ದರ್ಶನ್ ಕೇಸ್ ಬಗ್ಗೆ ಡಾಲಿ ಧನಂಜಯ್ ಮೊದಲ ಪ್ರತಿಕ್ರಿಯೆ
ಈ ಹಿಂದೆ ರೇಣುಕಾಸ್ವಾಮಿ ಕೊಲೆ ಕೇಸ್ ಬಗ್ಗೆ ಮಾತನಾಡಲು ನಿರಾಕರಿಸಿದ್ದ ನಟ ಡಾಲಿ ಧನಂಜಯ್ ಈಗ ಪ್ರಕರಣದ ಬಗ್ಗೆ ಮೌನ ಮುರಿದಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಘಟನೆ ನಡೆದು ಒಂದು ತಿಂಗಳು ಕಳೆಯುತ್ತಿದ್ದು ಈ ಹಿಂದೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಮಾತನಾಡಲು ನಿರಾಕರಿಸಿದ್ದ ನಟ ಡಾಲಿ ಧನಂಜಯ್, ಈಗ ಪ್ರಕರಣದ ಬಗ್ಗೆ ಮೌನ ಮುರಿದಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ಹಾಗೂ ದರ್ಶನ್ ಬಂಧನದ ಬಗ್ಗೆ ಮಾತನಾಡಿದ ಧನಂಜಯ್, ನಮ್ಮ ಪರಿಸ್ಥಿತಿಯನ್ನು ಕೂಡ ಅರ್ಥ ಮಾಡಿಕೊಳ್ಳಬೇಕು. ಕೋಟಿ ಸಿನಿಮಾ ರಿಲೀಸ್ ಇತ್ತು ಆ ಸಮಯದಲ್ಲಿ. ಅದರ ಮಧ್ಯ ನಡೆದಂತಹ ಘಟನೆ ಇದು. ಅದು ಹೋಗಲಿ, ಅದನ್ನು ಬಿಟ್ಟು ಬಿಡೋಣ. ಆದರೆ ಮಾತಾಡೋಣ ಅಂದ್ರೆ ನಾವೇನು ಮಾತನಾಡೋದು ಎಂದು ಪ್ರಶ್ನಿಸಿದ್ದಾರೆ.
ಈಗ ಅಲ್ಲಿ ಒಂದು ದುರಂತ ಆಗಿದೆ. ಒಂದು ಜೀವ ಹೋಗಿದೆ. ಒಂದು ತಪ್ಪಾಗಿದೆ. ಆ ಮನುಷ್ಯನ ತಂದೆ-ತಾಯಿ ಮುಖ ನೋಡಿದಾಗ, ಅಥವಾ ಆ ಮನುಷ್ಯನ ಹೆಂಡತಿ ಹಾಗೂ ಆ ಮಗುವಿನ ಭವಿಷ್ಯ ನೋಡಿದಾಗ, ಖಂಡಿತ ಬೇಜಾರು ಆಗೇ ಆಗುತ್ತದೆ ಯಾರಿಗಾದರೂ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಆ ಜೀವಕ್ಕೆ ಏನು ನ್ಯಾಯ ಸಿಗಬೇಕೋ ಅದು ಸಿಗಲೇಬೇಕು ಎಂದರು.
ಸಂತ್ರಸ್ತ ನಮ್ಮ ಮನೆಯವರು ಆಗಿದ್ದರೆ ನಮಗೆ ಏನು ಅನಿಸುತ್ತದೆ, ಅಥವಾ ನಿಮ್ಮ ಮನೆಯವರಾಗಿದ್ದರೆ ನಿಮಗೆ ಏನು ಅನಿಸುತ್ತದೆ ಎನ್ನುವುದು ಮುಖ್ಯವಲ್ಲ. ಅದೇ ರೀತಿ ಆರೋಪ ಯಾರ ಮೇಲೆ ಬಂದಿದೆ ಅವರು ನಮ್ಮ ಮನೆಯವರಾಗಿದ್ದರೆ ನಮಗೆ ಏನು ಅನಿಸುತ್ತದೆ. ಅದು ಕೂಡ ಬೇಜಾರಾಗುತ್ತಲ್ಲ.. ನೋವಾಗುತ್ತದೆ ಅಲ್ಲವೇ ಎಂದರು.
ನನಗೂ ವಿಷಯ ಗೊತ್ತಾದಾಗ ನಾನು ಎರಡೂ ದಿನ ಬೇಸರದಲ್ಲಿದ್ದೆ. ನನಗೂ ಯಾಕೆ ಹೀಗೆ ಆಯ್ತು ಅನಿಸಿತು. ಒಂದು ಕಡೆ ಆ ಜೀವಕ್ಕೆ ಸ್ಪಂದಿಸುವುದಾದರೆ, ಈ ಕಡೆ ನಾವು ತುಂಬಾ ಅಭಿಮಾನದಿಂದ ಪ್ರೀತಿಸಿದವರಲ್ಲವೇ? ಹೀಗಾಗಿ ಅವರ ಹೆಸರು ಕೇಳಿ ಬಂದಾಗ ಖಂಡಿತವಾಗಿಯೂ ಬೇಜಾರಾಗಿತ್ತು. ಇಲ್ಲಿ ನಾವು ಯಾವುದನ್ನೂ ಸಮರ್ಥಿಸಿಕೊಳ್ಳಲಾಗುವುದಿಲ್ಲ. ಎಲ್ಲಾದಕ್ಕೂ ಕಾನೂನು ಇದೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಅದನ್ನು ಬಿಟ್ಟು ಯಾವುದೂ ಮಾತನಾಡಿದರೂ ಪ್ರಯೋಜನವಿಲ್ಲ. ಅವರು ನಮಗೆ ತುಂಬಾ ಹತ್ತಿರವಾದರೂ ನಮಗೂ ಆ ಬೇಜಾರು ತುಂಬಾ ಇರುತ್ತದೆ ಎಂದು ಡಾಲಿ ಧನಂಜಯ್ ಹೇಳಿದರು.