ಮತ್ತೆ ಒಂದಾದ ನಿರ್ದೇಶಕ ಸೂರಿ, ನಟ ದುನಿಯಾ ವಿಜಯ್
ದುನಿಯಾ ಚಿತ್ರದ ನಿರ್ದೇಶಕ ಸೂರಿ ಮತ್ತು ನಟ ವಿಜಯ್ ಕುಮಾರ್ (ದುನಿಯಾ ವಿಜಯ್) ಮತ್ತೆ ಒಂದಾಗಲಿದ್ದಾರೆ ಎನ್ನಲಾಗಿದೆ.;
ದುನಿಯಾ ಚಿತ್ರದ ನಿರ್ದೇಶಕ ಸೂರಿ ಮತ್ತು ನಟ ವಿಜಯ್ ಕುಮಾರ್ (ದುನಿಯಾ ವಿಜಯ್) ಮತ್ತೆ ಒಂದಾಗಲಿದ್ದಾರೆ ಎನ್ನಲಾಗಿದೆ.
ಸೂರಿಯವರ ಚೊಚ್ಚಲ ನಿರ್ದೇಶನದ 2007ರ ದುನಿಯಾ ಚಿತ್ರ ನಿರ್ದೇಶಕ ಮತ್ತು ನಟ ವಿಜಯ್ ಅವರಿಗೆ ವ್ಯಾಪಕ ಖ್ಯಾತಿ ತಂದುಕೊಟ್ಟಿತ್ತು. ಈ ಚಿತ್ರದಿಂದಲೇ ನಟನಿಗೆ ದುನಿಯಾ ವಿಜಯ್ ಎಂಬ ಹೆಸರನ್ನು ತಂದುಕೊಟ್ಟಿತ್ತು. ಈ ಚಿತ್ರವು ತನ್ನ ಕಚ್ಚಾ ಮತ್ತು ನೈಜ ಶೈಲಿಯಿಂದ ಪ್ರೇಕ್ಷಕರನ್ನು ಆಕರ್ಷಿಸಿತು, ಕನ್ನಡ ಚಿತ್ರರಂಗಕ್ಕೆ ಹೊಸ ದೃಷ್ಟಿಕೋನವನ್ನು ತಂದಿತು.
ದುನಿಯಾ ನಂತರ, ಈ ಜೋಡಿ 2009 ರಲ್ಲಿ ಜಂಗ್ಲಿ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿತು. ಈ ಚಿತ್ರ ಕೂಡ ಕಮರ್ಷಿಯಲ್ ಆಗಿ ಹಿಟ್ ಆಯಿತು. ಇದೀಗ, ಜಂಗ್ಲಿ ಬಿಡುಗಡೆಯಾದ 15 ವರ್ಷಗಳ ನಂತರ, ಅಪ್ರತಿಮ ಜೋಡಿಯು ಕೈ ಜೋಡಿಸಲು ಮತ್ತು ಪುನರಾಗಮನ ಮಾಡಲು ಸಿದ್ಧವಾಗಿದೆ.
ಜಯಣ್ಣ ಫಿಲ್ಮ್ಸ್ ಈ ಹಿಂದೆ ದುನಿಯಾ ಸೇರಿದಂತೆ ನಿರ್ದೇಶಕ ಸೂರಿ ಅವರ ಕೆಲವು ಚಿತ್ರಗಳನ್ನು ವಿತರಿಸಿದೆ. ಆದರೆ, ಈ ಪ್ರೊಡಕ್ಷನ್ ಹೌಸ್ ಈ ನಿರ್ದೇಶಕರ ಚಿತ್ರ ನಿರ್ಮಿಸುತ್ತಿರುವುದು ಇದೇ ಮೊದಲು. ಮೂಲಗಳ ಪ್ರಕಾರ, ನಟ ವಿಜಯ್ ಜೊತೆಗೆ ಕಿಸ್ ಚಿತ್ರದ ನಾಯಕ ವಿರಾಟ್ ಕೂಡ ನಟಿಸಲಿದ್ದಾರೆ ಎನ್ನಲಾಗಿದೆ. ಸಂದರ್ಶನವೊಂದರಲ್ಲಿ ಸೂರಿ, ಜಯಣ್ಣ ಪ್ರೊಡಕ್ಷನ್ಸ್‌ನೊಂದಿಗೆ ಸಹಕರಿಸುವ ಬಗ್ಗೆ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಇದು ಹೋಮ್ ಬ್ಯಾನರ್‌ನೊಂದಿಗೆ ಕೆಲಸ ಮಾಡಿದ ಅನುಭವ ನೀಡುತ್ತಿದೆ ಎಂದಿದ್ದಾರೆ.
ಸದ್ಯ ಸೂರಿ ಅವರು ಬರಹಗಾರರಾದ ಸುರೇಂದ್ರ ನಾಥ್ ಮತ್ತು ಅಮ್ರಿ ಜೊತೆಗೆ ಸಂಪೂರ್ಣವಾಗಿ ಸ್ಕ್ರಿಪ್ಟ್‌ನತ್ತ ಗಮನಹರಿಸಿದ್ದಾರೆ. ಚಿತ್ರದ ಥೀಮ್ ಮತ್ತು ಕಂಟೆಂಟ್ ಅನ್ನು ಅಂತಿಮಗೊಳಿಸದ ನಂತರ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ. ಶೀಘ್ರದಲ್ಲೇ ಚಿತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು ನಿರ್ದೇಶಕರು ನೀಡುವ ಸಾಧ್ಯತೆಯಿದೆ.
ಈ ಮಧ್ಯೆ, ನಟ್ ವಿಜಯ್ ಅವರು ತಮ್ಮ ಬಹು ನಿರೀಕ್ಷಿತ ನಿರ್ದೇಶನದ ಭೀಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದು ಮುಂಬರುವ ಲೋಕಸಭೆ ಚುನಾವಣೆಯ ನಂತರ ಬಿಡುಗಡೆಯಾಗಲಿದೆ. ಅಲ್ಲದೆ, ನಿರ್ದೇಶಕ ಜಡೇಶಾ ಕೆ ಹಂಪಿ ಅವರೊಂದಿಗೆ ತಮ್ಮ ಮುಂದಿನ ಯೋಜನೆ ಪ್ರಾರಂಭಿಸಲು ಸಜ್ಜಾಗಿದ್ದಾರೆ.