ಮಾರ್ಚ್ 8ಕ್ಕೆ ತೆರೆಗೆ ಬರಲಿದೆ ಶ್ರೀನಿಧಿಯ ʼಬ್ಲಿಂಕ್ʼ
ಬ್ಲಿಂಕ್ ಸಿನಿಮಾದ ನಿರ್ದೇಶನದೊಂದಿಗೆ ಶ್ರೀನಿಧಿ ಬೆಳ್ಳಿತರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಸಿನಿಮಾ ಮಾರ್ಚ್ 8ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.;
ಶ್ರೀನಿಧಿ ಬೆಂಗಳೂರು ಕನ್ನಡ ಚಿತ್ರರಂಗದ ಯುವ ನಿರ್ದೇಶಕ. ಬ್ಲಿಂಕ್ ಸಿನಿಮಾದ ನಿರ್ದೇಶನದೊಂದಿಗೆ ಬೆಳ್ಳಿತರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಸಿನಿಮಾ ಮಾರ್ಚ್ 8ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಸಿನಿಮಾ ಸಿನಿರಸಿಕರಲ್ಲಿ ಕುತೂಹಲ ಮೂಡಿಸಿದೆ.
ಶ್ರೀನಿಧಿಗೆ 4ನೇ ತರಗತಿಯಲ್ಲಿರುವಾಗಲೇ ಕಲೆಯ ಮೇಲೆ ಅಪಾರ ಒಲವು ಇತ್ತಂತೆ. ಅವರು 27 ನಾಟಕಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ 600 ಕ್ಕೂ ಹೆಚ್ಚು ವೇದಿಕೆಯಲ್ಲಿ ಪ್ರದರ್ಶನ ನೀಡಿದ್ದಾರೆ. ಬೀದಿ ನಾಟಕಗಳಲ್ಲಿಯೂ ತೊಡಗಿಸಿಕೊಂಡಿರುವ ಶ್ರೀನಿಧಿ, 'ಅಭಿಜ್ಞಾ' ಎಂಬ ತಮ್ಮದೇ ಆದ ನಾಟಕ ತಂಡವನ್ನು ಸ್ಥಾಪಿಸಿದ್ದಾರೆ.
ಇದೀಗ ಇವರ ಕಲಾಸಕ್ತಿಯನ್ನು ಬೆಳ್ಳಿತೆರೆಗೆ ವಿಸ್ತರಿಸಿದ್ದಾರೆ. ಬ್ಲಿಂಕ್ ಎಂಬ ಸಿನಿಮಾ ನಿರ್ದೇಶನದೊಂದಿಗೆ ಚೊಚ್ಚಲ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ. ರವಿಚಂದ್ರನ್ ಎ ಜೆ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ದಿಯಾ ಸಿನಿಮಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಈ ಚಿತ್ರದ ನಾಯಕರಾಗಿದ್ದಾರೆ. ಚೈತ್ರ ಆಚಾರ್, ಮಂದಾರ ಬಟ್ಟಲಹಳ್ಳಿ, ಮತ್ತು ಗೋಪಾಲ್ ಕೃಷ್ಣ ದೇಶಪಾಂಡೆ, ಸುರೇಶ್ ಆನಗಳ್ಳಿ, ವಜ್ರಧನ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಈ ಕುರಿತು ಮಾತನಾಡಿದ ಶ್ರೀನಿಧಿ, “ನಾನು ರಂಗಭೂಮಿಯನ್ನು ಬಿಟ್ಟಿಲ್ಲ. ಇತ್ತೀಚೆಗೆ ನಾನೇ ನಾಟಕ ಬರೆದು ನಿರ್ದೇಶಿಸಿದ್ದೆ. ರಂಗಭೂಮಿ ನನಗೆ ಭದ್ರ ಬುನಾದಿ ಹಾಕಿದೆ. ಸಿನಿಮಾ ಬಗ್ಗೆ ನನ್ನ ಒಲವು ಬೆಳೆದಿದೆ. ಎಡಿಟರ್ ಸಂಜೀವ್ ಜಾಹಗೀರದಾರ್, ಡಿಒಪಿ ಅವಿನಾಶ ಶಾಸ್ತ್ರಿ, ಸಂಗೀತ ನಿರ್ದೇಶಕ ಪ್ರಸನ್ನಕುಮಾರ್ ಎಂಎಸ್, ನಟ ದೀಕ್ಷಿತ್ ಶೆಟ್ಟಿ ಸೇರಿದಂತೆ ನನ್ನ ಅನೇಕ ಗೆಳೆಯರು ರಂಗಭೂಮಿಯ ಮೂಲಕ ನನಗೆ ಪರಿಚಯವಾದವರು. ಬ್ಲಿಂಕ್ ರಚಿಸಲು ನಾವೆಲ್ಲರೂ ಒಗ್ಗೂಡಿದ್ದೇವೆ ಎಂದರು.