲಿ ಸಾಗುವ ಈ ಕಥೆಯು ಸ್ವತಂತ್ರ ಭೂಮಿ, ಶಿಕ್ಷಣದ ಮಹತ್ವ ಮತ್ತು ದುಡಿಮೆಗೆ ತಕ್ಕ ಪ್ರತಿಫಲದಂತಹ ಗಂಭೀರ ವಿಷಯಗಳನ್ನು ಒಳಗೊಂಡಿದೆ. ಅಸ್ತಿತ್ವಕ್ಕಾಗಿ ನಡೆಸುವ ಹೋರಾಟ ಹಾಗೂ ಸ್ವಾವಲಂಬನೆಯ ಯೋಚನೆಯೊಂದು ಹೇಗೆ ಕ್ರಾಂತಿಗೆ ನಾಂದಿ ಹಾಡುತ್ತದೆ ಎನ್ನುವುದೇ ಚಿತ್ರದ ಪ್ರಮುಖ ಕಥಾಹಂದರವಾಗಿದೆ.
ದುನಿಯಾ ವಿಜಯ್ ಅವರಿಗೆ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಇದ್ದಾರೆ. ಇದೇ ಚಿತ್ರದ ಮೂಲಕ ವಿಜಯ್ ಅವರ ಪುತ್ರಿ ರಿತಿನ್ಯ ಕೂಡಾ ಬಣ್ಣದ ಲೋಕಕ್ಕೆ ಕಾಲಿಡುತ್ತಿರುವುದು ವಿಶೇಷವಾಗಿದೆ. ಸಾರಥಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಹೇಮಂತ್ ಗೌಡ ಕೆ.ಎಸ್ ಮತ್ತು ಕೆ.ವಿ ಸತ್ಯಪ್ರಕಾಶ್ ಅವರು ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಚಿತ್ರೀಕರಣವನ್ನು ಸಂಪೂರ್ಣವಾಗಿ ಮುಗಿಸಿರುವ ಚಿತ್ರತಂಡ, ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ವೇಗವಾಗಿ ತೊಡಗಿಸಿಕೊಂಡಿದೆ.
ಇತ್ತೀಚೆಗೆ ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ, 'ಲ್ಯಾಂಡ್ಲಾರ್ಡ್' ಚಿತ್ರದ ಆಡಿಯೋ ಹಕ್ಕುಗಳನ್ನು ಪ್ರತಿಷ್ಠಿತ ಆನಂದ್ ಆಡಿಯೋ ಸಂಸ್ಥೆಯು ದಾಖಲೆಯ ಮೊತ್ತಕ್ಕೆ ಖರೀದಿಸಿದೆ. ಚಿತ್ರದ ಹಾಡುಗಳು ಹಾಗೂ ಹಿನ್ನೆಲೆ ಸಂಗೀತವು ಪ್ರೇಕ್ಷಕರಿಗೆ ವಿಶೇಷ ಅನುಭವ ನೀಡಲಿದೆ ಎಂಬ ಭರವಸೆಯನ್ನು ಚಿತ್ರತಂಡ ವ್ಯಕ್ತಪಡಿಸಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ, 'ಲ್ಯಾಂಡ್ಲಾರ್ಡ್' ಚಿತ್ರವನ್ನು 2025ರ ದಸರಾ ಅಥವಾ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತೆರೆಗೆ ತರಲು ಚಿತ್ರತಂಡ ಯೋಜಿಸಿದೆ.