ತೆಲುಗು ನಟ ಚಿರಂಜೀವಿ ಜೊತೆ ತೆರೆ ಹಂಚಿಕೊಂಡ ಆಶಿಕಾ ರಂಗನಾಥ್
ಟಾಲಿವುಡ್‌ನ ಮೆಗಾ ಸ್ಟಾರ್ ಚಿರಂಜೀವಿ ಜೊತೆ ಪರದೆ ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ ಆಶಿಕಾ ರಂಗನಾಥ್.;
ಕನ್ನಡದ ನಟಿ ಆಶಿಕಾ ಇತ್ತೀಚೆಗೆ ತೆಲುಗು ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಹಿರಿಯ ತೆಲುಗು ನಟ ನಾಗಾರ್ಜುನ ನಟನೆಯ ʼನಾ ಸಾಮಿʼ ಸಿನಿಮಾದಲ್ಲಿ ಆಶಿಕಾ ರಂಗನಾಥ್ ನಟಿಸಿದ್ದಾರೆ.
ಅದರ ಬೆನ್ನಲ್ಲೇ ಈಗ, ಮಲ್ಲಿಡಿ ವಸಿಷ್ಟ ಬರೆದು ನಿರ್ದೇಶಿಸುತ್ತಿರುವ ವಿಶ್ವಂಭರದಲ್ಲಿ ಮತ್ತೊಂದು ಮಹತ್ವದ ಪಾತ್ರವನ್ನು ಪಡೆದಿರುವುದರಿಂದ ತೆಲುಗು ಚಿತ್ರರಂಗದಲ್ಲಿ ಅವರು ಭರವಸೆಯ ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ವಿಶ್ವಂಭರ ಸಿನಿಮಾದಲ್ಲಿ ಟಾಲಿವುಡ್‌ನ ಮೆಗಾ ಸ್ಟಾರ್ ಚಿರಂಜೀವಿ ಜೊತೆ ಪರದೆ ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ.
ವಿಶ್ವಂಭರದಲ್ಲಿ, ತ್ರಿಶಾ ಕೃಷ್ಣನ್, ಮೀನಾಕ್ಷಿ ಚೌಧರಿ ಮತ್ತು ಕುನಾಲ್ ಕಪೂರ್ ಜೊತೆ ಆಶಿಕಾ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾರೆ. ಆಕೆಯ ಪಾತ್ರದ ಬಗ್ಗೆ ವಿವರಗಳು ಇನ್ನೂ ಬಹಿರಂಗವಾಗಿಲ್ಲ. ಯುವಿ ಕ್ರಿಯೇಷನ್ಸ್ ನಿರ್ಮಿಸುತ್ತಿರುವ ಈ ಸಾಮಾಜಿಕ-ಫ್ಯಾಂಟಸಿ ಕತೆಗಾಗಿ ಆಶಿಕಾ ಈಗಾಗಲೇ ಕೆಲವು ನಿರ್ಣಾಯಕ ದೃಶ್ಯಗಳ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ವಿಶ್ವಂಭರ 2025 ರ ಬಿಡುಗಡೆಗೆ ಸಿದ್ಧವಾಗಿದೆ ಎಂದು ತಿಳಿದು ಬಂದಿದೆ.
ಆಶಿಕಾ ರಂಗನಾಥ್ 2022ರಲ್ಲಿ ಪಟ್ಟಾತು ಅರಸನ್‌ನೊಂದಿಗೆ ತಮಿಳು ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. ಈಗ ಅವರ ಎರಡನೇ ತಮಿಳು ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇತ್ತೀಚೆಗೆ ವೈದ್ಯಕೀಯ ಥ್ರಿಲ್ಲರ್ O2 ನಲ್ಲಿ ನಟಿಸಿದ್ದ ಆಶಿಕಾ ಅಭಿನಯಕ್ಕೆ ಅಪಾರ ಮೆಚ್ಚುಗೆ ಪಡೆದರು. ಇದರ ಜೊತೆಗೆ ಸುನಿ ನಿರ್ದೇಶನದ ಗತವೈಭವದಲ್ಲಿಯೂ ಅಭಿನಯಿಸುತ್ತಿದ್ದು, ಸದ್ಯ ಚಿತ್ರ ನಿರ್ಮಾಣ ಹಂತದಲ್ಲಿದೆ.