ಹಿಂದಿಯಲ್ಲೂ ಕನ್ನಡದ 'ಸೂ ಫ್ರಮ್ ಸೋ' ಚಿತ್ರ ಬಿಡುಗಡೆಗೆ ಡಿಮ್ಯಾಂಡ್
ಸೂ ಫ್ರಮ್ ಸೋ ಸಿನಿಮಾವನ್ನು ಹಿಂದಿಯಲ್ಲೂ ಬಿಡುಗಡೆ ಮಾಡಲು ಮಾತುಕತೆ ನಡೆಯುತ್ತಿದೆ ಎಂದು ನಿರ್ಮಾಪಕ ಹಾಗೂ ನಟ ರಾಜ್ ಬಿ. ಶೆಟ್ಟಿ ಸಂದರ್ಶನವೊಂದರಲ್ಲಿ ತಿಳಿಸಿದ್ದರು.;
ಸೂ ಫರ್ಮ್ ಸೋ
ಕನ್ನಡ ಚಿತ್ರರಂಗವು ಇತ್ತೀಚಿನ ವರ್ಷಗಳಲ್ಲಿ ದೇಶಾದ್ಯಂತ ಗಮನ ಸೆಳೆಯುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ' ಮತ್ತು ಇತ್ತೀಚೆಗೆ ಬಿಡುಗಡೆಯಾದ ಅನಿಮೇಷನ್ ಸಿನಿಮಾ 'ಮಹಾವತಾರ ನರಸಿಂಹ' ಅಪಾರ ಯಶಸ್ಸು ಕಂಡ ನಂತರ ಇದೀಗ ಜೆ.ಪಿ. ತುಮಿನಾಡ್ ಮತ್ತು ರಾಜ್ ಬಿ. ಶೆಟ್ಟಿ ನಟಿಸಿ ನಿರ್ಮಿಸಿರುವ 'ಸೂ ಫ್ರಮ್ ಸೋ' ಹಿಟ್ ಸಿನಿಮಾವಾಗಿ ಹೊರಹೊಮ್ಮಿದೆ.
ಈ ಸಿನಿಮಾ ಬಿಡುಗಡೆಯಾದ ಮೊದಲ ದಿನ ಬೆಂಗಳೂರಿನಲ್ಲಿ ಕೇವಲ 70 ಪರದೆಗಳಲ್ಲಿ ಪ್ರದರ್ಶನ ಕಂಡರೂ ಪ್ರೇಕ್ಷಕರ ಬೇಡಿಕೆಗೆ ಮಣಿದು ಬೆಳಿಗ್ಗೆ 6 ಗಂಟೆಯಿಂದಲೇ ಚಿತ್ರ ಪ್ರದರ್ಶನ ಆರಂಭಿಸಲಾಗಿತ್ತು. ದಿನೇ ದಿನೇ ಸಿನಿಮಾದ ಯಶಸ್ಸು ಹೆಚ್ಚುತ್ತಾ ಸಾಗಿದ್ದು, ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದೆ.
ಪ್ರಸ್ತುತ ಈ ಸಿನಿಮಾ ಕನ್ನಡದ ಜೊತೆಗೆ ಮಲಯಾಳಂ, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದೀಗ ಹಿಂದಿಯಲ್ಲೂ ಚಿತ್ರವನ್ನು ಬಿಡುಗಡೆ ಮಾಡಲು ಮಾತುಕತೆ ನಡೆಯುತ್ತಿದೆ ಎಂದು ನಿರ್ಮಾಪಕ ಹಾಗೂ ನಟ ರಾಜ್ ಬಿ. ಶೆಟ್ಟಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಪ್ರಚಾರ ಮಾಡಿದ್ದು ಸಾರ್ವಜನಿಕರು, ನಿರ್ಮಾಪಕರಲ್ಲ...
ಚಿತ್ರದ ನಿರ್ಮಾಪಕ ರಾಜ್ ಬಿ. ಶೆಟ್ಟಿ ಅವರು ಒಂದು ಸಂದರ್ಶನದಲ್ಲಿ ಹೇಳಿದಂತೆ, ಈ ಚಿತ್ರಕ್ಕಾಗಿ ಯಾವುದೇ ಪ್ರಚಾರ ತಂತ್ರ ಅಳವಡಿಸಿಕೊಂಡಿರಲಿಲ್ಲ. ಮೈಸೂರು ಮತ್ತು ಮಂಗಳೂರಿನಲ್ಲಿ ಕೆಲವೇ ಕೆಲವು ಪಾವತಿಸಿದ ಪ್ರಿವ್ಯೂ ಆಯೋಜಿಸಿ, ಪ್ರೇಕ್ಷಕರಿಗೆ 'ನಾವು ನಮ್ಮ ಚಿತ್ರವನ್ನು ಪ್ರಚಾರ ಮಾಡುವುದಿಲ್ಲ. ಮಾಧ್ಯಮಗಳಿಗೆ ಪ್ರದರ್ಶನ ಕೂಡ ನಡೆಸುವುದಿಲ್ಲ. ನೀವೇ ನಮ್ಮ ಚಿತ್ರದ ನಿಜವಾದ ಪ್ರಚಾರಕರು, ಈ ಜವಾಬ್ದಾರಿ ನಿಮ್ಮದು' ಎಂದು ಹೇಳಿದ್ದರು. ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬಾರದೇ ಇದ್ದರೆ ಏನು ಮಾಡಬೇಕು ಎಂಬ ಭಯದಲ್ಲಿದ್ದ ರಾಜ್, ಮೊದಲ ದಿನದಿಂದಲೇ ಹೌಸ್‌ಫುಲ್ ಪ್ರದರ್ಶನ ಕಂಡು ಆಶ್ಚರ್ಯಗೊಂಡರು. ಕೇವಲ 6 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಣ್ಣ ಚಿತ್ರ, ಬಿಗ್ ಬಜೆಟ್ ಚಿತ್ರಗಳ ನಡುವೆ ವಾರಾಂತ್ಯದಲ್ಲಿ ಅತಿ ಹೆಚ್ಚು ಪ್ರೇಕ್ಷಕರನ್ನು ಸೆಳೆದು, ಸ್ಯಾಂಡಲ್‌ವುಡ್‌ನ ಅತಿದೊಡ್ಡ ಹಿಟ್ ಸಿನಿಮಾವಾಗಿ ಹೊರಹೊಮ್ಮಿತು.
