ಹಾಡಿನ ಮೂಲಕ ಸದ್ದು ಮಾಡ್ತಿದೆ ʻಬ್ಯಾಕ್ ಬೆಂಚರ್ಸ್ʼ ಸಿನಿಮಾ!
ʼಬ್ಯಾಕ್ ಬೆಂಚರ್ಸ್ʼ ಚಿತ್ರದ ʼಯಲ್ಲೋ ಯಲ್ಲೋ..ʼ ಹಾಡು ಇತ್ತೀಚಿಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.;
ಕಾಲೇಜು ದಿನಮಾನದ ಕಥೆಗಳು ಕನ್ನಡದಲ್ಲಿ ಸಾಕಷ್ಟು ಬಂದಿದೆ. ಆದರೆ ಮನೋರಂಜನೆಯನ್ನೇ ಪ್ರಮುಖವಾಗಿಟ್ಟುಕೊಂಡು ಕಾಲೇಜು ದಿನಗಳ ಕಥೆಯೊಂದು ಕನ್ನಡದಲ್ಲಿ ಬರುತ್ತಿದೆ. ಅದೇ ʼಬ್ಯಾಕ್ ಬೆಂಚರ್ಸ್ʼ. ಈಗಾಗಲೇ ಟೀಸರ್ ಮೂಲಕ ಪ್ರೇಕ್ಷಕರಿಗೆ ಕಚುಗುಳಿಯಿಟ್ಟಿರುವ ʼಬ್ಯಾಕ್ ಬೆಂಚರ್ಸ್ʼ ಚಿತ್ರದ ʼಯಲ್ಲೋ ಯಲ್ಲೋ...ʼ ಹಾಡು ಇತ್ತೀಚಿಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.
ಯವಜನತೆಗೆ ಮುದ ನೀಡುವ ಈ ಹಾಡನ್ನು ನಕುಲ್ ಅಭಯಂಕರ್ ಹಾಡಿದ್ದಾರೆ. ಸಂಗೀತವನ್ನೂ ನಕುಲ್ ಅಭಯಂಕರ್ ಅವರೆ ನೀಡಿದ್ದಾರೆ. ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಹಾಡು ಬಿಡುಗಡೆಯ ನಂತರ ʼಬ್ಯಾಕ್ ಬೆಂಚರ್ಸ್ʼ ತಂಡ ಮಾಧ್ಯಮಕ್ಕೆ ಮಾಹಿತಿ ನೀಡಿದರು.
ಇದೊಂದು ಮನರಂಜನೆಯೇ ಪ್ರಮುಖವಾಗಿರುವ ಕಾಲೇಜು ಸ್ಟೋರಿ ಎಂದು ಮಾತನಾಡಿದ ನಿರ್ದೇಶಕ ನಿರ್ಮಾಪಕ ಬಿ.ಆರ್ ರಾಜಶೇಖರ್, ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಪ್ರಚಾರ ಕಾರ್ಯ ಆರಂಭಿಸಿದ್ದೇವೆ. ಮುಂದಿನ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆʼʼ ಎಂದರು.
ʻʻನಿರ್ದೇಶಕ ರಾಜಶೇಖರ್ ಅವರು ನಮಗೆಲ್ಲಾ ನೀಡಿದ ಪ್ರೋತ್ಸಹ ಅಷ್ಟಿಷ್ಟಲ್ಲ. ನಮ್ಮಗೆಲ್ಲಾ ಇದು ಮೊದಲ ಚಿತ್ರ. ಆದರೆ ನಮಗೆ ನಟನೆ ಹೊಸತಲ್ಲ. ನಾವೆಲ್ಲ ನಟನೆ ಕಲಿತು ಬಂದಿರುವವರು. ಈಗ ಚಿತ್ರಮಂದಿರಕ್ಕೆ ಹೆಚ್ಚಾಗಿ ಜನರು ಬರುತ್ತಿಲ್ಲ. ಆ ಮಾತನ್ನು ಸುಳ್ಳು ಮಾಡುವ ಪ್ರಯತ್ನವನ್ನು ನಾವು ಮಾಡುತ್ತೇವೆ. ವಿನೂತನ ಪ್ರಚಾರ ಮಾಡುವ ಮೂಲಕ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವ ಪ್ರಯತ್ನ ಮಾಡುತ್ತೇವೆ. ಚಿತ್ರಮಂದಿರಕ್ಕೆ ಬಂದ ಮೇಲು ನಮ್ಮ ಚಿತ್ರ ನೀವು ಕೊಟ್ಟ ದುಡ್ಡಿಗೆ ಮೋಸ ಆಗುವುದಿಲ್ಲ ಎಂಬ ಭರವಸೆ ನೀಡುತ್ತೇವೆʼʼ ಎಂದು “ಬ್ಯಾಕ್ ಬೆಂಚರ್ಸ್ ” ಚಿತ್ರದಲ್ಲಿ ನಟಿಸಿರುವ ರಂಜನ್, ಜತಿನ್ ಆರ್ಯನ್, ಆಕಾಶ್ ಎಂ.ಪಿ, ಶಶಾಂಕ್ ಸಿಂಹ, ಮಾನ್ಯ ಗೌಡ, ಕುಂಕುಮ್ ಹೆಚ್, ಮನೋಜ್ ಶೆಟ್ಟಿ ಮುಂತಾದವರು ತಿಳಿಸಿದರು.
ರಂಜನ್, ಜತಿನ್ ಆರ್ಯನ್, ಆಕಾಶ್ ಎಂ.ಪಿ, ಶಶಾಂಕ್ ಸಿಂಹ, ಸುಚೇಂದ್ರ ಪ್ರಸಾದ್, ಅರವಿಂದ್ ಕುಪ್ಳೀಕರ್, ಮಾನ್ಯ ಗೌಡ, ಕುಂಕುಮ್ ಹೆಚ್, ಅನುಷಾ ಸುರೇಶ್, ವಿಯೋಮಿ ವನಿತಾ, ಮನೋಜ್ ಶೆಟ್ಟಿ, ನಮಿತಾ ಗೌಡ, ವಿಕಾಸ್, ರನ್ನ, ವಿಜಯ್ ಪ್ರಸಾದ್, ಚತುರ್ಥಿ ರಾಜ್, ಗೌರವ್ ಮುಂತಾದವರ ತಾರಾಬಳಗವಿರುವ ಈ ಚಿತ್ರಕ್ಕೆ ನಕುಲ್ ಅಭಯಂಕರ್ ಸಂಗೀತ ನಿರ್ದೇಶನ, ಮನೋಹರ್ ಜೋಶಿ ಛಾಯಾಗ್ರಹಣ, ರಂಜನ್ ಮತ್ತು ಅಮರ್ ಗೌಡ ಸಂಕಲನವಿದೆ.