ದರ್ಶನ್‌ ನಟನೆಯ 'ಡೆವಿಲ್​​' ಸಿನಿಮಾದಲ್ಲಿ ಬಿಗ್‌ಬಾಸ್ ಗಿಲ್ಲಿ ನಟ!

ಪೋಸ್ಟರ್‌ ಹಂಚಿಕೊಂಡಿರುವ‌ ʼಡೆವಿಲ್‌ʼ ಚಿತ್ರತಂಡ, ''ನಮ್ಮ ಗಿಲ್ಲಿ ನಟ ಅವರನ್ನು ಪರಿಚಯಿಸುತ್ತಿದ್ದೇವೆ. ದಿ ಡೆವಿಲ್​ನ ಪ್ರಮುಖ ಪಾತ್ರಗಳಲ್ಲಿ ಒಬ್ಬರು'' ಎಂದು ಬರೆದುಕೊಂಡಿದೆ. ಪೋಸ್ಟರ್​ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

Update: 2025-11-05 12:34 GMT
ಗಿಲ್ಲಿನಟ 
Click the Play button to listen to article

ಕನ್ನಡದ ಬಿಗ್‌ಬಾಸ್‌ ಮನೆಯಲ್ಲಿ ಭರ್ಜರಿ ಮನೆರಂಜನೆ ನೀಡುತ್ತಿರುವ ಗಿಲ್ಲಿನಟ ಬಹನಿರೀಕ್ಷಿತ ದರ್ಶನ್‌ ನಟನೆಯ ಡೆವಿಲ್‌ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಚಿತ್ರತಂಡ ಪೋಸ್ಟರ್ ಅನಾವರಣಗೊಳಿಸುವ ಮೂಲಕ ಅಧಿಕೃತ ಮಾಹಿತಿ ಹಂಚಿಕೊಂಡಿದೆ. ಖಡಕ್​​ ರೋಲ್​ನಲ್ಲಿ ಗಿಲ್ಲಿನಟ​ ಕಾಣಿಸಿಕೊಂಡಿದ್ದಾರೆ. 

ಸ್ಯಾಂಡಲ್​ವುಡ್​ನ ಚಾಲೆಂಜಿಂಗ್​ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ಸಿನಿಮಾ 'ದಿ ಡೆವಿಲ್'​. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಡಿ ಅವರು  ಜೈಲು ಪಾಲಾಗಿರುವುದರಿಂದ ಚಿತ್ರತಂಡ ಪ್ರಚಾರದ ಜವಾಬ್ದಾರಿ ಹೊತ್ತಿದೆ. ಪ್ರಮೋಷನ್​ ಭಾಗವಾಗಿ ಇದೀಗ ಚಿತ್ರತಂಡ ಪ್ರಮುಖ ಪಾತ್ರಧಾರಿಯನ್ನು ಪರಿಚಯಿಸಿದೆ.

ಪೋಸ್ಟರ್‌ ಹಂಚಿಕೊಂಡಿರುವ ಚಿತ್ರತಂಡ, ''ನಮ್ಮ ಗಿಲ್ಲಿ ನಟ ಅವರನ್ನು ಪರಿಚಯಿಸುತ್ತಿದ್ದೇವೆ. ದಿ ಡೆವಿಲ್​ನ ಪ್ರಮುಖ ಪಾತ್ರಗಳಲ್ಲಿ ಒಬ್ಬರು'' ಎಂದು ಬರೆದುಕೊಂಡಿದೆ. ಪೋಸ್ಟರ್​ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಕಾಮಿಡಿ ಕಿಲಾಡಿಗಳು, ಭರ್ಜರಿ ಬ್ಯಾಚುಲರ್ಸ್‌ಗಳಂತಹ ರಿಯಾಲಿಟಿ ಶೋಗಳಲ್ಲಿ ಜನಪ್ರಿಯರಾಗಿರುವ ಗಿಲ್ಲಿನಟ ʼಬಿಗ್​​ ಬಾಸ್​ ಫೈನಲಿಸ್ಟ್​, ವಿಜೇತ ಇವರೇʼ ಎಂದು ಅಭಿಮಾನಿಗಳು ಭವಿಷ್ಯ ನುಡಿದಿದ್ದಾರೆ. ಸ್ಯಾಂಡಲ್​ವುಡ್​ ಸೂಪರ್​ ಸ್ಟಾರ್ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆಂಬ ಇಂಟ್ರೆಸ್ಟಿಂಗ್​​ ಸುದ್ದಿ ತಿಳಿದ ಗಿಲ್ಲಿ ಫ್ಯಾನ್ಸ್​​​ ಸಖತ್​ ಖುಷಿಯಾಗಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಅಭಿಪ್ರಾಯಗಳು ವ್ಯಕ್ತವಾಗಿವೆ.

ಪ್ರಕಾಶ್ ವೀರ್ ನಿರ್ದೇಶನದ ಈ ಸಿನಿಮಾದಲ್ಲಿ, ದರ್ಶನ್ ಅವರಿಗೆ ನಾಯಕಿಯಾಗಿ ರಚನಾ ರೈ ಜೊತೆಯಾಗಿದ್ದಾರೆ. ಉಳಿದಂತೆ ತುಳಸಿ,‌ ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್, ಶ್ರೀನಿವಾಸ ಪ್ರಭು, ಶೋಭ್ ರಾಜ್ ಸೇರಿ ಹಲವರು ನಟಿಸಿದ್ದಾರೆ.

ಶ್ರೀ ಜೈ ಮಾತಾ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರಕ್ಕೆ ನಿರ್ದೇಶಕ ಪ್ರಕಾಶ್ ವೀರ್ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಸುಧಾಕರ್ ಎಸ್.ರಾಜ್ ಛಾಯಾಗ್ರಹಣ, ಬಿ.ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಮೋಹನ್ ಬಿ ಕೆರೆ ಕಲಾ ನಿರ್ದೇಶನ, ರಾಮ್ ಲಕ್ಷ್ಮಣ್ ಸಾಹಸ ನಿರ್ದೇಶನ, ಹರೀಶ್ ಕೊಮ್ಮೆ ಸಂಕಲನ ನಿರ್ವಹಿಸಿದ್ದಾರೆ. ಇನ್ನೂ, ಕಾಂತರಾಜ್ ಎಸ್ ಎಸ್ ಸಂಭಾಷಣೆ ಮತ್ತು ಚೇತನ್, ತಶ್ವಿನಿ ವಸ್ತ್ರವಿನ್ಯಾಸದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಬಹುನಿರೀಕ್ಷಿತ ಚಿತ್ರ ಇದೇ ಸಾಲಿನ ಡಿಸೆಂಬರ್ 12ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಲಿದ್ದು, ಚಿತ್ರತಂಡ ಈಗಾಗಲೇ ಪ್ರಚಾರ ಪ್ರಾರಂಭಿಸಿದೆ. ತಮ್ಮ ಮೆಚ್ಚಿನ ನಟನ ಸಿನಿಮಾ ವೀಕ್ಷಿಸಲು ಅಪಾರ ಸಂಖ್ಯೆಯ ಅಭಿಮಾನಿಗಳು ಕಾತರರಾಗಿದ್ದಾರೆ.

Tags:    

Similar News