'ಸೂ ಫ್ರಮ್ ಸೋ' ಗಳಿಕೆ: ಶೇ. 900ರಷ್ಟು ಲಾಭ
ಬಾಕ್ಸ್ ಆಫೀಸ್ ಗಳಿಕೆಯಿಂದ 'ಸೂ ಫ್ರಮ್ ಸೋ' ಚಿತ್ರದ ಯಶಸ್ಸು ನೋಡಬಹುದು. SACNILC ವರದಿ ಪ್ರಕಾರ, ಮೊದಲ ದಿನ 78 ಲಕ್ಷ ರೂ. ಗಳಿಸಿದ್ದ ಈ ಸಿನಿಮಾ ಕೇವಲ 17 ದಿನಗಳಲ್ಲಿ ಸುಮಾರು 63 ಕೋಟಿ ರೂ. ನಿವ್ವಳ ಸಂಗ್ರಹ ಗಳಿಸಿದೆ. ಇದು ಅದರ ಬಜೆಟ್‌ಗೆ ಹೋಲಿಸಿದರೆ ಶೇ 900ಕ್ಕಿಂತ ಹೆಚ್ಚಿನ ಲಾಭ ಗಳಿಸಿದಂತಾಗಿದೆ.
ಚಿತ್ರದ ಕನ್ನಡ ಆವೃತ್ತಿಯ ಯಶಸ್ಸು ನೋಡಿ, ಎರಡನೇ ವಾರದಿಂದ ಮಲಯಾಳಂನಲ್ಲಿ ಬಿಡುಗಡೆಯಾಯಿತು. ಕೇವಲ 10 ದಿನಗಳಲ್ಲಿ 4 ಕೋಟಿ ರೂ. ಹೆಚ್ಚು ಗಳಿಸಿದೆ. ಕಳೆದ ಶುಕ್ರವಾರ ಬಿಡುಗಡೆಯಾದ ಇದರ ತೆಲುಗು ಆವೃತ್ತಿಯೂ ಕೂಡ 3 ದಿನಗಳಲ್ಲಿ 50 ಲಕ್ಷ ರೂ. ಗಳಿಸಿದೆ.
ಹಿಂದಿಯಲ್ಲೂ ಬಿಡುಗಡೆಗೆ ಸಿದ್ಧತೆ
ಚಿತ್ರದ ಟ್ರೇಲರ್‌ನಲ್ಲೇ ಹಳ್ಳಿ ಮೂಲದ ಕಥಾಹಂದರ ಮತ್ತು ಹಾಸ್ಯದ ಅಂಶಗಳು ಪ್ರೇಕ್ಷಕರನ್ನು ಆಕರ್ಷಿಸಿದ್ದವು. ಸಿನಿಮಾದ ಯಶಸ್ಸನ್ನು ಗಮನಿಸಿದ ಮಲಯಾಳಂನ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಅವರ ಕಂಪನಿ, ಮತ್ತು 'ಪುಷ್ಪ' ಚಿತ್ರದ ನಿರ್ಮಾಪಕ ಮೈತ್ರಿ ಮೂವಿ ಮೇಕರ್ಸ್ ತೆಲುಗು ಆವೃತ್ತಿಯ ವಿತರಣಾ ಹಕ್ಕುಗಳನ್ನು ಪಡೆದುಕೊಂಡರು.
ಇದೇ ರೀತಿ ಹಿಂದಿಯಲ್ಲೂ ಚಿತ್ರದ ಬಗ್ಗೆ ಸುದ್ದಿ ಹರಡಿತ್ತು. ಹೀಗಾಗಿ 'ಪುಷ್ಪ 2' ಮತ್ತು 'ಸಲಾರ್' ನಂತಹ ದೊಡ್ಡ ಚಿತ್ರಗಳನ್ನು ವಿತರಿಸಿದ ಸಂಸ್ಥೆ ಅನಿಲ್ ಥಡಾನಿ ಅವರ ಎಎ ಫಿಲ್ಮ್ಸ್ ಕಂಪನಿ ಹಿಂದಿ ವಿತರಣಾ ಹಕ್ಕುಗಳನ್ನು ಖರೀದಿಸಿದೆ. ಚಿತ್ರದ ಯಶಸ್ಸು ಎಷ್ಟಿದೆಯೆಂದರೆ ಹಿಂದಿಯಲ್ಲಿ ರೀಮೇಕ್ ಮಾಡುವ ಆಫರ್‌ಗಳು ಕೂಡ ರಾಜ್ ಬಿ. ಶೆಟ್ಟಿ ಅವರಿಗೆ ಬಂದಿವೆ ಎಂದು ರಾಜ್ ಬಿ.ಶೆಟ್ಟಿ ತಿಳಿಸಿದ್ದರು.