ʻಹಲಗಲಿʼ ಚಿತ್ರಕ್ಕೆ ಡಾಲಿ ಧನಂಜಯ್ ನಾಯಕ
ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ʻಹಲಗಲಿʼ ಚಿತ್ರಕ್ಕೆ ಡಾಲಿ ಧನಂಜಯ್ ನಾಯಕನಾಗಿ ಆಯ್ಕೆ ಆಗಿದ್ದಾರೆ.;
ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ʻಹಲಗಲಿʼ ಚಿತ್ರಕ್ಕೆ ಡಾಲಿ ಧನಂಜಯ್ ನಾಯಕನಾಗಿ ಎಂಟ್ರಿ ಆಗಿದ್ದಾರೆ. ಸುಕೇಶ್ ಡಿ ಕೆ ನಿರ್ದೇಶನದ ಈ ಚಿತ್ರವು 80 ಕೋಟಿ ವೆಚ್ಚದಲ್ಲಿ ಎರಡು ಭಾಗಗಳಲ್ಲಿ ಮೂಡಿ ಬರುತ್ತಿದೆ. ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬರಲಿರುವ ಈ ಚಿತ್ರಕ್ಕೆ ಮೈಸೂರಿನ ಲಲಿತ್ ಮಹಲ್ ನಲ್ಲಿ ಪೂಜೆ ಮಾಡುವ ಮೂಲಕ ಅದ್ಧೂರಿ ಚಾಲನೆ ನೀಡಲಾಗಿದೆ.
ಕನ್ನಡ ನಾಡಿನ ಸ್ವಾತಂತ್ರ್ಯ ಪೂರ್ವದ ವೀರರ ಕಥೆಯನ್ನು ಒಳಗೊಂಡ ಈ ಚಿತ್ರದಲ್ಲಿ ಡಾಲಿ ಧನಂಜಯ್ ಅವರು ವಾರಿಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬ್ರಿಟಿಷರ ವಿರುದ್ಧ ಮೊದಲ ಗೆರಿಲ್ಲಾ ಯುದ್ಧ ಮಾಡಿದ ಕನ್ನಡ ನೆಲದ ಹಲಗಲಿಯ ಊರಿನ ಬೇಡರ ಕುರಿತ ಸಿನಿಮಾ ಇದಾಗಿದೆ. ಈ ವೀರರ ಆಚಾರ- ವಿಚಾರ ಹಾಗೂ ಅವರ ಹೋರಾಟದ ಹೆಜ್ಜೆ ಗುರುತುಗಳನ್ನು ಹಗಲಗಲಿ ಚಿತ್ರದ ಮೂಲಕ ತೆರೆ ಮೇಲೆ ತರಲಾಗುತ್ತಿದೆ. ಇಂಥದ್ದೊಂದು ಬಹು ದೊಡ್ಡ ಬಜೆಟ್ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾಗಿರುವುದು ಯುವ ಉದ್ಯಮಿ ಬಳ್ಳಾರಿಯ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ. ತಮ್ಮ ದುಹರ ಮೂವೀಸ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ.
ಅತ್ಯುತ್ತಮ ಛಾಯಾಗ್ರಾಹಕ ವಿಭಾಗದಲ್ಲಿ ನಂದಿ ಪ್ರಶಸ್ತಿ ಪುರಸ್ಕೃತ ಸಾಯಿ ಶ್ರೀರಾಮ್ ಕ್ಯಾಮೆರಾ, ವಾಸುಕಿ ವೈಭವ್ ಸಂಗೀತ ಇದೆ. ವಿಶೇಷ ಎಂದರೆ ಕೆಜಿಎಫ್ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಿದ್ದ ವಿಕ್ರಮ್ ಮೋರ್ ಅವರೇ ಹಲಗಲಿ ಚಿತ್ರಕ್ಕೂ ಸಾಹಸ ನಿರ್ದೇಶನ ಮಾಡಲಿದ್ದಾರೆ.
ಸಿನಿಮಾ ಬಗ್ಗೆ ಡಾಲಿ ಮಾತನಾಡಿ ʻʻಐತಿಹಾಸಿಕ ಕತೆಗಳು ಅಂದರೆ ನನಗೆ ಇಷ್ಟ. ಹಲಗಲಿ ಕತೆ ಕೇಳಿದಾಗ ತುಂಬಾ ಇಷ್ಟವಾಯಿತು. ನಮ್ಮ ನಾಡಿಗಾಗಿ ಹೋರಾಡಿದವರ ಕತೆಯನ್ನು ಸಿನಿಮಾ ಮಾಡುತ್ತಿದ್ದು, ಆ ಚಿತ್ರದಲ್ಲಿ ನಾನು ಹೀರೋ ಆಗುತ್ತಿರುವುದು ಖುಷಿ ಕೊಟ್ಟಿದೆ. ನಿರ್ದೇಶಕ ಸುಕೇಶ್ ಡಿ ಕೆ ಹಾಗೂ ನಿರ್ಮಾಪಕ ಕಲ್ಯಾಣ್ ಚಕ್ರವರ್ತಿ ಧೂಳಪಾಳ್ಳ ಅವರು ತುಂಬಾ ದೊಡ್ಡ ಕನಸು ಕಟ್ಟಿಕೊಂಡು ಈ ಚಿತ್ರವನ್ನು ಐದು ಭಾಷೆಯಲ್ಲಿ ಮಾಡುತ್ತಿದ್ದಾರೆ. ನಾನು ಈ ಚಿತ್ರಕ್ಕೆ ಹೀರೋ ಆಗುತ್ತಿರುವುದು ಹೆಮ್ಮೆ ಅನಿಸುತ್ತಿದೆʼʼಎಂದರು.
ದೊಡ್ಡ ಮಟ್ಟದಲ್ಲಿ ಮೂಡಿ ಬರುತ್ತಿರುವ ಸಿನಿಮಾ ಹಗಲಗಲಿ. ಈಗಾಗಲೇ ಮುಹೂರ್ತ ಕೂಡ ಮಾಡಿದ್ದೇವೆ. ಐದು ಭಾಷೆಗಳಲ್ಲಿ ಬರುತ್ತಿದೆ. ಪೂರ್ವ ತಯಾರಿಗಳು ಮುಗಿದಿವೆ. ಡಾರ್ಲಿಂಗ್ ಕೃಷ್ಣ ಅವರ ಮೂರು-ನಾಲ್ಕು ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಹೀಗಾಗಿ ಅವರಿಗೆ ಕಾಯಲು ಆಗುತ್ತಿಲ್ಲ. ಅಲ್ಲದೆ ನಮ್ಮ ಕತೆಗೆ ಡಾಲಿ ಧನಂಜಯ್ ಅವರು ಸೂಕ್ತ ಎನಿಸಿದ್ದು, ಅವರೇ ಹೀರೋ ಆಗಿ ಮಾಡುತ್ತಿದ್ದಾರೆ. ಸದ್ಯದಲ್ಲೇ ರೆಗ್ಯೂಲರ್ ಶೂಟಿಂಗ್ ಶುರುವಾಗಲಿದೆ ಎಂದರು.